ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಗೇಪಲ್ಲಿ | ಈದ್ಗಾ ಮೈದಾನದಲ್ಲಿ ಪ್ರಾರ್ಥನೆ

Published 22 ಏಪ್ರಿಲ್ 2023, 14:47 IST
Last Updated 22 ಏಪ್ರಿಲ್ 2023, 14:47 IST
ಅಕ್ಷರ ಗಾತ್ರ

ಬಾಗೇಪಲ್ಲಿ: ಈದ್‌ ಉಲ್‌ ಫಿತ್ರ್‌ ಹಬ್ಬದ ಪ್ರಯುಕ್ತ ಪಟ್ಟಣ ಹಾಗೂ ತಾಲ್ಲೂಕಿನಾದ್ಯಾಂತ ಮುಸ್ಲಿಂ ಸಮುದಾಯದವರು ಪಟ್ಟಣದ ಹೊರವಲಯದ ಕೊಡಿಕೊಂಡ ರಸ್ತೆಯಲ್ಲಿನ ಈದ್ಗಾ ಮೈದಾನದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.

ಹಬ್ಬದ ಪ್ರಯುಕ್ತ ಪಟ್ಟಣದ ಜಾಮೀಯಾ ಹಿರಿಯ ಮಸೀದಿ, ಫಾರೂಕ್, ಮದೀನಾ, ನೂರಾನಿ, ಆಜಾಮ್, ಕಮರ್ ಸೇರಿದಂತೆ 12 ಮಸೀದಿಗಳಿಂದ ಮುಸ್ಲಿಮರು  ಪಟ್ಟಣದ ಮುಖ್ಯರಸ್ತೆಯಲ್ಲಿ ಮೆರವಣಿಗೆ ನಡೆಸಿದರು. ಸಂತ ಹುಸೇನಾ ಷಾ ವಲಿ ದರ್ಗಾದ ವೃತ್ತದ ಮೂಲಕ ಕೊಡಿಕೊಂಡ ರಸ್ತೆಯಲ್ಲಿನ ಈದ್ಗಾ ಮೈದಾನದಲ್ಲಿ ಜಮಾಯಿಸಿದರು. ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ವಾಸ ಆಗಿರುವ ಮುಸ್ಲಿಂ ಸಮುದಾಯದವರು ಗ್ರಾಮಗಳಿಂದ ಹೊರವಲಯದ ಈದ್ಗಾ ಮೈದಾನದಲ್ಲಿ ಜಮಾಯಿಸಿ ವಿಶೇಷ ಪ್ರಾರ್ಥನೆ ಮಾಡಿದರು.

ಮುಸ್ಲಿಂ ಸಮುದಾಯವರು ಕಿರಿಯರು-ಹಿರಿಯರು, ಬಡವರು-ಶ್ರೀಮಂತರು ಎನ್ನದೇ, ಸರತಿಸಾಲಿನಲ್ಲಿ ನಿಂತು ರಂಜಾನ್ ಹಬ್ಬದ ವಿಶೇಷ ಪ್ರಾರ್ಥನೆ ಮಾಡಿದರು. ಮಕ್ಕಳು, ಕಿರಿಯರು, ಹಿರಿಯರು ಹೊಸ ಉಡುಪುಗಳನ್ನು ಧರಿಸಿದ್ದರು. ಪರಸ್ಪರ ಆಲಿಂಗಿಸಿಕೊಂಡು ಈದ್ ಮುಬಾರಕ್ ಹಂಚಿಕೊಂಡರು. ಸುಡುಬಿಸಿಲು ಇರುವುದರಿಂದ ಕುಡಿಯುವ ನೀರಿನ ಬಾಟಲ್‌ಗಳ ವ್ಯವಸ್ಥೆ ಮಾಡಲಾಗಿತ್ತು. ಮನೆಗಳಲ್ಲಿ ಸಿಹಿ ತಿಂಡಿ, ತಿನಿಸು ಹಾಗೂ ಮಾಂಸದ ಬಾಡೂಟ ಸಿದ್ಧಪಡಿಸಿಕೊಂಡು ಸವಿದರು.

ಪಟ್ಟಣದ ಹಿರಿಯ ಜಾಮೀಯಾ ಮಸೀದಿಯ ಧರ್ಮಗುರು ಅಬ್ದುಲ್ ವಾಹೀದ್ ಭಾಷ ವಿಶೇಷ ಪ್ರಾರ್ಥನೆ ಮಾಡಿಸಿ, ‘ಶಾಂತಿ, ಸಹನೆ, ಸಹಬಾಳ್ವೆಯಿಂದ ಇರಬೇಕು. ಸಾಮರಸ್ಯ, ಸೌಹಾರ್ದತೆಯಿಂದ ಕೂಡಿರಬೇಕು. ಹಬ್ಬದಲ್ಲಿ ಒಂದು ತಿಂಗಳು ಕಾಲ ಕಠಿಣ ಉಪವಾಸ, 5 ಹೊತ್ತು ಪ್ರಾರ್ಥನೆ ಮಾಡಲಾಗಿದೆ. ಪವಿತ್ರ ಕುರಾನ್ ಹಾಗೂ ರಂಜಾನ್‌ನ ಮಹತ್ವ ತಿಳಿದು, ಬದುಕಬೇಕು’ ಎಂದರು.

ನಂತರ ಈದ್ಗಾ ಮೈದಾನದ ಬಳಿ ಇರುವ ಮುಸ್ಲಿಂ ಸಮುದಾಯದವರು ಸಮಾಧಿಗಳ ಸುತ್ತಲೂ ಬೆಳೆದ ಮುಳ್ಳು-ಕಳೆ ಗಿಡಗಳನ್ನು ಸ್ವಚ್ಛಗೊಳಿಸಿದರು. ತಮ್ಮ ಅಗಲಿದ ಕುಟುಂಬಸ್ಥರ ಸಮಾಧಿಗಳಿಗೆ ಮುಂದೆ ವಿಶೇಷ ಪ್ರಾರ್ಥನೆ ಸಲ್ಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT