ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭರವಸೆಯಾಗೇ ಉಳಿದ ನಂದಿಗಿರಿಧಾಮ ಪೊಲೀಸ್ ಠಾಣೆ ಕಟ್ಟಡ

2017ರಲ್ಲಿ ಸ್ಥಳೀಯರ ‌ವಿರೋಧದ ನಡುವೆಯೇ ಚದುಲಪುರ ಕ್ರಾಸ್‌ಗೆ ನಂದಿಗಿರಿಧಾಮ ಠಾಣೆ ಸ್ಥಳಾಂತರ
Last Updated 12 ಜನವರಿ 2023, 5:17 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ತಾಲ್ಲೂಕಿನ ನಂದಿ ಗ್ರಾಮದ ಭೋಗನಂದೀಶ್ವರ ದೇವಸ್ಥಾನದ ಬಳಿಯಿದ್ದ ನಂದಿ ಗಿರಿಧಾಮ ಪೊಲೀಸ್‌ ಠಾಣೆಯನ್ನು ಯಾತ್ರಿ ನಿವಾಸ ಸಂಕೀರ್ಣ ನಿರ್ಮಾಣಕ್ಕಾಗಿ ಚದುಲಪುರ ಕ್ರಾಸ್‌ನಲ್ಲಿರುವ ರೇಷ್ಮೆ ಇಲಾಖೆಯ ಕಟ್ಟಡಕ್ಕೆ ಸ್ಥಳಾಂತರಿಸಿ ಬರೋಬ್ಬರಿ ಐದು ವರ್ಷ ಕಳೆದಿದೆ. ಆದರೆ ಈವರೆಗೆ ಹೊಸ ಠಾಣೆ ನಿರ್ಮಿಸುವ ಕುರುಹು ಕಾಣುತ್ತಿಲ್ಲ. ಠಾಣೆ ನಿರ್ಮಾಣದ ಭರವಸೆ ಹಾಗೆಯೇ ಉಳಿದಿದೆ.

2017ರಲ್ಲಿ ಸ್ಥಳೀಯರ ವಿರೋಧದ ನಡುವೆಯೇ ಠಾಣೆ ಸ್ಥಳಾಂತರಿಸಲಾಗಿತ್ತು. ಸ್ಥಳಾಂತರದ ವೇಳೆ ಜನಪ್ರತಿನಿಧಿಗಳು, ಅಧಿಕಾರಿಗಳು ಜನರಿಗೆ ನೀಡಿದ ಭರವಸೆಗಳು ಇಂದಿಗೂ ಈಡೇರಿಲ್ಲ.

ನಂದಿ ಗಿರಿಧಾಮ ಠಾಣೆ ವ್ಯಾಪ್ತಿಗೆ ಸುಲ್ತಾನ್‌ಪೇಟೆ, ಅಂಗಟ್ಟ, ಗಾಂಧಿಪುರ, ದೇವಿಶೆಟ್ಟಿಹಳ್ಳಿ, ಯಲುವಹಳ್ಳಿ, ನಕ್ಕಲಹಳ್ಳಿ, ತಾಳಹಳ್ಳಿ, ಕಣಿತಹಳ್ಳಿ, ತೌಡಹಳ್ಳಿ, ಸಿಂಗಾಟ ಕದಿರೇನಹಳ್ಳಿ, ನಂದಿ ಬೆಟ್ಟ, ಬೀಡಗಾನಹಳ್ಳಿ, ಕುಪ್ಪಹಳ್ಳಿ, ಮಾವಹಳ್ಳಿ, ಚದಲಪುರ, ಕೊಳವನಹಳ್ಳಿ, ಶ್ರೀರಾಂಪುರ, ಮಾವಹಳ್ಳಿ, ಮಡಕುಹೊಸಹಳ್ಳಿ ಸೇರಿದಂತೆ 63 ಗ್ರಾಮಗಳು ಒಳಪಡುತ್ತವೆ.

ವೀರಪ್ಪ ಮೊಯಿಲಿ ಅವರು ಈ ಹಿಂದೆ ಕೇಂದ್ರ ಪೆಟ್ರೋಲಿಯಂ ಖಾತೆ ಸಚಿವರಾಗಿದ್ದ ವೇಳೆ ಭೋಗನಂದೀಶ್ವರ ದೇವಸ್ಥಾನ ಜೀರ್ಣೋದ್ಧಾರ ಮತ್ತು ಯಾತ್ರಿ ನಿವಾಸ ಸಂಕೀರ್ಣಕ್ಕಾಗಿ ಹಣ ಮಂಜೂರು ಮಾಡಿಸಿದ್ದರು. ಯಾತ್ರಿ ನಿವಾಸ ನಿರ್ಮಾಣಕ್ಕಾಗಿ ಪೊಲೀಸ್‌ ಇಲಾಖೆಯು ಭೋಗನಂದೀಶ್ವರ ದೇವಸ್ಥಾನದ ಬಳಿಯಿದ್ದ ಎರಡೂವರೆ ಎಕರೆ ಪ್ರದೇಶವನ್ನು ಪ್ರವಾಸೋದ್ಯಮ ಇಲಾಖೆಗೆ ಹಸ್ತಾಂತರಿಸಿತ್ತು. ಪ್ರತಿಯಾಗಿ, ಜಿಲ್ಲಾಡಳಿತ ಹೊಸ ಠಾಣೆ ಮತ್ತು ಸಿಬ್ಬಂದಿಯ ವಸತಿ ಗೃಹಗಳ ನಿರ್ಮಾಣಕ್ಕೆ ನಂದಿಗ್ರಾಮದ ನಾಡಕಚೇರಿ ಹಿಂಭಾಗದ ಬೆಟ್ಟದ ಪ್ರದೇಶದಲ್ಲಿ ಎರಡು ಎಕರೆ ಜಾಗ ನೀಡಿತ್ತು.

ಸದ್ಯ ಆ ಜಾಗದಲ್ಲಿ ಪ್ರವಾಸೋದ್ಯಮ ಇಲಾಖೆಯವರು ಒಪ್ಪಂದದಂತೆ ಪೊಲೀಸ್ ಠಾಣೆ ಮತ್ತು ಸಿಬ್ಬಂದಿ ವಸತಿ ನಿಲಯ ಕಟ್ಟಡಗಳನ್ನು ನಿರ್ಮಿಸಿ ಕೊಡಬೇಕಿದೆ. ಆದರೆ ಇಲ್ಲಿಯವರೆಗೂ ಠಾಣೆ ನಿರ್ಮಾಣದ ಮಾತು ಕಾರ್ಯರೂಪಕ್ಕೆ ಬಂದಿಲ್ಲ. ಠಾಣೆ ಎತ್ತಂಗಡಿ ಮಾಡಿದ್ದೇ ನಂದಿ ಸೇರಿದಂತೆ ಅನೇಕ ಹಳ್ಳಿಗಳಲ್ಲಿ ಕಾನೂನುಬಾಹಿರ ಚಟುವಟಿಕೆಗಳು ಗರಿಗೆದರಿವೆ ಎನ್ನುವ ಆರೋಪ ಕೇಳಿ ಬರುತ್ತಿದೆ.

2021ರ ಜ. 30ರ ರಾತ್ರಿ ಭೋಗನಂದೀಶ್ವರ ದೇವಾಲಯದ ಗರ್ಭಗುಡಿ ಮುಂಭಾಗದಲ್ಲಿದ್ದ ಎರಡು ಹುಂಡಿಗಳನ್ನು ಒಡೆದು ಹಣವನ್ನು ಕಳ್ಳರು ದೋಚಿದ್ದರು. ಮಾರ್ಚ್‌ನಲ್ಲಿ ಪೊಲೀಸರು ಇಬ್ಬರು ಆರೋಪಿಗಳನ್ನೂ ಬಂಧಿಸಿದ್ದರು. ಕೆಲವು ತಿಂಗಳ ಹಿಂದೆ ನಂದಿ ಗ್ರಾಮದ ನಾಡಕಚೇರಿ, ಗ್ರಾಮದ ಶಾಲೆಯಲ್ಲಿ ಕಳ್ಳತನ ಸಹ ನಡೆದಿತ್ತು.

2018ರಲ್ಲಿ ‘ನಂದಿ ಗಿರಿಧಾಮ ಠಾಣೆ ಹೊಸ ಕಟ್ಟಡ ಮತ್ತು ಸಿಬ್ಬಂದಿಗೆ ಆರು ವಸತಿ ಗೃಹಗಳ ನಿರ್ಮಾಣಕ್ಕೆ ಪ್ರವಾಸೋದ್ಯಮ ಇಲಾಖೆ ಮೂಲಕ ಸರ್ಕಾರಕ್ಕೆ ಪೊಲೀಸ್ ಇಲಾಖೆ ಪ್ರಸ್ತಾವ ಸಹ ಸಲ್ಲಿಸಿತ್ತು ಎನ್ನಲಾಗುತ್ತಿದೆ.

ನಂದಿ ಗ್ರಾಮಕ್ಕೆ ನಿತ್ಯ ನೂರಾರು ಸಂಖ್ಯೆಯಲ್ಲಿ ರಾಜ್ಯದ ನಾನಾ ಭಾಗಗಳಿಂದ ಪ್ರವಾಸಿಗರು ಭೇಟಿ ನೀಡುತ್ತಾರೆ. ಗ್ರಾಮದ ಸುತ್ತಮುತ್ತ ವಿಲ್ಲಾಗಳು, ರೆಸಾರ್ಟ್‌ಗಳು ಎಲೆ ಎತ್ತಿವೆ. ಹೋಬಳಿ ಕೇಂದ್ರವೂ ಆದ ನಂದಿ ಗ್ರಾಮಕ್ಕೆ ನಿತ್ಯ ಕೆಲಸ ಕಾರ್ಯಗಳ ನಿಮಿತ್ತ ಜನರ ಭೇಟಿಯೂ ಹೆಚ್ಚು.

ನಂದಿ ಗ್ರಾಮದಲ್ಲಿ ಠಾಣೆ ನಿರ್ಮಾಣಕ್ಕೆ ನೀಡಿರುವ ಜಮೀನು ಉತ್ತಮವಾಗಿಲ್ಲ ಎನ್ನುವ ಅಭಿಪ್ರಾಯ ಪೊಲೀಸ್ ಇಲಾಖೆಯಲ್ಲಿದೆ. ಬೆಟ್ಟದ ಬಳಿ ಜಾಗ ನೀಡಿರುವುದೇ ಕಾಮಗಾರಿ ತಡವಾಗಲು ಕಾರಣವಾಯಿತೇ ಎನ್ನುವ ಪ್ರಶ್ನೆ ಸಹ ಮೂಡಿದೆ.

ನಂದಿಗಿರಿಧಾಮ ಠಾಣೆ ಮತ್ತು ವಸತಿ ಗೃಹಗಳ ನಿರ್ಮಾಣಕ್ಕೆ ಬೆಟ್ಟದ ತಪ್ಪಲು ಪ್ರದೇಶದಲ್ಲಿ ನೀಡಿರುವ ಜಾಗ ಸೂಕ್ತವಾಗಿಲ್ಲ. ಆದ್ದರಿಂದ ನಂದಿಕ್ರಾಸ್‌ ಬಳಿಯ ಮೆಗಾ ಡೇರಿ ಪಕ್ಕದಲ್ಲಿ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ತೋಟಗಾರಿಕೆ ಇಲಾಖೆಗೆ ಸೇರಿದ ಜಾಗ ಮಂಜೂರು ಮಾಡುವಂತೆ ಕೋರಿ ಜಿಲ್ಲಾಧಿಕಾರಿ ಅವರಿಗೆ ಜಿಲ್ಲಾ ಪೊಲೀಸ್ ಇಲಾಖೆ 2018ರಲ್ಲಿ ಪ್ರಸ್ತಾವ ಸಹ ಸಲ್ಲಿಸಿತ್ತು ಎನ್ನಲಾಗುತ್ತಿದೆ. ಆದ್ದರಿಂದ ಹೊಸ ಠಾಣೆ ಎಲ್ಲಿ ನಿರ್ಮಾಣವಾಗುತ್ತದೆ ಎಂದು ತಿಳಿಯದಾಗಿದೆ. ಆದರೆ ನಂದಿ ಗ್ರಾಮಸ್ಥರು ಮಾತ್ರ ‘ಠಾಣೆ ಸ್ಥಳಾಂತರ ಸಂದರ್ಭದಲ್ಲಿ ನೀಡಿದ್ದ ಭರವಸೆ ಇಂದಿಗೂ ಈಡೇರಿಲ್ಲ. ನಮ್ಮೂರ ವ್ಯಾಪ್ತಿಯಲ್ಲಿಯೇ ಠಾಣೆ ನಿರ್ಮಾಣವಾಗಲಿ’ ಎನ್ನುತ್ತಿದ್ದಾರೆ.

ಮುಂದಿನ ಹಂತದಲ್ಲಿ ನಿರ್ಮಾಣ

ಸಾರ್ವಜನಿಕರಿಗೆ ಅನುಕೂಲವಾಗುವ ಕಡೆ ಪೊಲೀಸ್ ಠಾಣೆ ಮಾಡಬೇಕಾಗುತ್ತದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ.ಎಲ್. ನಾಗೇಶ್ ‘ಪ್ರಜಾವಾಣಿ’ಗೆ ತಿಳಿಸಿದರು.

ಚಿಂತಾಮಣಿ ಗ್ರಾಮೀಣ ಠಾಣೆ ಕಟ್ಟಡ ಇತ್ತೀಚೆಗೆ ನಿರ್ಮಾಣವಾಗಿದೆ. ಚಿಕ್ಕಬಳ್ಳಾಪುರ ಸಂಚಾರ ಠಾಣೆ ಕಟ್ಟಡ ನಿರ್ಮಾಣವಾಗಲಿದೆ. ನಂದಿಗಿರಿಧಾಮ ಠಾಣೆಯ ಕಟ್ಟಡ ಮಾತ್ರ ಜಿಲ್ಲೆಯಲ್ಲಿ ಬಾಕಿ ಇದೆ. ಇಲಾಖೆಯು ಹಂತ ಹಂತವಾಗಿ ಕಟ್ಟಡಗಳನ್ನು ನಿರ್ಮಿಸುತ್ತಿದೆ. ಮುಂದಿನ ಹಂತದಲ್ಲಿ ನಂದಿ ಠಾಣೆಯ ಕಟ್ಟಡ ಸಹ ನಿರ್ಮಾಣವಾಗಲಿದೆ ಎಂದರು.

ಸಚಿವರ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ

ನಂದಿ ಗ್ರಾಮವು ಹೋಬಳಿ ಕೇಂದ್ರವಾಗಿದೆ. ಈ ಹಿಂದೆ ಗ್ರಾಮದಿಂದ ಠಾಣೆ ಸ್ಥಳಾಂತರದ ಸಂದರ್ಭದಲ್ಲಿ ವಿರೋಧ ವ್ಯಕ್ತವಾಗಿತ್ತು. ನಂತರ ಗ್ರಾಮ ನಾಡಕಚೇರಿ ಹಿಂಭಾಗದ ಸರ್ವೆ ನಂ 104ರಲ್ಲಿ ಪೊಲೀಸ್ ಠಾಣೆ ನಿರ್ಮಾಣಕ್ಕೆ ಎರಡು ಎಕರೆ ಜಾಗ ಮಂಜೂರಾಯಿತು. ಆದರೆ ಇಲ್ಲಿಯವರೆಗೂ ಠಾಣೆ ನಿರ್ಮಾಣವಾಗಿಲ್ಲ ಎನ್ನುತ್ತಾರೆ ನಂದಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಮಂಜುನಾಥ್.

ಈ ಬಗ್ಗೆ ನಾವು ಸುಮಾರು ಸಲ ಸಚಿವ ಸುಧಾಕರ್ ಅವರ ಗಮನಕ್ಕೆ ತಂದಿದ್ದೇವೆ. ಈ ಹಿಂದಿನ ಜಿಲ್ಲಾಧಿಕಾರಿ ಮತ್ತು ಸಚಿವರು ಗ್ರಾಮಕ್ಕೆ ಬಂದಾಗ ಈ ಬಗ್ಗೆ ಮಾಹಿತಿ ನೀಡಿದ್ದೇವೆ. ನಂದಿ ಸೇರಿದಂತೆ ಸುತ್ತಲಿನ ಗ್ರಾಮಗಳಲ್ಲಿ ಕಳ್ಳತನಗಳು ಸಹ ನಡೆದಿವೆ. ಸಚಿವರು ಹಾಗೂ ಸಂಬಂಧಿಸಿದ ಅಧಿಕಾರಿಗಳು ಗಮನವಹಿಸಿ ಠಾಣೆ ಕಟ್ಟಡ ನಿರ್ಮಿಸಬೇಕು ಎಂದು ಕೋರುವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT