ಭಾನುವಾರ, 10 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕಬಳ್ಳಾಪುರ | 193 ಹಿರಿಯರ ಮನೆಗೆ ಪಡಿತರ: ಆಹಾರ ಮತ್ತು ನಾಗರಿಕ ಇಲಾಖೆಯ ಕ್ರಮ

Published 30 ಅಕ್ಟೋಬರ್ 2023, 14:32 IST
Last Updated 30 ಅಕ್ಟೋಬರ್ 2023, 14:32 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ‘ಅನ್ನಭಾಗ್ಯ’ ಯೋಜನೆಯಡಿ ವಿತರಿಸುವ ಪಡಿತರವನ್ನು 90 ವರ್ಷ ದಾಟಿದವರ ಮನೆ ಬಾಗಿಲಿಗೇ ತಲುಪಿಸಲು ಆಹಾರ ಇಲಾಖೆ ಮುಂದಾಗಿದೆ. 

ಪಡಿತರ ಕಾರ್ಡ್‌ ಹೊಂದಿರುವ ಕುಟುಂಬದ ಯಾರಾದರೂ ಒಬ್ಬ ಸದಸ್ಯರು ತಮ್ಮ ವ್ಯಾಪ್ತಿಯ ನ್ಯಾಯಬೆಲೆ ಅಂಗಡಿ ಅಥವಾ ಅನ್ನಭಾಗ್ಯ ಪಡಿತರ ವಿತರಣಾ ಕೇಂದ್ರಗಳಿಗೆ ತೆರಳಿ ಬಯೊಮೆಟ್ರಿಕ್‌ ನೀಡಿದ ನಂತರ ತಮ್ಮ ಕುಟುಂಬಕ್ಕೆ ನಿಗದಿಪಡಿಸಿದ ಪಡಿತರ ಪಡೆಯಬೇಕಿತ್ತು. ವಯಸ್ಸಾದವರು ಪಡಿತರ ಕೇಂದ್ರಗಳಿಗೆ ಹೋಗಲು ಸಮಸ್ಯೆ ಎದುರಿಸುತ್ತಿದ್ದರು. ಇಂತಹ ಸಮಸ್ಯೆಗಳಿಗೆ ಕೊನೆ ಹಾಡಲು ‘ಮನೆ ಬಾಗಿಲಿಗೆ ಪಡಿತರ’ ಯೋಜನೆ ರೂಪಿಸಲಾಗಿದೆ.

ಈ ಪ್ರಕಾರ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ 193 ಮಂದಿ ಹಿರಿಯ ನಾಗರಿಕರಿಗೆ ಆಹಾರ ಇಲಾಖೆಯು ಮನೆ ಬಾಗಿಲಿಗೆ ಪಡಿತರ ಪೂರೈಸಲು ಮುಂದಾಗಿದೆ. ಇಲಾಖೆಯ ಅಂಕಿ ಅಂಶಗಳ ಪ್ರಕಾರ ಜಿಲ್ಲೆಯ ಆರೂ ತಾಲ್ಲೂಕುಗಳಲ್ಲಿ ಹೀಗೆ 90 ವರ್ಷ ದಾಟಿದ ಮತ್ತು ಏಕ ವ್ಯಕ್ತಿಯ 193 ಮಂದಿ ಪಡಿತರ ಚೀಟಿದಾರರು ಇದ್ದಾರೆ. 

ಒಂಟಿ ವೃದ್ಧರು, 90 ದಾಟಿದ ದಂಪತಿಗಳ ಪ್ರತ್ಯೇಕ ಪಟ್ಟಿಯನ್ನು ಆಹಾರ ಇಲಾಖೆ ಸಿದ್ಧಪಡಿಸಿದೆ. ಒಂದು ವೇಳೆ ತಮ್ಮ ಕುಟುಂಬದ ಇತರೆ ಸದಸ್ಯರು ಬೇರೆ ಪ್ರದೇಶಗಳಿಗೆ ತೆರಳಿದ್ದರೆ, ಅಂತಹ ಸಮಯದಲ್ಲಿ ಊರಲ್ಲೇ ಉಳಿದ ವೃದ್ಧರು ಮನೆ ಬಾಗಿಲಿಗೇ ಪಡಿತರ ನೀಡುವಂತೆ ಕೋರಿಕೆ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. 

ಈ ಮೊದಲು ಸರ್ಕಾರ 75 ವರ್ಷ ದಾಟಿದ ನಾಗರಿಕರ ಮನೆ ಬಾಗಿಲಿಗೆ ಪಡಿತರ ಪೂರೈಸಲು ಮುಂದಾಗಿತ್ತು. ಆ ನಂತರ ಈ ವಯೋಮಿತಿ 90ಕ್ಕೆ ಹೆಚ್ಚಿದೆ. ನೆರೆಯ ಆಂಧ್ರಪ್ರದೇಶದಲ್ಲಿಯೂ ವಯೋವೃದ್ಧರ ಮನೆ ಬಾಗಿಲಿಗೆ ಪಡಿತರವನ್ನು ಆಹಾರ ಇಲಾಖೆ ತಲುಪಿಸುತ್ತಿದೆ. 

ಜಿಲ್ಲೆಯ ಗೌರಿಬಿದನೂರಿನಲ್ಲಿ ಗರಿಷ್ಠ ಸಂಖ್ಯೆಯಲ್ಲಿ ಫಲಾನುಭವಿಗಳು ಇದ್ದರೆ ಗುಡಿಬಂಡೆ ತಾಲ್ಲೂಕಿನಲ್ಲಿ ಕನಿಷ್ಠ ಸಂಖ್ಯೆಯ ಫಲಾನುಭವಿಗಳು ಇದ್ದಾರೆ. ನವೆಂಬರ್‌ನಿಂದ ರಾಜ್ಯದಾದ್ಯಂತ ಈ ಯೋಜನೆ ಜಾರಿಗೊಳ್ಳಲಿದೆ. 

90 ದಾಟಿದ ವೃದ್ಧರು, ದಂಪತಿಗಳ ಬಹಳಷ್ಟು ಪಡಿತರ ಕಾರ್ಡ್‌ಗಳಲ್ಲಿ ಇತರೆ ಕಿರಿಯ ಸದಸ್ಯರ ಹೆಸರು ನಮೂದಾಗಿದ್ದರೂ, ಅವರೆಲ್ಲ ಕೆಲಸ ಹುಡುಕಿಕೊಂಡು ವಲಸೆ ಹೋಗಿರುವ ಅತಿ ಹೆಚ್ಚು ಪ್ರಕರಣಗಳು ಕಲ್ಯಾಣ ಕರ್ನಾಟಕದ ಜಿಲ್ಲೆಗಳಲ್ಲಿವೆ.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT