ಭಾನುವಾರ, ಆಗಸ್ಟ್ 1, 2021
23 °C
ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟನೆ

ನೌಕರರ ವೇತನಕ್ಕೆ ₹382 ಕೋಟಿ ಹಣ ನೀಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬಾಗೇಪಲ್ಲಿ: ಗ್ರಾಮ ಪಂಚಾಯಿತಿ ನೌಕರರ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ, ತಾಲ್ಲೂಕು ಗ್ರಾಮ ಪಂಚಾಯಿತಿ ನೌಕರರ ಸಂಘದ ನೇತೃತ್ವದಲ್ಲಿ ನೌಕರರು ಶುಕ್ರವಾರ ತಾಲ್ಲೂಕು ಪಂಚಾಯಿತಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.

ಸಂಘದ ರಾಜ್ಯ ಸಮಿತಿ ಅಧ್ಯಕ್ಷ ಮಾರುತಿ ಮಾನ್ಪಡೆ ಮಾತನಾಡಿ, ರಾಜ್ಯದ 6,024 ಗ್ರಾಮ ಪಂಚಾಯಿತಿಗಳಲ್ಲಿ ಕೆಲಸ ನಿರ್ವಹಿಸುತ್ತಿರುವ 65 ಸಾವಿರ ಸಿಬ್ಬಂದಿಗೆ ವೇತನ ನೀಡಲು ₹900 ಕೋಟಿ ಹಣ ಬೇಕಾಗಿದೆ. ₹900 ಕೋಟಿಯಲ್ಲಿ ಕೇವಲ ₹518 ಕೋಟಿಗೆ ಹಣಕಾಸು ಇಲಾಖೆ ಮಂಜೂರಾತಿ ನೀಡಿದೆ. 2 ವರ್ಷಗಳಿಂದ ಸಿಬ್ಬಂದಿ ವೇತನ ಬಾಕಿ ಉಳಿದಿದೆ. 3 ತಿಂಗಳಿಗೊಮ್ಮೆ ಬಿಡುಗಡೆಯಾದ ಕಂತಿನ ಹಣದಲ್ಲಿ 2 ತಿಂಗಳ ವೇತನಕ್ಕೆ ಮಾತ್ರ ಹಣ ಸಾಕಾಗುತ್ತದೆ. ಕೂಡಲೇ ಬಾಕಿ ಇರುವ ವೇತನ ಪಾವತಿಸಬೇಕು ಎಂದು ಆಗ್ರಹಿಸಿದರು.

ಪಂಚಾಯಿತಿ ನೌಕರರ ವೇತನಕ್ಕೆ ಕೊರತೆ ಇರುವ ₹382 ಕೋಟಿ ಹಣವನ್ನು ಮಂಜೂರು ಮಾಡಬೇಕು. ಗಣಕಯಂತ್ರ ಅಪರೇಟರ್‌ಗಳಿಗೆ ಬಡ್ತಿ ನೀಡಲು ನೇಮಕಾತಿಗಳಿಗೆ ತಿದ್ದುಪಡಿ ತರಬೇಕು. ಎಲ್ಲಾ ಸಿಬ್ಬಂದಿಗೆ ವಿಮೆ, ವೈದ್ಯಕೀಯ ವೆಚ್ಚ ನೀಡಬೇಕು. ಕನಿಷ್ಠ ವೇತನ ಪಡೆಯುವ ನೌಕರರಿಗೆ ಬಿಪಿಎಲ್ ಪಡಿತರ ಚೀಟಿ ವಿತರಿಸಬೇಕು. ತಾಲ್ಲೂಕು ಮಟ್ಟದ ಸಮಸ್ಯೆಗಳನ್ನು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಗಳು ಒಂದು ತಿಂಗಳ ಅವಧಿಯೊಳಗೆ ಪರಿಹರಿಸಬೇಕು. ಇಲ್ಲವಾದಲ್ಲಿ ಅನಿರ್ದಿಷ್ಟ ಧರಣಿ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.

ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಎಚ್.ಎನ್. ಮಂಜುನಾಥಸ್ವಾಮಿ ಮನವಿ ಸ್ವೀಕರಿಸಿದರು. ಗ್ರಾಮ ಪಂಚಾಯಿತಿ ನೌಕರರ ಸಂಘದ ಜಿಲ್ಲಾ ಸಮಿತಿ ಅಧ್ಯಕ್ಷ ಕೆ.ಎನ್.ಪಾಪಣ್ಣ, ಗೌರವಾಧ್ಯಕ್ಷ ಫಯಾಜ್, ಜಿಲ್ಲಾ ಉಪಾಧ್ಯಕ್ಷ ವೆಂಕಟೇಶ್, ತಾಲ್ಲೂಕು ಅಧ್ಯಕ್ಷ ಶ್ರೀನಿವಾಸ್, ಕಾರ್ಯದರ್ಶಿ ವೆಂಕಟರಾಮಯ್ಯ, ಕಾರ್ಯದರ್ಶಿ ಈಶ್ವರಪ್ಪ, ಮುಖಂಡ ಸತ್ಯನಾರಾಯಣ, ನಾಗರಾಜು ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.