ಶುಕ್ರವಾರ, ಅಕ್ಟೋಬರ್ 23, 2020
26 °C
ನಗರದಲ್ಲಿ ದಲಿತ ಸಂಘಟನೆಗಳ ಒಕ್ಕೂಟ ಕಾರ್ಯಕರ್ತರಿಂದ ರಸ್ತೆ ತಡೆದು ಪ್ರತಿಭಟನೆ

ಅತ್ಯಾಚಾರದ ಆರೋಪಿಗಳನ್ನು ಗಲ್ಲಿಗೇರಿಸಲು ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿಕ್ಕಬಳ್ಳಾಪುರ: ಉತ್ತರಪ್ರದೇಶದ ಹಾಥರಸ್‌ನಲ್ಲಿ ಯುವತಿ ಮೇಲೆ ಅತ್ಯಾಚಾರ ನಡೆಸಿ ಕೊಲೆ ಮಾಡಿದ ಆರೋಪಿಗಳನ್ನು ನೇಣಿಗೆ ಏರಿಸಬೇಕು ಎಂದು ಆಗ್ರಹಿಸಿ ಸೋಮವಾರ ನಗರದಲ್ಲಿ ದಲಿತ ಸಂಘಟನೆಗಳ ಒಕ್ಕೂಟ ಕಾರ್ಯಕರ್ತರು ಅಂಬೇಡ್ಕರ್ ವೃತ್ತದಲ್ಲಿ ರಸ್ತೆ ತಡೆದು ಪ್ರತಿಭಟನೆ ನಡೆಸಿದರು.

ಈ ವೇಳೆ ಮಾತನಾಡಿದ ಒಕ್ಕೂಟದ ಮುಖಂಡ ಬಿ.ವಿ.ಆನಂದ್, ‘ಸಮೀಕ್ಷೆಗಳಂತೆ ದೇಶದಲ್ಲಿ ನಡೆದಿರುವ ಲಕ್ಷಾಂತರ ಅತ್ಯಾಚಾರ, ಕೊಲೆ, ದೌರ್ಜನ್ಯ, ಕೋಮು ಗಲಭೆ, ಗುಂಪು ಥಳಿತ ಪ್ರಕರಣಗಳಲ್ಲಿ ಸಿಂಹಪಾಲು ಹೊಂದಿರುವ ಕುಖ್ಯಾತಿಗೆ ಪಾತ್ರವಾಗಿರುವ ಯೋಗಿ ಆದಿತ್ಯನಾಥ್ ಸರ್ಕಾರವು ಉತ್ತರಪ್ರದೇಶದಲ್ಲಿ ಗೋರಕ್ಷಣೆಗೆ ನೀಡುವ ಒತ್ತು ದಲಿತ ಹೆಣ್ಣುಮಕ್ಕಳ ರಕ್ಷಣೆಗೆ ನೀಡುತ್ತಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ರಾಮ ಮಂದಿರ ನಿರ್ಮಾಣ ಮಾಡುವ ಸಂಕಲ್ಪ ತೊಟ್ಟಿರುವ ರಾಜ್ಯದಲ್ಲಿ ಹೆಣ್ಣುಮಕ್ಕಳಿಗೆ ರಕ್ಷಣೆ ಇಲ್ಲದಿರುವುದು ದುರಂತ. ಜಾತಿ, ಅಧಿಕಾರ ದುರ್ಬಳಕೆ ಮಾಡಿಕೊಂಡು ದಲಿತ ಹೆಣ್ಣುಮಕ್ಕಳ ಮೇಲೆ ದೌರ್ಜನ್ಯ ಎಸಗುತ್ತಿರುವವರಿಗೆ ಅಲ್ಲಿನ ಸರ್ಕಾರ ರಕ್ಷಣೆ ನೀಡುತ್ತಿದ್ದು, ಸಾಲದೆಂಬಂತೆ ಪೊಲೀಸರು ಸಾಕ್ಷ್ಯನಾಶದಂತಹ ದುಷ್ಕತ್ಯಕ್ಕೆ ಕೈಹಾಕುತ್ತಿರುವುದು ಪ್ರಜಾಪ್ರಭುತ್ವದ ಕಗ್ಗೊಲೆ’ ಎಂದು ಹೇಳಿದರು.

‘ಉತ್ತರ ಪ್ರದೇಶದಲ್ಲಿ ಮಹಿಳೆಯರು, ದಲಿತರು, ಅಲ್ಪಸಂಖ್ಯಾತ, ಹಿಂದುಳಿದ ಜನ ಸಮುದಾಯಗಳ ಮಾನ, ಪ್ರಾಣ ಹಾಗೂ ನಾಗರಿಕ ಹಕ್ಕು, ಸ್ವಾತಂತ್ರ್ಯವನ್ನು ರಕ್ಷಿಸಲು ವಿಫಲವಾಗಿದ್ದು, ಅಲ್ಲಿನ ಯೋಗಿ ಆದಿತ್ಯನಾಥ ನೇತೃತ್ವದ ಬಿಜೆಪಿ ಸರ್ಕಾರವನ್ನು ಕೂಡಲೇ ವಜಾ ಮಾಡಬೇಕು’ ಎಂದು ಆಗ್ರಹಿಸಿದರು. 

ಮುಖಂಡ ಎಂ.ಕೇಶವ ಮಾತನಾಡಿ, ‘ಉತ್ತರ ಪ್ರದೇಶವಲ್ಲದೆ ಇಡೀ ದೇಶದಾದ್ಯಂತ ಅತ್ಯಾಚಾರ, ಕೊಲೆ ಪ್ರಕರಣಗಳು ನಡೆಯುತ್ತಿದ್ದು, ನಾಗರಿಕ ಸಮಾಜ ತಲೆ ತಗ್ಗಿಸುವ ಪರಿಸ್ಥಿತಿಗೆ ಬಂದು ನಿಂತಿದೆ. ರಾಜಕಾರಣಿಗಳ ಬೇಜವಾಬ್ದಾರಿ ಹೇಳಿಕೆಗಳಿಂದ ಇಂತಹ ಪ್ರಕರಣಗಳಿಗೆ ಪ್ರಚೋದನೆ ನೀಡಿದಂತಾಗುತ್ತಿದ್ದು, ಮೊದಲು ಇದನ್ನು ನಿಲ್ಲಿಸಬೇಕು’ ಎಂದು ತಿಳಿಸಿದರು. 

‘ಈ ಹಿಂದೆಯೂ ಸಾಕಷ್ಟು ಅತ್ಯಾಚಾರ ಪ್ರಕರಣಗಳು ನಡೆದಿದ್ದರೂ ಆರೋಪಿಗಳ ಪರವಾಗಿ ಸರ್ಕಾರ ನಿಂತ ಕಾರಣ ಸಂತ್ರಸ್ತರಿಗೆ ನ್ಯಾಯ ಸಿಕ್ಕಿಲ್ಲ. ನಾನು ಇರುವುದು ಗೋ ರಕ್ಷಣೆಗೇ ಹೊರತು ಮಹಿಳೆಯರ ರಕ್ಷಣೆಗೆ ಅಲ್ಲ ಎಂಬ ಬೇಜಾಬ್ದಾರಿ ಹೇಳಿಕೆಯನ್ನು ಅಲ್ಲಿನ ಸಿಎಂ ನೀಡಿದ್ದಾರೆ. ಉತ್ತರ ಪ್ರದೇಶದಂತ ಸೂಕ್ಷ್ಮ ಪ್ರದೇಶವನ್ನು ಆಳುವ ನೈತಿಕ ಹಕ್ಕನ್ನು ಅವರು ಕಳೆದುಕೊಂಡಿದ್ದಾರೆ’ ಎಂದರು.

ಗೌತಮ್ ಗಂಗಾಧರ್ ಮಾತನಾಡಿ, ‘ಇತ್ತೀಚೆಗೆ ಆಂಧ್ರಪ್ರದೇಶದಲ್ಲಿ ರೆಡ್ಡಿ ಸಮುದಾಯದ ವೈದ್ಯೆಯ ಮೇಲೆ ಅತ್ಯಾಚಾರ ನಡೆಸಿ ಕೊಲೆಗೈದ ಆರೋಪಿಗಳನ್ನು ಘಟನಾ ಸ್ಥಳದಲ್ಲಿಯೇ ಶೂಟೌಟ್ ಮಾಡಿದಂತೆ ಹಾಥರಸ್‌ ಹಾಗೂ ಬಲರಾಂಪುರದ ದಲಿತ ಯುವತಿಯರ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿ, ಕೊಲೆಗೈದ ದುಷ್ಟರನ್ನು ಸಾರ್ವಜನಿಕವಾಗಿ ಶೂಟೌಟ್ ಮಾಡಿ ಇಂತಹ ಘಟನೆಗಳು ಮರುಕಳಿಸದಂತೆ ಎಚ್ಚರಿಕೆ ನೀಡಬೇಕು’ ಎಂದು ಒತ್ತಾಯಿಸಿದರು.

‘ಉತ್ತರಪ್ರದೇಶದಲ್ಲಿ ಪದೇ ಪದೇ ಪ್ರಜಾಪ್ರಭುತ್ವದ ಕಗ್ಗೊಲೆ, ಮಾನವ ಹಕ್ಕುಗಳ ಹರಣ, ದಲಿತರ ಮೇಲೆ ದೌರ್ಜನ್ಯ ಪ್ರಕರಣ ನಡೆಯುತ್ತಿದ್ದರೂ, ಕಾನೂನು ಸುವ್ಯವಸ್ಥೆಯನ್ನು ಕಾಪಾಡುವಲ್ಲಿ ವಿಫಲವಾಗಿರುವ ಆದಿತ್ಯ ನಾಥ್ ಸರ್ಕಾರವನ್ನು ವಜಾಗೊಳಿಸಿ ರಾಷ್ಟ್ರಪತಿ ಆಳ್ವಿಕೆಯನ್ನು ಜಾರಿಗೊಳಿಸಬೇಕು. ಆರೋಪಿಗಳಿಗೆ ಬೆಂಬಲವಾಗಿ ನಿಂತಿರುವ ಪೊಲೀಸರು, ಅಧಿಕಾರಿಗಳನ್ನು ಅಮಾನತುಗೊಳಿಸಬೇಕು’ ಎಂದು ಹೇಳಿದರು.

ದಲಿತ ಸಂಘಟನೆಗಳ ಮುಖಂಡರಾದ ಸುದಾ ವೆಂಕಟೇಶ್, ಎನ್.ಶ್ರೀನಿವಾಸ್, ವಿ.ಮಂಜುನಾಥ್, ಎಂ.ವೇಣು, ವರದಹಳ್ಳಿ ವೆಂಕಟೇಶ್,  ಡಿ.ವಿ.ನಾರಾಯಣಸ್ವಾಮಿ, ಎನ್.ಸುಬ್ಬರಾಯಪ್ಪ, ಕೆ.ವಿ.ಗವಿರಾಯಪ್ಪ, ಲಕ್ಷ್ಮೀನಾರಾಯಣ, ಕಾಳಪ್ಪ, ಜೀವಿಕ ರತ್ನಮ್ಮ, ತಿಪ್ಪೇನಹಳ್ಳಿ ನಾರಾಯಣ, ಗುಡಿಬಂಡೆ ಮಂಜು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು