ಶುಕ್ರವಾರ, ಸೆಪ್ಟೆಂಬರ್ 24, 2021
26 °C
ಪ್ರಜಾ ಸಂಘರ್ಷ ಸಮಿತಿಯಿಂದ ಪ್ರತಿಭಟನೆ

ಸಾಗುವಳಿ ಚೀಟಿ ನೀಡಲು ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬಾಗೇಪಲ್ಲಿ: ತಾಲ್ಲೂಕಿನಲ್ಲಿ ಬಗರ್ ಹುಕುಂ ಸಾಗುವಳಿದಾರರಿಗೆ ಭೂಮಿ ಮಂಜೂರು ಮಾಡಿಲ್ಲ. ಅರ್ಜಿ ಸಲ್ಲಿಸಿದವರಿಗೆ ಮನೆ, ನಿವೇಶನ ಹಂಚಿಲ್ಲ. ಸಾಗುವಳಿ ಚೀಟಿಗಳನ್ನು ನೀಡುವಲ್ಲಿ ಅಧಿಕಾರಿಗಳು, ಜನಪ್ರತಿನಿಧಿಗಳು ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂದು ಮಾಜಿ ಶಾಸಕ ಹಾಗೂ ಪ್ರಜಾ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಜಿ.ವಿ.ಶ್ರೀರಾಮರೆಡ್ಡಿ ಆರೋಪಿಸಿದರು.

ತಾಲ್ಲೂಕು ಕಚೇರಿ ಮುಂದೆ ಸೋಮವಾರ ಹಮ್ಮಿಕೊಂಡಿದ್ದ ಬೃಹತ್ ಪ್ರತಿಭಟನಾ ಧರಣಿಯಲ್ಲಿ ಭಾಗವಹಿಸಿ ಮಾತನಾಡಿದರು.

ತಾಲ್ಲೂಕಿನ ಜನರು ಬಗರ್ ಹುಕುಂ ಸಾಗುವಳಿ ಮಂಜೂರಾತಿಗಾಗಿ ಅರ್ಜಿ ಸಲ್ಲಿಸಿ ಅನೇಕ ವರ್ಷಗಳು ಕಳೆದಿದೆ. ಭೂಮಿ ಮಂಜೂರು ಮಾಡುವಂತೆ ಸರ್ಕಾರಿ ಆದೇಶ ಇದ್ದರೂ, ಭೂಮಿ ಮಂಜೂರು ಮಾಡಿಲ್ಲ. ತಾಲ್ಲೂಕಿನಲ್ಲಿ 9,760 ಅರ್ಜಿಗಳು ಇತ್ಯರ್ಥವಾಗಿಲ್ಲ. ಪುನಃ ಅರ್ಜಿಗಳನ್ನು ಸಲ್ಲಿಸಲು ಅವಕಾಶ ಕೊಡಬೇಕು. ಶಾಸಕರ ಅಧ್ಯಕ್ಷತೆಯಲ್ಲಿ ಇರುವ ಭೂ ಮಂಜೂರಾತಿ ಸಮಿತಿಯನ್ನು ತಕ್ಷಣವೇ ರಚನೆ ಮಾಡಿ ಇತ್ಯರ್ಥಗೊಳಿಸಬೇಕು ಎಂದು ಆಗ್ರಹಿಸಿದರು.

ತಾಲ್ಲೂಕಿನಲ್ಲಿ ಕೂಲಿ ಕಾರ್ಮಿಕರು ಹೆಚ್ಚಾಗಿದ್ದಾರೆ. ಕೂಲಿ ಸಿಗದೇ ವಲಸೆ ಹೋಗುತ್ತಿದ್ದರೂ, ವಲಸೆ ತಡೆದು ಉದ್ಯೋಗ ಖಾತರಿ ಯೋಜನೆಯನ್ನು ಸಮರ್ಪಕವಾಗಿ ಜಾರಿ ಮಾಡಿಲ್ಲ. ಕೂಲಿಕಾರರಿಗೆ ಕೂಲಿ ಕೆಲಸ ನೀಡಿಲ್ಲ. ಉದ್ಯೋಗ ಖಾತರಿ ಯೋಜನೆಯನ್ನು ಕೂಲಿಕಾರ್ಮಿಕರಿಗೆ ಸಿಗಬೇಕು. ಗ್ರಾಮೀಣ ಪ್ರದೇಶಗಳಂತೆ ನಗರ ಪ್ರದೇಶಗಳಿಗೂ ಯೋಜನೆಯನ್ನು ಜಾರಿ ಮಾಡಬೇಕು ಎಂದು ಒತ್ತಾಯಿಸಿದರು.

ವಿವಿಧ ವಸತಿ ಯೋಜನೆಯಡಿ ವಸತಿ ರಹಿತರಿಗೆ ಮನೆ ಕಟ್ಟಲು ಅವಕಾಶ ಇದೆ. ಆದರೆ ಕೆಲ ಅಧಿಕಾರಿಗಳು ವಸತಿ, ಮನೆರಹಿತರಿಗೆ ಮನೆ, ನಿವೇಶನಗಳನ್ನು ಹಂಚಿಕೆ ಮಾಡದೇ ನಿರ್ಲಕ್ಷ್ಯ ತೋರುತ್ತಿದ್ದಾರೆ. ಕೃಷಿ ಇಲಾಖೆಯಲ್ಲಿ ಕೃಷಿ ಭಾಗ್ಯ ಯೋಜನೆಯಲ್ಲಿ ಭ್ರಷ್ಟಾಚಾರ ಹೆಚ್ಚಾಗಿದೆ. ತೋಟಗಾರಿಕೆ ಇಲಾಖೆಯಲ್ಲಿ ಹನಿ ನೀರಾವರಿ ಮತ್ತು ಪೌಲ್ಟ್ರಿಹೌಸ್‌ಗಳಲ್ಲಿ ಹಲವಾರು ಅಕ್ರಮಗಳು ನಡೆದು ಅರ್ಹ ಫಲಾನುಭವಿಗಳಿಗೆ ಸೌಲಭ್ಯಗಳು ವಿತರಣೆ ಆಗುತ್ತಿಲ್ಲ ಎಂದರು.

ಪ್ರಜಾ ಸಂಘರ್ಷ ಸಮಿತಿಯಿಂದ 11 ದಿನಗಳ ಕಾಲ 11 ಬೇಡಿಕೆಗಳಿನ್ನಿಟ್ಟು ಹಮ್ಮಿಕೊಂಡಿದ್ದ ಜನಜಾಗೃತಿ ಮಾಡಿ, ಇದೀಗ ಜನರು ಬೀದಿಗಿಳಿದು ಹೋರಾಟ ಮಾಡುತ್ತಿದ್ದಾರೆ. ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಸಮಸ್ಯೆಗಳನ್ನು ಬಗೆಹರಿಸಬೇಕು ಎಂದು ಪಟ್ಟುಹಿಡಿದರು.

ಪ್ರತಿಭಟನಾ ಸ್ಥಳಕ್ಕೆ ತಹಶೀಲ್ದಾರ್, ಇಒ, ಕೃಷಿ, ತೋಟಗಾರಿಕೆ ಹಾಗೂ ಅರಣ್ಯ ಇಲಾಖೆಗಳ ಅಧಿಕಾರಿಗಳು ಭೇಟಿ ನೀಡಿದರು. ತಹಶೀಲ್ದಾರ್ ಡಿ.ಎ.ದಿವಾಕರ್ ಪ್ರತಿಭಟನಾ ಸ್ಥಳಕ್ಕೆ ಬಂದು ಪ್ರತಿಭಟನಾಕಾರರಿಂದ ಮನವಿ ಸ್ವೀಕರಿಸಿದರು. ನಂತರ ಪ್ರತಿಕ್ರಿಯಿಸಿ, ಈ ಕೂಡಲೇ ಅರ್ಜಿ ವಿಲೇವಾರಿ ಮಾಡಲಾಗುವುದು. ಬೇಡಿಕೆಗಳ ಬಗ್ಗೆ ಚರ್ಚೆ ಮಾಡಲು ಮುಖಂಡರ ಹಾಗೂ ಅಧಿಕಾರಿಗಳ ಸಭೆ ಕರೆಯಲಾಗುವುದು ಎಂದರು.

ಹೊಸ ಪಡಿತರ ಚೀಟಿ ವಿತರಿಸಿ: ಪ್ರಜಾ ಸಂಘರ್ಷ ಸಮಿತಿ ಜಿಲ್ಲಾ ಸಮಿತಿ ಸಹ ಸಂಚಾಲಕ ಚನ್ನರಾಯಪ್ಪ ಮಾತನಾಡಿ, ಭೂ ಮಂಜೂರಾತಿ ಸಮಿತಿಯನ್ನು ಕೂಡಲೇ ರಚಿಸಬೇಕು. ಜಿ.ವಿ.ಶ್ರೀರಾಮರೆಡ್ಡಿ ಶಾಸಕರಾಗಿದ್ದ ಅವಧಿಯಲ್ಲಿ ಬಗರ್ ಹುಕುಂ ಸಾಗುವಳಿ ಚೀಟಿಗಳನ್ನು ಜನರಿಗೆ ವಿತರಿಸಿದ್ದರು. ತೋಟಗಾರಿಕೆ, ಕೃಷಿ ಇಲಾಖೆ ಯೋಜನೆ ಅರ್ಹ ಫಲಾನುಭವಿಗೆ ತಲುಪುತ್ತಿಲ್ಲ. ಹೊಸ ಪಡಿತರ ಚೀಟಿಗಳನ್ನು ವಿತರಿಸಬೇಕು. ನೂರಾರು ವರ್ಷಗಳಿಂದ ಅರಣ್ಯ ಭೂಮಿಯಲ್ಲಿ ಸಾಗುವಳಿ ಮಾಡುತ್ತಿರುವವರಿಗೆ ಸಾಗುವಳಿ ಚೀಟಿ ನೀಡಬೇಕು ಎಂದು ಒತ್ತಾಯಿಸಿದರು.

ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಗೋಪಾಲಕೃಷ್ಣ, ಸಮಿತಿ ಮುಖಂಡ ಜಿ.ಎಂ.ರಾಮಕೃಷ್ಣಪ್ಪ, ಎಚ್.ಎನ್.ಚಂದ್ರಶೇಖರ ರೆಡ್ಡಿ, ಆರ್.ಚಂದ್ರಶೇಖರ ರೆಡ್ಡಿ, ಎಲ್.ವೆಂಕಟೇಶ್, ನಾರಾಯಣಸ್ವಾಮಿ,  ಟಿ.ಎಲ್.ವೆಂಕಟೇಶ್, ಸಿ.ಕೆ.ನರಸಿಂಹಪ್ಪ, ರಾಮಾಂಜಿನಪ್ಪ, ಬಾಷಾಸಾಬ್, ಬೈರಾರೆಡ್ಡಿ, ಪೆದ್ದಮುನಿಯಪ್ಪ, ಪ್ರಮೀಳಮ್ಮ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು