ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಕುಬೂದಿ ಎರಚಲು ಜನ ದಡ್ಡರಾ?: ಸುಧಾಕರ್ ವಿರುದ್ಧ ರಮೇಶ್‌ಕುಮಾರ್ ವಾಗ್ದಾಳಿ

ಕಾಂಗ್ರೆಸ್‌ ಕಾರ್ಯಕರ್ತರ ಸಭೆಯಲ್ಲಿ ಅನರ್ಹ ಶಾಸಕ ಸುಧಾಕರ್ ಅವರ ವಿರುದ್ಧ ಶಾಸಕ ಕೆ.ಆರ್.ರಮೇಶ್‌ಕುಮಾರ್ ವಾಗ್ದಾಳಿ
Last Updated 17 ಅಕ್ಟೋಬರ್ 2019, 13:32 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ‘ಎಲ್ಲರಿಗೂ ಉಚಿತವಾಗಿ ಅಕ್ಕಿ ಕೊಟ್ಟ ಸಿದ್ದರಾಮಯ್ಯನಂತಹ ಪುಣ್ಯಾತ್ಮರಿಗೆ ನಾಮ ಹಾಕಿ, ತಿರುಪತಿ ರೂಟ್‌ ಬಸ್‌ ಹತ್ತಿಸಿ, ಯಡಿಯೂರಪ್ಪನವರ ಮನೆಗೆ ಹೋಗುವುದು ಯೋಗ್ಯರು ಮಾಡುವ ಕೆಲಸವೆ? ಜನರು ನಮಗಿಂತಲೂ ಬುದ್ಧಿವಂತರಿದ್ದಾರೆ. ಅವರಿಗೆ ಸರಿ, ತಪ್ಪು ಚೆನ್ನಾಗಿ ತಿಳಿದಿದೆ. ಜನ ಕೈಬಿಟ್ಟರೆ ನಾವು ದಾಸಪ್ಪಗಳಾಗುತ್ತೇವೆ’ ಎಂದು ಶಾಸಕ ಕೆ.ಆರ್.ರಮೇಶ್‌ಕುಮಾರ್ ಹೇಳಿದರು.

ತಾಲ್ಲೂಕಿನ ತಿಪ್ಪೇನಹಳ್ಳಿಯಲ್ಲಿ ಗುರುವಾರ ಕಾಂಗ್ರೆಸ್‌ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ’ಪ್ರೀತಿ, ಗೌರವದಿಂದ ಐದು ವರ್ಷಕ್ಕೆ ಆಯ್ಕೆ ಮಾಡಿದವರನ್ನು ಒಂದೇ ಒಂದು ಮಾತು ಕೇಳದೆ ಮಿನಾಮೇಷ ಎಣಿಸಿ ರಾಜೀನಾಮೆ ಕೊಟ್ಟು, ಜನರಲ್ಲಿ ಸಂಶಯ ಹುಟ್ಟಿಸಿ, ಈಗ ಅಭಿವೃದ್ಧಿಯ ಮಂಕುಬೂದಿ ಎರಚಲು ಹೋದರೆ ಜನ ದಡ್ಡರಾ? ಮತದಾರರ ಅಭಿಪ್ರಾಯ ಕೇಳದೆ ನಿನ್ನಷ್ಟಕ್ಕೆ ನೀನೇ ತೀರ್ಮಾನ ತೆಗೆದುಕೊಳ್ಳಲು ನೀನೇನು ಸರ್ವಾಧಿಕಾರಿಯಾ’ ಎಂದು ಪರೋಕ್ಷವಾಗಿ ಅನರ್ಹ ಶಾಸಕ ಸುಧಾಕರ್ ವಿರುದ್ಧ ವಾಗ್ದಾಳಿ ನಡೆಸಿದರು.

‘ದೇಶಕ್ಕೆ ಸಂವಿಧಾನ ಕೊಟ್ಟ ಅಂಬೇಡ್ಕರ್ ಅವರು ಸತ್ತಾಗ ಅವರ ಜೇಬಿನಲ್ಲಿ ಬರೀ ₹300 ಇತ್ತು. ಹೆಣ ಸಾಗಿಸಲು ಅವರ ಕುಟುಂಬದವರ ಬಳಿ ಕೂಡ ಹಣ ಇರಲಿಲ್ಲ. ಅಂತಹ ಮೇಧಾವಿ ಬರೆದ ಸಂವಿಧಾನವನ್ನು ಇವರು ಕೈಮಾ ಮಾಡಿ ಹಾಕುತ್ತಿದ್ದಾರೆ. ಉಪ ಚುನಾವಣೆಯಲ್ಲಿ ನಾವು ಗೆಲ್ಲಬೇಕು. ಸುಧಾಕರ್ ಸೋಲಬೇಕು. ಏಕೆಂದರೆ ದೇಶದ ರಾಜಕಾರಣದಲ್ಲಿ ಇನ್ನು ಮುಂದೆ ಯಾರೂ ಪಕ್ಷದ್ರೋಹ ಮಾಡಬಾರದು. ದುಡ್ಡಿದೆ ಎಂಬ ದುರಂಹಕಾರದಿಂದ ಮೆರೆಯಬಾರದು’ ಎಂದು ತಿಳಿಸಿದರು.

‘ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಲ್ಲಿಯವರೆಗೂ ನಾವು ಜನರಿಗೆ ತಲೆ ಬಾಗುವುದಿಲ್ಲವೋ, ಜನಾಭಿಪ್ರಾಯ ಗೌರವಿಸುವುದಿಲ್ಲವೋ ಅಲ್ಲಿಯವರೆಗೆ ಅದು ಪ್ರಜಾಪ್ರಭುತ್ವವಲ್ಲ, ವ್ಯಾಪಾರವಾಗುತ್ತದೆ. ಪ್ರಜಾಪ್ರಭುತ್ವ ವ್ಯವಸ್ಥೆ ಉಳಿಯಬೇಕಾದರೆ ಜನಸಾಮಾನ್ಯರ ಮಾತಿಗೆ ಬೆಲೆ ಬರಬೇಕಾಗಿದೆ. ಎಲ್ಲ ಜನರಿಗೆ ನಾವು ಭಯಪಟ್ಟು ಬದುಕಬೇಕಾದರೆ ಉತ್ತಮರ ಆಯ್ಕೆಯಾಗಬೇಕು’ ಎಂದರು.

‘ಚಿಕ್ಕಬಳ್ಳಾಪುರ ಮಣ್ಣು ಎಂತೆಂತಹ ದಿಗ್ಗಜರನ್ನು ನೋಡಿದೆ. ಆದರೆ ಎರಡು ಬಾರಿ ಗೆದ್ದ ತಕ್ಷಣವೇ ಏನು ಇವನ ಧೈರ್ಯ? ಉಪ ಚುನಾವಣೆ ನಿಲ್ಲಿಸಲು ಯಾರಿಂದಲೂ ಆಗುವುದಿಲ್ಲ. ನಡೆದೇ ನಡೆಯುತ್ತದೆ. ಮುಂಬರುವ ಚುನಾವಣೆಯಲ್ಲಿ ಮತದಾರರ ಪ್ರಜ್ಞಾವಂತರಾಗಿ, ಸ್ವಾಭಿಮಾನಿಗಳಾಗಿ ಮತ ಮಾರಿಕೊಳ್ಳದೆ ಮೋಸ ಮಾಡುವವರಿಗೆ ತಕ್ಕ ಪಾಠ ಕಲಿಸಬೇಕು. ಚರಿತ್ರೆಯಲ್ಲಿ ಚಿಕ್ಕಬಳ್ಳಾಪುರ ನಿಲ್ಲಬೇಕು’ ಎಂದು ಹೇಳಿದರು.

‘ಕೆ.ಪಿ.ಬಚ್ಚೇಗೌಡ ಅವರು ಒಳ್ಳೆಯ ಮನುಷ್ಯರು. ದುಡ್ಡು ಮಾಡಿದವರಲ್ಲ. ಆದರೆ ಅವರಿಗೆ ಇವತ್ತು ಚುನಾವಣೆ ನಡೆಸುವಷ್ಟು ಚೈತನ್ಯವಿಲ್ಲ. ಆದರೆ ಅವರಿಂದಾಗಿಯೇ ಚುನಾವಣೆಯಲ್ಲಿ ಮತಗಳು ಒಡೆಯುತ್ತಿವೆ ಎಂಬ ಬೇಸರ ಅವರ ಜತೆಗಾರರಲ್ಲಿದೆ. ಹೀಗಾಗಿ ಅನೇಕರು ಪರಿವರ್ತನೆಯಾಗುತ್ತಿದ್ದಾರೆ. ಆದ್ದರಿಂದ ನಮ್ಮ ಕಾರ್ಯಕರ್ತರು ಜೆಡಿಎಸ್‌ನವರನ್ನು ಪ್ರತ್ಯೇಕಿಸಬೇಡಿ. ಎಲ್ಲ ಸಮುದಾಯದವರನ್ನು ಒಳಗೊಂಡು ಶ್ರದ್ಧೆಯಿಂದ ಕೆಲಸ ಮಾಡಿ’ ಎಂದು ತಿಳಿಸಿದರು.

ವಿಧಾನ ಪರಿಷತ್ ಸದಸ್ಯ ನಜೀರ್ ಅಹಮ್ಮದ್, ಜಿಲ್ಲಾ ಪಂಚಾಯಿತಿ ಸದಸ್ಯ ಎಚ್‌.ವಿ.ಮಂಜುನಾಥ್, ಕೆಪಿಸಿಸಿ ಸದಸ್ಯ ಎಸ್‌.ಪಿ.ಶ್ರೀನಿವಾಸ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT