ಸೋಮವಾರ, ಜುಲೈ 4, 2022
21 °C
ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ರಾಜಕೀಯ ಚರ್ಚೆ

ಶಿವೋತ್ಸವ; ಚುನಾವಣೆಗೆ ಅಡಿಗಲ್ಲು

ಡಿ.ಎಂ.ಕುರ್ಕೆ ಪ್ರಶಾಂತ್‌ Updated:

ಅಕ್ಷರ ಗಾತ್ರ : | |

Prajavani

ಚಿಕ್ಕಬಳ್ಳಾಪುರ: ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ನೇತೃತ್ವದಲ್ಲಿ  ನಂದಿಯಲ್ಲಿ ನಡೆದ ಶಿವೋತ್ಸವ ಕಾರ್ಯಕ್ರಮ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ರಾಜಕೀಯ ಚರ್ಚೆ ಹುಟ್ಟು ಹಾಕಿದೆ. 

2023ಕ್ಕೆ ರಾಜ್ಯ ವಿಧಾನಸಭಾ ಚುನಾವಣೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ರಾಜಕೀಯ ನಾಯಕರಿಗೆ 2022 ಚುನಾವಣಾ ತಯಾರಿಯ ವರ್ಷ. ಶಾಸಕರು, ಚುನಾವಣಾ ಸ್ಪರ್ಧಾಕಾಂಕ್ಷಿಗಳು ಈ ವರ್ಷದಲ್ಲಿ ಜನರಿಗೆ ಹತ್ತಿರವಾಗಲು ಮತ್ತು ಮತಬೇಟೆಯ ದೃಷ್ಟಿಯಿಂದ ಕ್ರಿಕೆಟ್ ಪಂದ್ಯಾವಳಿ, ಮನರಂಜನಾ ಕಾರ್ಯಕ್ರಮ, ಹಳ್ಳಿಗಳಿಗೆ ಭೇಟಿ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸುವುದು, ಕೊಡುಗೈ ದಾನಿಗಳಾಗುವುದು ಸಾಮಾನ್ಯ. 

ಈ ಹಿಂದಿನಿಂದಲೂ ಐತಿಹಾಸಿಕ ನಂದಿ ಭೋಗ ನಂದೀಶ್ವರ ದೇಗುಲದಲ್ಲಿ ಶಿವರಾತ್ರಿಯ ದಿನ ಜಾಗರಣೆ ಕಾರ್ಯಕ್ರಮಗಳು ನಡೆಯುತ್ತಿದ್ದವು. ಮುಜುರಾಯಿ ಇಲಾಖೆಯಿಂದ ಶಿವರಾತ್ರಿಯ ಮರು ದಿನ ರಥೋತ್ಸವ ಕಾರ್ಯಕ್ರಮ ಜರುಗುತ್ತಿತ್ತು. ಆದರೆ ಇದೇ ಮೊದಲ ಬಾರಿಗೆ ಶಿವರಾತ್ರಿಯ ದಿನ ‘ಶಿವೋತ್ಸವ’ದ ಹೆಸರಿನಲ್ಲಿ ದೊಡ್ಡ ಹೂಡಿಕೆಯೊಂದಿಗೆ ಅದ್ಧೂರಿ ಕಾರ್ಯಕ್ರಮ ನಡೆದಿದೆ. ಮುಂದಿನ ವರ್ಷದಿಂದ ಮೈಸೂರು ದಸರಾ ಮತ್ತು ಹಂಪಿ ಉತ್ಸವದ ಮಾದರಿಯಲ್ಲಿ ಶಿವೋತ್ಸವ ಆಚರಿಸುವುದಾಗಿ ಡಾ.ಕೆ.ಸುಧಾಕರ್ ಹೇಳಿದರು. ಜಿಲ್ಲಾ ಮಟ್ಟದ ಅಧಿಕಾರಿಗಳು ಖುದ್ದು ಹಾಜರಿದ್ದು ಈ ಕಾರ್ಯಕ್ರಮದ ಸಿದ್ಧತೆಗಳನ್ನು ನೋಡಿಕೊಂಡಿದ್ದಾರೆ.

ಶಿವೋತ್ಸವದ ಹೆಸರಿನಲ್ಲಿ ಸುಧಾಕರ್ ಚುನಾವಣೆಯ ತಾಲೀಮು ನಡೆಸಿದ್ದಾರೆ. ಇದು ಭಕ್ತಿಯಿಂದ ನಡೆಸಿದ ಕಾರ್ಯಕ್ರಮವಲ್ಲ. ರಾಜಕೀಯ ಪ್ರೇರಿತವಾದುದು ಎಂದು ಕಾಂಗ್ರೆಸ್ ಮತ್ತು ಜೆಡಿಎಸ್ ಮುಖಂಡರು ದೂರುತ್ತಿದ್ದಾರೆ. ಚುನಾವಣೆ ದೃಷ್ಟಿಯಲ್ಲಿ ಇಟ್ಟುಕೊಂಡೇ ಕಾರ್ಯಕ್ರಮ ರೂಪಿಸಿದ್ದಾರೆ ಎನ್ನುವ ಮಾತು ಪಕ್ಷಗಳ ವಲಯದಲ್ಲಿದೆ.

ಡಾ.ಕೆ.ಸುಧಾಕರ್ ಫೌಂಡೇಶನ್ ನೇತೃತ್ವದಲ್ಲಿ ಮತ್ತು ಜಿಲ್ಲಾಡಳಿತದ ಸಹಯೋಗದಲ್ಲಿ ಶಿವೋತ್ಸವ ನಡೆದಿದೆ. ಕಾರ್ಯಕ್ರಮ ಸುಧಾಕರ್ ಕೇಂದ್ರೀಕೃತವಾಗಿ ನಡೆಯಿತು. ಶಿವೋತ್ಸವ ಆಚರಣೆಯ ರೂವಾರಿ ಸುಧಾಕರ್ ಅವರಿಗೆ ಗಣ್ಯರು ವೇದಿಕೆಯಲ್ಲಿ ಪ್ರಶಂಸೆಯ ಸುರಿಮಳೆಗರಿದರು. 

ನಂದಿ ಈ ಹಿಂದಿನಿಂದಲೂ ಜೆಡಿಎಸ್‌ನ ಗಟ್ಟಿನೆಲೆ ಇರುವ ಹೋಬಳಿ ಎನ್ನುವಂತಿದೆ. ಆ ಪಕ್ಷದ ಮುಖಂಡರಾದ ಮಾಜಿ ಶಾಸಕ ಕೆ.ಪಿ.ಬಚ್ಚೇಗೌಡ ಅವರ ಸ್ವಗ್ರಾಮ ಕುಪ್ಪಳ್ಳಿ ಈ ಹೋಬಳಿ ವ್ಯಾಪ್ತಿಯಲ್ಲಿದೆ. ಕಳೆದ ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ನಂದಿ ಕ್ಷೇತ್ರದಲ್ಲಿ ಜೆಡಿಎಸ್‌ ಗೆಲುವು ಸಾಧಿಸಿತ್ತು.

ಉಪಚುನಾವಣೆಯಲ್ಲಿ ನಂದಿಯ ಆಂಜನಪ್ಪ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದರು. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಅವರೂ ಟಿಕೆಟ್ ಆಕಾಂಕ್ಷಿ ಆಗಿದ್ದಾರೆ. ಇತ್ತೀಚೆಗೆ ನಂದಿ ಗ್ರಾಮದಲ್ಲಿಯೇ ಕಾಂಗ್ರೆಸ್ ಪಕ್ಷವು ಡಿಜಿಟಲ್ ಸದಸ್ಯತ್ವ ನೋಂದಣಿ ಅಭಿಯಾನಕ್ಕೆ ಚಾಲನೆ ನೀಡಿತ್ತು. ಹೀಗೆ ಎಲ್ಲ ಪಕ್ಷಗಳಿಗೂ ಹೋಬಳಿ ಕೇಂದ್ರವಾದ ನಂದಿ, ರಾಜಕೀಯಕ್ಕೆ ಉತ್ತಮ ವೇದಿಕೆಯಾಗಿ ಒದಗುತ್ತದೆ. 

ಫ್ಲೆಕ್ಸ್‌, ಬ್ಯಾನರ್‌ಗಳ ಅಬ್ಬರ: ಶಿವೋತ್ಸವಕ್ಕೆ ಜನರನ್ನು ಕರೆತರಲು ಚಿಕ್ಕಬಳ್ಳಾಪುರ ನಗರ ಸೇರಿದಂತೆ  ಹಳ್ಳಿ ಹಳ್ಳಿಗಳಿಗೂ ಬಸ್ ವ್ಯವಸ್ಥೆ ಕಲ್ಪಿಸಲಾಗಿತ್ತು. ಚಿಕ್ಕಬಳ್ಳಾಪುರ ನಗರ ಹಾಗೂ ನಂದಿ ಗ್ರಾಮದಲ್ಲಿ ಡಾ.ಕೆ.ಸುಧಾಕರ್ ಅವರ ಫ್ಲೆಕ್ಸ್‌ಗಳು, ಬ್ಯಾನರ್‌ಗಳ ತುಂಬಿ ತುಳುಕಿದ್ದವು.

***

‘ನಂದಿ ಆವರಣದಲ್ಲಿ ಫ್ಲೆಕ್ಸೋತ್ಸವ’

ಶಿವೋತ್ಸವವಲ್ಲ, ಅದು ಫ್ಲೆಕ್ಸೋತ್ಸವ. ರಾಜಕೀಯ ವೇದಿಕೆಯಾಗಿ ನಂದಿ ದೇಗುಲದ ಆವರಣ ಬಳಕೆ ಆಗಿದೆ. ಮುಜುರಾಯಿ ಇಲಾಖೆಯ ದೇಗುಲದ ಆವರಣದಲ್ಲಿ ಖಾಸಗಿ ಫೌಂಡೇಷನ್‌ ಕಾರ್ಯಕ್ರಮ ನಡೆಸಲು ಕೊಟ್ಟಿದ್ದು ತಪ್ಪು ಎಂದು ಜಿಲ್ಲಾ ಜೆಡಿಎಸ್ ಅಧ್ಯಕ್ಷ ಕೆ.ಎಂ.ಮುನೇಗೌಡ ತಿಳಿಸಿದರು. 

‘ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ವೇದಿಕೆಯಲ್ಲಿ ಅವಕಾಶವಿಲ್ಲ  ಅಂದರೆ ಹೇಗೆ. ಅಲ್ಲಿ ಕೆಲಸ ಮಾಡುತ್ತಿದ್ದವರ ಟೀ ಶರ್ಟ್‌ಗಳ ಮೇಲೆಯೂ ರಾಜಕೀಯ ನಾಯಕರ ಚಿತ್ರಗಳೇ ಇದ್ದವು’ ಎಂದು ಹೇಳಿದರು. 

ನಂದಿ ಉತ್ಸವ ಜಾತ್ಯತೀತವಾಗಿ ಮತ್ತು ಪಕ್ಷಾತೀತವಾಗಿ ನಡೆಯಬೇಕಿತ್ತು. ಆದರೆ ಆ ರೀತಿಯಲ್ಲಿ ಆಗಲಿಲ್ಲ. ಭಕ್ತರು ನಂದಿ ಜಾತ್ರೆಗೆ ಮತ್ತು ಜಾಗರಣೆಗೆ ಸ್ವಯಂ ತಾವೇ ಬರುತ್ತಿದ್ದರು. ಈ ಬಾರಿ ಜನರನ್ನು ಕರೆತರಲು ಹಳ್ಳಿ ಹಳ್ಳಿಗಳಿಗೆ ಬಸ್ ಕಳುಹಿಸಿದರು. ಮತ ಪಡೆಯುವ ಗಿಮಿಕ್‌ಗಾಗಿಯೇ ಕಾರ್ಯಕ್ರಮ ಮಾಡಿದ್ದಾರೆ ಎಂದರು.

***

‘ರಾಜಕೀಯ ಪ್ರೇರಿತ’

ಶಿವೋ
ತ್ಸವದ ಹೆಸರಿನಲ್ಲಿ ನಡೆದ ಕಾರ್ಯಕ್ರಮ ರಾಜಕೀಯ ಪ್ರೇರಿತ
ವಾದುದು. ಸಚಿವ ಡಾ.ಕೆ.ಸುಧಾಕರ್ ಅವರು ತಮ್ಮ ಟ್ರಸ್ಟ್ ಹೆಸರಿನಲ್ಲಿ ಇದನ್ನು
ನಡೆಸಿದ್ದಾರೆ. ಇಂತಹ ಕಡೆ ಇಡೀ ಜಿಲ್ಲಾಡಳಿತದ ಎಲ್ಲ ಅಧಿಕಾರಿಗಳು ಸಕ್ರಿಯವಾಗಿ ಭಾಗಿಯಾಗಿದ್ದಾರೆ
ಎಂದು ಚಿಕ್ಕಬಳ್ಳಾಪುರ
ತಾಲ್ಲೂಕು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸುರೇಶ್ ದೂರಿದರು. 

‘ಶಿವೋತ್ಸವ ರಾಜಕೀಯ ಕಾರ್ಯಕ್ರಮವಾಗಿ ನಡೆಯಿತು. ಫ್ಲೆಕ್ಸ್, ಬ್ಯಾನರ್‌ಗಳನ್ನು ನೋಡಿದರೆಯೇ ಗೊತ್ತಾಗುತ್ತದೆ’ ಎಂದರು.
**

‘ಮೊಸರಲ್ಲಿ ಕಲ್ಲು ಹುಡುಕುವ ಕೆಲಸ’

ಡಾ.ಕೆ.ಸುಧಾಕರ್ ಅವರು ಈ ಹಿಂದೆ ಸಂಕ್ರಾಂತಿ ಸುಗ್ಗಿ ಕಾರ್ಯಕ್ರಮ ನಡೆಸುತ್ತಿದ್ದರು. ಅದೇ ಮಾದರಿಯಲ್ಲಿ ಶಿವೋತ್ಸವ ನಡೆಸಿದ್ದಾರೆ. ಮುಂದಿನ ದಿನಗಳಲ್ಲಿ ರಾಜ್ಯ ಮಟ್ಟದ ಕಾರ್ಯಕ್ರಮ ಮಾಡುವುದಾಗಿ ಹೇಳಿದ್ದಾರೆ. ಇಂತಹ ಕೆಲಸಗಳಿಗೆ ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರು ಸಹಕಾರ ನೀಡಬೇಕು. ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ಮಾಡಬಾರದು’ ಎಂದು ಜಿಲ್ಲಾ ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ರಣಜಿತ್ ಕುಮಾರ್ ತಿಳಿಸಿದರು. 

ವಿರೋಧ ಪಕ್ಷಗಳ ಮುಖಂಡರು ಇಂತಹ ದೊಡ್ಡ ಕಾರ್ಯಕ್ರಮಗಳು ನಡೆದಾಗ ಕುಟುಂಬ ಸಮೇತರಾಗಿ ಭಾಗವಹಿಸಬೇಕಾಗಿತ್ತು ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು