ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕಬಳ್ಳಾಪುರ: ಜನರ ನಿದ್ದೆಗೆಡಿಸುತ್ತಿರುವ ಕೊರೊನಾ ವೈರಸ್ ಪರೀಕ್ಷಾ ವರದಿ ವಿಳಂಬ

ವಾರ ಕಳೆದರೂ ಕೈಸೇರದ ಕೊರೊನಾ ವೈರಸ್‌ ಸೋಂಕು ಶಂಕಿತರ ಗಂಟಲು ದ್ರವ ಮಾದರಿ ಪರೀಕ್ಷೆಗಳ ವರದಿ
Last Updated 16 ಜುಲೈ 2020, 19:30 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಕೊರೊನಾ ವೈರಸ್‌ ಸೋಂಕು ಶಂಕಿತರ ಗಂಟಲು ದ್ರವ ಮಾದರಿ ಪರೀಕ್ಷೆಗಳ ವರದಿಗಳು ವಿಳಂಬವಾಗುತ್ತಿರುವುದು ಪರೀಕ್ಷೆಗೆ ಒಳಗಾದವರ ನಿದ್ದೆಗೆಡಿಸುವ ಜತೆಗೆ ಕ್ವಾರಂಟೈನ್‌ನಲ್ಲಿ ಇರುವವರಿಗೂ ನೆಮ್ಮದಿ ಕಳೆಯುತ್ತಿವೆ ಎಂಬ ಆರೋಪಗಳು ವ್ಯಕ್ತವಾಗುತ್ತಿವೆ.

ಜಿಲ್ಲೆಯಲ್ಲಿ ಕೊರೊನಾ ವೈರಸ್‌ ಸೋಂಕಿನ ಶಂಕಿತ ವ್ಯಕ್ತಿಗಳಿಂದ ಪಡೆದ ಗಂಟಲು ದ್ರವ ಮಾದರಿಗಳನ್ನು ಪರೀಕ್ಷೆಗಾಗಿ ಬೆಂಗಳೂರಿನ ಕಮಾಂಡೊ ಆಸ್ಪತ್ರೆ, ಬೆಂಗಳೂರು ವೈದ್ಯಕೀಯ ಕಾಲೇಜು (ಬಿಎಂಸಿ) ಮತ್ತು ಗಾಂಧಿ ಕೃಷಿ ವಿಜ್ಞಾನ ಕೇಂದ್ರದ (ಜಿಕೆವಿಕೆ) ಪ್ರಯೋಗಾಲಯಗಳಿಗೆ ಕಳುಹಿಸಿ ಕೊಡಲಾಗುತ್ತಿದೆ ಎನ್ನುತ್ತಾರೆ ಆರೋಗ್ಯ ಇಲಾಖೆ ಅಧಿಕಾರಿಗಳು.

ಪರೀಕ್ಷೆಗೆ ಒಳಗಾದವರಿಗೆ ವಾರ ಕಳೆದರೂ ವರದಿ ಕೈತಲುಪದೇ ಇರುವುದು ಒಂದೆಡೆಯಾದರೆ, ಆರೋಗ್ಯ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ಸಕಾಲಕ್ಕೆ ವರದಿಯನ್ನು ಪರೀಕ್ಷೆಗೆ ಒಳಗಾದವರಿಗೆ ತಲುಪಿಸದೆ ಇರುವುದು ಸೋಂಕಿತರ ಸಂಖ್ಯೆ ಹೆಚ್ಚಳಕ್ಕೆ ಕಾರಣವಾಗುತ್ತಿದೆ ಎಂಬ ಟೀಕೆ ವ್ಯಕ್ತವಾಗಿದೆ.

ಜಿಲ್ಲೆಯಲ್ಲಿ ಇತ್ತೀಚೆಗೆ ನಿತ್ಯ ಸುಮಾರು 700 ರಿಂದ 1,000 ಜನರಿಂದ ಗಂಟಲು ದ್ರವ ಮಾದರಿಗಳನ್ನು ಸಂಗ್ರಹಿಸಿ ಬೆಂಗಳೂರಿನ ಪ್ರಯೋಗಾಲಯಗಳಿಗೆ ಕಳುಹಿಸಲಾಗುತ್ತಿದೆ. ವರದಿ ಸಕಾಲಕ್ಕೆ ತಲುಪದ ಕಾರಣ ಪರೀಕ್ಷೆಗೆ ಒಳಗಾದವರು ಆತಂಕದಲ್ಲಿಯೇ ದಿನದೂಡುವ ಸ್ಥಿತಿ ನಿರ್ಮಾಣವಾಗುತ್ತಿದೆ.

ಜಿಲ್ಲೆಯಲ್ಲಿ ಗುರುವಾರದ ವರೆಗೆ 29,297 ಜನರ ಗಂಟಲು ದ್ರವ ಮಾದರಿಗಳನ್ನು ಆರೋಗ್ಯ ಇಲಾಖೆ ಸಿಬ್ಬಂದಿ ಸಂಗ್ರಹಿಸಿದೆ. ಆದರೆ, ಈ ಪೈಕಿ 22,328 ಮಾದರಿಗಳ ಫಲಿತಾಂಶ ಮಾತ್ರ ಲಭ್ಯವಾಗಿದೆ. 6,969 ಮಾದರಿಗಳ ವರದಿ ಬಾಕಿ ಉಳಿದಿದೆ.

ಆರಂಭದ ದಿನಗಳಲ್ಲಿ ಎರಡು ದಿನಕ್ಕೆಲ್ಲ ಸಿಗುತ್ತಿದ್ದ ವರದಿ ಈಗ ವಾರ ಕಳೆದರೂ ಸಿಗದಂತಾಗಿ ಪರೀಕ್ಷೆಗೆ ಒಳಗಾದ ಮಂದಿ ಜೀವ ಕೈಯಲ್ಲಿ ಹಿಡಿದು ಕಾಲ ಕಳೆಯುತ್ತಿದ್ದಾರೆ. ಸೋಂಕಿತರನ್ನು ಶೀಘ್ರವಾಗಿ ಗುರುತಿಸಿ ಚಿಕಿತ್ಸೆ ನೀಡುವ ಕಾರ್ಯಕ್ಕೂ ಹಿನ್ನೆಡೆಯಾಗಿದ್ದು, ಅವರಿಂದ ಇನ್ನಷ್ಟು ಮಂದಿಗೆ ವೈರಸ್‌ ಹರಡುವ ಸಾಧ್ಯತೆ ಸಮುದಾಯದಲ್ಲಿ ಭೀತಿ ಹೆಚ್ಚಿಸಿದೆ.

ಸೋಂಕಿನ ಲಕ್ಷಣ ಇದ್ದು ಪರೀಕ್ಷೆಗೆ ಒಳಪಟ್ಟವರು ವರದಿ ಬರುವ ತನಕ ಬೀದಿ, ಮಾರುಕಟ್ಟೆಗಳಲ್ಲಿ ಸುತ್ತಾಡುತ್ತಿದ್ದಾರೆ. ಸೋಂಕು ದೃಢಪಡದ ಕಾರಣಕ್ಕೆ ಮನೆಯಲ್ಲಿ ಯಾವುದೇ ಮುನ್ನೆಚ್ಚರಿಕೆ ವಹಿಸಲು ಮುಂದಾಗುತ್ತಿಲ್ಲ. ಇದರಿಂದಾಗಿ ಕುಟುಂಬದವರಿಗೆ ಹಾಗೂ ರೋಗ ಲಕ್ಷಣ ಇದ್ದವರು ಓಡಾಡಿದ ಜಾಗದಲ್ಲಿ ಸೋಂಕು ಹರಡಲು ಕಾರಣವಾಗುತ್ತಿದೆ ಎಂಬ ಆತಂಕ ಪ್ರಜ್ಞಾವಂತರದು.

‘ಹೆಚ್ಚುತ್ತಿರುವ ಮಾದರಿ ಸಂಗ್ರಹ, ಮತ್ತೊಂದೆಡೆ, ಪರೀಕ್ಷಾ ವರದಿ ಪಾಸಿಟಿವ್ ಬಂದರೆ ಅದನ್ನು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಅನುಮೋದಿಸಿದ ನಂತರವಷ್ಟೇ ಸೋಂಕಿತರಿಗೆ ಆ ಮಾಹಿತಿ ನೀಡಬೇಕು ಎಂದು ಹೊಸದಾಗಿ ನಿಯಮ ರೂಪಿಸಲಾಗಿದೆ. ಹೀಗಾಗಿ, ಕೂಡ ವರದಿ ಕೈಸೇರುವುದು ವಿಳಂಬವಾಗುತ್ತಿದೆ' ಎನ್ನುತ್ತಾರೆ ಆರೋಗ್ಯ ಇಲಾಖೆ ಅಧಿಕಾರಿಗಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT