ಮಂಗಳವಾರ, ಸೆಪ್ಟೆಂಬರ್ 28, 2021
24 °C
ರಾಜ್ಯದಲ್ಲಿಯೇ ಸ್ವಚ್ಛತೆಗೆ ಮಾದರಿಯಾಗಿದ್ದ ಚಿಂತಾಮಣಿಯಲ್ಲಿ ಈಗ ಅಧ್ವಾನ

ರಸ್ತೆ, ಚರಂಡಿಗೆ ಬೀಳುತ್ತಿದೆ ಕಸ

ಎಂ.ರಾಮಕೃಷ್ಣಪ್ಪ Updated:

ಅಕ್ಷರ ಗಾತ್ರ : | |

Prajavani

ಚಿಂತಾಮಣಿ: ಜಿಲ್ಲೆಯಲ್ಲಿ ಚಿಂತಾಮಣಿ ವಾಣಿಜ್ಯ ನಗರವಾಗಿ ಬೆಳೆಯುತ್ತಿದೆ. ನಗರದಲ್ಲಿ 31 ವಾರ್ಡ್‌ಗಳಿವೆ. ಸುಮಾರು 20 ಸಾವಿರ ಮನೆಗಳು ಹಾಗೂ 90 ಸಾವಿರ ಜನಸಂಖ್ಯೆ ಇದೆ. ಹೀಗೆ ಬೆಳೆಯುತ್ತಿರುವ ನಗರದ ಬೀದಿ ಬೀದಿಗಳಲ್ಲಿ  ಕಸ ರಾಶಿ ರಾಶಿಯಾಗಿ ಬೀಳುತ್ತಿದೆ. ರಸ್ತೆ ಬದಿಗಳಷ್ಟೇ ಅಲ್ಲ ಚರಂಡಿಗಳಲ್ಲಿಗಳಿಗೂ ಕಸ ಹೇರಳವಾಗಿ ತುಂಬಿದೆ.

ರಸ್ತೆ, ಚರಂಡಿಗಳ ಇಕ್ಕೆಲಗಳಲ್ಲಿನ ಕಸ ಸ್ವಚ್ಛಮಾಡುವಂತೆ ನಗರಸಭೆಗೆ ನಿತ್ಯ ದೂರುಗಳ ಮಹಾಪೂರವೇ ಬರುತ್ತಿದೆ. ಹೀಗೆ ಜನರು ರಸ್ತೆ, ಚರಂಡಿಗಳಿಗೆ ಕಸವನ್ನು ಎಸೆಯುತ್ತಿರುವುದು ನಗರಸಭೆಗೂ ಸವಾಲಾಗಿದೆ.

10 ವರ್ಷಗಳ ಹಿಂದೆ ಇಲ್ಲಿನ ನಗರಸಭೆ ರಾಜ್ಯದಲ್ಲಿಯೇ ಮಾದರಿ ಆಗಿತ್ತು. ರಾಜ್ಯ ಪರಿಸರ ಮಾಲಿನ್ಯ ಮಂಡಳಿಯಿಂದ ಉತ್ತಮ ನಗರಸಭೆ ಎಂದು ಪ್ರಶಸ್ತಿ ಪಡೆದಿತ್ತು. ‘ನನ್ನ ಚಿಂತಾಮಣಿ ಸ್ವಚ್ಛ’, ‘ಸುಂದರ ಹಾಗೂ ಹಸಿರು ಚಿಂತಾಮಣಿ’ ಎಂಬ ಗುರಿ ಇತ್ತು. ಆದರೆ ಕೇವಲ ಎಂಟತ್ತು ವರ್ಷಗಳಲ್ಲಿ ಇದು ತಿರುವು ಮರುವಾಗಿದೆ. ನಗರದಲ್ಲಿ ಕಸದ ಗುಡ್ಡೆಗಳು ರಾಶಿಯಾಗಿವೆ. ಸ್ವಚ್ಛತೆ ಹಾಳಾಗಿದೆ. ಎಲ್ಲೆಡೆ ಕಸವನ್ನು ಕಾಣಬಹುದು. ಕಸ ನಿರ್ವಹಣೆಯಲ್ಲಿ ನಾಗರಿಕರಿಂದ ಸೂಕ್ತ ಸ್ಪಂದನೆ ಸಿಗುತ್ತಿಲ್ಲ ಎಂದು ನಗರಸಭೆ ಅಧಿಕಾರಿಗಳು ದೂರುತ್ತಿದ್ದಾರೆ.

ನಿತ್ಯ ಮನೆಬಾಗಿಲಿಗೆ ಕಸ ಸಂಗ್ರಹಕ್ಕೆ ‌ಬರುತ್ತಿದ್ದರೂ ಬೀದಿಗಳಿಗೆ ಕಸ ಎಸೆಯುವುದು, ಕಸದ ಬುಟ್ಟಿಗೆ ಕಸಹಾಕದೆ ಪಕ್ಕದ ನಿವೇಶನಗಳು, ರಸ್ತೆ ಬದಿಗೆ ಎಸೆಯುವುದು, ಅಂಗಡಿಗಳಿಂದ ಗುಡಿಸಿ ರಸ್ತೆಗಳಿಗೆ ಹಾಕುವುದು ಮುಂದುವರಿದಿದೆ.

ಇಡೀ ರಾಜ್ಯದಲ್ಲಿ ಪ್ಲಾಸ್ಟಿಕ್ ನಿಷೇಧ ಮಾಡಿ, ಪರಿಣಾಮಕಾರಿಯಾಗಿ ಜಾರಿಗೆ ತಂದ ಮೊದಲ ನಗರಸಭೆ ಚಿಂತಾಮಣಿ. ಪ್ಲಾಸ್ಟಿಕ್ ಮುಕ್ತ ನಗರ ಹಾಗೂ ಸ್ವಚ್ಛತೆಗಾಗಿ ನಾಗರಿಕರಲ್ಲಿ ಅರಿವು ಮೂಡಿಸಲು 31 ವಾರ್ಡ್‍ಗಳಲ್ಲೂ ಜನಜಾಗೃತಿ ಸಭೆಗಳನ್ನು ನಡೆಸಿದೆ. ಶಾಲಾ ಕಾಲೇಜುಗಳ ವಿದ್ಯಾರ್ಥಿಗಳ ಮೂಲಕ ಜನಜಾಗೃತಿ ಮೂಡಿಸಲು ಪ್ಲಾಸ್ಟಿಕ್ ಮತ್ತು ಪರಿಸರ ಸಂರಕ್ಷಣೆಯ ಕುರಿತ ಸ್ಪರ್ಧೆಗಳನ್ನು ಆಯೋಜಿಲಾಗಿತ್ತು. ಆದರೆ ಇತ್ತೀಚೆಗೆ ಎಲ್ಲವೂ ಮಾಯವಾಗಿವೆ.

ಚಿಂತಾಮಣಿಯಲ್ಲಿ ಸ್ತ್ರೀಶಕ್ತಿ ಸಂಘಗಳ ಸದಸ್ಯರು ನಗರದ ಕಸ ಸಂಗ್ರಹಿಸುವರು. 31 ವಾರ್ಡ್‌ಗಳ ಮನೆ ಮನೆಗೂ ತೆರಳಿ ಕಸಸಂಗ್ರಹಣೆ ಮಾಡುವರು. ಅವರಿಗೆ ನಗರಸಭೆಯಿಂದ ತಳ್ಳುವ ಗಾಡಿಗಳನ್ನು ನೀಡಲಾಗಿದೆ. ಜತೆಗೆ 11 ಟಿಪ್ಪರ್ ಗಾಡಿಗಳು ಹಾಗೂ 4 ಇ–ರಿಕ್ಷಾಗಳಲ್ಲಿ ಕಸ ಸಂಗ್ರಹಿಸಲಾಗುತ್ತದೆ.

ಸಂಗ್ರಹವಾದ ಕಸದಲ್ಲಿ ಹಸಿ ಕಸವನ್ನು ದೊಡ್ಡ ವಾಹನಗಳ ಮೂಲಕ ನಗರದಿಂದ 5 ಕಿ.ಮೀ ದೂರದಲ್ಲಿರುವ ಚೇಳೂರು ರಸ್ತೆಯ ಕನಿಶೆಟ್ಟಿಹಳ್ಳಿ ಘನತ್ಯಾಜ್ಯ ಸಂಸ್ಕರಣ ಘಟಕಕ್ಕೆ ಸಾಗಿಸಲಾಗುತ್ತದೆ. ಒಣಕಸವನ್ನು ಫಿಲ್ಟರ್ ಬೆಡ್ ಸ್ಥಳದಲ್ಲಿರುವ ಒಣ ತ್ಯಾಜ್ಯ ಸಂಗ್ರಹಣಾ ಕೇಂದ್ರಕ್ಕೆ ಸಾಗಿಸಲಾಗುತ್ತದೆ.

ಪ್ರತಿ ಮನೆಗೆ ಹಸಿರು ಮತ್ತು ನೀಲಿ ಬಣ್ಣದ ಪ್ಲಾಸ್ಟಿಕ್ ಕಸದ ಬುಟ್ಟಿಗಳನ್ನು ವಿತರಿಸಲಾಗಿದೆ. ಹಸಿಕಸವನ್ನು ಹಸಿರು ಹಾಗೂ ಒಣಕಸವನ್ನು ನೀಲಿ ಬುಟ್ಟಿಯಲ್ಲಿ ಸಂಗ್ರಹಿಸಿ ಕೊಡಬೇಕು. ಯಾವುದೇ ಕಾರಣಕ್ಕೂ ಕಸವನ್ನು ಒಟ್ಟುಗೂಡಿಸಬಾರದು. ಹಸಿಕಸ, ಒಣಕಸ ಹಾಗೂ ಅಪಾಯಕಾರಿ ಕಸವನ್ನು ಕಡ್ಡಾಯವಾಗಿ ವಿಂಗಡಿಸಿ ನೀಡಬೇಕು. ಆದರೆ ಬಹುತೇಕ ಮನೆಗಳವರು ಕಸ  ವಿಂಗಡಿಸಿ ನೀಡುವುದೇ ಇಲ್ಲ. ಕಸ ಸಂಗ್ರಹಿಸುವವರು ಈ ಬಗ್ಗೆ ಎಷ್ಟೋ ಸಲ ತಿಳಿ ಹೇಳಿದರೂ ಪ್ರಯೋಜನವಾಗುತ್ತಿಲ್ಲ.

ಸ್ತ್ರೀಶಕ್ತಿ ಸಂಘ‌ಗಳ ಸದಸ್ಯರಿಗೆ ನಗರಸಭೆಯಿಂದ ಯಾವುದೇ ಸಂಭಾವನೆ ನೀಡುವುದಿಲ್ಲ. ನಿರ್ವಹಣಾ ಶುಲ್ಕ ಎಂದು ಪ್ರತಿ ಮನೆಯಿಂದ ಮಾಸಿಕ ₹ 30 ಪಡೆಯುತ್ತಾರೆ.  ಒಣಕಸವನ್ನು ಅವರೇ ಮಾರಾಟ ಮಾಡುವರು. ಪ್ರತಿದಿನ ನಗರದಲ್ಲಿ 25ರಿಂದ 26 ಟನ್ ಕಸ ಸಂಗ್ರಹ ಆಗುತ್ತದೆ. ಅದರಲ್ಲಿ 13 ರಿಂದ 14 ಟನ್ ಹಸಿ ಕಸ ದೊರೆಯುತ್ತದೆ.

ಕಸವನ್ನು ಎಲ್ಲೆಂದರಲ್ಲಿ ಎಸೆಯಬಾರದು. ಮನೆಗಳ ಬಳಿಗೆ ಬರುವ ಸಂಗ್ರಹಕಾರರಿಗೆ ನೀಡಬೇಕು. ಕಸವನ್ನು ಕಡ್ಡಾಯವಾಗಿ ಬೇರ್ಪಡಿಸಬೇಕು ಎಂದು ನಗರಸಭೆಯಿಂದ ಪ್ರಚಾರ, ಜಾಗೃತಿ ಮೂಡಿಸಲಾಗಿದೆ. ಆದರೂ ನಾಗರಿಕರು ಸಮರ್ಪಕವಾಗಿ ಸ್ಪಂದಿಸುತ್ತಿಲ್ಲ. ಕಸವನ್ನು ರಸ್ತೆಬದಿಯಲ್ಲಿ, ಚರಂಡಿಗಳಿಗೆ ಹಾಕುವುದು ಮುಂದುವರಿದಿದೆ. ಹಸಿಕಸ ಮತ್ತು ಒಣಕಸವನ್ನಾಗಿ ಬೇರ್ಪಡಿಸುವಲ್ಲಿ ಶೇ 25 ಕುಟುಂಬಗಳು ಮಾತ್ರ ಸ್ಪಂದಿಸುತ್ತಾರೆ ಎಂದು ಅಧಿಕಾರಿಗಳು ಹೇಳುತ್ತಾರೆ.

ನಗರದಲ್ಲಿ ಸ್ವಚ್ಛತೆ, ವಾಹನಗಳ ಚಾಲಕರು ಸೇರಿದಂತೆ 105 ಮಂದಿ ಪೌರಕಾರ್ಮಿಕರಿದ್ದಾರೆ. ನಗರದ ಜನಸಂಖ್ಯೆಗೆ ಹೋಲಿಸಿದರೆ ಪೌರಕಾರ್ಮಿಕರ ಸಂಖ್ಯೆ ಏನೇನೂ ಸಾಲದು. ಇನ್ನೂ ಕನಿಷ್ಠ 50 ಮಂದಿಯಾದರೂ ಬೇಕು. ಪೌರಕಾರ್ಮಿಕರಿಗೆ ಗ್ಲೌಸ್, ಬೂಟು, ಏಪ್ರಾನ್, ಮಾಸ್ಕ್, ಸ್ಯಾನಿಟೈಸರ್, ಫೇಸ್ ಶೀಲ್ಡ್ ನೀಡಲಾಗಿದೆ. ನಿತ್ಯ ಬೆಳಿಗ್ಗೆ ತಿಂಡಿಯನ್ನು ಉಚಿತವಾಗಿ ನೀಡಲಾಗುತ್ತದೆ. ಕೊರೊನಾ ಹಿನ್ನೆಲೆಯಲ್ಲಿ ವ್ಯಾಕ್ಸಿನ್ ಹಾಕಿಸಲಾಗಿದೆ ಎಂದು ಪರಿಸರ ಎಂಜಿನಿಯರ್ ಉಮಾಶಂಕರ್ ತಿಳಿಸುವರು.

ಚಿಂತಾಮಣಿ-ಚೇಳೂರು ರಸ್ತೆಯ 10 ಎಕರೆಯಲ್ಲಿ ಘನತ್ಯಾಜ್ಯ ವಿಲೇವಾರಿ ಘಟಕವನ್ನು 15 ವರ್ಷಗಳ ಹಿಂದೆ ಸ್ಥಾಪಿಸಲಾಗಿದೆ.  ಭವಿಷ್ಯದಲ್ಲಿ ನಗರದ ಬೆಳವಣಿಗೆ ದೃಷ್ಟಿಯಲ್ಲಿಟ್ಟುಕೊಂಡು ಸ್ಥಳವನ್ನು ಗುರುತಿಸಿ ಘಟಕ ನಿರ್ಮಿಸಲಾಗಿದೆ. ಘಟಕಕ್ಕೆ ಸುತ್ತಲೂ ಎತ್ತರವಾದ ಆವರಣವನ್ನು ನಿರ್ಮಾಣ ಮಾಡಲಾಗಿದೆ. ಹಸಿಕಸವನ್ನು ಘನತ್ರಾಜ್ಯ ವಿಲೇವಾರಿ ಘಟಕದಲ್ಲಿ ಗೊಬ್ಬರ ಮಾಡಲಾಗುತ್ತದೆ ಎಂದು ನಗರಸಭೆಯ ಅಧಿಕಾರಿಗಳು ತಿಳಿಸುವರು.

ಕಸ ನಿರ್ವಹಣೆಯನ್ನು ನಗರಸಭೆಯಿಂದಲೇ ಮಾಡಬೇಕು. ಸರ್ಕಾರದಿಂದ ಯಾವುದೇ ಅನುದಾನ ದೊರೆಯುವುದಿಲ್ಲ. ಹೊಸ ಘಟಕ ಮಂಜೂರಾದರೆ ಮಾತ್ರ ಅನುದಾನ ನೀಡುತ್ತದೆ. ನಗರದ ಫಿಲ್ಟರ್ ಬೆಡ್ ಪ್ರದೇಶದಲ್ಲಿರುವ ನಗರಸಭೆಯ ಒಣತ್ಯಾಜ್ಯ  ಘಟಕದಲ್ಲಿ ಒಣಕಸ ಸಂಸ್ಕರಣೆ ಮಾಡಿ ಮಾರಾಟ ಮಾಡಲಾಗುತ್ತದೆ. ಆಸ್ಪತ್ರೆಗಳ ಸಾಮಾನ್ಯ ಕಸವನ್ನು ನಗರಸಭೆ ಸಂಗ್ರಹಿಸುತ್ತದೆ. ಬಯೊಮೆಡಿಕಲ್ ತ್ಯಾಜ್ಯವನ್ನು ಆಸ್ಪತ್ರೆಯವರೇ ಸಂಗ್ರಹಣೆ ಮಾಡಿಕೊಳ್ಳುತ್ತಾರೆ.

8ನೇ ವಾರ್ಡ್‌ನ ರಾಜೀವನಗರದಲ್ಲಿ ನಾಗರಿಕರು ಸಂಘಟಿತರಾಗಿ ‘ಸಿಟಿಜನ್ ಫೋರಂ’ ಹೆಸರಿನಲ್ಲಿ ವೇದಿಕೆ ಸ್ಥಾಪಿಸಿದ್ದಾರೆ. ವೇದಿಕೆ ಸದಸ್ಯರು ಪ್ರತಿ ತಿಂಗಳ ಮೊದಲ ಭಾನುವಾರ ಅವರ ವಾರ್ಡ್‌ನಲ್ಲಿ ಸ್ವಚ್ಛತಾ ಕಾರ್ಯಕ್ರಮ ಹಮ್ಮಿಕೊಳ್ಳುವರು. ಈ ಕಾರ್ಯ ಮಾದರಿಯಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು