ಗುರುವಾರ , ಆಗಸ್ಟ್ 18, 2022
24 °C

ಬಿಜೆಪಿ ನಾಯಕರಿಗೆ ಅಧಿಕಾರದ ಚಿಂತೆ: ಶಾಸಕ ವಿ.ಮುನಿಯಪ್ಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸಾದಲಿ: ‘ಕೊರೊನಾ ಸಂಕಷ್ಟದ ಕಾಲದಲ್ಲೂ ರಾಜ್ಯದಲ್ಲಿ ಅಧಿಕಾರ ನಡೆಸುತ್ತಿರುವ ಬಿಜೆಪಿಗೆ ಜನಸಾಮಾನ್ಯರ ಹಿತಕ್ಕಿಂತಲೂ ಅಧಿಕಾರ, ನಾಯಕತ್ವ ಬದಲಾವಣೆಯ ವಿಷಯಗಳೇ ಹೆಚ್ಚಾಗಿದೆ’ ಎಂದು ಶಾಸಕ ವಿ.ಮುನಿಯಪ್ಪ ಬೇಸರ ವ್ಯಕ್ತಪಡಿಸಿದರು.

ತಾಲ್ಲೂಕಿನ ತಲಕಾಯಲಬೆಟ್ಟ ಸಮೀಪ ತಲಕಾಯಲಬೆಟ್ಟ ಮತ್ತು ಕೋರ್ಲಪರ್ತಿ ನಡುವಿನ 12ಕಿ.ಮೀ ಉದ್ದದ ರಸ್ತೆಗೆ ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯಡಿ ₹8.28 ಕೋಟಿ ವೆಚ್ಚದಲ್ಲಿ ರಸ್ತೆ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು.

ಇಡೀ ಜಗತ್ತನ್ನೇ ಕೊರೊನಾ ಸಂಕಷ್ಟಕ್ಕೆ ದೂಡಿದೆ. ಇಂತಹ ಪರಿಸ್ಥಿತಿಯಲ್ಲಿ ರಾಜ್ಯದಲ್ಲಿ ಅಧಿಕಾರ ನಡೆಸುತ್ತಿರುವ ಸರ್ಕಾರದಲ್ಲಿ ಭಾಗಿಯಾಗಿರುವ ಬಿಜೆಪಿ ಸಚಿವರು, ಶಾಸಕರಿಗೆ ನಾಯಕತ್ವದ್ದೇ ಚಿಂತೆ. ಅಧಿಕಾರ ಪಡೆಯುವುದಕ್ಕೆ ಹಾತೊರೆಯುತ್ತಿದ್ದಾರೆ ಎಂದು ವಿಷಾದ ವ್ಯಕ್ತಪಡಿಸಿದರು.

ಸಕಾಲಕ್ಕೆ ಔಷಧಿ, ವೆಂಟಿಲೇಟರ್ ಸಿಗದೆ ಜನ ಸಾಮಾನ್ಯರು ಪ್ರಾಣ ಕಳೆದುಕೊಂಡರು ಅದಕ್ಕೆ ಸೂಕ್ತ ಪರಿಹಾರ ಕಂಡುಹಿಡಿಯುವ ಬದಲಿಗೆ ಸಿಎಂ ಯಡಿಯೂರಪ್ಪ ಅವರನ್ನು ಬದಲಿಸಿ ಇನ್ನೊಬ್ಬರಿಗೆ ಅಧಿಕಾರ ಪಟ್ಟ ಕಟ್ಟಲು ಮುಂದಾಗಿದ್ದಾರೆ. ಸಾರ್ವಜನಿಕರ ನೆರವಿಗೆ ನಿಲ್ಲಬೇಕಾದ ಇವರು ಆಡಳಿತವನ್ನು ನಡೆಸುವುದು ಬಿಟ್ಟು ರಾಜಕೀಯ ಮಾಡಲು ತಮ್ಮ ಸಮಯವನ್ನು ಹಾಳು ಮಾಡುತ್ತಿದ್ದಾರೆ. ಇಂತಹವರಿಂದ ಇನ್ನೇನು ನಿರೀಕ್ಷೆ ಮಾಡಲು ಸಾಧ್ಯ
ಎಂದು ಟೀಕಿಸಿದರು.

ಇದಕ್ಕೆ ತಕ್ಕಂತೆ ಕೇಂದ್ರದಲ್ಲಿರುವ ಮೋದಿ ನೇತೃತ್ವದ ಸರ್ಕಾರ ತಾಳ ಹಾಕುತ್ತಿದೆ. ಎಲ್ಲವನ್ನು ಬಿಟ್ಟು ಸೋಂಕು ನಿಯಂತ್ರಿಸಲು ಮುಂದಾಗಿ ಎನ್ನುವ ಖಡಕ್ ಸೂಚನೆ ನೀಡದೆ ರಾಜಕೀಯ ಮಾಡಲು ಬಿಟ್ಟಿದ್ದಾರೆ. ಇವರ ರಾಜಕೀಯ ಅಮಾಯಕ ಜನ ಸಾಮಾನ್ಯರು ಬಲಿಯಾಗುತ್ತಿರುವುದು ವಿಪರ್ಯಾಸ ಎಂದರು .

ಕ್ಷೇತ್ರದಲ್ಲಿ ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯಡಿ ಡಾಂಬರೀಕರಣ ಗೊಳ್ಳತ್ತಿರುವ ಕೊನೆಯ ರಸ್ತೆ ಇದಾಗಲಿದೆ. ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯಡಿ ಗ್ರಾಮಗಳ ನಿರ್ಮಾಣ ಡಾಂಬರೀಕರಣಕ್ಕೆ ನೀಡುತ್ತಿದ್ದ ಅನುದಾನ ನಿಲ್ಲಿಸಿದೆ
ಎಂದು ಹೇಳಿದರು.

ಕೆಪಿಸಿಸಿ ಸದಸ್ಯ ವಿ.ಸುಬ್ರಮಣಿ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎನ್. ಮುನಿಯಪ್ಪ, ತಿಮ್ಮನಾಯಕನಹಳ್ಳಿ ಆನಂದ್, ಮರಳಪ್ಪನಹಳ್ಳಿ ಕೃಷ್ಣಾರೆಡ್ಡಿ, ಮುನೀರ್, ಅಶ್ವತ್ಥಪ್ಪ, ಕೃಷ್ಣಾರೆಡ್ಡಿ, ಮಾದೇನಹಳ್ಳಿ ರವಿ, ಎಲ್.ಮಧುಸೂದನ್. ಡಿಎಸ್ಎಸ್ ರಾಜು,  ಟಿ.ಕೆ ನಾಗರಾಜ್ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು