ಮಂಗಳವಾರ, 4 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಂತಾಮಣಿ: ರೇಷ್ಮೆಗೂಡು, ನೂಲು ಬೆಲೆ ಭಾರಿ ಕುಸಿತ

ರೈತರು ಹಾಗೂ ನೂಲು ಬಿಚ್ಚಾಣಿಕೆದಾರರು ಕಂಗಾಲು
Last Updated 13 ಮಾರ್ಚ್ 2023, 4:28 IST
ಅಕ್ಷರ ಗಾತ್ರ

ಚಿಂತಾಮಣಿ: ರೇಷ್ಮೆಗೂಡು ಮಾರುಕಟ್ಟೆಯಲ್ಲಿ ರೇಷ್ಮೆಗೂಡಿನ ಬೆಲೆ ಶೇ 50ರಷ್ಟು ಕುಸಿದಿದೆ. ಒಂದು ವರ್ಷದಿಂದ ರೇಷ್ಮೆಗೂಡಿಗೆ ಉತ್ತಮ ಬೆಲೆ ಬಂದಿತ್ತು. ಇದರಿಂದಾಗಿ ರೇಷ್ಮೆ ಬೆಳೆಗಾರರು ಉತ್ತಮ ಲಾಭದ ನಿರೀಕ್ಷೆಯಲ್ಲಿದ್ದರು. ಆದರೆ, ಆದರೆ ಇದೀಗ ಮತ್ತೆ ರೇಷ್ಮೆಗೂಡಿನ ಬೆಲೆ ಕುಸಿದಿರುವುದು ರೈತರ ಕನಸನ್ನು ನುಚ್ಚು ನೂರು ಮಾಡಿದೆ.

ಕೊರೊನಾ ದೂರವಾದ ನಂತರ ರೇಷ್ಮೆಗೂಡಿನ ಬೆಲೆಯಲ್ಲಿ ಚೇತರಿಕೆಯಾಗಿತ್ತು. ಕಳೆದ ಫೆಬ್ರುವರಿಯಲ್ಲಿ ಒಂದು ಕೆ.ಜಿಗೆ 940ಕ್ಕೆ ಮಾರಾಟವಾಗುತ್ತಿತ್ತು. ಮತ್ತೊಂದೆಡೆ ಚೀನಾದಿಂದಲೂ ರೇಷ್ಮೆ ಆಮದು ಆಗುತ್ತಿರಲಿಲ್ಲ. ಹಾಗಾಗಿ ರೇಷ್ಮೆ ಬೆಳೆಗಾರರು ತಮ್ಮ ರೇಷ್ಮೆ ಬೆಳೆಗೆ ಉತ್ತಮ ಬೆಲೆ ಸಿಗಬಹುದು ಎಂಬ ನೀರೀಕ್ಷೆಯಲ್ಲಿದ್ದರು. ತಾಲ್ಲೂಕಿನ ರೈತರ ಜೀವನಾಡಿ ರೇಷ್ಮೆಗೂಡಿನ ಬೆಲೆ ಕುಸಿತದಿಂದ ರೈತರು ಕಂಗಾಲಾಗಿದ್ದಾರೆ.

ಸಾವಿರಾರು ಕುಟುಂಬಗಳು ರೇಷ್ಮೆ ಕೃಷಿ ಹಾಗೂ ರೇಷ್ಮೆ ನೂಲು ಬಿಚ್ಚಾಣಿಕೆ ಉದ್ಯಮ ನಂಬಿ ಜೀವನ
ಮಾಡುತ್ತಾರೆ. ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸಾವಿರಾರು ಕುಟುಂಬಗಳಿಗೆ ಆಸರೆಯಾಗಿದ್ದ ರೇಷ್ಮೆ ಗೂಡಿನ ಬೆಲೆ ದಿನೇ ದಿನೇ ಕುಸಿಯುತ್ತಿರುವುದು ಬೆಳೆಗಾರರಲ್ಲಿ ಆತಂಕವನ್ನುಂಟು ಮಾಡಿದೆ. ಬೆಳೆಗಾರರು ರೇಷ್ಮೆ ಕೃಷಿಯಿಂದ ವಿಮುಖರಾಗುತ್ತಿದ್ದಾರೆ.

ನಗರದ ರೇಷ್ಮೆ ಗೂಡಿನ ಮಾರುಕಟ್ಟೆಯಲ್ಲಿ ಒಂದು ತಿಂಗಳ ಹಿಂದೆ ಒಂದು ಕೆ.ಜಿಗೆ ₹700-₹800ಗೆ ಮಾರಾಟವಾಗುತ್ತಿದ್ದ ರೇಷ್ಮೆಗೂಡು ಈಗ ₹300-₹515ಗೆ ಕುಸಿದಿದೆ. ಮಾರ್ಚ್ 12ರ ಭಾನುವಾರ ಚಿಂತಾಮಣಿ ರೇಷ್ಮೆಗೂಡಿನ ಮಾರುಕಟ್ಟೆ ಧಾರಣೆ ಒಂದು ಕೆ.ಜಿಗೆ ಕನಿಷ್ಠ ₹300, ಗರಿಷ್ಠ ₹515 ಆಗಿದೆ. ಪ್ರತಿದಿನ 30-40 ಲಾಟ್‌ಗಳಿಂದ 1.5-2.5 ಟನ್ ಗೂಡು ಮಾರಾಟಕ್ಕೆ ಆವಕವಾಗುತ್ತಿದೆ. ಬೇಸಿಗೆ ಆರಂಭವಾಗುತ್ತಿದೆ. ಬೆಲೆ ಮತ್ತಷ್ಟು ಏರಿಕೆಯಾಗಿ ಉತ್ತಮ ಬೆಲೆ ಕಾಣಬಹುದು ಎಂದು ನೀರೀಕ್ಷೆಯಲ್ಲಿದ್ದ ಬೆಳೆಗಾರರು ತಲೆ ಮೇಲೆ ಕೈ ಹೊತ್ತು ಕೂರುವಂತಾಗಿದೆ.

ವಿದ್ಯುತ್ ಕೊರತೆ, ಆಳುಗಳ ಕೊರತೆ ಮತ್ತಿತರ ಸಂಕಷ್ಟಸ್ಥಿತಿಯಲ್ಲೂ ಕಷ್ಟಪಟ್ಟು ಗೂಡು ಬೆಳೆದರೆ ಬೆಲೆ ಕುಸಿತದ ಕಾರ್ಮೋಡ ಆವರಿಸಿದೆ ಎಂದು ರೈತರು ಅವಲತ್ತುಕೊಳ್ಳುತ್ತಾರೆ.

ರೀಲರುಗಳೂ ಸಂಕಷ್ಟಕ್ಕೆ

ರೇಷ್ಮೆ ನೂಲಿನ ಬೆಲೆಯೂ ಗಣನೀಯವಾಗಿ ಕಡಿಮೆಯಾಗಿದ್ದು, ರೀಲರ್‌ಗಳು ಸಹ ಸಂಕಷ್ಟ ಎದುರಿಸುತ್ತಿದ್ದಾರೆ. 1 ಕೆ.ಜಿ ರೇಷ್ಮೆ ನೂಲಿಗೆ ₹5,000-₹6,000 ಇದ್ದ ಬೆಲೆ ₹3400ಕ್ಕೆ ಕುಸಿದಿದೆ. ರೇಷ್ಮೆ ರೀಲರ್‌ಗಳು ಗೂಡು ಖರೀದಿಸಿ ನೂಲು ತೆಗೆದು ಮಾರಾಟ ಮಾಡಿದರೆ, ಗೂಡಿಗೆ ಕೊಟ್ಟ ಬೆಲೆಯು ಸಿಗುತ್ತಿಲ್ಲ. ಹೀಗಾದರೆ, ಮತ್ತೆ ಗೂಡು ಖರೀದಿಸುವುದು ಹೇಗೆ ಎಂಬ ಸಂಕಷ್ಟಕ್ಕೆ ಸಿಲುಕಿದ್ದಾರೆ. ಬೆಲೆ ಕುಸಿತದಿಂದ ರೇಷ್ಮೆ ಉದ್ದಿಮೆ ಸ್ಥಗಿತಗೊಳ್ಳುತ್ತಿದೆ.

ರೇಷ್ಮೆಯನ್ನು ಖರೀದಿಸುವವರೇ ಇಲ್ಲ. ರೇಷ್ಮೆ ಮಾರಾಟವಾದರೆ ನಾವು ಇಲ್ಲಿ ಗೂಡು ಖರೀದಿಸಬಹುದು. ರೇಷ್ಮೆ ನೂಲಿನ ಬೆಲೆ ಕುಸಿಯುತ್ತಿರುವುದರಿಂದ ರೇಷ್ಮೆ ಗೂಡಿನ ಬೆಲೆ ಕಡಿಮೆಯಾಗುತ್ತಿದೆ ಎಂದು ರೀಲರ್ ಸಿ.ಕೆ. ಶಬ್ಬೀರ್ ಹೇಳಿದರು.

ಸರ್ಕಾರ ನೆರವಾಗಲಿ

ಶಾಶ್ವತ ನೀರಾವರಿ ಯೋಜನೆಗಳಿಲ್ಲದೆ ಕಡಿಮೆ ನೀರಾವರಿಯಲ್ಲಿ ಬೆಳೆಯಬಹುದಾದ ಹಿಪ್ಪುನೇರಳೆ ಬೆಳೆಯನ್ನು ಬೆಳೆದು ರೇಷ್ಮೆ
ಗೂಡು ಉತ್ಪಾದನೆ ಮಾಡುತ್ತಿದ್ದೇನೆ. ಬೆಲೆ ಕುಸಿತದಿಂದ ಕುಟುಂಬದವರ ಶ್ರಮವೆಲ್ಲ ವ್ಯರ್ಥವಾಗುತ್ತಿದೆ. ರೇಷ್ಮೆ ಹುಳುಗಳ ಬೆಲೆ,
ಕೂಲಿಯಾಳುಗಳ ಕೂಲಿ, ಸೊಪ್ಪು ಹೀಗೆ ಎಲ್ಲವನ್ನು ಲೆಕ್ಕ ಹಾಕಿದರೆ ಬಂಡವಾಳ ಸಹ ಕೈಗೆ ಸಿಗುತ್ತಿಲ್ಲ.

ಶ್ರೀನಿವಾಸಪ್ಪ, ರೇಷ್ಮೆ ಬೆಳೆಗಾರ.

ಪರಿಸ್ಥಿತಿ ಸುಧಾರಣೆ

ರೇಷ್ಮೆ ನೂಲಿನ ಬೆಲೆ ಕಡಿಮೆಯಾಗಿರುವುದು ಗೂಡಿನ ಬೆಲೆ ಕುಸಿತಕ್ಕೆ ಕಾರಣ. ಕಳೆದ ವರ್ಷ ಅತಿಯಾದ ಮಳೆ ಹಾಗೂ ಹವಾಮಾನದಲ್ಲಿ ಇನ್ನೂ ಚಳಿ ಇರುವುದರಿಂದ ಗುಣಮಟ್ಟದ ಹಿಪ್ಪುನೇರಳೆ ಸೊಪ್ಪು ಸಿಗುತ್ತಿಲ್ಲ. ಹೀಗಾಗಿ, ಉತ್ತಮ ಗುಣಮಟ್ಟದ ಗೂಡು ಬರುತ್ತಿಲ್ಲ. ಹಾಗಾಗಿ ಬೆಲೆ ಕುಸಿತವಾಗಿದೆ. ಚಳಿ ಕಡಿಮೆಯಾಗಿ ವಾತಾವರಣದಲ್ಲಿ ಉಷ್ಣಾಂಶ ಏರಿಕೆಯಾದರೆ ಪರಿಸ್ಥಿತಿ ಸುಧಾರಿಸಬಹುದು.

-ಅಶ್ವತ್ಥನಾರಾಯಣ್, ಉಪನಿರ್ದೇಶಕ, ರೇಷ್ಮೆಗೂಡಿನ ಮಾರುಕಟ್ಟೆ, ಚಿಂತಾಮಣಿ

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT