ಶನಿವಾರ, ಜುಲೈ 24, 2021
27 °C
ಪ್ರತಿ ಪರೀಕ್ಷಾ ಕೇಂದ್ರ ವೈರಸ್‌ ನಾಶಕ ದ್ರಾವಣದಿಂದ ಶುಚಿ, ವಿದ್ಯಾರ್ಥಿಗಳ ನಡುವೆ ಅಂತರಕ್ಕೆ ಆದ್ಯತೆ

ಪಿಯುಸಿ ಇಂಗ್ಲಿಷ್‌ ಪರೀಕ್ಷೆಗೆ ಸಕಲ ಸಿದ್ಧತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿಕ್ಕಬಳ್ಳಾಪುರ: ಕೊರೊನಾ ಲಾಕ್‌ಡೌನ್‌ನಿಂದಾಗಿ ಮುಂದೂಡಲಾಗಿದ್ದ ದ್ವಿತೀಯ ಪಿಯುಸಿ ಇಂಗ್ಲಿಷ್‌ ಪರೀಕ್ಷೆ ಗುರುವಾರ (ಜೂ.18) ನಡೆಯಲಿದೆ. ಜಿಲ್ಲೆಯಲ್ಲಿ 12,215 ವಿದ್ಯಾರ್ಥಿಗಳು ಪರೀಕ್ಷೆಗೆ ಹೆಸರು ನೋಂದಾಯಿಸಿಕೊಂಡಿದ್ದು, 22 ಪರೀಕ್ಷಾ ಕೇಂದ್ರಗಳನ್ನು ಸಜ್ಜುಗೊಳಿಸಲಾಗಿದೆ.

ಬೆಳಿಗ್ಗೆ 10.15 ರಿಂದ 1.30ರ ವರೆಗೆ ಪರೀಕ್ಷೆ ನಡೆಯಲಿದ್ದು, ಥರ್ಮಲ್ ಸ್ಕ್ರೀನಿಂಗ್ ಮೂಲಕ ಜ್ವರ ತಪಾಸಣೆ ಹಾಗೂ ಸ್ಯಾನಿಟೈಜರ್‌ ಬಳಕೆ ಮಾಡುತ್ತಿರುವುದರಿಂದ ಬೆಳಿಗ್ಗೆ 8.30ಕ್ಕೆ ಹಾಜರಿರುವಂತೆ ವಿದ್ಯಾರ್ಥಿಗಳಿಗೆ ಮೌಖಿಕ ಸೂಚನೆ ನೀಡಲಾಗಿದೆ.

ಪರೀಕ್ಷೆಗಾಗಿ ಚಿಕ್ಕಬಳ್ಳಾಪುರದಲ್ಲಿ 6, ಶಿಡ್ಲಘಟ್ಟ 2, ಚಿಂತಾಮಣಿ 6, ಗೌರಿಬಿದನೂರು 4, ಬಾಗೇಪಲ್ಲಿ 3, ಗುಡಿಬಂಡೆ 1 ಪರೀಕ್ಷಾ ಕೇಂದ್ರ ಗುರುತಿಸಲಾಗಿದೆ. ಎಲ್ಲಾ ಪರೀಕ್ಷಾ ಕೇಂದ್ರಗಳನ್ನು ಮೂರು ದಿನ ಮುಂಚಿತವಾಗಿ ವೈರಸ್‌ ನಾಶಕ ದ್ರಾವಣದಿಂದ ಶುಚಿಗೊಳಿಸಲಾಗಿದೆ.

ಇಂಗ್ಲಿಷ್‌ ಪರೀಕ್ಷೆಗೆ ಚಿಕ್ಕಬಳ್ಳಾಪುರದಲ್ಲಿ 3,209, ಬಾಗೇಪಲ್ಲಿ 1,676, ಗೌರಿಬಿದನೂರು 2,230, ಶಿಡ್ಲಘಟ್ಟ 1,671, ಚಿಂತಾಮಣಿ 3,326, ಗುಡಿಬಂಡೆ 103 ವಿದ್ಯಾರ್ಥಿಗಳು ಹಾಜರಾಗಬೇಕಿದೆ. ಆದಾಗ್ಯೂ, ಲಾಕ್‌ಡೌನ್‌ನಿಂದಾಗಿ ಬಸ್‌ಗಳು ಸರಿಯಾದ ಸಮಯಕ್ಕೆ ಬಾರದೇ ಅರ್ಧ ಗಂಟೆ ತಡವಾದರೂ ಪರೀಕ್ಷೆ ಬರೆಯಲು ಅವಕಾಶ ನೀಡುವಂತೆ ಪದವಿ ಪೂರ್ವ ಶಿಕ್ಷಣ ಮಂಡಳಿಯು ಆಯಾ ಜಿಲ್ಲೆಗಳ ಡಿಡಿಪಿಯುಗಳಿಗೆ ಸೂಚನೆ ನೀಡಿದೆ.

‘ಮುಖ್ಯ ಅಧೀಕ್ಷಕರಿಗೆ ವಿದ್ಯಾರ್ಥಿಗಳಿಗೆ ಅಗತ್ಯ ಮೂಲಸೌಕರ್ಯ ಕಡ್ಡಾಯವಾಗಿ ಕಲ್ಪಿಸುವಂತೆ ಸೂಚಿಸಲಾಗಿದೆ. ಪರೀಕ್ಷಾ ಕೇಂದ್ರದ 200 ಮೀಟರ್ ಸುತ್ತ ಸೆಕ್ಷನ್ 144 ಜಾರಿ ಮಾಡಿ ಜೆರಾಕ್ಸ್ ಅಂಗಡಿಗಳನ್ನು ಪರೀಕ್ಷೆ ನಡೆಯುವ ಸಮಯದಂದು ಮುಚ್ಚಿಸಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ’ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ಹಂಗಾಮಿ ಉಪನಿರ್ದೇಶಕ ಎನ್.ಆನಂದ್‌ ತಿಳಿಸಿದರು.

‘ಆರೋಗ್ಯ ಇಲಾಖೆಯ ಸಹಕಾರದೊಂದಿಗೆ ಕಿರಿಯ ಮಹಿಳಾ ಆರೋಗ್ಯ ಸಹಾಯಕರು ಮತ್ತು ಆಶಾ ಕಾರ್ಯಕರ್ತೆಯರು ಸೇರಿದಂತೆ ಸುಮಾರು 80  ಸಿಬ್ಬಂದಿ ನೆರವು ಪಡೆದು ಸುರಕ್ಷತೆಗೆ ಒತ್ತು ನೀಡಲು ನಿರ್ಧರಿಸಲಾಗಿದೆ. ವಿದ್ಯಾರ್ಥಿಗಳ ಆರೋಗ್ಯ ತಪಾಸಣೆಗಾಗಿ ಪ್ರತಿ ಪರೀಕ್ಷಾ ಕೇಂದ್ರಕ್ಕೆ 4 ಮಂದಿ ಸಿಬ್ಬಂದಿ ನಿಯೋಜಿಸಲಾಗಿದೆ’ ಎಂದು ಹೇಳಿದರು. 

‘ಪ್ರತಿಯೊಬ್ಬ ವಿದ್ಯಾರ್ಥಿಗಳು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಕೈಗಳನ್ನು ಸ್ಯಾನಿಟೈಸರ್‌ನಿಂದ ಶುಚಿಗೊಳಿಸಿಕೊಳ್ಳಬೇಕು. ಕೊಠಡಿ ಒಳಗೆ ಅಂತರ ಕಾಪಾಡಿಕೊಳ್ಳಬೇಕು. ಮನೆಯಿಂದಲೇ ಕುಡಿಯುವ ನೀರಿನ ಬಾಟಲ್‍ ತರಬೇಕು ಎಂದು ಸೂಚನೆ ನೀಡಲಾಗಿದೆ’ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು