ಮಂಗಳವಾರ, 16 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಚಿಕ್ಕಬಳ್ಳಾಪುರ | ‘ಬಲಿಜ ನಿಗಮ’ಕ್ಕೆ ಗ್ರಹಣ; ಚಿಕ್ಕಬಳ್ಳಾಪುರದಲ್ಲಿ ಕಾವು

ನಿಗಮ ರಚನೆಗೆ ಜಿಲ್ಲೆಯ ಸಮುದಾಯದಿಂದ ಹೆಚ್ಚಿದ್ದ ಒತ್ತಡ
Published 2 ಜುಲೈ 2024, 5:24 IST
Last Updated 2 ಜುಲೈ 2024, 5:24 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಜಿಲ್ಲೆಯ ಪ್ರಮುಖ ಸಮುದಾಯಗಳಲ್ಲಿ ಬಲಿಜ ಸಮುದಾಯವೂ ಒಂದು. ಜಿಲ್ಲೆಯಲ್ಲಿರುವ ಈ ಸಮುದಾಯದ ಜನರ ಒತ್ತಾಯ ಮತ್ತು ಮನವಿಯ ಮೇರೆಗೆ 2023ರ ಮಾರ್ಚ್‌ನಲ್ಲಿ ರಾಜ್ಯ ಸರ್ಕಾರ ‘ಕರ್ನಾಟಕ ಬಲಿಜ ಸಮುದಾಯ ಅಭಿವೃದ್ಧಿ ನಿಗಮ’ ರಚಿಸಿತು. 

ನಿಗಮದ ರಚನೆಗೆ ಜಿಲ್ಲೆಯಲ್ಲಿರುವ ಸಮುದಾಯದ ಜನರು ಅಪಾರ ಹರ್ಷ ವ್ಯಕ್ತಪಡಿಸಿದ್ದರು. ಆದರೆ ನಿಗಮ ರಚನೆಯಾಗಿ ಒಂದೂವರೆ ವರ್ಷವಾಗುತ್ತಿದ್ದರೂ ನಿಗಮಕ್ಕೆ ಹಣ ನೀಡಿಲ್ಲ. ಅಧ್ಯಕ್ಷರ ನೇಮಕವೂ ಆಗಿಲ್ಲ. ನಿಗಮದಿಂದ ಸಮುದಾಯಕ್ಕೆ ನೀಡಬೇಕಾದ ಯಾವುದೇ ಸೌಲಭ್ಯಗಳನ್ನು ಜಾರಿಗೊಳಿಸಲು ರಾಜ್ಯ ಮಟ್ಟದಲ್ಲಿ ಕ್ರಿಯಾ ಯೋಜನೆಗಳೂ ನಡೆದಿಲ್ಲ.

ಈಗ ಚಿಕ್ಕಬಳ್ಳಾಪುರ ರಾಜಕಾರಣದಲ್ಲಿ ‘ಬಲಿಜ ನಿಗಮ’ವೂ ಚರ್ಚೆಗೆ ಕಾರಣವಾಗಿದೆ. ಬಿಜೆಪಿಯಲ್ಲಿ ಗುರುತಿಸಿಕೊಂಡಿರುವ ಬಲಿಜ ಸಮುದಾಯದ ಮುಖಂಡರು ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದರೆ, ಕಾಂಗ್ರೆಸ್‌ನಲ್ಲಿ ಗುರುತಿಸಿಕೊಂಡಿರುವ ಸಮುದಾಯದ ನಾಯಕರು ಮೌನವಾಗಿದ್ದಾರೆ.

ಇತ್ತೀಚೆಗೆ ಚಿಕ್ಕಬಳ್ಳಾಪುರದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡೆಸಿದ ಪ್ರತ್ಯೇಕ ಸುದ್ದಿಗೋಷ್ಠಿಯಲ್ಲಿ ‘ಬಲಿಜ ನಿಗಮ’ದ ಬಗ್ಗೆಯೇ ಚರ್ಚೆಗಳು ಜೋರಾಗಿ ನಡೆದವು. ರಾಜ್ಯ ಸರ್ಕಾರವು ನಿಗಮ ರದ್ದುಗೊಳಿಸಿದೆ ಎಂದು ಬಿಜೆಪಿ ಮುಖಂಡರು ಆರೋಪಿಸಿದರು. ನಾಯಕರು ಉತ್ತರಿಸಲು ತಡಬಡಾಯಿಸಿದರು.

‘ಬಲಿಜ ನಿಗಮ’ಕ್ಕೆ ಹಣ ನೀಡದಿರುವುದು, ಅಧ್ಯಕ್ಷರನ್ನು ನೇಮಿಸದ ಬಗ್ಗೆ ಚರ್ಚೆಗಳು ಬಿರುಸಾಗಿವೆ. ಚಿಕ್ಕಬಳ್ಳಾಪುರ ರಾಜಕಾರಣವು ಇದಕ್ಕೆ ಮತ್ತಷ್ಟು ಬಿರುಸು ನೀಡಿದೆ. 

‘ಬಲಿಜ ನಿಗಮಕ್ಕೆ ಅನುದಾನ ಮತ್ತು ಸೌಲಭ್ಯಗಳನ್ನು ನೀಡುವುದಕ್ಕೆ ಸಂಬಂಧಿಸಿದಂತೆ ಯಾವುದೇ ಆದೇಶಗಳು ನಮಗೆ ಬಂದಿಲ್ಲ. ಕ್ರಿಯಾ ಯೋಜನೆ ತಯಾರಾದ ನಂತರವೇ ಗೊತ್ತಾಗುತ್ತದೆ’ ಎಂದು ದೇವರಾಜ ಅರಸು ನಿಗಮದ ಅಧಿಕಾರಿಗಳು ತಿಳಿಸುವರು.

ಜಿಲ್ಲೆಯ ಮುಖಂಡರ ಮನವಿ: 2022ರ ಅಕ್ಟೋಬರ್‌ನಲ್ಲಿ ಚಿಕ್ಕಬಳ್ಳಾಪುರಕ್ಕೆ ಭೇಟಿ ನೀಡಿದ್ದ ಅಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಬಲಿಜ ನಿಗಮ ರಚಿಸುವಂತೆ ಸಮುದಾಯದ ಮುಖಂಡರು ಮನವಿ ಮಾಡಿದ್ದರು.

ಚಿಕ್ಕಬಳ್ಳಾಪುರವಷ್ಟೇ ಅಲ್ಲ ಬಾಗೇಪಲ್ಲಿ, ಗೌರಿಬಿದನೂರು ಸೇರಿದಂತೆ ಇತರೆ ತಾಲ್ಲೂಕುಗಳ ಮುಖಂಡರು ನಿಗಮ ರಚಿಸುವಂತೆ ಒಕ್ಕೊರಲಿನಿಂದ ಆಗ್ರಹಿಸಿದ್ದರು. ಜಿಲ್ಲೆಯಲ್ಲಿರುವ ಸಮುದಾಯದ ಜನರಿಂದ ದೊಡ್ಡ ಮಟ್ಟದಲ್ಲಿಯೇ ಧ್ವನಿ ಹೊರಟಿತ್ತು. 

ವಿಧಾನಸಭೆ ಚುನಾವಣೆಯ ಹೊಸ್ತಿಲಿನಲ್ಲಿ ಅಂದರೆ 2023ರ ಮಾರ್ಚ್‌ನಲ್ಲಿ ಬಲಿಜ ಸಮುದಾಯದ ಬಹುದಿನಗಳ ಬೇಡಿಕೆಗೆ ರಾಜ್ಯ ಸರ್ಕಾರ ಅಸ್ತು ಎಂದಿತ್ತು. ‘ಕರ್ನಾಟಕ ಬಲಿಜ ಸಮುದಾಯ ಅಭಿವೃದ್ಧಿ ನಿಗಮ’ ರಚನೆಗೆ ಆದೇಶ ಹೊರಡಿಸಿತು.

ಸಮುದಾಯವು ಹೆಚ್ಚಿನ ಸಂಖ್ಯೆಯಲ್ಲಿರುವ ಚಿಕ್ಕಬಳ್ಳಾಪುರ, ಕೋಲಾರ, ತುಮಕೂರು ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ನಡೆದ ಚುನಾವಣೆ ಪ್ರಚಾರ ಸಭೆಗಳಲ್ಲಿ ಬಿಜೆಪಿಯು ನಿಗಮ ರಚನೆಯ ವಿಚಾರವನ್ನೂ ಪ್ರಮುಖವಾಗಿ ಪ್ರಸ್ತಾಪಿಸಿತ್ತು.

ಬಿಜೆಪಿ ಸರ್ಕಾರ ಅಧಿಕಾರ ಕಳೆದುಕೊಂಡು ಕಾಂಗ್ರೆಸ್ ಅಧಿಕಾರ ಹಿಡಿಯಿತು. ಸರ್ಕಾರ ರಚನೆಯಾಗಿ ಒಂದು ವರ್ಷ ದಾಟಿದೆ. ಆದರೆ ಇಲ್ಲಿಯವರೆಗೂ ನಿಗಮಕ್ಕೆ ಹಣ ನೀಡಿಲ್ಲ. ಅಧ್ಯಕ್ಷರ ನೇಮಕವೂ ಆಗಿಲ್ಲ. ನಿಗಮದ ಅಡಿಯಲ್ಲಿ ರೈತರಿಗೆ, ವಿದ್ಯಾರ್ಥಿಗಳಿಗೆ ಸೇರಿದಂತೆ ಸಮುದಾಯದ ಜನರಿಗೆ ಸೌಲಭ್ಯ ದೊರೆತಿಲ್ಲ.

ಪ್ರದೀಪ್ ಈಶ್ವರ್
ಪ್ರದೀಪ್ ಈಶ್ವರ್

2023ರ ಮಾರ್ಚ್‌ನಲ್ಲಿ ಬಲಿಜ ಅಭಿವೃದ್ಧಿ ನಿಗಮ ರಚನೆ ಅಧ್ಯಕ್ಷರ ನೇಮಕವೂ ಇಲ್ಲ, ಅನುದಾನವೂ ಇಲ್ಲ ಕಾಂಗ್ರೆಸ್ ವಿರುದ್ಧ ಮುಗಿಬಿದ್ದ ಬಿಜೆಪಿಯ ಬಲಿಜ ನಾಯಕರು

ಸಮುದಾಯದ ಏಕೈಕ ಶಾಸಕ

ಪ್ರದೀಪ್ ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಕಾಂಗ್ರೆಸ್‌ನಲ್ಲಿರುವ ಬಲಿಜ ಸಮುದಾಯದ ಏಕೈಕ ಶಾಸಕರಾಗಿದ್ದಾರೆ. ನಿಗಮಕ್ಕೆ ಹಣ ಕೊಡಿಸುವ ಅಧ್ಯಕ್ಷರನ್ನು ನೇಮಿಸುವ ವಿಚಾರವಾಗಿ ಮುತುವರ್ಜಿವಹಿಸಬೇಕಾದ ಹೊಣೆಗಾರಿಕೆಯೂ ಅವರ ಮೇಲಿದೆ. ನಿಗಮಕ್ಕೆ ಅಧ್ಯಕ್ಷರಾಗಲು ಜಿಲ್ಲೆಯ ಬಹಳಷ್ಟು ಮಂದಿ ಕಾಂಗ್ರೆಸ್ ನಾಯಕರು ಸಹ ತುದಿಗಾಲಿನಲ್ಲಿ ಇದ್ದಾರೆ.

‘ಸಮುದಾಯದಿಂದ ಸಿ.ಎಂಗೆ ಮನವಿ’

ಬಿಜೆಪಿ ಸರ್ಕಾರದಲ್ಲಿ ರಚನೆಯಾದ ಬಲಿಜ ನಿಗಮಕ್ಕೆ ಕಾಂಗ್ರೆಸ್ ಸರ್ಕಾರ ಹಣ ನೀಡಿಲ್ಲ. ಸಿಬ್ಬಂದಿ ಮತ್ತು ಅಧ್ಯಕ್ಷರ ನೇಮಿಸಿಲ್ಲ. ಸಮುದಾಯಕ್ಕೆ ಅನ್ಯಾಯವಾಗುತ್ತಿದೆ ಎಂದು ಬಲಿಜ ಸಮುದಾಯದ ಮುಖಂಡರೂ ಆದ ಬಿಜೆಪಿ ಜಿಲ್ಲಾ ಅಧ್ಯಕ್ಷ ರಾಮಲಿಂಗಪ್ಪ ತಿಳಿಸಿದರು. ಈ ಬಗ್ಗೆ ಮನವರಿಕೆ ಮಾಡಿಕೊಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಬೇಕಾಗುತ್ತದೆ. ವೀರಪ್ಪ ಮೊಯಿಲಿ ಒಂದು ರೀತಿ ದ್ರೋಹ ಮಾಡಿದರೆ ಸಿದ್ದರಾಮಯ್ಯ ಮತ್ತೊಂದು ರೀತಿಯಲ್ಲಿ ದ್ರೋಹ ಮಾಡುತ್ತಿದ್ದಾರೆ. ಎಷ್ಟು ಅನ್ಯಾಯ ಮಾಡುವರೊ ಮಾಡಲಿ ಸಮಾಜದ ಜನರು ತಕ್ಕ ಪಾಠ ಕಲಿಸುತ್ತಾರೆ ಎಂದರು.   ವೀರಪ್ಪ ಮೊಯಿಲಿ ಸರ್ಕಾರ ‘2ಎ’ನಲ್ಲಿದ್ದ ಸಮುದಾಯವನ್ನು ‘3ಎ’ಗೆ ಸೇರಿಸಿತು. ರಾಜಕೀಯ ಶೈಕ್ಷಣಿಕ ಔದ್ಯೋಗಿಕವಾಗಿ ಸಮುದಾಯಕ್ಕೆ ವಂಚನೆ ಆಯಿತು. ಯಡಿಯೂರಪ್ಪ ಅವರು ಶೈಕ್ಷಣಿಕವಾಗಿ ‘2ಎ’ ಸೌಲಭ್ಯ ನೀಡಿದರು. ಬಸವರಾಜ ಬೊಮ್ಮಾಯಿ ಅವರ ಸರ್ಕಾರ ಕೈವಾರ ತಾತಯ್ಯ ಜಯಂತಿ ಘೋಷಿಸಿತು. ಕೈವಾರ ತಾತಯ್ಯ ಅಧ್ಯಯನ ಪೀಠ ಮತ್ತು ಬಲಿಜ ಅಭಿವೃದ್ಧಿ ನಿಗಮ ರಚಿಸಿತು ಎಂದರು. ಸಮಾಜ ಮುಂದೆ ಇಟ್ಟುಕೊಂಡು ನಾಯಕರಾಗುವವರು ತುಂಬಾ ಜನರು ಇದ್ದಾರೆ. ಬೂಟಾಟಿಕೆಯ ನಾಯಕರು ಯಾರು ಸಮಾಜಕ್ಕೆ ನಿಜವಾಗಿ ಕೆಲಸ ಮಾಡಿದವರು ಯಾರು ಎನ್ನುವುದು ಸಮುದಾಯಕ್ಕೆ ಗೊತ್ತಿದೆ. ಈ ಕಾರಣದಿಂದ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಬಲಿಜ ಸಮುದಾಯ ಹೆಚ್ಚಿನ ಪ್ರಮಾಣದಲ್ಲಿ ಬಿಜೆಪಿಗೆ ಮತ ಚಲಾಯಿಸಿತು ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT