ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜೀನಾಮೆ ನೀಡುತ್ತಿಲ್ಲ–ಸುಬ್ಬಾರೆಡ್ಡಿ ಸ್ಪಷ್ಟನೆ; ಪ್ರತಿಕ್ರಿಯೆಗೆ ಸಿಗದ ಸುಧಾಕರ್

Last Updated 6 ಜುಲೈ 2019, 12:14 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ದಿಢೀರ್ ರಾಜಕೀಯ ಬೆಳವಣಿಗೆಯಲ್ಲಿ ಬಾಗೇಪಲ್ಲಿ ಕ್ಷೇತ್ರದ ಶಾಸಕ ಎಸ್‌.ಎನ್.ಸುಬ್ಬಾರೆಡ್ಡಿ ಅವರು ಕೂಡ ರಾಜೀನಾಮೆ ನೀಡಲು ಸಿದ್ಧರಾಗಿದ್ದಾರೆ ಎಂದು ಶನಿವಾರ ಹರಿದಾಡಿದ ವದಂತಿಯನ್ನು ಸುಬ್ಬಾರೆಡ್ಡಿ ಅವರು ಅಲ್ಲಗಳೆದರು.

‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ಅವರು, ‘ನಾನು ನೀರಿಗಾಗಿ ರಾಜೀನಾಮೆ ಕೊಡುತ್ತೇನೆ ವಿನಾ ಬೇರೆ ಯಾವ ವಿಚಾರಕ್ಕೂ ರಾಜೀನಾಮೆ ನೀಡುವುದಿಲ್ಲ. ಈ ಸಂದರ್ಭದ ರಾಜೀನಾಮೆಗೆ ಸ್ವಾರ್ಥಕ್ಕಾಗಿ ಕೊಟ್ಟರು ಎನ್ನುತ್ತಾರೆ. ಸದ್ಯ ನಾನು ರಾಜೀನಾಮೆ ನೀಡುತ್ತಿಲ್ಲ’ ಎಂದು ಸುಬ್ಬಾರೆಡ್ಡಿ ಸ್ಪಷ್ಟಪಡಿಸಿದರು.

‘ಹೆಬ್ಬಾಳ ಮತ್ತು ನಾಗವಾರ ಕೆರೆಗಳ ಸಂಸ್ಕರಿಸಿದ ತ್ಯಾಜ್ಯ ನೀರನ್ನು ಬಾಗೇಪಲ್ಲಿ ಕೆರೆಗಳಿಗೂ ಹರಿಸಬೇಕು ಎನ್ನುವುದು ನನ್ನ ಬೇಡಿಕೆ. ಆ ಯೋಜನೆಗೆ ಸಂಬಂಧಿಸಿದ ಕಡತ ಸಿದ್ಧಪಡಿಸಿ ಸಚಿವ ಸಂಪುಟಕ್ಕೆ ಕಳುಹಿಸಿರುವೆ. ಮುಂದಿನ ಸಂಪುಟ ಸಭೆಯಲ್ಲಿ ಅದಕ್ಕೆ ಅನುಮೋದನೆ ದೊರೆಯಬೇಕು. ಇಲ್ಲದಿದ್ದರೆ ಬಾಗೇಪಲ್ಲಿ ಕ್ಷೇತ್ರದ ಮತದಾರರೊಂದಿಗೆ ಪಾದಯಾತ್ರೆ ನಡೆಸಿ ರಾಜೀನಾಮೆ ನೀಡುತ್ತೇನೆ’ ಎಂದು ಹೇಳಿದರು.

ಪ್ರತಿಕ್ರಿಯೆಗೆ ಸಿಗದ ಸುಧಾಕರ್

ಚಿಕ್ಕಬಳ್ಳಾಪುರ ಶಾಸಕ, ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಡಾ.ಕೆ.ಸುಧಾಕರ್ ಅವರು ಕೂಡ ಮುಂದಿನ ಸರದಿಯಲ್ಲಿ ರಾಜೀನಾಮೆ ನೀಡುತ್ತಾರೆ ಎಂಬ ವದಂತಿ ಕೂಡ ಸಂಚಲನ ಮೂಡಿಸಿದೆ. ಈ ಕುರಿತು ಪ್ರತಿಕ್ರಿಯೆ ಪಡೆಯಲು ಸುಧಾಕರ್ ಅವರನ್ನು ಸಂಪರ್ಕಿಸಲಾಯಿತು. ಆದರೆ ಅವರು ಕರೆ ಸ್ವೀಕರಿಸಲಿಲ್ಲ.

ಸಮ್ಮಿಶ್ರ ಸರ್ಕಾರದಲ್ಲಿ ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದ ಸುಧಾಕರ್ ಅವರು ಆರಂಭದಿಂದ ಇರುಸುಮುರುಸು ಹೇಳಿಕೆ ನೀಡುತ್ತ ಸರ್ಕಾರಕ್ಕೆ ಮುಜುಗರ ಉಂಟು ಮಾಡುತ್ತ ಬಂದಿದ್ದರು. ಅವರಿಗೆ ಇತ್ತೀಚೆಗೆ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಸ್ಥಾನಕ್ಕೆ ನೇಮಕ ಮಾಡುವ ಮೂಲಕ ಅಸಮಾಧಾನ ತಣಿಸುವ ಕೆಲಸ ಮಾಡಿದ್ದರು. ಹೀಗಾಗಿ, ಸುಧಾಕರ್ ಅವರ ನಡೆ ಸದ್ಯ ನಿಗೂಢವಾಗಿದೆ.

* ಇವನ್ನೂ ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT