ಗುರುವಾರ, 16 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೇಳೂರು: ಖಾಸಗಿ ಬಸ್ ಮಾಲೀಕರಿಗೆ ಸಂಕಷ್ಟ ತಂದ ‘ಶಕ್ತಿ’

ಮಹಿಳೆಯರಿಗೆ ಸರ್ಕಾರಿ ಬಸ್‌ಗಳಲ್ಲಿ ಉಚಿತ ಸಂಚಾರ | ಖಾಸಗಿ ಬಸ್‌ಗಳಿಗಿಲ್ಲ ಪ್ರಯಾಣಿಕರು
Published 16 ಜೂನ್ 2023, 1:32 IST
Last Updated 16 ಜೂನ್ 2023, 1:32 IST
ಅಕ್ಷರ ಗಾತ್ರ

ಚೇಳೂರು: ರಾಜ್ಯ ಸರ್ಕಾರ ಜಾರಿ ಮಾಡಿದ ಶಕ್ತಿ ಯೋಜನೆಯಿಂದಾಗಿ ಗ್ರಾಮಾಂತರ ಭಾಗಗಳಲ್ಲಿ ಲೈಫ್‌ಲೈನ್ ಆಗಿದ್ದ ಖಾಸಗಿ ಬಸ್ ಮಾಲೀಕರಿಗೆ ಸಂಕಷ್ಟ ಎದುರಾಗಿದೆ. 

ಶಕ್ತಿ ಯೋಜನೆಯಡಿ ಮಹಿಳೆಯರು ಸಾರಿಗೆ ಬಸ್‌ಗಳಲ್ಲಿ ಉಚಿತ ಸಂಚಾರ ಮಾಡುತ್ತಿರುವುದರಿಂದ ಖಾಸಗಿ ಬಸ್‌ಗಳಿಗೆ ಪ್ರಯಾಣಿಕರ ಕೊರತೆ ಎದುರಾಗಿದೆ. ಇದರಿಂದ ನಮಗೆ ನಷ್ಟವಾಗುತ್ತಿದೆ ಎಂದು ಗ್ರಾಮಾಂತರ ಪ್ರದೇಶಗಳ ಬಸ್ ಮಾಲೀಕರು ಅವಲತ್ತುಕೊಂಡಿದ್ದಾರೆ. 

ಸರ್ಕಾರದ ಶಕ್ತಿ ಯೋಜನೆಯಿಂದಾಗಿ ಮಹಿಳೆಯರು, ಶಾಲಾ ಮತ್ತು ಕಾಲೇಜು ವಿದ್ಯಾರ್ಥಿನಿಯರು ಸರ್ಕಾರಿ ಬಸ್‌ಗಳಲ್ಲೇ ಸಂಚರಿಸುತ್ತಿದ್ದಾರೆ. ಇದರಿಂದಾಗಿ ಸರ್ಕಾರಿ ಬಸ್‌ಗಳೆಲ್ಲವೂ ಭಾರಿ ಜನದಟ್ಟಣೆಯಿಂದ ಸಂಚರಿಸುತ್ತಿವೆ. ಆದರೆ, ಮಹಿಳೆಯರು ಸೇರಿದಂತೆ ಇತರರು ಖಾಸಗಿ ಬಸ್‌ಗಳತ್ತ ಮುಖ ಮಾಡುತ್ತಿಲ್ಲ. ಹೀಗಾಗಿ ಖಾಸಗಿ ಬಸ್ ಸಂಚಾರದಿಂದ ಕನಿಷ್ಠ ಡೀಸೆಲ್‍ ಹಣವನ್ನಾದರೂ ಹೊಂದಿಸಿಕೊಳ್ಳಲಾದೀತೆ ಎಂಬ ಚಿಂತೆಯಲ್ಲಿದ್ದಾರೆ ಗ್ರಾಮೀಣ ಪ್ರದೇಶದ ಬಸ್ ಮಾಲೀಕರು. 

ಚೇಳೂರು, ಬಾಗೇಪಲ್ಲಿ, ಚಿಂತಾಮಣಿ, ಕದಿರಿ, ಮದನಪಲ್ಲಿ, ಕೋಲಾರ, ಚಿಕ್ಕಬಳ್ಳಾಪುರ ಇತರೆ ಕಡೆಗಳಲ್ಲಿಯೂ ಮಹಿಳಾ ಪ್ರಯಾಣಕರು ಖಾಸಗಿ ಬಸ್ ಹತ್ತಲು ಹಿಂದೇಟು ಹಾಕುತ್ತಿದ್ದಾರೆ. ಖಾಸಗಿ ಬಸ್‌ಗಳಲ್ಲಿ ಪುರುಷರು ಹೊರತುಪಡಿಸಿ, ಮಹಿಳೆಯರು ಕಂಡುಬರಲೇ ಇಲ್ಲ. ಜತೆಗೆ ಈ ಹಿಂದೆ ಸಣ್ಣ ಪುಟ್ಟ ಪ್ರಯಾಣಕ್ಕಾಗಿ ಮಹಿಳೆಯರು ಮತ್ತು ಯುವತಿಯರು ಆಟೊಗಳನ್ನು ಅವಲಂಬಿಸಿದ್ದರು. ಆದರೆ, ಇದೀಗ ಆಟೊ ಪ್ರಯಾಣಕ್ಕೂ ಮಹಿಳೆಯರು ಮುಂದಾಗುತ್ತಿಲ್ಲ ಎಂದು ಆಟೊ ಚಾಲಕರು ಅಸಹಾಯಕತೆ ವ್ಯಕ್ತಪಡಿಸಿದರು. 

ಇದೇ ಪರಸ್ಥಿತಿ ಮುಂದುವರಿದರೆ ಗ್ರಾಮಾಂತರ ಪ್ರದೇಶಗಳಲ್ಲಿ ಪ್ರಮುಖ ಸಂಪರ್ಕ ಕೊಂಡಿಯಾಗಿರುವ ಖಾಸಗಿ ಬಸ್ ಸಂಚಾರವನ್ನೇ ನಿಲ್ಲಿಸುವ ಅನಿವಾರ್ಯತೆ ಎದುರಾಗಲಿದೆ. ಖಾಸಗಿ ಬಸ್ಸುಗಳನ್ನ ನಂಬಿ ಜೀವನ ಮಾಡುತ್ತಿರುವ ಸಾವಿರಾರು ನೌಕರರು ಮತ್ತು ಅವರ ಕುಟುಂಬಸ್ಥರು ಬೀದಿ ಪಾಲಾಗಲಿದ್ದಾರೆ ಎಂದು ಬಸ್ ಮಾಲಿಕರು ತಿಳಿಸಿದ್ದಾರೆ.

ಒಂದು ಕಡೆ ರಾಜ್ಯದ ಶಕ್ತಿ ಯೋಜನೆ ಶಕ್ತಿಯುತವಾಗಿ ಯಶಸ್ವಿಯಾಗುತ್ತಿದೆ. ಮತ್ತೊಂದು ಕಡೆ ಖಾಸಗಿ ಬಸ್ಸುಗಳ ಮಾಲೀಕರು ಸಮಸ್ಯೆಗಳಿಗೆ ಸಿಲುಕಿಕೊಂಡು ತೋಳಲಾಡುತ್ತಿದ್ದಾರೆ. ಸರ್ಕಾರ ಖಾಸಗಿ ಬಸ್ಸುಗಳಿಗೂ ಆದೇಶ ನೀಡಿದರೆ, ಮಹಿಳಾ ಪ್ರಯಾಣಿಕರನ್ನು ಉಚಿತವಾಗಿ ಕರೆದೊಯ್ಯುತ್ತೇವೆ. ಕೆಎಸ್ಆರ್‌ಟಿಸಿಗೆ ನೀಡುವಂತೆ ನಮಗೂ ಸರ್ಕಾರ ಹಣ ನೀಡಲಿ. ಯಾವುದೇ ನಿಯಮ ವಿಧಿಸಿದರೂ, ತಲೆಬಾಗಿ ಪಾಲಿಸುತ್ತೇವೆ ಎಂದು ಕನ್ನಡರತ್ನ ಪುರಸ್ಕೃತ ಚೇಳೂರಿನ ವಿನಾಯಕ ಮೋಟರ್ಸ್ ಮಾಲೀಕ ಬಿ.ಎಸ್. ಸೋಮಶೇಖರಬಾಬು ತಿಳಿಸಿದ್ದಾರೆ. 

ಒಂದು ಬಸ್ಸಿಗೆ ಮಾಸಿಕ ₹45,000 ತೆರಿಗೆ, 70 ಸಾವಿರ ವಿಮೆ ಹಾಗೂ 9,000 ಟೋಲ್ ಸುಂಕ ಪಾವತಿಸಲಾಗುತ್ತಿತ್ತು. ಈ ಹಿಂದೆ ಹೆಚ್ಚಿನ ಪ್ರಯಾಣಿಕರ ಓಡಾಟದಿಂದ ಯಾವುದೇ ಸಮಸ್ಯೆ ಇರಲಿಲ್ಲ. ಆದರೆ, ಇದೀಗ ಈ ಹಣವನ್ನು ಹೇಗೆ ಹೊಂದಿಸಬೇಕು ಎಂಬ ಚಿಂತೆ ಕಾಡುತ್ತಿದೆ ಎಂದು ಬಸ್ ಮಾಲೀಕರೊಬ್ಬರು ಕೈಕೈ ಹಿಸುಕಿಕೊಂಡರು. 

ಸರ್ಕಾರ ಎಲ್ಲ ಮಹಿಳೆಯರಿಗೆ ಉಚಿತ ಪ್ರಯಾಣದ ಅವಕಾಶ ನೀಡಿರುವುದು ಸರಿಯಲ್ಲ. ವಯೋವೃದ್ಧರು ಹಾಗೂ ಬಿಪಿಎಲ್ ಕಾರ್ಡ್‌ದಾರರಿಗೆ ಇಂಥ ಅನುಕೂಲ ಕಲ್ಪಿಸಿಕೊಡಬಹುದಿತ್ತು. ಆಗ ನಮ್ಮ ಖಾಸಗಿ ವಲಯ ಉಳಿಯುತ್ತಿತ್ತು ಎಂದಿದ್ದಾರೆ. 

ಖಾಸಗಿ ಬಸ್ ಮಾಲೀಕರ ಶಕ್ತಿ ಕಿತ್ತ ಯೋಜನೆ
ಮಹಿಳೆಯರಿಗೆ ಶಕ್ತಿ ತುಂಬಲು ಹೋದ ಕರ್ನಾಟಕ ಕಾಂಗ್ರೆಸ್ ಸರ್ಕಾರ ಆಟೊ ಖಾಸಗಿ ಬಸ್ ಮಾಲೀಕರ ಶಕ್ತಿಯನ್ನೇ ಕಿತ್ತುಕೊಂಡಿದೆ. ಶಕ್ತಿ ಯೋಜನೆಯಿಂದ ಅನೇಕ ಕಡೆ ಕಾರು ಆಟೊ ಉದ್ಯಮಕ್ಕೆ ಹೊಡೆತ ಬಿದ್ದಿದ್ದು ಖಾಸಗಿ ಬಸ್​ಗಳು ಕೂಡ ಖಾಲಿಯಾಗಿ ಓಡಾಡುತ್ತಿವೆ. ಇವುಗಳನ್ನೇ ನಂಬಿ ಜೀವನ ಮಾಡುವ ಹಲವಾರು ಆಟೊ ಚಾಲಕರಿಗೆ ಸಂಕಷ್ಟದ ಎದುರಾಗಿದೆ. ಮಂಜು ಆಟೋ ಚಾಲಕ ಚೇಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT