ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ಯಾನ್ಸರ್ ತಪಾಸಣೆಗೆ ಹಿಂಜರಿಕೆ ಬೇಡ

ತಪಾಸಣಾ ಶಿಬಿರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ. ಸುಧಾಕರ್ ಸಲಹೆ
Last Updated 7 ಮಾರ್ಚ್ 2021, 3:29 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ‘35 ವರ್ಷ ಮೀರಿದ ತಾಯಂದಿರು, ಸಹೋದರಿಯರನ್ನು ಕ್ಯಾನ್ಸರ್ ತಪಾಸಣೆಗಾಗಿ ಆಸ್ಪತ್ರೆಗಳಿಗೆ ಕರೆದೊಯ್ಯಬೇಕು. ಅವರ ಆರೋಗ್ಯದ ಬಗ್ಗೆ ಕಾಳಜಿವಹಿಸಬೇಕು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ. ಸುಧಾಕರ್ ಸಲಹೆ
ನೀಡಿದರು.

ನಗರದ ಒಕ್ಕಲಿಗರ ಕಲ್ಯಾಣ ಮಂಟಪದಲ್ಲಿ ಶನಿವಾರ ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಜಿಲ್ಲಾ ಘಟಕ ಹಾಗೂ ಬೆಂಗಳೂರಿನ ಕಿದ್ವಾಯಿ ಆಸ್ಪತ್ರೆ ಸಹಯೋಗದಲ್ಲಿ ನಡೆದ ಕ್ಯಾನ್ಸರ್ ತಪಾಸಣಾ ಶಿಬಿರ ಹಾಗೂ ಅರಿವು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಕ್ಯಾನ್ಸರ್ ತಗುಲಿದ ಮೇಲೆ ಆದಷ್ಟು ಬೇಗ ತಪಾಸಣೆಗೆ ಒಳಗಾಗಬೇಕು. ಎಷ್ಟು ಬೇಗ ತಪಾಸಣೆ ಮಾಡಿಸಿಕೊಳ್ಳುವರೋ ಅಷ್ಟೂ ಒಳ್ಳೆಯದು.35 ವರ್ಷ ಮೀರಿದ ಮಹಿಳೆಯರು ಕಡ್ಡಾಯವಾಗಿ ಕ್ಯಾನ್ಸರ್ ತಪಾಸಣೆ ಮಾಡಿಸಬೇಕು. ಪ್ರಾರಂಭಿಕ ಹಂತದಲ್ಲಿ ರೋಗವಿದ್ದರೆ ಗುಣಪಡಿಸಬಹುದು ಎಂದು ಹೇಳಿದರು.

ಕ್ಯಾನ್ಸರ್ ತಪಾಸಣೆ ಶಿಬಿರ ಅವಶ್ಯವಾಗಿರುವ ಶಿಬಿರ. ಎಷ್ಟೇ ಶಿಬಿರ ಮಾಡಿದರೂ ಜನದಲ್ಲಿ ಅರಿವು ಮೂಡಿಸದಿದ್ದರೆ ಅದು ವ್ಯರ್ಥ. ಗ್ರಾಮೀಣ ಪ್ರದೇಶಗಳಲ್ಲಿ ಕ್ಯಾನ್ಸರ್ ಬಂದಿದ್ದರೂ ಮಹಿಳೆಯರು ಆಸ್ಪತ್ರೆಗೆ ಹೋಗಲು ಹೆದರುವರು. ಕ್ಯಾನ್ಸರ್ ಬಂದರೆ ಸಾವು ಖಚಿತ ಎನ್ನುವ ತಪ್ಪು ತಿಳಿವಳಿಕೆ ಇದೆ ಎಂದು
ಹೇಳಿದರು.

ಜಗತ್ತಿನಲ್ಲಿ ಮತ್ತು ರಾಜ್ಯದಲ್ಲಿ ಕ್ಯಾನ್ಸರ್ ಹೆಚ್ಚುತ್ತಿದೆ. ಆಹಾರ, ನಿತ್ಯದ ಚಟುವಟಿಕೆ, ದುರಭ್ಯಾಸಗಳಿಂದ ರೋಗ ಉಲ್ಬಣಿಸುತ್ತಿದೆ.ಕ್ಯಾನ್ಸರ್ ಬಂದರೆ ಈ ಹಿಂದೆ ಇದನ್ನು ದೇವರ ರೋಗ, ಸಾವು ಒಂದೇ ದಾರಿ ಎನ್ನುತ್ತಿದ್ದರಂತೆ. ಆದರೆ ಈಗ ರೋಗವನ್ನು ಚಿಕಿತ್ಸೆ ಮೂಲಕ ಗುಣಪಡಿಸಬಹುದು ಎಂದು ಮಾಹಿತಿ ನೀಡಿದರು.

ಬೆಂಗಳೂರಿನ ಕಿದ್ವಾಯಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ರಾಜ್ಯದ ಬೇರೆ ಬೇರೆ ಭಾಗಗಳಿಂದ ಹೆಚ್ಚು ಜನರು ಬರುವರು. ಕಳೆದ ಬಾರಿಯೂ ಆಸ್ಪತ್ರೆಗೆ ₹ 5 ಕೋಟಿ ನೀಡಿದ್ದೆವು. ಈ ಬಾರಿಯೂ ₹ 5 ಕೋಟಿ ನೀಡುತ್ತೇವೆ. ಇನ್ಫೊಸಿಸ್‌ನ ಸುಧಾಮೂರ್ತಿ ಅವರು ಕಿದ್ವಾಯಿ ಆಸ್ಪತ್ರೆಯಲ್ಲಿ ಸೌಲಭ್ಯಗಳ ಅಭಿವೃದ್ಧಿಗಾಗಿಯೇ ₹ 100 ಕೋಟಿ ನೀಡಿದ್ದಾರೆ ಎಂದರು.

ಇಂತಹ ಶಿಬಿರಗಳಿಗೆ ಹೆಚ್ಚು ಮಹಿಳೆಯರು ಬರಬೇಕು. ಇಂದು ಬಡವರಿಗೆ ಕ್ಯಾನ್ಸರ್ ಬಂದರೆ ಚಿಕಿತ್ಸೆಗೆ ಮನೆಗಳನ್ನೇ ಮಾರಿಕೊಳ್ಳಬೇಕಾದ ಸ್ಥಿತಿ ಇದೆ. ಆದ್ದರಿಂದ ಉಚಿತ ತಪಾಸಣಾ ಶಿಬಿರಗಳನ್ನು ಸದುಪಯೋಗ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಜಿಲ್ಲಾ ಖಜಾಂಚಿ ಎಂ. ಜಯರಾಮ್ ಪ್ರಾಸ್ತಾವಿಕ ಮಾತನಾಡಿದರು.

260 ಮಹಿಳೆಯರ ತಪಾಸಣೆ: ಶಿಬಿರದಲ್ಲಿ ಒಟ್ಟು 260 ಮಹಿಳೆಯರು ಕ್ಯಾನ್ಸರ್ ತಪಾಸಣೆಗೆ ಒಳಗಾದರು. ಸ್ತನ, ಗಂಟಲು ಮತ್ತು ಗರ್ಭಕೋಶದ ಕ್ಯಾನ್ಸರ್ ತಪಾಸಣೆ ಮಾಡಲಾಯಿತು.

ಜಿಲ್ಲಾಧಿಕಾರಿ ಆರ್. ಲತಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ‌ಜಿ.ಕೆ. ಮಿಥುನ್ ಕುಮಾರ್, ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಸಭಾಪತಿ ನಾಗಣ್ಣ, ಜಿಲ್ಲಾ ಅಧ್ಯಕ್ಷ ಬಾಬುರೆಡ್ಡಿ, ಜಿ.ಪಂ ಅಧ್ಯಕ್ಷ ಎಂ.ಬಿ. ಚಿಕ್ಕನರಸಿಂಹಯ್ಯ, ಮಾವು ಅಭಿವೃದ್ಧಿ ಮಂಡಳಿ ಅಧ್ಯಕ್ಷ ಕೆ.ವಿ. ನಾಗರಾಜ್, ಕಿದ್ವಾಯಿ ಆಸ್ಪತ್ರೆಯ ಡಾ.ಸಿ. ರಾಮಚಂದ್ರ, ನಗರಸಭೆ ಅಧ್ಯಕ್ಷ ಆನಂದರೆಡ್ಡಿ, ರೆಡ್‌ಕ್ರಾಸ್ ಸಂಸ್ಥೆ ಕೇಂದ್ರ ಸಮಿತಿ ಸದಸ್ಯ ಡಾ.ಕೆ.ಪಿ. ಶ್ರೀನಿವಾಸಮೂರ್ತಿ ಹಾಜರಿದ್ದರು.

ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಜಿಲ್ಲಾ ಉಪಾಧ್ಯಕ್ಷ ಕೋಡಿರಂಗಪ್ಪ ಸ್ವಾಗತಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT