ಮಂಗಳವಾರ, ಮಾರ್ಚ್ 9, 2021
28 °C
ಮರಾಠ ಅಭಿವೃದ್ಧಿ ಪ್ರಾಧಿಕಾರ ಹಿಂಪಡೆಯಲು ಮತ್ತು ಎಂಇಎಸ್‌ ನಿಷೇಧಕ್ಕೆ ಕನ್ನಡಪರ ಹೋರಾಟಗಾರ ವಾಟಾಳ್‌ ನಾಗರಾಜ್ ಆಗ್ರಹ

ಜ.30 ರಂದು ರೈಲು ಬಂದ್ ಚಳವಳಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿಕ್ಕಬಳ್ಳಾಪುರ: ‘ರಾಜ್ಯ ಸರ್ಕಾರ ಮರಾಠ ಅಭಿವೃದ್ಧಿ ಪ್ರಾಧಿಕಾರ ಹಿಂಪಡೆಯಬೇಕು ಮತ್ತು ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್‌) ನಿಷೇಧಿಸಬೇಕು ಎಂದು ಆಗ್ರಹಿಸಿ ಜನವರಿ 30 ರಂದು ರಾಜ್ಯದಾದ್ಯಂತ ರೈಲು ಬಂದ್‌ ಚಳವಳಿ ನಡೆಸಲಾಗುತ್ತಿದೆ’ ಎಂದು ಕನ್ನಡಪರ ಹೋರಾಟಗಾರ ವಾಟಾಳ್‌ ನಾಗರಾಜ್ ತಿಳಿಸಿದರು.

ನಗರದ ರೈಲು ನಿಲ್ದಾಣದಲ್ಲಿ ಸೋಮವಾರ ಕಪ್ಪು ಪಟ್ಟಿ ಧರಿಸಿ ಸಾಂಕೇತಿಕ ಪ್ರತಿಭಟನೆ ನಡೆಸಿ ಮಾತನಾಡಿದ ಅವರು, ‘ಬೆಳಗಾವಿ, ಕಾರವಾರ ಕರ್ನಾಟಕದ ಅವಿಭಾಜ್ಯ ಅಂಗ. ಅವುಗಳನ್ನು ಕಬಳಿಸುವ ಶಿವಸೇನೆ ವಿರುದ್ಧ ರಾಜ್ಯದ ಎಲ್ಲಾ ರೈಲು ನಿಲ್ದಾಣಗಳಲ್ಲಿ ಜನವರಿ 30 ರಂದು ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ’ ಎಂದು ಹೇಳಿದರು.

‘ಬೆಳಗಾವಿಯನ್ನು ಪಡೆದೇ ಪಡೆಯಬೇಕು ಎಂಬ ಹಠದಲ್ಲಿ ಶಿವಸೇನೆಯವರು ದಾಂಧಲೆ ಮಾಡುತ್ತಿದ್ದಾರೆ. ಅವರಿಗೆ ಎಂಇಎಸ್‌ನವರು ಬೆಂಬಲ ನೀಡುತ್ತಿದ್ದಾರೆ. ಆದರೆ, ಈ ವಿಚಾರದಲ್ಲಿ ಕರ್ನಾಟಕ ಸರ್ಕಾರ ನಿಷ್ಕ್ರೀಯವಾಗಿದೆ. ಬೆಳಗಾವಿಯ ರಾಜಕಾರಣಿಗಳು ಸಂಪೂರ್ಣ ಕೋಮಾದಲ್ಲಿದ್ದಾರೆ. ಅವರಿಗೆ ಮಂತ್ರಿಯಾಗುವುದು ಬಿಟ್ಟು ಬೇರೇನೂ ಬೇಕಿಲ್ಲ. ಹೀಗಾಗಿ ಅವರೆಲ್ಲ ಎಂಇಎಸ್‌ ಏಜೆಂಟರಾಗಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು. 

‘ಬೆಂಗಳೂರು, ಮೈಸೂರು ಭಾಗದಲ್ಲಿ ಸ್ಥಾಪಿಸುವ ಕೈಗಾರಿಕೆಗಳನ್ನು ಬೆಳಗಾವಿ ಭಾಗದಲ್ಲಿ ಸ್ಥಾಪಿಸಿದರೆ ಗಡಿನಾಡ ಕನ್ನಡಿಗರಿಗೆ ಅನುಕೂಲವಾಗುತ್ತದೆ ಎಂದು ನಾನು ಮೊದಲಿನಿಂದಲೂ ಒತ್ತಾಯಿಸುತ್ತ ಬಂದರೂ ಈವರೆಗೆ ಯಾವುದೇ ಸರ್ಕಾರ ಪರಿಗಣನೆಗೆ ತೆಗೆದುಕೊಂಡಿಲ್ಲ’ ಎಂದರು.

‘ಮುಖ್ಯಮಂತ್ರಿ ಯಡಿಯೂರಪ್ಪ ಅವರದು ಅತ್ಯಂತ ಹೀನಾಯ ಮತ್ತು ಕನ್ನಡ ವಿರೋಧಿ ಸರ್ಕಾರ. ಕನ್ನಡ ಭಾಷೆಗೆ ಇವರ ಬೆಂಬಲ ಇಲ್ಲ. ಇವರದು ಬಿಜೆಪಿ, ಆರ್‌ಎಸ್‌ಎಸ್‌ ಸರ್ಕಾರ. ಇವರಿಗೆ ಹಿಂದಿ ಮೇಲೆ ಪ್ರೀತಿ ಇದೆ ಹೊರತು ಕನ್ನಡದ ಮೇಲಲ್ಲ. ಯಡಿಯೂರಪ್ಪ ಅವರಿಗೆ ಭದ್ರತೆ ಇಲ್ಲದ ಕಾರಣಕ್ಕೆ ಪ್ರಾಧಿಕಾರ ರಚಿಸಿದ್ದಾರೆ. ಅವರಿಗೆ ಶಕ್ತಿ, ಪ್ರಾಮಾಣಿಕತೆ ಇದ್ದರೆ ಕೂಡಲೇ ಪ್ರಾಧಿಕಾರ ಮತ್ತು ಎಂಇಎಸ್‌ ರದ್ದುಪಡಿಸಲಿ. ಆಗ ಬೆಳಗಾವಿ ಶಾಂತವಾಗಿರುತ್ತದೆ’ ಎಂದು ಹೇಳಿದರು.

‘ಯಡಿಯೂರಪ್ಪ ಅವರು ಗ್ರಾನೈಟ್‌ ಮಾಲೀಕರಿಂದ ಅಧಿಕಾರಕ್ಕೆ ಬಂದಿದ್ದಾರೆ. ಹೀಗಾಗಿ, ಇವತ್ತು ರಾಜ್ಯದಾದ್ಯಂತ ಗ್ರಾನೈಟ್‌ ಲೂಟಿ ಅವ್ಯಾಹತವಾಗಿ ನಡೆದಿದೆ. ಯಡಿಯೂರಪ್ಪ ಅವರು ಈ ಹಿಂದೆ ಅಧಿಕಾರಕ್ಕೆ ಬಂದಾಗ ಮೈನಿಂಗ್‌ ಲೂಟಿಕೋರರೆಲ್ಲ ಮಂತ್ರಿಗಳಾಗಿದ್ದರು. ಇವತ್ತು ಗ್ರಾನೈಟ್‌ ಅಕ್ರಮವನ್ನು ಸಕ್ರಮ ಮಾಡಿಕೊಳ್ಳಬಹುದು ಎಂದು ಹೇಳುತ್ತಿರುವುದು ಹಲವು ಸಂಶಯಗಳಿಗೆ ಎಡೆಮಾಡಿದೆ’ ಎಂದರು.

ಕನ್ನಡಪರ ಹೋರಾಟಗಾರ ಸಾ.ರಾ.ಗೋವಿಂದು ಮಾತನಾಡಿ, ‘ಮರಾಠಿ ಅಭಿವೃದ್ಧಿ ಪ್ರಾಧಿಕಾರ ರಚನೆಗಾಗಿ ಯಾರು ಸರ್ಕಾರಕ್ಕೆ ಅರ್ಜಿ ಹಾಕಿಕೊಂಡಿದ್ದರು? ಯಾರು ಬೇಡಿಕೆ ಇಟ್ಟಿದ್ದರು? ಸರೋಜಿನಿ ಮಹಿಷಿ ವರದಿ, ಮಹಾದಾಯಿ ಯೋಜನೆ, ಮೇಕೆದಾಟು ಯೋಜನೆಗಳ ಬಗ್ಗೆ ಕಾಳಜಿ ಇಲ್ಲದವರಿಗೆ ಏಕಾಏಕಿ ಮರಾಠಿಗರ ಮೇಲೆ ಪ್ರೀತಿ ಬರಲು ಏನು ಕಾರಣ? ಎರಡು ಸ್ಥಾನಗಳನ್ನು ಗೆಲ್ಲಲ್ಲು ಅಭಿವೃದ್ಧಿ ಪ್ರಾಧಿಕಾರ ರಚಿಸಿದ್ದೀರಾ’ ಎಂದು ಪ್ರಶ್ನಿಸಿದರು.

‘ನವೆಂಬರ್ ತಿಂಗಳು ಕರಾಳ ದಿನ ಆಚರಿಸುವ ಎಂಇಎಸ್‌ ನಿಷೇಧಕ್ಕೆ ರಾಜ್ಯ ಸರ್ಕಾರ ಏಕೆ ಮೀನಾಮೇಷ ಎಣಿಸುತ್ತಿದೆಯೋ ಅರ್ಥವಾಗುತ್ತಿಲ್ಲ. ಮುಂಬರುವ ದಿನಗಳಲ್ಲಿ ರಾಜ್ಯದಲ್ಲಿ ಏನೇ ಅವಘಡಗಳು ನಡೆದರೂ ರಾಜ್ಯ ಸರ್ಕಾರ, ಯಡಿಯೂರಪ್ಪ ಅವರೇ ಹೊಣೆಯಾಗುತ್ತಾರೆ’ ಎಂದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು