ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಚಿಕ್ಕಬಳ್ಳಾಪುರ | ರಸ್ತೆ ಬದಿಯ ಗಿಡ, ಮರಕ್ಕೆ ಬೆಂಕಿ

ದುಷ್ಕರ್ಮಿಗಳ ಕೃತ್ಯಕ್ಕೆ ಪರಿಸರ ಪ್ರೇಮಿಗಳ ಬೇಸರ
Published 1 ಏಪ್ರಿಲ್ 2024, 6:24 IST
Last Updated 1 ಏಪ್ರಿಲ್ 2024, 6:24 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಬೇಸಿಗೆ ಆರಂಭವಾಗುತ್ತಿದ್ದಂತೆ ಬೆಟ್ಟ, ಗುಡ್ಡಗಳಿಗೆ ದುಷ್ಕರ್ಮಿಗಳು ಬೆಂಕಿ ಹಚ್ಚುವರು. ಇದರ ಜೊತೆಗೆ ಈಗ ನಗರದ ಹೊರವಲಯದ ಹಾಗೂ ಗ್ರಾಮೀಣ ಭಾಗಗಳ ರಸ್ತೆಗಳ ಎರಡೂ ಬದಿಗಳಲ್ಲಿ ನೆಟ್ಟಿರುವ ಗಿಡಗಳು ಮತ್ತು ಮರಗಳು ಸಹ ಬೆಂಕಿಗೆ ಆಹುತಿ ಆಗುತ್ತಿವೆ. 

ರಸ್ತೆ ಬದಿಗಳಲ್ಲಿ ಅರಣ್ಯ ಇಲಾಖೆ ಮತ್ತು ಪರಿಸರ ಪ್ರೇಮಿಗಳು ಗಿಡಗಳನ್ನು ನೆಟ್ಟಿದ್ದಾರೆ. ಬೇಸಿಗೆಯ ಈ ಬಿರು ಬಿಸಿಲಿನಲ್ಲಿಯೂ ಕೆಲವರು ತಮ್ಮ ಕೈಯಲ್ಲಿ ಸಾಧ್ಯವಾದಷ್ಟು ಗಿಡಗಳಿಗೆ ನೀರುಣಿಸುತ್ತಿದ್ದಾರೆ. ಈ ಬೆಳವಣಿಗೆಗಳು ಒಂದು ಕಡೆಯಾದರೆ ಬೆಳೆದು ನಿಂತಿರುವ ಗಿಡಗಳು ಮತ್ತು ಮರಗಳನ್ನೇ ಸುಡಲಾಗುತ್ತಿದೆ. 

ಇದು ಇಂದು ನೆನ್ನೆಯ ಪ್ರಕ್ರಿಯೆಯಲ್ಲಿ ಪ್ರತಿ ವರ್ಷದ ಬೇಸಿಗೆಯ ದಿನಗಳಲ್ಲಿ ಕಿಡಿಗೇಡಿಗಳು ಈ ಕೃತ್ಯ ಎಸಗುವರು. ಇದು ಪ್ರಜ್ಞಾವಂತರದಲ್ಲಿ ಬೇಸರ ಮತ್ತು ಅಸಮಾಧಾನಕ್ಕೂ ಕಾರಣವಾಗಿದೆ.  

ಚಿಕ್ಕಬಳ್ಳಾಪುರ ಹೊರವಲಯದ ಆಗಲಗುರ್ಕಿ ಮೇಲ್ಸೇತುವೆ ಅಕ್ಕಪಕ್ಕ ಪರಿಸರ ಪ್ರೇಮಿ ಆಟೊ ಸುಭಾನ್  ಹಲವು ವರ್ಷಗಳಿಂದ ಗಿಡಗಳನ್ನು ನೆಟ್ಟಿದ್ದರು. ಈ ಗಿಡಗಳಿಗೆ ನೀರು ಸಹ ಹಾಕುತ್ತಿದ್ದರು. ಆದರೆ ಇತ್ತೀಚೆಗೆ ಈ ಗಿಡಗಳಿಗೆ ಬೆಂಕಿ ಹಚ್ಚಲಾಗಿದೆ.

ಒಂದು ವರ್ಷಗಳಿಂದ ಈ ಗಿಡಗಳಿಗೆ ಅವರು ರಸ್ತೆ ಬದಿ ಬೆಳೆಸಿದ್ದರು. ಕಳೆದ ವರ್ಷವೂ ಇದೇ ರೀತಿಯಲ್ಲಿ ಕಿಡಿಗೇಡಿಗಳು ನೆಟ್ಟಿದ್ದ ಗಿಡಗಳಿಗೆ ಬೆಂಕಿ ಹಚ್ಚಿದ್ದರು. ಆ ಗಿಡಗಳು ನಾಶವಾಗಿದ್ದವು. ಈಗ ಅದೇ ಸ್ಥಳದಲ್ಲಿ ಈಗಲೂ ಇಂತಹ ಕೃತ್ಯಗಳು ನಡೆದಿವೆ. 

ನಗರ ಹೊರವಲಯದ ಶಿಡ್ಲಘಟ್ಟ ಮೇಲ್ಸೇತುವೆ ಕೆಳಗೆ ಮಂಚನಬಲೆ ಕಡೆಗೆ ಸಾಗುವ ಬೈಪಾಸ್ ರಸ್ತೆಯಲ್ಲಿನ ಬೆಳೆದಿದ್ದ ಮರಗಳ ಮಾರಣ ಹೋಮವಾಗಿದೆ. ಇಲ್ಲಿ ಬೆಳೆದಿದ್ದ ಆಳೆತ್ತರದ ಮರಗಳ ಸುತ್ತ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದಾರೆ. ನಂತರ ಆ ಮರಗಳನ್ನು ಕತ್ತರಿಸಿದ್ದಾರೆ. ಕೆಲವು ಕಡೆಗಳಲ್ಲಿ ಬೇಸಿಗೆಯ ಈ ದಿನಗಳಲ್ಲಿ ಗಿಡ, ಮರಗಳು ಒಣಗುತ್ತಿವೆ. ಹೀಗೆ ಒಣಗಿದ ಮರಗಳನ್ನು ಸೌದೆಗಾಗಿ ಕಡಿಯಲಾಗುತ್ತಿದೆ.  ತಾಲ್ಲೂಕಿನ ಗ್ರಾಮೀಣ ಭಾಗಗಳಲ್ಲಿಯೂ ಇಂತಹ ಕೃತ್ಯಗಳು ಕಂಡು ಬರುತ್ತಿವೆ. 

ಕೆಲವು ವರ್ಷಗಳ ಹಿಂದೆ ನಗರ ಹೊರವಲಯದ ಶಿಡ್ಲಘಟ್ಟ ರಸ್ತೆಯಲ್ಲಿರುವ ಹೆದ್ದಾರಿಮೇಲ್ಸೇತುವೆ ಇಕ್ಕೆಲ ಸ್ವಚ್ಛತೆ ನೆಪದಲ್ಲಿ 45 ಗಿಡಗಳಿಗೆ ಬೆಂಕಿ ಇಡಲಾಗಿತ್ತು. ಇದಕ್ಕೆ ನಾಗರಿಕರು ತೀವ್ರ ಅಸಮಾಧಾನ ಸಹ ವ್ಯಕ್ತಪಡಿಸಿದ್ದರು. 

ಪ್ರತಿ ವೇದಿಕೆಯಲ್ಲಿ ‘ಗಿಡಮರ ಬೆಳೆಸಿ, ಪರಿಸರ ಉಳಿಸಿ’ ಎಂಬ ಭಾಷಣ ಮಾಡಲಾಗುತ್ತದೆ. ಆದರೆ ಇದೇ ದಾರಿಯಲ್ಲಿ ನಿತ್ಯ ಜಿಲ್ಲಾಡಳಿತ ಭವನಕ್ಕೆ ಹಿರಿಯ ಅಧಿಕಾರಿಗಳು ಸಾಗುತ್ತಾರೆ. ಕಣ್ಣೆದುರೆ ಕಮರಿ ಹೋದ ಗಿಡಗಳನ್ನು ಕಂಡರೂ ಕಾಣದಂತೆ ಜಾಣ ಕುರುಡುತನ ಪ್ರದರ್ಶಿಸುತ್ತಿದ್ದಾರೆ. ಯಾರೊಬ್ಬರೂ ಪರಿಸರ ಕಾಳಜಿ ಕುರಿತು ಧ್ವನಿ ಎತ್ತುತ್ತಿಲ್ಲ ಎಂಬ ಸುಭಾನ್ ಬೇಸರ ವ್ಯಕ್ತಪಡಿಸುವರು.

ಗಿಡ ಬೆಳೆಸಿದವರಿಗೆ ನೋವು

ಸರ್ವೀಸ್‌ ರಸ್ತೆ ಪಕ್ಕದಲ್ಲಿ ನೆಟ್ಟಿರುವ ಗಿಡಗಳು ಪದೇ ಪದೇ ಬೆಂಕಿಗೆ ಆಹುತಿಯಾಗುತ್ತಿವೆ. ಆದರೂ ಸಂಬಂಧಪಟ್ಟವರು ಎಚ್ಚೆತ್ತುಕೊಳ್ಳುತ್ತಿಲ್ಲ. ಗಿಡ ಮರಗಳ ರಕ್ಷಣೆಯ ಬಗ್ಗೆ ನಾಮಫಲಕ ಅಳವಡಿಸಬೇಕು ಎಂದು ಆಟೊ ಸುಭಾನ್‌ ಬೇಸರ ವ್ಯಕ್ತಪಡಿಸಿದರು.  ಗಿಡಮರಗಳನ್ನು ಉಳಿಸಿ ಬೆಳೆಸಿ ಎನ್ನುವುದು ಕೇವಲ ಭಾಷಣಗಳಿಗೆ ಸೀಮಿತವಾಗಿದೆ. ಗಿಡಗಳನ್ನು ನೆಟ್ಟು ಬೆಳೆಸಿದವರಿಗೆ ಈ ಕೃತ್ಯದಿಂದ ಎಷ್ಟು ಬೇಸರವಾಗುತ್ತದೆ ಎನ್ನುವುದು ನಮಗೆ ಗೊತ್ತು ಎಂದರು. *** ಗಿಡ ಮರ ರಕ್ಷಣೆ ನಮ್ಮ ಹೊಣೆ ಬೇಸಿಗೆಯ ಈ ದಿನಗಳಲ್ಲಿ ಬೆಂಕಿ ಹಚ್ಚುವ ಕೆಲಸವನ್ನು ಯಾರೂ ಮಾಡಬಾರದು. ವಾತಾವರಣ ಕಲುಷಿತವಾಗುವ ಜೊತೆಗೆ ಬಿಸಿಯೂ ಹೆಚ್ಚುತ್ತದೆ. ಗಿಡ ಮರಗಳನ್ನು ರಕ್ಷಿಸಿದರೆ ಅವುಗಳು ನಮ್ಮನ್ನು ರಕ್ಷಿಸುತ್ತವೆ. ಮೊದಲು ಜನರು ಪ್ರಜ್ಞಾವಂತಿಕೆ ಬೆಳೆಸಿಕೊಳ್ಳಬೇಕು ಎಂದು ಕಸಾಪ ತಾಲ್ಲೂಕು ಅಧ್ಯಕ್ಷ ಯಲುವಳ್ಳಿ ಸೊಣ್ಣೇಗೌಡ ತಿಳಿಸುವರು.

ಪರಿಸರ ಇಲಾಖೆ ಸಮೀಪದಲ್ಲಿಯೇ ಬೆಂಕಿ!

ನಗರದ ಎಲ್ಲೆಂದರಲ್ಲಿ ಜನರು ಕಸಕ್ಕೆ ಬೆಂಕಿ ಹಚ್ಚುತ್ತಿದ್ದಾರೆ. ಹೊಸ ಮನೆಗಳ ನಿರ್ಮಾಣದ ವೇಳೆ ಖಾಲಿ ಪ್ಲಾಸ್ಟಿಕ್ ಚೀಲಗಳು ಕಸಕ್ಕೆ ಬೆಂಕಿ ಹಚ್ಚಲಾಗುತ್ತದೆ. ಖಾಲಿ ನಿವೇಶನಗಳ ಸ್ವಚ್ಛತೆ ನೆಪದಲ್ಲಿ ನಿವೇಶನಗಳ ಮಾಲೀಕರು ಸಹ ಬೆಂಕಿ ಹಚ್ಚುವರು.  ನಗರದ ಎಚ್‌.ಎಸ್.ಗಾರ್ಡನ್‌ನ ಪರಿಸರ ಇಲಾಖೆ ಸಮೀಪದ ಖಾಲಿ ನಿವೇಶನದಲ್ಲಿ ಭಾನುವಾರ ಸಂಜೆ ಕಸಕ್ಕೆ ಬೆಂಕಿ ಹಚ್ಚಲಾಗಿದೆ. ಸುತ್ತಲಿನ ನಾಗರಿಕರು ಹೊಗೆ ಕುಡಿಯುವಂತೆ ಆಗಿದೆ. ಬೆಂಕಿ ಹಚ್ಚುತ್ತಿರುವ ಚಿತ್ರಗಳನ್ನು ತೆಗೆಯಲು ಮುಂದಾದ ಪ್ರಜಾವಾಣಿ ಛಾಯಾಗ್ರಹಕರ ವಿರುದ್ಧವೇ ಮಾಲೀಕರು ಗದರಿದ್ದಾರೆ.

ಚಿಕ್ಕಬಳ್ಳಾಪುದ ಅಗಲಗುರ್ಕಿ ಮೇಲ್ಸೇತುವೆ ಬಳಿ ಗಿಡಗಳಿಗೆ ಬೆಂಕಿ ಹಚ್ಚಿರುವುದು
ಚಿಕ್ಕಬಳ್ಳಾಪುದ ಅಗಲಗುರ್ಕಿ ಮೇಲ್ಸೇತುವೆ ಬಳಿ ಗಿಡಗಳಿಗೆ ಬೆಂಕಿ ಹಚ್ಚಿರುವುದು
ಎಚ್‌.ಎಸ್.ಗಾರ್ಡನ್‌ನ ಖಾಲಿ ನಿವೇಶನದಲ್ಲಿ ಕಸಕ್ಕೆ ಬೆಂಕಿ ಹಚ್ಚಿರುವುದು
ಎಚ್‌.ಎಸ್.ಗಾರ್ಡನ್‌ನ ಖಾಲಿ ನಿವೇಶನದಲ್ಲಿ ಕಸಕ್ಕೆ ಬೆಂಕಿ ಹಚ್ಚಿರುವುದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT