ಚಿಕ್ಕಬಳ್ಳಾಪುರ: ಪರಿತ್ಯಕ್ತ ಮಕ್ಕಳಿಗೆ ನಾಮಕರಣ

ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಅನಾಥ, ಪರಿತ್ಯಕ್ತ ಮತ್ತು ಒಪ್ಪಿಸಲ್ಪಟ್ಟ ಮಕ್ಕಳು ಅವರ ಹಕ್ಕುಗಳಿಂದ ವಂಚಿತರಾಗಬಾರದು. ಕುಟುಂಬ ವಾತಾವರಣದಲ್ಲಿ ಬೆಳೆಯುವಂತೆ ಹಾಗೂ ತಂದೆ-ತಾಯಿಯ ಪ್ರೀತಿ ದೊರೆಯುವಂತೆ ವಿಶೇಷ ದತ್ತು ಸಂಸ್ಥೆಗಳು ವಾತಾವರಣ ಕಲ್ಪಿಸಬೇಕು ಎಂದು ಜಿಲ್ಲಾಧಿಕಾರಿ ಆರ್.ಲತಾ ತಿಳಿಸಿದರು.
ರಾಜ್ಯ ಮಕ್ಕಳ ರಕ್ಷಣಾ ನಿರ್ದೇಶನಾಲಯ, ಜಿಲ್ಲಾಡಳಿತ ಹಾಗೂ ಸಿ.ವಿ.ಕಮಲಮ್ಮ, ಸಿ.ವಿ.ವೆಂಕಟರಾಯಪ್ಪ ಸ್ಮಾರಕ ವಿಶೇಷ ದತ್ತು ಸಂಸ್ಥೆ ಆಶ್ರಯದಲ್ಲಿ ನಗರದ ಕಂದವಾರಪೇಟೆಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ದತ್ತು ಸಂಸ್ಥೆ ಮಕ್ಕಳಿಗೆ ನಾಮಕರಣ ಮಹೋತ್ಸವದಲ್ಲಿ ಮಾತನಾಡಿದರು.
ಬೇಡವಾದ ಮಕ್ಕಳನ್ನು ಎಲ್ಲೋ ಬಿಟ್ಟು ಹೋಗುವ ಬದಲು ಸರ್ಕಾರಿ ಆಸ್ಪತ್ರೆಯಲ್ಲಿ ಇಟ್ಟಿರುವ ಮಮತೆಯ ತೊಟ್ಟಿಲಿನಲ್ಲಿ ಬಿಟ್ಟುಹೋಗಬಹುದು. ದತ್ತು ಮಗು ಪಡೆಯಲು ನೋಂದಣಿ ಮಾಡಿಸಿಕೊಂಡ ದಂಪತಿಗೆ ಮಕ್ಕಳನ್ನು ದತ್ತು ನೀಡಲಾಗುವುದು ಎಂದರು.
ಜಿಲ್ಲಾ ಮಕ್ಕಳ ರಕ್ಷಣಾ ಘಟಕದಿಂದ ದತ್ತು ಪ್ರಕ್ರಿಯೆಗೆ ಸಂಬಂಧಿಸಿದ ಭಿತ್ತಿಚಿತ್ರಗಳನ್ನು ಬಿಡುಗಡೆ ಮಾಡಲಾಯಿತು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಎನ್.ನಾರಾಯಣಸ್ವಾಮಿ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಮಹಮ್ಮದ್ ಉಸ್ಮಾನ್, ಕೆ.ವಿ.ಟ್ರಸ್ಟ್ ಸದಸ್ಯರಾದ ಮುನಿಯಪ್ಪ, ವಿಶೇಷ ದತ್ತು ಸಂಸ್ಥೆಯ ಸಂಯೋಜಕ ನಾರಾಯಣಸ್ವಾಮಿ, ಮಕ್ಕಳ ಕಲ್ಯಾಣ ಸಮಿತಿ ಹಾಗೂ ಜಿಲ್ಲಾ ತನಿಖಾ ಸಮಿತಿಯ ಸದಸ್ಯರು ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.