ಭಾನುವಾರ, ಜನವರಿ 26, 2020
28 °C
ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಜಿಲ್ಲಾಡಳಿತ ಭವನದ ಎದುರು ಆಶಾ ಕಾರ್ಯಕರ್ತೆಯರ ಪ್ರತಿಭಟನೆ

ಚಿಕ್ಕಬಳ್ಳಾಪುರ: ಪ್ರೋತ್ಸಾಹಧನ ಬಾಕಿ ಪಾವತಿಗೆ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿಕ್ಕಬಳ್ಳಾಪುರ: ಆಶಾ ಕಾರ್ಯಕರ್ತೆಯರಿಗೆ ಕಳೆದ 15 ತಿಂಗಳಿಂದ ಬಾಕಿ ಉಳಿಸಿಕೊಂಡಿರುವ ‘ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಮಿಶನ್‌’ನ ಎಂಸಿಟಿಎಸ್ (ಮದರ್ ಆ್ಯಂಡ್ ಚೈಲ್ಡ್ ಟ್ರ್ಯಾಕಿಂಗ್ ಸಿಸ್ಟಂ) ಪ್ರೋತ್ಸಾಹ ಧನವನ್ನು ಪಾವತಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಆಲ್ ಇಂಡಿಯಾ ಯುನೈಟೆಡ್‌ ಟ್ರೇಡ್‌ ಯೂನಿಯನ್‌ ಸೆಂಟರ್‌ (ಎಐಯುಟಿಯುಸಿ) ಹಾಗೂ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ಪದಾಧಿಕಾರಿಗಳು ಸೋಮವಾರ ಜಿಲ್ಲಾಡಳಿತದ ಎದುರು ಪ್ರತಿಭಟನೆ ನಡೆಸಿದರು.

ಈ ವೇಳೆ ಮಾತನಾಡಿದ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ಜಿಲ್ಲಾ ಸಲಹೆಗಾರ ಜಿ.ಹನುಮೇಶ್ ಮಾತನಾಡಿ, ‘ರಾಜ್ಯದಲ್ಲಿ ಆಶಾ ಕಾರ್ಯಕರ್ತೆಯರಿಗೆ ಕಳೆದ 15 ತಿಂಗಳಿಂದ ಎಂಸಿಟಿಎಸ್ ಪ್ರೋತ್ಸಾಹಧನ ಪಾವತಿಯಾಗಿಲ್ಲ. ಆರೋಗ್ಯ ಇಲಾಖೆ ಕೂಡ ಪ್ರೋತ್ಸಾಹಧನ ಪಾವತಿಸುವ ಖಾತ್ರಿ ಇಲ್ಲ. ಹೀಗಾಗಿ ಬಾಕಿ ಪಾವತಿ ಆಗುವವರೆಗೂ ಆಶಾ ಕಾರ್ಯಕರ್ತೆಯರು ತಮ್ಮ ಸೇವೆಯನ್ನು ಸ್ಥಗಿತಗೊಳಿಸುವ ತೀರ್ಮಾನ ತೆಗೆದುಕೊಂಡಿದ್ದಾರೆ’ ಎಂದು ಹೇಳಿದರು.

‘ಆಶಾ ಕಾರ್ಯಕರ್ತೆಯು ಪ್ರತಿ ತಿಂಗಳು ಎಂಸಿಟಿಎಸ್‌ ಸೇವೆಗಳನ್ನು ಮಾಡಿದಷ್ಟು ಹಣ ಸಂಪೂರ್ಣವಾಗಿ ನೀಡಬೇಕು. ಇದಕ್ಕಾಗಿ ಮ್ಯಾನುವಲ್‌ ವರದಿ ಸಂಗ್ರಹಿಸಿ ವೇತನ ಪಾವತಿ ಮಾಡಬೇಕು ಅಥವಾ ಜನಸಂಖ್ಯೆಗೆ ಅನುಗುಣವಾಗಿ ಕಾರ್ಯನಿರ್ವಹಿಸುವ ಪ್ರತಿಯೊಬ್ಬ ಆಶಾಗೆ ಮಾಸಿಕ ₹ 3,000 ನೀಡಬೇಕು ಜೊತೆಗೆ ಜನಸಂಖ್ಯೆಗೆ ಅನುಗುಣವಾಗಿ ವೇತನ ಹೆಚ್ಚಿಸಬೇಕು’ ಎಂದು ಆಗ್ರಹಿಸಿದರು.

‘ಆಶಾ ಕಾರ್ಯಕರ್ತೆಯರ ಗೌರವಧನವನ್ನು ತಿಂಗಳಿಗೆ ಕನಿಷ್ಠ ₹ 12 ಸಾವಿರ ನಿಗದಿ ಮಾಡಬೇಕು. ನೆರೆಯ ಆಂಧ್ರಪ್ರದೇಶದಲ್ಲಿ ಆಶಾ ಕಾರ್ಯಕರ್ತೆಯರ ಸೇವೆಯನ್ನು ಗೌರವಿಸಿ ₹ 10 ಸಾವಿರ ಗೌರವ ಧನ ನಿಗದಿ ಮಾಡಲಾಗಿದೆ. ಅದೇ ರೀತಿ ನಮ್ಮ ರಾಜ್ಯದಲ್ಲೂ ಪ್ರೋತ್ಸಾಹಧನವನ್ನು ₹ 12 ಸಾವಿರಕ್ಕೆ ಹೆಚ್ಚಿಸಬೇಕು. ಆಶಾ ಸಾಫ್ಟ್‌ ಅಥವಾ ಆರ್‌ಸಿಪಿಎಚ್‌ ಪೋರ್ಟ್‌ಲ್‌ಗೆ ಆಶಾ ಪೋತ್ಸಾಹಧನದ ಜೋಡಣೆ ರದ್ದುಪಡಿಸಬೇಕು’ ಎಂದು ಹೇಳಿದರು.

‘ಅಂಗನವಾಡಿ ಕಾರ್ಯಕರ್ತೆಯರಿಗೆ ಇರುವಂತೆ ಆಶಾ ಕ್ಷೇಮಾಭಿವೃದ್ಧಿ ನಿಧಿ ಸ್ಥಾಪಿಸಬೇಕು. ಅದರ ಮೂಲಕ ಅಪಘಾತಕ್ಕೆ ಒಳಗಾಗುವ, ಮರಣ ಹೊಂದುವ ಕಾರ್ಯಕರ್ತೆಯರ ಕುಟುಂಬಕ್ಕೆ ಪರಿಹಾರ ಕಲ್ಪಿಸುವ ಕೆಲಸವಾಗಬೇಕು. ಈಗಾಗಲೇ ನೀಡಿರುವ ಭರವಸೆಯಂತೆ ಆಶಾ ಕಾರ್ಯಕರ್ತೆಯರಿಗೆ ದ್ವಿಚಕ್ರ ವಾಹನ ಖರೀದಿಸಲು ಸಹಾಯಧನ ನೀಡಬೇಕು. ಹಿಂದಿನಂತೆ ಪ್ರತಿ ವರ್ಷ ನಾಲ್ಕು ಸೀರೆಗಳನ್ನು ನೀಡಬೇಕು. 10 ವರ್ಷಗಳಿಗಿಂತ ಹೆಚ್ಚು ಕಾಲ ಸೇವೆ ಸಲ್ಲಿಸಿದವರಿಗೆ ಸಹಾಯಧನ ನೀಡುವ ಯೋಜನೆ ಜಾರಿಗೆ ತರಬೇಕು’ ಎಂದರು.

‘ಆಶಾ ಕಾರ್ಯಕರ್ತೆಯರಿಗೆ ಪಿಂಚಣಿ ನೀಡಬೇಕು. ಅಲ್ಲದೇ ನಿವೃತ್ತಿ ಪರಿಹಾರ (ಇಡಿಗಂಟು) ನೀಡಬೇಕು. ಸಾಮಾಜಿಕ ಸುರಕ್ಷಾ ಯೋಜನೆಯ ವ್ಯಾಪ್ತಿಗೆ ತಂದ ಪ್ರಧಾನ ಮಂತ್ರಿ ಜೀವನಜ್ಯೋತಿ ಯೋಜನೆ ಮತ್ತು ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆಯನ್ನು ಕೂಡಲೇ ಜಾರಿಗೊಳಿಸಬೇಕು. ಸಂಪೂರ್ಣ ವಿಮೆ ಕಂತನ್ನು ಸರ್ಕಾರವೇ ಭರಿಸಬೇಕು. ಹೆರಿಗೆ ರಜೆ ನೀಡಿ, ರಜೆಯಲ್ಲಿ ಮಾಸಿಕ ಗೌರವಧನ ನೀಡಬೇಕು’ ಎಂದು ಹೇಳಿದರು.

‘ತಿಂಗಳಿಗೆ ಎರಡು ಬಾರಿ ಲಾರ್ವಾ ಸರ್ವೆ ಮತ್ತು ವಿವಿಧ ಸರ್ವೆಗಳಿಗೆ ಹಲವು ವರ್ಷಗಳಿಂದ ಬಹುತೇಕ ಕಡೆಗಳಲ್ಲಿ ಪ್ರೋತ್ಸಾಹಧನ ನೀಡಿಲ್ಲ. ಪ್ರತಿ ದಿನದ ಸರ್ವೇ, ಜಾಥಾ ಅಥವಾ ಜಿಲ್ಲಾ ತಾಲ್ಲೂಕು ಕೇಂದ್ರದ ಸಭೆಗಳಿಗೆ ಕನಿಷ್ಠ ₹ 300 ನಿಗದಿಪಡಿಸಬೇಕು. ಕೇಂದ್ರ ಮಾರ್ಗಸೂಚಿ ಯಂತೆ ನಗರ ಪ್ರದೇಶದಲ್ಲಿ ಆಶಾಗಳಿಗೆ 2000 ದಿಂದ 2500 ಜನಸಂಖ್ಯೆಗೆ ಮಾತ್ರ ಕಾರ್ಯನಿರ್ವಹಿಸಲು ಕ್ರಮ ಕೈಗೊಳ್ಳಬೇಕು’ ಎಂದು ತಿಳಿಸಿದರು.

ಪ್ರತಿಭಟನಾಕಾರರು ಜಿಲ್ಲಾಧಿಕಾರಿ ಆರ್.ಲತಾ, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಯೋಗೇಶ್‌ ಅವರಿಗೆ ಮನವಿ ಸಲ್ಲಿಸಿದರು. ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ಚಿಕ್ಕಬಳ್ಳಾಪುರ ತಾಲ್ಲೂಕು ಘಟಕಗಳ ಪದಾಧಿಕಾರಿಗಳಾದ ಲಕ್ಷ್ಮಿ, ಲಲಿತಾ, ಸರಸ್ವತಿ, ಮಮತಾ, ಸುಜಾತ, ಸುಶೀಲಾ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು