ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೋಡಿ ಮುಕ್ತ ಗ್ರಾಮಕ್ಕೆ ಗ್ರಹಣ

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಪೋಡಿ ಮುಕ್ತವಾಗಬೇಕಿದೆ 373 ಗ್ರಾಮಗಳು
Last Updated 19 ಫೆಬ್ರುವರಿ 2022, 12:10 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ರಾಜ್ಯದಲ್ಲಿ ಪೋಡಿ ಮುಕ್ತ ಗ್ರಾಮ ಯೋಜನೆಗೆ ಗ್ರಹಣ ಬಡಿದಿದೆ. ಗ್ರಾಮಗಳಲ್ಲಿ ಸರ್ವೆ ಕಾರ್ಯ ಸ್ಥಗಿತವಾಗಿದೆ. ಈ ಯೋಜನೆಯಡಿ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಇಂದಿಗೂ 373 ಗ್ರಾಮಗಳು ಪೋಡಿ ಮುಕ್ತವಾಗಿಲ್ಲ.

2015ರ ಸೆಪ್ಟೆಂಬರ್‌ 14ರಂದು ಅಂದಿನ ಕಂದಾಯ ಸಚಿವ ಶ್ರೀನಿವಾಸಪ್ರಸಾದ್ ಅವರು ಪ್ರತಿನಿಧಿಸುತ್ತಿದ್ದ ನಂಜನಗೂಡು ತಾಲ್ಲೂಕಿನ ಹೊಸಕೋಟೆ ಗ್ರಾಮದಲ್ಲಿ ಪೋಡಿ ಮುಕ್ತ ಗ್ರಾಮ ಅಭಿಯಾನಕ್ಕೆ ಚಾಲನೆ ನೀಡಲಾಯಿತು.

ಒಂದು ಹಿಸ್ಸೆಗೆ ಒಂದು ಆರ್‌ಟಿಸಿ, ನಕ್ಷೆ ಒದಗಿಸುವುದು. ಶುಲ್ಕವಿಲ್ಲದೆ ಪೋಡಿ ಅಳತೆ ಮಾಡುವುದು, ಆರ್‌ಟಿಸಿ ಮತ್ತು ಭೂ ದಾಖಲೆಗಳಲ್ಲಿನ ವ್ಯತ್ಯಾಸ ಸರಿಪಡಿಸುವುದು. ಬಹು ಮಾಲೀಕತ್ವದ ಪಹಣಿ ಹೊಂದಿರುವ ರೈತರಿಗೆ ಪ್ರತ್ಯೇಕ ಪಹಣಿ, ನಕಾಶೆ ವಿತರಿಸುವುದು ಪೋಡಿ ಮುಕ್ತ ಅಭಿಯಾನದ ಉದ್ದೇಶ. ನಗರ ಪ್ರದೇಶ ಹೊರತುಪಡಿಸಿ ಎಲ್ಲ ತಾಲ್ಲೂಕುಗಳಲ್ಲಿ ಅಭಿಯಾನ ಅನುಷ್ಠಾನಗೊಂಡಿದೆ.

ಅವಿಭಕ್ತ ಕುಟುಂಬಗಳು ವಿಘಟನೆಗೊಂಡು ವಿಭಕ್ತ ಕುಟುಂಬಗಳಾದರೂ ಪಹಣಿಗಳು ಪ್ರತ್ಯೇಕಗೊಂಡಿರುವುದಿಲ್ಲ. ಭೂದಾಖಲೆಗಳ ವಿಚಾರವಾಗಿ ಎದುರಾಗಿರುವ ಹಲವು ಸಮಸ್ಯೆಗಳಿಗೆ ಅಭಿಯಾನದ ಅಡಿಯಲ್ಲಿ ಪರಿಹಾರ ಕಾಣಬಹುದಿತ್ತು. ಆದರೆ ಅಭಿಯಾನ ತಾತ್ಕಾಲಿಕವಾಗಿ ಸ್ಥಗಿತವಾಗಿದೆ.

ಕಂದಾಯ ಇಲಾಖೆಯ ಮೂಲಗಳ ಪ್ರಕಾರ ಗುಡಿಬಂಡೆ, ಶಿಡ್ಲಘಟ್ಟ ಮತ್ತು ಗೌರಿಬಿದನೂರು ತಾಲ್ಲೂಕುಗಳಲ್ಲಿ ಪೋಡಿ ಮುಕ್ತ ಅಭಿಯಾನ ಯಶಸ್ಸು ಕಂಡಿದೆ. ಈ ತಾಲ್ಲೂಕುಗಳಲ್ಲಿ ಯಾವುದೇ ಗ್ರಾಮದ ಸರ್ವೆ ಕಾರ್ಯ ಬಾಕಿ ಇಲ್ಲ.

ಯಾವ ಹೋಬಳಿಯಲ್ಲಿ ಎಷ್ಟು ಗ್ರಾಮ:ಜಿಲ್ಲೆಯ ಚಿಂತಾಮಣಿ ತಾಲ್ಲೂಕಿನಲ್ಲಿಯೇ ಗರಿಷ್ಠ ಪ್ರಮಾಣದಲ್ಲಿ ಪೋಡಿ ಮುಕ್ತವಾಗದ ಗ್ರಾಮಗಳಿವೆ. ಈ ತಾಲ್ಲೂಕಿನ ಕಸಬಾ ಹೋಬಳಿ ವ್ಯಾಪ್ತಿಯಲ್ಲಿ 7, ಅಂಬಾಜಿದುರ್ಗ ಹೋಬಳಿ ವ್ಯಾಪ್ತಿಯಲ್ಲಿ 140 ಗ್ರಾಮಗಳು ಪೋಡಿ ಮುಕ್ತ ಅಭಿಯಾನದಿಂದ ಹೊರಗಿವೆ.

ಬಾಗೇಪಲ್ಲಿ ತಾಲ್ಲೂಕಿನ ಕಸಬಾ ಹೋಬಳಿಯ 35, ಚೇಳೂರು ಹೋಬಳಿಯ 43, ಮಿಟ್ಟೇಮರಿ ಹೋಬಳಿಯ 18, ಗೂಳೂರು ಹೋಬಳಿಯ 9 ಮತ್ತು ಪಾತಪಾಳ್ಯ ಹೋಬಳಿಯ 25 ಗ್ರಾಮಗಳಲ್ಲಿ ಅಭಿಯಾನ ನಡೆದಿಲ್ಲ.

ಚಿಕ್ಕಬಳ್ಳಾಪುರ ತಾಲ್ಲೂಕಿನ ಮಂಡಿಕಲ್ಲು ಹೋಬಳಿಯಲ್ಲಿ 12, ಕಸಬಾ ಹೋಬಳಿಯಲ್ಲಿ 38, ನಂದಿ ಹೋಬಳಿಯಲ್ಲಿ 45 ಗ್ರಾಮಗಳು ಪೋಡಿ ಮುಕ್ತ ಗ್ರಾಮಗಳಾಗಿ ಘೋಷಣೆಯಾಗದೆ ಉಳಿದಿವೆ.

ಸಾರ್ವಜನಿಕರು ಅಳತೆಗೆ ಕೋರಿ ಸಲ್ಲಿಸುವ ಅರ್ಜಿ, ತತ್ಕಾಲ್, ಪೋಡಿ, ಹದ್ದುಬಸ್ತು ಇತ್ಯಾದಿ ಅರ್ಜಿಗಳು ಹಾಗೂ ಸ್ಥಳೀಯ ಸಮಸ್ಯೆಗಳಿಗೆ ಸಂಬಂಧಿಸಿದ ಅಳತೆ ಕಾರ್ಯಗಳಿಗೆ ಮೊದಲ ಆದ್ಯತೆ ನೀಡಲಾಗಿದೆ. ಈ ಕಾರ್ಯಗಳನ್ನು ಪೂರೈಸಲು ಅಗತ್ಯವಾದ ಭೂಮಾಪಕರನ್ನು ಹೊರತುಪಡಿಸಿ ಉಳಿದ ಭೂಮಾಪಕರನ್ನು ಬಳಸಿಕೊಂಡು ಪೋಡಿ ಮುಕ್ತ ಗ್ರಾಮ ಅಭಿಯಾನ ಅನುಷ್ಠಾನಗೊಳಿಸಲಾಗುತ್ತಿದೆ ಎಂದು ಕಂದಾಯ ಇಲಾಖೆ ತಿಳಿಸಿದೆ.

ಸಾರ್ವಜನಿಕರ ನಿತ್ಯದ ಕೆಲಸಗಳಿಗೆ ತೊಂದರೆ ಆಗದಂತೆ, ಸರ್ಕಾರಿ ಮತ್ತು ಪರವಾನಗಿ ಭೂಮಾಪಕರ ಲಭ್ಯತೆ ಆಧರಿಸಿ ಅಭಿಯಾನಕೈಗೊಳ್ಳಲಾಗುತ್ತಿದೆ. ಕೋವಿಡ್ ಮತ್ತು ಲಾಕ್‌ಡೌನ್ ಕಾರಣದಿಂದ ವಿವಿಧ ರೀತಿಯ ಅಳತೆ ಕೋರಿಸಾರ್ವಜನಿಕರು ಸಲ್ಲಿಸಿರುವ ಅರ್ಜಿಗಳು ಬಾಕಿ ಇವೆ. ಈ ಅರ್ಜಿಗಳ ವಿಲೇವಾರಿಗೆ ಹೆಚ್ಚಿನ ಭೂಮಾಪಕರನ್ನು ನೇಮಿಸಲಾಗಿದೆ. ಆದ್ದರಿಂದ ತಾತ್ಕಾಲಿಕವಾಗಿ ಪೋಡಿ ಮುಕ್ತ ಗ್ರಾಮ ಯೋಜನೆಯನ್ನು ಸ್ಥಗಿತಗೊಳಿಸಲಾಗಿದೆ. ಸಾರ್ವಜನಿಕರು ಸಲ್ಲಿಸಿರುವ ಅರ್ಜಿಗಳ ವಿಲೇವಾರಿ ನಿಯಂತ್ರಣಕ್ಕೆ ಬಂದ ನಂತರ ಯೋಜನೆಯನ್ನು ಮತ್ತೆ ಆರಂಭಿಸಲಾಗುವುದು ಎಂದು ಕಂದಾಯ ಇಲಾಖೆ ತಿಳಿಸಿದೆ.

ಜಿಲ್ಲೆಯಲ್ಲಿ 89,138 ಬ್ಲಾಕ್‌ಗಳ ಅಳತೆ

ಯೋಜನೆ ಜಾರಿಯಾಗಿ 7 ವರ್ಷಗಳಾದರೂ ಜಿಲ್ಲೆಯಲ್ಲಿಯೂ ಯೋಜನೆ ಆಮೆಗತಿಯಲ್ಲಿ ಸಾಗಿದೆ. ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಇಲ್ಲಿಯವರೆಗೆ ಒಟ್ಟು 1,322 ಗ್ರಾಮಗಳಲ್ಲಿ 89,138 ಬ್ಲಾಕ್‌ಗಳ ಅಳತೆ ಕಾರ್ಯ ಪೂರ್ಣವಾಗಿದೆ. 87,743 ಏಕ ಮಾಲೀಕತ್ವದ ಪಹಣಿಗಳನ್ನು ಸೃಜಿಸಲಾಗಿದೆ.

***

ಅರ್ಜಿ ವಿಲೇವಾರಿಗೆ ಆದ್ಯತೆ

ಸಾರ್ವಜನಿಕರು ವಿವಿಧ ರೀತಿಯ ಅಳತೆಗೆ ಸಂಬಂಧಿಸಿದಂತೆ ಅರ್ಜಿಗಳನ್ನು ಸಲ್ಲಿಸಿದ್ದಾರೆ. ಈ ಅರ್ಜಿಗಳು ಹೆಚ್ಚಿವೆ. ಜನರಿಗೆ ತೊಂದರೆ ಆಗಬಾರದು ಎನ್ನುವ ಉದ್ದೇಶದಿಂದ ಸರ್ಕಾರ ಇವುಗಳ ವಿಲೇವಾರಿಗೆ ಆದ್ಯತೆ ನೀಡಿದೆ. ಆ ಪ್ರಕಾರ ಜಿಲ್ಲೆಯಲ್ಲಿಯೂ ಸಾರ್ವಜನಿಕರ ಅರ್ಜಿ ವಿಲೇವಾರಿಗೆ ಪ್ರಾಮುಖ್ಯ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಜಿಲ್ಲೆಯಲ್ಲಿ ಮತ್ತೆ ಪೋಡಿ ಮುಕ್ತ ಅಭಿಯಾನ ಆರಂಭವಾಗಲಿದೆ ಎಂದು ಜಿಲ್ಲಾ ಭೂದಾಖಲೆಗಳ ಇಲಾಖೆ ಉಪನಿರ್ದೇಶಕ ಸಂಜಯ್ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT