ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದರೋಡೆ ನಾಟಕ; 6 ಜನರ ಬಂಧನ

ಫೌಲ್ಟ್ರಿ ಕಂಪೆನಿಗೆ ಸೇರಿದ ಹಣ ಲಪಟಾಯಿಸಿದ ಖದೀಮರು, ಆರೋಪಿಗಳಿಂದ ₹7.60 ಲಕ್ಷ ನಗದು ವಶ
Last Updated 26 ಜುಲೈ 2020, 11:04 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಫೌಲ್ಟ್ರಿ ಕಂಪೆನಿಗೆ ಸೇರಿದ ಹಣವನ್ನು ಲಪಟಾಯಿಸುವ ಉದ್ದೇಶದಿಂದ ದರೋಡೆ ನಾಟಕವಾಡಿದ್ದ ದೇವನಹಳ್ಳಿ ಮೂಲದ ಲೋಟಸ್‌ ಫಾರ್ಮ್ಸ್ ಕಂಪೆನಿಯ ಲೈನ್‌ ಸೂಪರ್‌ವೈಸರ್‌ ಸೇರಿದಂತೆ ಆರು ಆರೋಪಿಗಳನ್ನು ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಗುಡಿಬಂಡೆ ತಾಲ್ಲೂಕಿನ ಎಲ್ಲೋಡು ಗ್ರಾಮದ ನಿವಾಸಿ, ಸೂಪರ್‌ವೈಸರ್‌ ಉದಯಕುಮಾರ್ ಮತ್ತು ಗೌರಿಬಿದನೂರು ತಾಲ್ಲೂಕಿನ ಸಾಗಾನಹಳ್ಳಿಯ ಪ್ರಶಾಂತ್, ನರಸಿಂಹ ಮೂರ್ತಿ, ಪೃಥ್ವಿರಾಜ್‌, ಕಿರಣ್, ನವೀನ್ ಕುಮಾರ್ ಎಂಬುವರನ್ನು ಬಂಧಿಸಿ‌, ಆರೋಪಿಗಳಿಂದ ಪೊಲೀಸರು ₹7.60 ಲಕ್ಷ ನಗದು, ಒಂದು ಇನ್ನೋವಾ ಕಾರು, ಒಂದು ಬೈಕ್, ಒಂದು ಚಾಕು, ನಾಲ್ಕು ಮೊಬೈಲ್‌ಗಳನ್ನು ವಶಪಡಿಸಿಕೊಂಡಿದ್ದಾರೆ.

ಜುಲೈ 21ರಂದು ಗ್ರಾಮಾಂತರ ಠಾಣೆಗೆ ದೂರೊಂದು ನೀಡಿದ್ದ ಲೈನ್‌ ಸೂಪರ್ ವೈಸರ್ ಉದಯಕುಮಾರ್, ಸಹೋದ್ಯೋಗಿ ಮಂಜುನಾಥ ಜತೆ ಸೇರಿ ಚಿಕ್ಕಬಳ್ಳಾಪುರ ತಾಲ್ಲೂಕಿನ ಆನೆಮಡಗು ಕೊತ್ತೂರು ರಸ್ತೆಯ ಹರೀಶ್ ಎಂಬುವರ ಕೋಳಿ ಫಾರಂ ಹೋಗಿ ಅಲ್ಲಿದ್ದ ಕೋಳಿಗಳನ್ನು ವ್ಯಾಪಾರಿಗಳಿಗೆ ಮಾರಾಟ ಮಾಡಿ ₹7.91 ಲಕ್ಷ ಸಂಗ್ರಹಿಸಿದ್ದೆವು.

ಆ ಹಣವನ್ನು ತೆಗೆದುಕೊಂಡು ಹೋಗುವ ವೇಳೆ ನಾಲ್ವರು ಅಪರಿಚಿತರು ಇವರ ಬೈಕ್ ಅಡ್ಡಗಟ್ಟಿ ಚಾಕು ತೋರಿಸಿ ಮದ್ಯದ ಬಾಟಲುಗಳಿಂದ ಹಲ್ಲೆ ಮಾಡಿ ಹಣ ದೋಚಿ‌ ಪರಾರಿಯಾಗಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದರು.

ಪ್ರಕರಣವನ್ನು ಕೈಗೆತ್ತಿಕೊಂಡು ತನಿಖಾಧಿಕಾರಿಗಳಿಗೆ ಆರೋಪಿಗಳ ವಿಚಾರಣೆಯಲ್ಲಿ ದೂರುದಾರ ಉದಯಕುಮಾರನೇ ಪ್ರಕರಣದ ಸೂತ್ರಧಾರ ಎಂದು ತಿಳಿದು ಬಂದಿತ್ತು.

ಕಂಪೆನಿಯ ಹಣ ದೋಚುವ ಉದ್ದೇಶದಿಂದ ಉದಯಕುಮಾರ್ ಇತರೆ ಆರೋಪಿಗಳೊಂದಿಗೆ ಸೇರಿ ಸಂಚು ರೂಪಿಸಿ, ತಮ್ಮ ಚಲನವಲನದ ಬಗ್ಗೆ ಮಾಹಿತಿ ಕೂಡ ನೀಡಿದ್ದು ತನಿಖೆಯಲ್ಲಿ ತಿಳಿದು ಬಂದಿದೆ ಎಂದು ಪೊಲೀಸರು ತಿಳಿಸಿದರು.

ಐದು ದಿನಗಳಲ್ಲಿ ಆರೋಪಿಗಳನ್ನು ಪತ್ತೆ ಮಾಡಿ ಬಂಧಿಸಿದ ಅಧಿಕಾರಿಗಳು, ಸಿಬ್ಬಂದಿ ಎಸ್ಪಿ ಜಿ.ಕೆ.ಮಿಥುನ್ ಕುಮಾರ್ ಪ್ರಶಂಸೆ ವ್ಯಕ್ತಪಡಿಸಿ, ಬಹುಮಾನ ಘೋಷಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT