ಶುಕ್ರವಾರ, ಜನವರಿ 24, 2020
17 °C
ಜಿಲ್ಲಾಡಳಿತ ಭವನದ ಎದುರು ಸಾಂಕೇತಿಕ ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಮನವಿ ಸಲ್ಲಿಕೆ

ವೇತನ ಪರಿಷ್ಕರಣೆಗೆ ಫಾರ್ಮಾಸಿಸ್ಟ್‌ಗಳ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿಕ್ಕಬಳ್ಳಾಪುರ: ಆರೋಗ್ಯ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಫಾರ್ಮಾಸಿಸ್ಟ್‌ಗಳ ವೇತನ ಮತ್ತು ಭತ್ಯೆಗಳನ್ನು ಪರಿಷ್ಕರಣೆ ಮಾಡುವ ಜತೆಗೆ ವೃಂದ ನೇಮಕಾತಿ ನಿಯಮಾವಳಿ ಬದಲಾವಣೆ ಮಾಡಬೇಕು ಎಂದು ಆಗ್ರಹಿಸಿ ರಾಜ್ಯ ಸರ್ಕಾರಿ ಫಾರ್ಮಾಸಿಸ್ಟ್‌ಗಳ ಸಂಘದ ಜಿಲ್ಲಾ ಘಟಕದ ಪದಾಧಿಕಾರಿಗಳು ಇತ್ತೀಚೆಗೆ ಜಿಲ್ಲಾಡಳಿತ ಭವನದ ಎದುರು ಸಾಂಕೇತಿಕ ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿ ಅವರಿಗೆ ಮನವಿ ಸಲ್ಲಿಸಿದರು.

ಈ ವೇಳೆ ಮಾತನಾಡಿದ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ರಹಮತ್‌ವುಲ್ಲಾ, ‘ರಾಜ್ಯದಲ್ಲಿ ಆರೋಗ್ಯ ಇಲಾಖೆ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆ ವ್ಯಾಪ್ತಿಯಲ್ಲಿ ಸುಮಾರು 3,500 ಕ್ಕಿಂತ ಹೆಚ್ಚು ಫಾರ್ಮಾಸಿಸ್ಟ್‌ಗಳು ಕಾರ್ಯ ನಿರ್ವಹಿಸುತ್ತಿದ್ದಾರೆ. ಫಾರ್ಮಾಸಿಸ್ಟ್‌ಗಳು ಸಾರ್ವಜನಿಕ ಆರೋಗ್ಯ ಕಾಪಾಡುವಲ್ಲಿ ಮಹತ್ತರ ಪಾತ್ರ ನಿರ್ವಹಿಸುವ ಜತೆಗೆ ಸರ್ಕಾರಿ ಯೋಜನೆಗಳ ಅನುಷ್ಠಾನದಲ್ಲಿ ಸಕ್ರಿಯವಾಗಿ ಭಾಗವಹಿಸಿ ಯಶಸ್ವಿಗೊಳಿಸುತ್ತಿದ್ದಾರೆ’ ಎಂದು ಹೇಳಿದರು.

‘ಫಾರ್ಮಸಿ ವ್ಯಾಸಂಗವನ್ನು ತಾಂತ್ರಿಕ ಕೌಶಲತೆ ವ್ಯಾಸಂಗ ಎಂದು ಸರ್ಕಾರ ಪರಿಗಣಿಸಿದೆ. ಆದರೆ ಆರೋಗ್ಯ ಇಲಾಖೆಯು ತಾಂತ್ರಿಕ ವೇತನ ನೀಡುತ್ತಿಲ್ಲ. ನೆರೆ ರಾಜ್ಯಗಳಲ್ಲಿ ಫಾರ್ಮಾಸಿಸ್ಟ್‌ಗಳಿಗೆ ಹೆಚ್ಚು ವೇತನ ನೀಡಲಾಗುತ್ತಿದೆ. ಫಾರ್ಮಾಸಿಸ್ಟ್ ನೌಕರರ ಬೇಡಿಕೆಗಳನ್ನು ಈಡೇರಿಸುವಂತೆ ಹಲವು ಸುತ್ತಿನ ಚರ್ಚೆಗಳನ್ನು ಮುಖ್ಯಮಂತ್ರಿ, ಆರೋಗ್ಯ ಸಚಿವರು ಹಾಗೂ ಇಲಾಖೆಯ ಉನ್ನತ ಅಧಿಕಾರಿಗಳೊಂದಿಗೆ ನಡೆಸಿ ನಡುವಳಿಕೆಗಳನ್ನು ರೂಪಿಸಿದ್ದರೂ ಈವರೆಗೆ ಕಾರ್ಯರೂಪಕ್ಕೆ ಬಂದಿಲ್ಲ’ ಎಂದು ತಿಳಿಸಿದರು.

‘30 ವರ್ಷ ಸೇವೆ ಸಲ್ಲಿಸಿದವರಿಗೆ ಪದೋನ್ನೋತಿ ಹೊಂದಿದರೂ ಯಾವುದೇ ವೇತನ ಶ್ರೇಣಿ ಬದಲಾಗುತ್ತಿಲ್ಲ. ಅದನ್ನೂ ಕೂಡಲೇ ಬದಲಾಯಿಸಬೇಕು. ಜನಸಂಖ್ಯೆ ಆಧಾರದ ಮೇಲೆ ಹಾಗೂ ಆಸ್ಪತ್ರೆ ಹಾಸಿಗೆಗಳ ಆಧಾರದ ಮೇಲೆ ಫಾರ್ಮಾಸಿಸ್ಟ್‌ ಹುದ್ದೆಗಳನ್ನು ಸೃಷ್ಟಿಸಬೇಕು.. ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಕ್ರಮಕೈಗೊಳ್ಳಬೇಕು. 2ನೇ ಹಂತದ ಪ್ರತಿಭಟನೆ ಭಾಗವಾಗಿ ಜ. 30ರಂದು ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಿಂದ ಆರೋಗ್ಯ ಇಲಾಖೆಯ ಆಯುಕ್ತರ ಕಚೇರಿ ವರೆಗೆ ರ್‍ಯಾಲಿ ನಡೆಸಲಾಗುತ್ತಿದೆ’ ಎಂದರು.

‘ಸಾಂಕೇತಿಕ ಹೋರಾಟದ ಬಗ್ಗೆಯೂ ಕೂಡ ಸರ್ಕಾರ ನಿರ್ಲಕ್ಷಿಸಿದರೆ 3ನೇ ಹಂತದ ಪ್ರತಿಭಟನೆಯನ್ನು ಫೆ. 12ರಿಂದ 17ರ ವರೆಗೆ ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮಗಳಲ್ಲಿ ನೌಕರರು ಭಾಗವಹಿಸುವುದನ್ನು ಸ್ಥಗಿತಗೊಳಿಸಿ ಪ್ರತಿಭಟನೆಯನ್ನು ತೀವ್ರಗೊಳಿಸಲಾಗುವುದು’ ಎಂದು ಹೇಳಿದರು.

ರಾಜ್ಯ ಸರ್ಕಾರಿ ಫಾರ್ಮಾಸಿಸ್ಟ್‌ಗಳ ಸಂಘದ ಜಿಲ್ಲಾ ಘಟಕದ ಕಾರ್ಯದರ್ಶಿ ಮಂಜುನಾಥ, ಖಜಾಂಚಿ ವಿ.ಚಂದ್ರಶೇಖರ್, ಪದಾಧಿಕಾರಿಗಳಾದ ಲಕ್ಷ್ಮೀ, ಶಿವು, ಜಯಚಂದ್ರ, ರೆಡ್ಡಿ, ರಾಮಚಂದ್ರ, ವಿಜಯಕುಮಾರ್, ಕೃಷ್ಣಮೂರ್ತಿ ಹಾಜರಿದ್ದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು