ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಗೇಪಲ್ಲಿ: ಮರುಸಾಲ ನೀಡಲು ಆಗ್ರಹಿಸಿ ಪ್ರತಿಭಟನೆ

Last Updated 9 ಅಕ್ಟೋಬರ್ 2021, 7:47 IST
ಅಕ್ಷರ ಗಾತ್ರ

ಬಾಗೇಪಲ್ಲಿ: ತಾಲ್ಲೂಕಿನ ಕುರುಬರಪಲ್ಲಿ ವ್ಯವಸಾಯೋತ್ಪನ್ನ ಸಹಕಾರ ಸಂಘದ ವ್ಯಾಪ್ತಿಗೆ ಬರುವ ಸ್ತ್ರೀಶಕ್ತಿ ಸ್ವಸಹಾಯ ಗುಂಪುಗಳಿಗೆ ಮರುಸಾಲ ನೀಡುತ್ತಿಲ್ಲ ಎಂದು ಆರೋಪಿಸಿ ಗುಂಪುಗಳ ಸದಸ್ಯರು ಜನವಾದಿ ಮಹಿಳಾ ಸಂಘಟನೆ ತಾಲ್ಲೂಕು ಸಮಿತಿ ನೇತೃತ್ವದಲ್ಲಿ ಶುಕ್ರವಾರ ಪಟ್ಟಣದ ಡಿಸಿಸಿ ಬ್ಯಾಂಕಿನ ಮುಂದೆ ಪ್ರತಿಭಟನೆ ನಡೆಸಿದರು.

ಜನವಾದಿ ಮಹಿಳಾ ಸಂಘಟನೆ ತಾಲ್ಲೂಕು ಅಧ್ಯಕ್ಷೆ ಬಿ.ಸಾವಿತ್ರಮ್ಮ ಮಾತನಾಡಿ, ‘ಕುರುಬರಪಲ್ಲಿ ವ್ಯವಸಾಯೋತ್ಪನ್ನ ಸಹಕಾರ ಸಂಘದ ವ್ಯಾಪ್ತಿಗೆ ಬರುವ ಸ್ತ್ರೀಶಕ್ತಿ ಸ್ವಸಹಾಯ ಗುಂಪುಗಳ ಸದಸ್ಯರು ಡಿಸಿಸಿ ಬ್ಯಾಂಕಿನಿಂದ ಸೇವಾ ಸಹಕಾರದ ಸಂಘದ ಮೂಲಕ ಸಾಲ ಪಡೆದು, ಸಾಲವನ್ನು ಮರುಪಾವತಿ ಮಾಡಿದ್ದಾರೆ. ಮರುಸಾಲ ನೀಡುವಂತೆ ಕಳೆದ 2 ವರ್ಷಗಳಿಂದ ಮನವಿ ಮಾಡಿದರೂ, ಸದಸ್ಯರಿಗೆ ಸಾಲ ನೀಡದೇ ತೊಂದರೆ ಮಾಡಿದ್ದಾರೆ’ ಎಂದು ದೂರಿದರು.

ಷೇರು ಮತ್ತು ಡಿಪಾಜಿಟ್ ಹಣವನ್ನು ಒಂದೊಂದು ಗುಂಪಿನ ಕಡೆಯಿಂದ ₹1.30ಲಕ್ಷಗಳನ್ನು ಕುರುಬರಪಲ್ಲಿ ವ್ಯವಸಾಯ ಸೇವಾ ಸಂಘದ ಕಾರ್ಯದರ್ಶಿಗಳಿಗೆ ನೀಡಿದ್ದಾರೆ. ಸಾಲ ಮಾಡಿ ಹಣ ನೀಡಲಾಗಿದೆ. ಆದರೆ 2 ವರ್ಷಗಳು ಕಳೆದರೂ ಮರುಸಾಲ ನೀಡಿಲ್ಲ. ಇದರಿಂದ ಮಹಿಳೆಯರಿಗೆ ತೊಂದರೆ ಆಗಿದೆ. ಕೂಡಲೇ ಸೇವಾ ಸಹಕಾರ ಸಂಘದ ಆಡಳಿತ ಮಂಡಳಿ, ಕಾರ್ಯದರ್ಶಿ, ಡಿಸಿಸಿ ಬ್ಯಾಂಕಿನವರು ಮರುಸಾಲ ವಿತರಣೆ ಮಾಡಬೇಕು ಎಂದರು.

ಡಿಸಿಸಿ ಬ್ಯಾಂಕಿನ ವ್ಯವಸ್ಥಾಪಕ ಸಿ.ಎಸ್.ಚೇತನ್ ಆಗಮಿಸಿ ಪ್ರತಿಭಟನಾಕಾರರ ಜೊತೆ ಮಾತನಾಡಿದರು. ನಂತರ ಪ್ರತಿಕ್ರಿಯಿಸಿ ‘ಕುರುಬರಪಲ್ಲಿ ಸಹಕಾರ ಸಂಘದ ಆಡಳಿತ ಮಂಡಳಿ ಮೂಲಕ ಸ್ತ್ರೀಶಕ್ತಿ ಗುಂಪುಗಳ ಸದಸ್ಯರ ಮಾಹಿತಿ, ಖಾತೆಗಳನ್ನು ಮಾಡಿಸಬೇಕಾಗಿದೆ. ಆದರೆ ಸಂಘದ ಕಾರ್ಯದರ್ಶಿ, ಆಡಳಿತ ಮಂಡಳಿಯ ದಾಖಲೆ, ಬ್ಯಾಂಕಿನ ಖಾತೆಗಳ ವಿವರಗಳು ನೀಡದೇ ಇದ್ದರೆ ಮರುಸಾಲ ಹೇಗೆ ನೀಡುವುದು? ಎಂದು ಪ್ರಶ್ನಿಸಿದರು. ಕೂಡಲೇ ಸದಸ್ಯರು ಬ್ಯಾಂಕಿನ ಖಾತೆಗಳನ್ನು ಮಾಡಿಸಬೇಕು. ಸೂಕ್ತ ದಾಖಲೆಗಳನ್ನು ಕಾರ್ಯದರ್ಶಿಗಳಿಗೆ ನೀಡುವಂತೆ ಮನವಿ ಮಾಡಿದರು.

ಈಗಾಗಲೇ 33 ಸ್ತ್ರೀಶಕ್ತಿ ಸ್ವಸಹಾಯ ಗುಂಪುಗಳಿಗೆ ಅನುದಾನ ಬಿಡುಗಡೆ ಆಗಿದೆ. ದಾಖಲೆ, ಖಾತೆಗಳನ್ನು ಮಾಡಿಸಿದರೆ ಮುಂದಿನ ಒಂದು ವಾರದೊಳಗೆ ಸದಸ್ಯರ ಖಾತೆಗಳಿಗೆ ಹಣ ಬಿಡುಗಡೆ ಮಾಡಲಾಗುವುದು ಎಂದು ಭರವಸೆ ನೀಡಿದ ಬಳಿಕ ಪ್ರತಿಭಟನಾಕಾರರು ಪ್ರತಿಭಟನೆ ವಾಪಸ್ ಪಡೆದರು.

ಪ್ರತಿಭಟನೆಯಲ್ಲಿ ಪ್ರಾಂತ ಕೃಷಿಕೂಲಿಕಾರರ ಸಂಘದ ರಾಜ್ಯ ಉಪಾಧ್ಯಕ್ಷ ಎಂ.ಪಿ.ಮುನಿವೆಂಕಟಪ್ಪ, ಮುಖಂಡರಾದ ಉತ್ತನ್ನ, ಮಂಜುಳಾ, ಪದ್ಮಾವತಮ್ಮ, ರವಣಮ್ಮ, ಪದ್ಮಾವತಮ್ಮ, ರೇವತಿ, ಕಳಾವತಿ, ಜಿ.ವಿ.ಪ್ರಮೀಳಮ್ಮ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT