ಶನಿವಾರ, ಅಕ್ಟೋಬರ್ 1, 2022
20 °C

ದುಬಾರಿ ‘ನಂದಿ’ ಪ್ರವಾಸ: ಜನರ ಅಸಮಾಧಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿಕ್ಕಬಳ್ಳಾಪುರ: ಒಂದು ಲೀಟರ್ ನೀರಿನ ಬೆಲೆ ₹ 100. ಒಂದೂವರೆ ಕಿ.ಮೀ. ದೂರದ ಪ್ರಯಾಣಕ್ಕೆ ಒಬ್ಬರಿಗೆ ₹25. ಒಂದು ಟೀ ಬೆಲೆ ₹30. ಒಂದು ಸೌತೆ ಕಾಯಿ ಬೆಲೆ ₹20!

- ಇದು ಪ್ರಸಿದ್ಧ ನಂದಿಗಿರಿಧಾಮದಲ್ಲಿ ನಿಗದಿಯಾಗಿರುವ ಕೆಲವು ದರಗಳ ಸ್ಯಾಂಪಲ್‌ ಮಾತ್ರ.

ನಂದಿ ಗಿರಿಧಾಮದ ಪ್ರವಾಸ ದಿನದಿಂದ ದಿನಕ್ಕೆ ದುಬಾರಿ ಆಗುತ್ತಿದೆ. ಗಿರಿಧಾಮದಲ್ಲಿ ಎಲ್ಲದಕ್ಕೂ ಹೆಚ್ಚು ಬೆಲೆ ತೆರಬೇಕಾಗಿದೆ ಎಂದು ಪ್ರವಾಸಿಗರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ (ಕೆಎಸ್‌ಟಿಡಿಸಿ) ನಿರ್ವಹಣೆಯಲ್ಲಿ ಗಿರಿಧಾಮದಲ್ಲಿ ಹೋಟೆಲ್, ವಸತಿ ನಿಲಯ ಇವೆ. ಪ್ರವೇಶ ಮತ್ತು ವಾಹನ ನಿಲುಗಡೆ ಶುಲ್ಕ ತೋಟಗಾರಿಕಾ ಇಲಾಖೆಯ ಪಾಲಾಗುತ್ತದೆ.

ಬೆಲೆ ಹೆಚ್ಚಳ ಮತ್ತು ಗಿರಿಧಾಮದಲ್ಲಿನ ಅವ್ಯವಸ್ಥೆಗಳ ಬಗ್ಗೆ ವಾಸುದೇವ ಶರ್ಮ ಎಂಬುವವರು ‘ನಂದಿಬೆಟ್ಟದ ಮೇಲೆ ಅದೆಷ್ಟೊಂದು ಬೇಸರದ ಸಂಗತಿಗಳು’ ಎಂದು ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಬರಹ ಪ್ರಕಟಿಸುವ ಮೂಲಕ ಅಸಮಾಧಾನ ಸಹ ವ್ಯಕ್ತಪಡಿಸಿದ್ದರು. ಪ್ರವಾಸಕ್ಕೆ ಬಂದ ಬಹಳಷ್ಟು ಮಂದಿ ಬೆಲೆ ಹೆಚ್ಚಳದ ಬರೆಗೆ
ಗೊಣಗುತ್ತಿದ್ದಾರೆ.

ಗಿರಿಧಾಮದ ಪ್ರವೇಶ ದ್ವಾರದಿಂದ ಯೋಗ ನಂದೀಶ್ವರ ದೇವಾಲಯದವರೆಗಿನ ಒಂದೂವರೆ ಕಿ.ಮೀ ಪ್ರಯಾಣದ ಹಾದಿ ಇದೆ. ಪ್ರವೇಶ ದ್ವಾರದಿಂದ ದೇಗುಲದ ಬಳಿಗೆ ಬರಲು ಕೆಎಸ್‌ಟಿಡಿಸಿ ವಾಹನಗಳಲ್ಲಿ ಒಬ್ಬರಿಗೆ ₹25 ಟಿಕೆಟ್ ದರ ನಿಗದಿಗೊಳಿಸಲಾಗಿದೆ. ಒಂದು ಕಾರಿನಲ್ಲಿ ನಾಲ್ಕು ಮಂದಿ ಪ್ರವಾಸಿಗರು ಬಂದರೆ ಅವರು ಪ್ರವೇಶ ಮತ್ತು ಪಾರ್ಕಿಂಗ್ ಶುಲ್ಕ ರೂಪದಲ್ಲಿ ₹150 ತೆರಬೇಕು.

ಇಲ್ಲಿನ ಮಯೂರ ಫೈನ್ ಟಾಪ್ ಹೋಟೆಲ್‌ನಲ್ಲಿ ಒಂದು ಲೀಟರ್ ಬಿಸ್ಲೆರಿ ಬೆಲೆ ₹100. ಪ್ಲಾಸ್ಟಿಕ್‌ ಬಳಕೆ ನಿಷೇಧದ ಕಾರಣ ಗಾಜಿನ ಬಾಟಲ್‌ಗಳಲ್ಲಿ ನೀರು ಮಾರಾಟ ಮಾಡಲಾಗುತ್ತಿದೆ. ಇದರಿಂದ ಹೆಚ್ಚು ಬೆಲೆ ಎಂದು ಇಲ್ಲಿನ ಸಿಬ್ಬಂದಿ ತಿಳಿಸುವರು. ಆದರೆ ಇದನ್ನು ಅಣಕಿಸುವಂತೆ ಹೋಟೆಲ್ ಮುಂಭಾಗ, ಆಸುಪಾಸಿನಲ್ಲಿ ಪ್ಲಾಸ್ಟಿಕ್ ಬಾಟಲಿಗಳು, ಕವರ್‌ಗಳು ರಾಶಿ ರಾಶಿ ಬಿದ್ದಿವೆ. ಹೋಟೆಲ್ ಮುಂಭಾಗದಲ್ಲಿ ಇಟ್ಟಿರುವ ಶುದ್ಧ ಕುಡಿಯುವ ನೀರಿನ ಘಟಕ ಸಹ ದುರಸ್ತಿಗೆ ಬಂದಿದೆ.

‘ಮಯೂರ ಫೈನ್ ಟಾಪ್‌ನಲ್ಲಿ ದೊರೆಯುವ ಆಹಾರದ ಬೆಲೆಗಳು ಸಹ ಅಧಿಕವಾಗಿದೆ. ಕಾರ್ ಪಾರ್ಕಿಂಗ್‌ಗೆ ವಿಧಿಸುವ ದರ ದುಬಾರಿಯಾಗಿದೆ. ಇಲ್ಲಿಗೆ ಎಲ್ಲ ವರ್ಗದ ಜನರು ಬಂದರೂ ಹೆಚ್ಚು ಬರುವುದು ಮಧ್ಯಮ ವರ್ಗದ ಜನರು. ಸಂಬಂಧಿಸಿದವರು ದರ ಇಳಿಕೆಯ ಬಗ್ಗೆ ಗಮನವಹಿಸಬೇಕು’ ಎಂದು ಬೆಂಗಳೂರಿನ ಪ್ರವಾಸಿಗ ಪ್ರದೀಪ್ ಆಗ್ರಹಿಸಿದರು.

‘ಇದೇ ಮೊದಲ ಬಾರಿಗೆ ನಂದಿಬೆಟ್ಟಕ್ಕೆ ಬಂದಿದ್ದೇವೆ. ಎಲ್ಲದಕ್ಕೂ ಇಲ್ಲಿ ಹೆಚ್ಚು ಹಣವಿದೆ. ನಮ್ಮಂತಹ ಮಧ್ಯಮ ವರ್ಗಗಳ ಕುಟುಂಬಗಳಿಗೆ ಇದು ದುಬಾರಿ’ ಎನ್ನುತ್ತಾರೆ ಮೈಸೂರಿನ ರಮೇಶ್.

ಗಿರಿಧಾಮದಲ್ಲಿಯೇ ಕಸಕ್ಕೆ ಬೆಂಕಿ!
ನಂದಿಗಿರಿಧಾಮದಲ್ಲಿ ಪ್ಲಾಸ್ಟಿಕ್ ಬಳಕೆಗೆ ನಿಷೇಧಿಸಲಾಗಿದೆ. ಆದರೆ ಗಿರಿಧಾಮಕ್ಕೆ ಸಾಗುವ ರಸ್ತೆಯ ಎರಡೂ ಬದಿಗಳಲ್ಲಿ ಹಾಗೂ ಗಿರಿಧಾಮದಲ್ಲಿ ಹೆಚ್ಚಿನ ಪ್ರಮಾಣದಲ್ಲಿಯೇ ಪ್ಲಾಸ್ಟಿಕ್ ಬಾಟಲಿಗಳು, ಪ್ಲಾಸ್ಟಿಕ್ ಕವರ್‌ ಎದ್ದು ಕಾಣುತ್ತವೆ. ಅಚ್ಚರಿ ಎನ್ನುವಂತೆ ಗಿರಿಧಾಮದಲ್ಲಿರುವ ನಂದಿನಿ ಬೂತ್‌ನ ಬದಿಯಲ್ಲಿಯೇ ಬಾಟಲಿಗಳನ್ನು, ಪ್ಲಾಸ್ಟಿಕ್‌ಗಳನ್ನು ಸುಟ್ಟು ಹಾಕಲಾಗಿದೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು