ಗೌರಿಬಿದನೂರು: ರಾಷ್ಟ್ರೀಯ ಹೆದ್ದಾರಿ 234 ರಸ್ತೆ ಅಭಿವೃದ್ಧಿ ಸ್ಥಗಿತಗೊಂಡಿದೆ. ಇದರಿಂದ ಮಂಚೇನಹಳ್ಳಿ ಮತ್ತು ಚಿಕ್ಕಬಳ್ಳಾಪುರ ರಸ್ತೆಯು ಸಂಪೂರ್ಣವಾಗಿ ಹದಗೆಟ್ಟಿದೆ. ಇದನ್ನು ದುರಸ್ತಿಗೊಳಿಸುವಂತೆ ಒತ್ತಾಯಿಸಿ ಮಂಗಳವಾರ ಮಂಚೇನಹಳ್ಳಿ ನಾಗರಿಕ ಹಿತರಕ್ಷಣಾ ವೇದಿಕೆಯಿಂದ ಮಂಚೇನಹಳ್ಳಿ ಬಂದ್ ಹಾಗೂ ರಸ್ತೆ ತಡೆ ನಡೆಸಲಾಯಿತು.
ಪ್ರತಿಭಟನೆಯ ನೇತೃತ್ವವನ್ನು ವಹಿಸಿದ್ದ ಮಾಜಿ ಜಿ.ಪಂ ಸದಸ್ಯ ಪಿ.ಎನ್.ಪ್ರಕಾಶ್ ಮಾತನಾಡಿ, ಕ್ಷೇತ್ರವನ್ನುಅಭಿವೃದ್ಧಿ ಪಥದತ್ತ ಕೊಂಡೊಯ್ಯುತ್ತೇವೆ ಎಂಬ ಸುಳ್ಳು ಭರವಸೆ ನೀಡಿ ಮತ ನೀಡಿದ ಜನತೆಗೆ ದ್ರೋಹ ಬಗೆಯುತ್ತಿರುವ ಸಚಿವರು ತಮ್ಮ ಸ್ಥಾನಕ್ಕೆ ಅನರ್ಹರಾಗಿದ್ದಾರೆ. ಕ್ಷೇತ್ರದ ಜನರ ಹಿತವನ್ನು ಕಾಪಾಡುವಲ್ಲಿ ವಿಫಲರಾಗಿದ್ದಾರೆ. 5 ವರ್ಷ ಕಳೆದರೂ ಮುಖ್ಯ ರಸ್ತೆ ಕಾಮಗಾರಿ ಪೂರೈಸಲು ಸಾಧ್ಯವಾಗದವರು ಈ ಕೂಡಲೇ ಸಚಿವ ಸ್ಥಾನಕ್ಕೆ ರಾಜಿನಾಮೆ ನೀಡಬೇಕು ಎಂದು ಆಗ್ರಹಿಸಿದರು.
ರೈತ ಸಂಘದ ಮುಖಂಡ ಎಂ.ಆರ್.ಲಕ್ಷ್ಮಿನಾರಾಯಣ್ ಮಾತನಾಡಿ, ರಸ್ತೆ ಹದಗೆಟ್ಟಿದ್ದರಿಂದಾಗಿ ಈ ಭಾಗದಲ್ಲಿನ ರೈತರು, ವಿದ್ಯಾರ್ಥಿಗಳು, ಕಾರ್ಮಿಕರಿಗೆ ಸಂಕಷ್ಟ ಎದುರಾಗಿದೆ. ಸಚಿವ ಹಾಗೂ ಜಿಲ್ಲಾಧಿಕಾರಿಗೆ ಮನವಿ ನೀಡಿದ್ದರೂ ಪ್ರಯೋಜನವಾಗಿಲ್ಲ ಎಂದು ದೂರಿದರು.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಸಹಾಯಕ ಎಂಜಿನಿಯರ್ ಮಲ್ಲಿಕಾರ್ಜುನ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ, ಈ ಹಿಂದೆ ರಾಷ್ಟ್ರೀಯ ಹೆದ್ದಾರಿ ರಸ್ತೆ ಕಾಮಗಾರಿಯ ಜವಾಬ್ದಾರಿ ಹೊತ್ತಿದ್ದ ಗುತ್ತಿಗೆದಾರರು ಕಾಮಗಾರಿಯನ್ನು ಅರ್ಧಕ್ಕೆ ಬಿಟ್ಟಿದ್ದರು. ಇದರಿಂದಾಗಿ ರಸ್ತೆ ದುರಸ್ತಿಯಾಗದೆ ತೊಂದರೆಯಾಗಿದೆ. ಪುನರ್ ಟೆಂಡರ್‌ಗೆ ಕ್ರಿಯಾಯೋಜನೆ ಸಿದ್ಧಪಡಿಸಲಾಗಿದೆ. ಇದು ಸರ್ಕಾರದಿಂದ ಅನುಮೋದನೆಯಾದ ಬಳಿಕ ಶೀಘ್ರವಾಗಿ ರಸ್ತೆಯ ದುರಸ್ತಿ ಮಾಡಲಾಗುವುದು ಎಂದರು.
ಮುಖಂಡ ಎಚ್.ಸಿ.ನಾರಾಯಣಗೌಡ, ಕಲಂದರ್, ಗುರುಶಂಕರಯ್ಯ, ಜೆ.ಮೋಹನ್, ಪ್ರಭು, ಅಜಿತ್, ನರಸಿಂಹರೆಡ್ಡಿ, ಪ್ರಿಯಾಂಕ, ಕೆ.ಪ್ರಭಾ, ಗೀತಾ, ಉಪ್ಪರಹಳ್ಳಿ ಜಗನ್ನಾಥ್, ಮಸ್ತಾನ್, ವಿ.ಎನ್.ಕೃಷ್ಣಮೂರ್ತಿ, ಅನಿಲ್ ಕುಮಾರ್, ಗುಂಡಾಪುರ ಲೋಕೇಶ್ ಗೌಡ, ಸುಬ್ರಮಣಿ, ಹನುಮಂತು, ಮಧುಸೂದನ್ ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.