ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕಬಳ್ಳಾಪುರ | ಇಂಗ್ಲಿಷ್‌ ಪರೀಕ್ಷೆ; ಸುರಕ್ಷತೆಗೆ ಒತ್ತು, ಅಂತರಕ್ಕೆ ಆದ್ಯತೆ

ಪ್ರತಿ ಪರೀಕ್ಷಾ ಕೇಂದ್ರದಲ್ಲಿ ವಿದ್ಯಾರ್ಥಿಗಳ ಜ್ವರ ಪರೀಕ್ಷೆ
Last Updated 18 ಜೂನ್ 2020, 4:05 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಕೊರೊನಾ ಲಾಕ್‌ಡೌನ್‌ ನಿಂದಾಗಿ ಮುಂದೂಡಲಾಗಿದ್ದ ದ್ವಿತೀಯ ಪಿಯುಸಿ ಇಂಗ್ಲಿಷ್‌ ಪರೀಕ್ಷೆ ಗುರುವಾರ ಬೆಳಿಗ್ಗೆ 10.15 ರಿಂದ 1.30ರ ವರೆಗೆ ಪರೀಕ್ಷೆ ನಡೆಯಲಿದ್ದು, ಆರೋಗ್ಯ ತಪಾಸಣೆ ಮತ್ತು ಶುಚಿತ್ವ ಕಾಪಾಡಿಕೊಳ್ಳಬೇಕಾದ ಕಾರಣಕ್ಕೆ ವಿದ್ಯಾರ್ಥಿಗಳು ಬೆಳಿಗ್ಗೆ 8.30 ರಿಂದಲೇ ಪರೀಕ್ಷಾ ಕೇಂದ್ರಗಳಿಗೆ ಬಂದರು.

ಜಿಲ್ಲೆಯಲ್ಲಿ 12,215 ವಿದ್ಯಾರ್ಥಿಗಳು ಪರೀಕ್ಷೆಗೆ ಹೆಸರು ನೋಂದಾಯಿಸಿಕೊಂಡಿದ್ದು, 22 ಪರೀಕ್ಷಾ ಕೇಂದ್ರಗಳನ್ನು ಮೂರು ದಿನ ಮುಂಚಿತವಾಗಿ ವೈರಸ್‌ ನಾಶಕ ದ್ರಾವಣದಿಂದ ಶುಚಿಗೊಳಿಸಿ ಪರೀಕ್ಷೆಗೆ ಸಜ್ಜುಗೊಳಿಸಲಾಗಿದೆ.

ಪ್ರತಿ ಪರೀಕ್ಷಾ ಕೇಂದ್ರಕ್ಕೆ ನಾಲ್ಕು ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು, ಕಿರಿಯ ಮಹಿಳಾ ಆರೋಗ್ಯ ಸಹಾಯಕರು ಮತ್ತು ಆಶಾ ಕಾರ್ಯಕರ್ತೆಯರು ಥರ್ಮಲ್ ಸ್ಕ್ರೀನಿಂಗ್ ಸಾಧನದ ಮೂಲಕ ವಿದ್ಯಾರ್ಥಿಗಳ ಜ್ವರ ತಪಾಸಣೆ ಮಾಡುವ ಜತೆಗೆ ಕಡ್ಡಾಯವಾಗಿ ಮಾಸ್ಕ್ ಧರಿಸುವಂತೆ ಸೂಚಿಸಿ, ಸ್ಯಾನಿಟೈಸರ್‌ನಿಂದ ಕೈ ಶುಚಿಗೊಳಿಸಿಕೊಳ್ಳುವುದರ ಮೇಲೆ ನಿಗಾ ಇಟ್ಟಿದ್ದಾರೆ.

ಪರೀಕ್ಷೆಗಾಗಿ ಚಿಕ್ಕಬಳ್ಳಾಪುರದಲ್ಲಿ 6, ಶಿಡ್ಲಘಟ್ಟ 2, ಚಿಂತಾಮಣಿ 6, ಗೌರಿಬಿದನೂರು 4, ಬಾಗೇಪಲ್ಲಿ 3, ಗುಡಿಬಂಡೆ 1 ಪರೀಕ್ಷಾ ಕೇಂದ್ರ ತೆರೆಯಲಾಗಿದೆ.

ಇಂಗ್ಲಿಷ್‌ ಪರೀಕ್ಷೆಗೆ ಚಿಕ್ಕಬಳ್ಳಾಪುರದಲ್ಲಿ 3,209, ಬಾಗೇಪಲ್ಲಿ 1,676, ಗೌರಿಬಿದನೂರು 2,230, ಶಿಡ್ಲಘಟ್ಟ 1,671, ಚಿಂತಾಮಣಿ 3,326, ಗುಡಿಬಂಡೆ 103 ವಿದ್ಯಾರ್ಥಿಗಳು ಹಾಜರಾಗಬೇಕಿದೆ.

205 ಬಸ್‌ ವ್ಯವಸ್ಥೆ
‘ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಪ್ರತಿ ಹೋಬಳಿ ಕೇಂದ್ರ ಮತ್ತು ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳಿರುವ ಸ್ಥಳಗಳಿಂದ ಪರೀಕ್ಷಾ ಕೇಂದ್ರಗಳಿಗೆ 205 ಕೆಎಸ್‌ಆರ್‌ಟಿಸಿ ಬಸ್‌ಗಳ ವ್ಯವಸ್ಥೆ ಮಾಡಲಾಗಿದೆ. ಸಾರಿಗೆ ವ್ಯವಸ್ಥೆ ಮೇಲ್ವಿಚಾರಣೆಗೆ ಪ್ರತಿ ರೂಟ್‌ಗೆ ಒಬ್ಬ ಮಾರ್ಗಾಧಿಕಾರಿ ನಿಯೋಜಿಸಲಾಗಿದೆ. ಪ್ರತಿ ತಾಲ್ಲೂಕಿಗೊಬ್ಬ ಪ್ರಾಂಶುಪಾಲರನ್ನು ಇದಕ್ಕೆ ನೋಡಲ್ ಅಧಿಕಾರಿಯನ್ನಾಗಿ ನೇಮಕ ಮಾಡಲಾಗಿದೆ. ಹಳೆಯ ಬಸ್‌ ಪಾಸ್‌ ಮತ್ತು ಪರೀಕ್ಷಾ ಪತ್ರ ತೋರಿಸಿ ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಉಚಿತವಾಗಿ ಸಂಚರಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ’ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ಹಂಗಾಮಿ ಉಪನಿರ್ದೇಶಕ ಎನ್.ಆನಂದ್‌ ತಿಳಿಸಿದರು.

602 ಕೊಠಡಿಗಳ ಬಳಕೆ
‘ಕೊರೊನಾ ವೈರಾಣು ಹಬ್ಬುವುದನ್ನು ತಡೆಯಲು ವಿದ್ಯಾರ್ಥಿಗಳ ಮಧ್ಯೆ ದೈಹಿಕ ಅಂತರ ಕಾಪಾಡುವುದಕ್ಕೆ ಪ್ರತಿ ಬೆಂಚ್‌ನಲ್ಲಿ ಇಬ್ಬರಿಗೆ ಮಾತ್ರ ಸ್ಥಳಾವಕಾಶ ಮಾಡಲಾಗಿದೆ. ಪರೀಕ್ಷಾ ಕೇಂದ್ರದ ಒಂದು ಸಾಮಾನ್ಯ ಕೊಠಡಿಯಲ್ಲಿ 12 ವಿದ್ಯಾರ್ಥಿಗಳಿಗೆ, ದೊಡ್ಡ ಕೊಠಡಿಯಲ್ಲಿ 24 ಜನರಿಗೆ ಪರೀಕ್ಷೆ ಬರೆಯಲು ಸ್ಥಳಾವಕಾಶ ಕಲ್ಪಿಸಲಾಗಿದೆ. ಈ ಮೊದಲು ಪರೀಕ್ಷೆಗೆ 400 ಕೊಠಡಿಗಳನ್ನು ಬಳಕೆ ಮಾಡಲಾಗಿತ್ತು. ಪ್ರಸ್ತುತ, ಅಂತರ ಕಾಪಾಡುವ ಉದ್ದೇಶಕ್ಕೆ 202 ಹೆಚ್ಚುವರಿ ಕೊಠಡಿಗಳು ಸೇರಿದಂತೆ 602 ಕೊಠಡಿಗಳನ್ನು ಬಳಕೆ ಮಾಡಿಕೊಳ್ಳಲಾಗುತ್ತದೆ’ ಎಂದು ಎನ್.ಆನಂದ್‌ ಹೇಳಿದರು.

ಹೊರಗಿನವರಿಗೆ ಪ್ರತ್ಯೇಕ ವ್ಯವಸ್ಥೆ
ಜಿಲ್ಲೆಯ ಕಾಲೇಜುಗಳಷ್ಟೇ ಅಲ್ಲದೇ, ಬೇರೆ ಜಿಲ್ಲೆಗಳಲ್ಲಿ ಓದುತ್ತಿರುವ ಆದರೆ ಲಾಕ್‌ಡೌನ್‌ ಸಮಯದಲ್ಲಿ ಜಿಲ್ಲೆಯಲ್ಲೇ ಇರುವ 239 ವಿದ್ಯಾರ್ಥಿಗಳು ಇಲ್ಲಿಯೇ ಪರೀಕ್ಷೆ ಬರೆಯಲು ಪಿಯು ಮಂಡಳಿ ಅನುಮತಿ ನೀಡಿದ್ದು, ಪೂರಕವಾಗಿ ಪ್ರವೇಶಪತ್ರವನ್ನೂ ನೀಡಿದೆ. ಅಂತಹ ವಿದ್ಯಾರ್ಥಿಗಳಿಗೆ ಪ್ರತಿ ಕೇಂದ್ರದಲ್ಲಿ ಪ್ರತ್ಯೇಕ ಕೊಠಡಿಗಳಲ್ಲಿ ಪರೀಕ್ಷೆ ಬರೆಯಲು ವ್ಯವಸ್ಥೆ ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT