ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಷ್ಟ್ರೀಯ ಹೆದ್ದಾರಿ 234ರ ವಿಸ್ತರಣೆ: ತ್ವರಿತ ಕಾಮಗಾರಿಗೆ ಆಗ್ರಹಿಸಿ ಪ್ರತಿಭಟನೆ

ರಸ್ತೆ ತಡೆದು ಆಕ್ರೋಶ ವ್ಯಕ್ತಪಡಿಸಿದ ಸಾರ್ವಜನಿಕರು
Last Updated 6 ಸೆಪ್ಟೆಂಬರ್ 2018, 13:20 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಚಿಂತಾಮಣಿಯಿಂದ ಆಂಧ್ರಪ್ರದೇಶದ ಹಿಂದೂಪುರಕ್ಕೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ 234ರ ವಿಸ್ತರಣೆ ಕಾಮಗಾರಿ ತ್ವರಿತಗತಿಯಲ್ಲಿ ಪೂರ್ಣಗೊಳಿಸಬೇಕು ಎಂದು ಆಗ್ರಹಿಸಿ ಸಾರ್ವಜನಿಕರು ಇತ್ತೀಚೆಗೆ ಎಪಿಎಂಸಿ ಮಾರುಕಟ್ಟೆ ಬಳಿ ರಸ್ತೆ ತಡೆ ನಡೆಸಿ ಪ್ರತಿಭಟಿಸಿದರು.

ಈ ವೇಳೆ ಮಾತನಾಡಿದ ಮುಖಂಡ ಕೆ.ವಿ.ಶ್ರೀರಾಮ್, ‘ಈ ಕಾಮಗಾರಿ ಆರಂಭಗೊಂಡು ಮೂರೂವರೆ ವರ್ಷ ಕಳೆದರೂ ಇಂದಿಗೂ ಪೂರ್ಣಗೊಂಡಿಲ್ಲ. ಆಮೆಗತಿಯ ಕಾಮಗಾರಿಯಿಂದ ಸವಾರರು, ಸಾರ್ವಜನಿಕರು ತೀವ್ರ ತೊಂದರೆ ಎದುರಿಸುತ್ತಿದ್ದಾರೆ. ಮಾರುಕಟ್ಟೆ ಬಳಿ ಕಳೆದ 15 ದಿನಗಳ ಹಿಂದೆ ರಸ್ತೆ ಅಗೆದು ಜಲ್ಲಿ ಕಲ್ಲು ಸುರಿಯಲಾಗಿದೆ. ಈವರೆಗೆ ಕೆಲಸ ಆರಂಭಿಸಿಲ್ಲ’ ಎಂದು ದೂರಿದರು.

‘ಕುಂಟುತ್ತಿರುವ ಕಾಮಗಾರಿಯಿಂದಾಗಿ ಸಾರ್ವಜನಿಕರು ಅನೇಕ ಸಮಸ್ಯೆಗಳನ್ನು ಎದುರಿಸುವಂತಾಗಿದೆ. ಧೂಳು, ರಸ್ತೆ ಗುಂಡಿ, ಜಲ್ಲಿಕಲ್ಲು, ತಡೆಬೇಲಿ ಸವಾರರಿಗೆ ಕಿರಿಕಿರಿ ಮಾಡುತ್ತಲೇ ಇವೆ. ಕೆಲವೆಡೆ ಸವಾರರು ಬಿದ್ದು ಗಾಯಗೊಂಡರೂ ಅಧಿಕಾರಿಗಳಾಗಲಿ, ಗುತ್ತಿಗೆದಾರರಾಗಲಿ ಎಚ್ಚೆತ್ತುಕೊಂಡು ಕೆಲಸ ಮಾಡಿದ್ದು ಕಾಣುತ್ತಿಲ್ಲ’ ಎಂದು ತಿಳಿಸಿದರು.

‘ನಿತ್ಯ ಮಾರುಕಟ್ಟೆಗೆ ಸಾವಿರಾರು ರೈತರು ಹೂವು, ಹಣ್ಣು, ತರಕಾರಿ ತೆಗೆದುಕೊಂಡು ಬರುತ್ತಾರೆ. ಸಂಚಾರ ದಟ್ಟಣೆಯಿಂದ ಹೈರಾಣಾಗುವವರಿಗೆ ಇದೀಗ ಈ ಕಾಮಗಾರಿ ಗಾಯದ ಮೇಲೆ ಬರೆ ಎಳೆದಂತೆ ಮಾಡುತ್ತಿದೆ. ಕೂಡಲೇ ಕಾಮಗಾರಿ ಮುಗಿಸಬೇಕು. ಅಲ್ಲಿಯವರೆಗೆ ಮಾರುಕಟ್ಟೆ ಬಳಿ ಸಂಚಾರ ಪೊಲೀಸರನ್ನು ನಿಯೋಜಿಸಬೇಕು’ ಎಂದು ಆಗ್ರಹಿಸಿದರು.

ರಸ್ತೆ ತಡೆಯಿಂದಾಗಿ ಸುಮಾರು 1 ಕಿ.ಮೀ ರಸ್ತೆಯಲ್ಲಿ ವಾಹನಗಳು ಸಾಲುಗಟ್ಟಿ ನಿಂತಿದ್ದವು. ಈ ವೇಳೆ ಪ್ರತಿಭಟನಾ ನಿರತತು ಹಾಗೂ ಸವಾರರ ನಡುವೆ ಮಾತಿನ ಚಕಮಕಿ ನಡೆಯಿತು. ಪೊಲೀಸರು ಹೋರಾಟಗಾರರನ್ನು ಸಮಾಧಾನಪಡಿಸಿದರು. ಮುಖಂಡರಾದ ಟಿ.ಎಸ್.ಜಗದೀಶ್, ಶಿವಕುಮಾರ್, ಗಜೇಂದ್ರ, ನರಸಿಂಹಮೂರ್ತಿ, ಲೋಕೇಶ್ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT