ಮಂಗಳವಾರ, ಮಾರ್ಚ್ 9, 2021
32 °C
‘ಪರಿಸರ ಅಭಿವೃದ್ಧಿ, ಮಾಲಿನ್ಯ ನಿಯಂತ್ರಣ ಜಾಗೃತಿ’ ಕುರಿತ ಸಂವಾದದಲ್ಲಿ ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಡಾ.ಕೆ.ಸುಧಾಕರ್ ಅಭಿಮತ

ಮಾಲಿನ್ಯ ತಡೆಯದಿದ್ದರೆ ಭವಿಷ್ಯದಲ್ಲಿ ಅಪಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿಕ್ಕಬಳ್ಳಾಪುರ: ‘ಪರಿಸರ ಮಾಲಿನ್ಯಕ್ಕೆ ಮನುಷ್ಯನ ದುರಾಸೆಯೇ ನೇರ ಕಾರಣ. ಆಡಂಬರದ ಬದುಕಿಗಾಗಿ ಪ್ರಕೃತಿ ನಾಶಪಡಿಸುತ್ತಿರುವ ಪರಿಣಾಮ ಕಲುಷಿತ ವಾತಾವರಣ ಹೆಚ್ಚುತ್ತಿದ್ದು, ಇದನ್ನು ಈಗಿನಿಂದಲೇ ತಡೆಯದಿದ್ದರೆ ಭವಿಷ್ಯದಲ್ಲಿ ನಮಗೆ ಅಪಾಯ ಕಾದಿದೆ’ ಎಂದು ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ, ಶಾಸಕ ಡಾ.ಕೆ.ಸುಧಾಕರ್ ಅಭಿಪ್ರಾಯಪಟ್ಟರು.

ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕದ ವತಿಯಿಂದ ಬುಧವಾರ ಪತ್ರಕರ್ತರ ಭವನದಲ್ಲಿ ಆಯೋಜಿಸಿದ್ದ ‘ಪರಿಸರ ಅಭಿವೃದ್ಧಿ, ಮಾಲಿನ್ಯ ನಿಯಂತ್ರಣ ಜಾಗೃತಿ’ ಕುರಿತ ಸಂವಾದದಲ್ಲಿ ಅವರು ಮಾತನಾಡಿದರು.

‘ಪರಿಸರದ ಮಹತ್ವ ತಿಳಿದಿದ್ದ ನಮ್ಮ ಪೂರ್ವಜರು ಅದರೊಂದಿಗೆ ಅವಿನಾಭಾವ ಸಂಬಂಧವಿಟ್ಟುಕೊಂಡು ಪೂಜಿಸುತ್ತಿದ್ದರು. ಆದರೆ ಪ್ರಸ್ತುತ ದಿನಗಳಲ್ಲಿ ಅಭಿವೃದ್ಧಿ ಹೆಸರಿನಲ್ಲಿ ಪರಿಸರ ಹನನ ಹೆಚ್ಚುತ್ತಿದೆ. ಪರಿಣಾಮ ಪರಿಸರ ಮಾಲಿನ್ಯ ಉಲ್ಭಣಗೊಳ್ಳುತ್ತಿದೆ. ಈ ಬಗ್ಗೆ ಪ್ರತಿಯೊಬ್ಬರೂ ಗಂಭೀರ ಚಿಂತನೆ ಮಾಡಬೇಕಿದೆ’ ಎಂದು ಹೇಳಿದರು.

‘ಪ್ರಸ್ತುತ ಹೆಚ್ಚು ಪರಿಸರ ಮಾಲಿನ್ಯಗೊಳಿಸುವ ದೇಶಗಳ ಸಾಲಿನಲ್ಲಿ ಚೀನಾ, ಭಾರತ, ಬ್ರೆಜಿಲ್ ಮುಂಚೂಣಿಯಲ್ಲಿವೆ. ಅಭಿವೃದ್ಧಿ ಹೊಂದಿರುವ ದೇಶಗಳು ಈ ರಾಷ್ಟ್ರಗಳಿಗೆ ಪರಿಸರ ಮಾಲಿನ್ಯ ತಡೆಯುವಂತೆ ಒತ್ತಡ ಹಾಕುತ್ತಲಿವೆ. ಅಭಿವೃದ್ಧಿಗೆ ಕಾರ್ಖಾನೆಗಳು ಅಗತ್ಯವಿರುವುದರಿಂದ ಮಾಲಿನ್ಯ ತಡೆಯುವುದು ಕಷ್ಟವಾಗುತ್ತಿದೆ’ ಎಂದು ತಿಳಿಸಿದರು.

‘ಒತ್ತುವರಿಯಿಂದಾಗಿ ನಗರ ಪ್ರದೇಶಗಳ ಜತೆಗೆ ರಾಜ್ಯದಲ್ಲಿನ ಬಹುತೇಕ ಕೆರೆಗಳ ಮೂಲ ಸ್ವರೂಪವೇ ಬದಲಾಗಿದೆ. ಕೆರೆಗಳು ಇಂದು ತ್ಯಾಜ್ಯ ಸುರಿಯುವ ಘಟಕಗಳಾಗಿ ಪರಿವರ್ತನೆಯಾಗುತ್ತಿವೆ. ಆದ್ದರಿಂದ ಈಗಾಗಲೇ ಕೆರೆಗಳ ಸಂರಕ್ಷಣೆ ಕುರಿತು ಚಿಂತನೆ ನಡೆದಿದೆ. ಮುಂದಿನ ದಿನಗಳಲ್ಲಿ ಕೆರೆಗಳ ಪುನಶ್ಚೇತನಕ್ಕೆ ಕ್ರಮಗಳನ್ನು ಕೈಗೊಳ್ಳಲಾಗುವುದು’ ಎಂದರು.

‘ಮನುಷ್ಯ ಇಂದು ಆಡಂಬರದ ಜೀವನಕ್ಕೆ ಮಾರುಹೋಗಿ ತಾನು ಏನು ಮಾಡುತ್ತಿರುವೆ ಎಂಬುದರ ಅರಿವೇ ಇಲ್ಲದಂತೆ ವರ್ತಿಸುತ್ತಿದ್ದಾನೆ. ಆ ತಪ್ಪಿಗೆ ಶಿಕ್ಷೆ, ಪಶ್ಚಾತಾಪ ಪಡಬೇಕಾದ ಕಾಲ ಸನ್ನಿಹಿತವಾಗುತ್ತಿದ್ದು, ಅದಕ್ಕೂ ಮುನ್ನವೇ ನಾವು ತಪ್ಪನ್ನು ತಿದ್ದಿಕೊಳ್ಳಬೇಕಿದೆ. ಪ್ರತಿಯೊಬ್ಬರೂ ಪರಿಸರ ಬೆಳೆಸುವುದು, ಮಾಲಿನ್ಯ ತಡೆಗಟ್ಟುವುದು ಮತ್ತು ನೀರಿನ ಮಿತ ಬಳಕೆ ಅಭ್ಯಾಸಗಳನ್ನು ರೂಢಿಸಿಕೊಳ್ಳಬೇಕಿದೆ’ ಎಂದು ಹೇಳಿದರು.

ಸಂವಾದದಲ್ಲಿ ನೆರೆದವರು ನಿಷೇಧಿತ ಪ್ಲಾಸ್ಟಿಕ್ ಬಳಕೆ, ತ್ಯಾಜ್ಯ ವಿಲೇವಾರಿ ಮಾಡದೆ ಬೆಂಕಿ ಹಾಕುವುದು, ಮಿತಿ ಮೀರಿದ ಭಾರ ಹೊತ್ತು ಓಡುವ ಕ್ರಷರ್‌ ಲಾರಿಗಳು, ಇಟ್ಟಿಗೆ ಗೂಡು ಸುಡಲು ರಸ್ತೆ ಬದಿ ಮರಗಳ ಕಡಿತ ಕುರಿತು ಶಾಸಕರ ಗಮನ ಸೆಳೆದರು.

ಜಿಲ್ಲಾ ಪಂಚಾಯಿತಿ ಸದಸ್ಯ ಪಿ.ಎನ್.ಕೇಶವರೆಡ್ಡಿ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಬಿ.ಎಂ.ರಾಮಸ್ವಾಮಿ, ಮಾಜಿ ಶಾಸಕ ಎಸ್.ಎಂ.ಮುನಿಯಪ್ಪ, ಟಿಎಪಿಸಿಎಂಎಸ್ ಅಧ್ಯಕ್ಷ ಆವುಲರೆಡ್ಡಿ, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ನಾಗೇಶ್, ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಮುನಿಕೃಷ್ಣ, ಮುಖಂಡರಾದ ಯಲುವಹಳ್ಳಿ ಎನ್.ರಮೇಶ್, ಮುನಿಕೃಷ್ಣ, ಕೆ.ವಿ.ನಾಗರಾಜ್, ಗೋವಿಂದಸ್ವಾಮಿ, ಪತ್ರಕರ್ತ ಎಂ.ಜಯರಾಂ ಹಾಜರಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು