ಗುರುವಾರ , ಏಪ್ರಿಲ್ 15, 2021
29 °C
ಜಿಲ್ಲೆಯ ಪಾಲಿಗೆ ದೊರೆಯದ ಮಹತ್ವದ ಯೋಜನೆಗಳು l ಪ್ರವಾಸೋದ್ಯಮ ಅಭಿವೃದ್ಧಿಗೆ ಪ್ರಸ್ತಾಪ

ಹೊಸೂರು: 200 ಎಕರೆಯಲ್ಲಿ ವಿಜ್ಞಾನ ಕೇಂದ್ರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಕ್ಕಬಳ್ಳಾಪುರ: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸೋಮವಾರ ಮಂಡಿಸಿದ ರಾಜ್ಯ ಬಜೆಟ್‌ನಲ್ಲಿ ಜಿಲ್ಲೆಯ ಜನರ ಪಾಲಿಗೆ ಮಹತ್ವದ ಕೊಡುಗೆಗಳನ್ನೇನೂ ನೀಡಿಲ್ಲ. ನಿರೀಕ್ಷೆಯಲ್ಲಿದ್ದ ಹಳೇ ಯೋಜನೆಗಳ ಬಗ್ಗೆ ಪ್ರಸ್ತಾಪವೂ ‌‌ಇಲ್ಲ. ಜಿಲ್ಲೆಗೆ ನೀರಾವರಿ ಯೋಜನೆಗಳಿಗಿಂತ ಪ್ರವಾಸೋದ್ಯಮ ಅಭಿವೃದ್ಧಿಯ ವಿಚಾರ ಪ್ರಮುಖವಾಗಿ ಪ್ರಸ್ತಾಪವಾಗಿದೆ.

ಬೆಂಗಳೂರು ನಗರ, ಗ್ರಾಮಾಂತರ, ತುಮಕೂರು ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಗಳ 234 ಕೆರೆಗಳಿಗೆ ಬೆಂಗಳೂರು ನಗರದ ವೃಷಭಾವತಿ ಕಣಿವೆಯಿಂದ ದ್ವಿತೀಯ ಹಂತಕ್ಕೆ ಸಂಸ್ಕರಿಸಿದ 308 ಎಂಎಲ್‌ಡಿ ನೀರು ತುಂಬಿಸುವ ₹ 500 ಕೋಟಿ ವೆಚ್ಚದ ಯೋಜನೆ ಘೋಷಿಸಲಾಗಿದೆ. ಈ ಬಗ್ಗೆ ಜನರಲ್ಲಿ ಸಣ್ಣ ಪ್ರಮಾಣದಲ್ಲಿ ನಿರೀಕ್ಷೆಗಳು ಗರಿಗೆದರಿವೆ. ಜಿಲ್ಲೆಯ ಎಷ್ಟು ಕೆರೆಗಳಿಗೆ ನೀರು ಹರಿಯುತ್ತದೆ ಎನ್ನುವ ಕುತೂಹಲ ಗರಿಗೆದರಿದೆ. ಇದನ್ನು ಹೊರತುಪಡಿಸಿ ನೀರಾವರಿ ಯೋಜನೆಗಳ ಬಗ್ಗೆ ಪ್ರಸ್ತಾಪವಾಗಿಲ್ಲ. ಇದು ಜನರನ್ನು ನಿರಾಶೆಗೊಳಿಸಿದೆ.

ಪ್ರವಾಸೋದ್ಯಮಕ್ಕೆ ಉತ್ತೇಜನ: ಚಿಕ್ಕಬಳ್ಳಾಪುರವು ಬೆಂಗಳೂರಿಗೆ ಸಮೀಪವಿದೆ. ನಂದಿಗಿರಿಧಾಮ, ಸ್ಕಂದಗಿರಿ, ಆವಲಬೆಟ್ಟ ಹೀಗೆ ವಿವಿಧ ಬೆಟ್ಟಗಳು, ಗಿರಿಧಾಮಗಳು ಇರುವುದರಿಂದ ಪ್ರವಾಸೋದ್ಯಮ ಅಭಿವೃದ್ಧಿಗೆ ವಿಪುಲ ಅವಕಾಶಗಳು ಇವೆ. ಈ ದೃಷ್ಟಿಯಲ್ಲಿ ನೋಡುವುದಾರೆ ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ಧಿಗೆ ಪೂರಕವಾದ ಅಂಶಗಳು ಬಜೆಟ್‌ನಲ್ಲಿವೆ. 

ನಂದಿಗಿರಿಧಾಮದ ನಿರ್ವಹಣೆಯನ್ನು ಪ್ರವಾಸೋದ್ಯಮ ಇಲಾಖೆಗೆ ಹಸ್ತಾಂತರಿಸಲಾಗುವುದು ಎಂದು ಬಜೆಟ್‌ನಲ್ಲಿ ಪ್ರಕಟಿಸಲಾಗಿದೆ. ಅಲ್ಲದೆ ಪ್ರವಾಸೋದ್ಯಮ ಅಭಿವೃದ್ಧಿಗೆ ಒಟ್ಟಾರೆ ₹ 500 ಕೋಟಿ ಮೀಸಲಿಡಲಾಗಿದೆ. ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದಿಂದ ಬೆಂಗಳೂರು ಸುತ್ತಮುತ್ತಲಿನ ಪ್ರವಾಸಿ ತಾಣಗಳನ್ನು ಒಳಗೊಂಡ ‘ವಾರಾಂತ್ಯ ಪ್ರವಾಸಿ ವೃತ್ತ’ ಅಭಿವೃದ್ಧಿಯ ಪ್ರಸ್ತಾಪವಿದೆ.

ಪ್ರವಾಸೋದ್ಯಮದ ವಿಚಾರದಲ್ಲಿ ಬೆಂಗಳೂರಿನ ಸುತ್ತಮುತ್ತಲಿನ ಜಿಲ್ಲೆಗಳು ಎಂದರೆ ಚಿಕ್ಕಬಳ್ಳಾಪುರವೂ ಪ್ರಮುಖವಾಗುತ್ತದೆ. ಕೇವಲ 60 ಕಿ.ಮೀ ದೂರದ ಚಿಕ್ಕಬಳ್ಳಾಪುರ ಸುತ್ತಮುತ್ತಲೇ ಪ್ರವಾಸೋದ್ಯಮ ಬೆಳವಣಿಗೆಗೆ ನಾನಾ ಅವಕಾಶಗಳು ಇವೆ. ಪ್ರವಾಸೋದ್ಯಮ ಬೆಳವಣಿಗೆ ಸ್ಥಳೀಯರಿಗೆ ಉದ್ಯೋಗ ಸೇರಿದಂತೆ ಹಲವು ಅವಕಾಶಗಳನ್ನು ತೆರೆದಿಡುತ್ತದೆ. ಎಚ್.ನರಸಿಂಹಯ್ಯ ಅವರ ಗೌರವಾರ್ಥ ಗೌರಿಬಿದನೂರು ತಾಲ್ಲೂಕಿನ ಹೊಸೂರಿನಲ್ಲಿ 200 ಎಕರೆಯಲ್ಲಿ ಅಂತರರಾಷ್ಟ್ರೀಯ ವಿಜ್ಞಾನ ಕೇಂದ್ರ ನಿರ್ಮಿಸುವುದಾಗಿ ಮುಖ್ಯಮಂತ್ರಿ ಘೋಷಿಸಿದ್ದಾರೆ. ಇದಕ್ಕೆ ₹ 10 ಕೋಟಿ ಅನುದಾನ ಸಹ ಮೀಸಲಿಡಲಾಗಿದೆ.  

ದೇವನಹಳ್ಳಿ, ಚಿಕ್ಕಬಳ್ಳಾಪುರದ ನೆರೆಯ ತಾಲ್ಲೂಕು. ಇಲ್ಲಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ಆ ಸುತ್ತ ಅಭಿವೃದ್ಧಿಗೆ ಪೂರಕವಾಗಿ ಅಂಶಗಳು ಬಜೆಟ್‌ನಲ್ಲಿ ಪ್ರಸ್ತಾಪವಾಗಿದೆ. ಇದರಿಂದ ಸಹಜವಾಗಿ ಚಿಕ್ಕಬಳ್ಳಾಪುರಕ್ಕೂ ಅನುಕೂಲ ವಾಗುತ್ತದೆ ಎನ್ನುವ ನಿರೀಕ್ಷೆ ಇದೆ.

ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪ ಅಂತರರಾಷ್ಟ್ರೀಯ ಮಟ್ಟದ ಸಿಗ್ನೇಚರ್ ಬಿಸಿನೆಸ್ ಪಾರ್ಕ್ ಅಭಿವೃದ್ಧಿ, ದೇವನಹಳ್ಳಿಯಲ್ಲಿ ಅಂತರರಾಷ್ಟ್ರೀಯ ಮಟ್ಟದ ಕ್ರೀಡಾ ಮೂಲಸೌಲಭ್ಯಗಳ ಸೃಜನೆ, ಸುವಾಸನೆಯುಕ್ತ ಮತ್ತು ವೈದ್ಯಕೀಯ ಗಿಡಗಳು, ಹಣ್ಣು, ತರಕಾರಿಗಳು ಮತ್ತು ಸಾಂಬಾರ ಪದಾರ್ಥಗಳಿಗಾಗಿ ಹೊಸ ಕೃಷಿ ರಫ್ತು ವಲಯ ಸ್ಥಾಪನೆ. ತೋಟಗಾರಿಕಾ ಬೆಳೆಗಳ ರಫ್ತಿಗೆ ರಾಜ್ಯದ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿ ಪೂರಕ
ಸೌಲಭ್ಯ.

ಹಣ್ಣು ಮತ್ತು ತರಕಾರಿ ಬೆಳೆಗಳ ಮೌಲ್ಯವರ್ಧನೆ ಮತ್ತು ಮಾರುಕಟ್ಟೆ ಸಂಪರ್ಕ ಕಲ್ಪಿಸಲು ಬೆಳೆಗಾರರಿಗೆ ತರಬೇತಿ ಮತ್ತು ತಾಂತ್ರಿಕ ಬೆಂಬಲ, ದ್ರಾಕ್ಷಿ ಕೃಷಿ ಉತ್ತೇಜನಕ್ಕೆ ಕರ್ನಾಟಕ ದ್ರಾಕ್ಷಾ ರಸ ಮಂಡಳಿಯನ್ನು ಕರ್ನಾಟಕ ದ್ರಾಕ್ಷಿ ಹಾಗೂ ದ್ರಾಕ್ಷಾರಸ ಮಂಡಳಿಯನ್ನಾಗಿ ಪುನರ್ ರಚಿಸಲು ಕ್ರಮ, ಎತ್ತಿನಹೊಳೆ ಸೇರಿದಂತೆ ನೀರಾವರಿ ಯೋಜನೆಗಳ ತ್ವರಿತ ಅನುಷ್ಠಾನಕ್ಕೆ ಆದ್ಯತೆ –ಇವು ಜಿಲ್ಲೆಯ ಜನರಿಗೆ ಪರೋಕ್ಷವಾಗಿ ಅನುಕೂಲವನ್ನು ತರಬಲ್ಲ ಬಜೆಟ್ ಘೋಷಣೆಗಳಾಗಿವೆ.

ಹುಸಿಯಾದ ನಿರೀಕ್ಷೆ: ಜಿಲ್ಲೆಯಲ್ಲಿ ದ್ರಾಕ್ಷಿಯನ್ನು ಹೆಚ್ಚಿನ ಪ್ರಮಾಣದಲ್ಲಿ ಬೆಳೆಯಲಾಗುತ್ತಿದೆ. ಈ ಕಾರಣದಿಂದ ವೈನ್ ಪಾರ್ಕ್ ಆಗಬೇಕು ಎನ್ನುವ ಬೇಡಿಕೆ ಹಲವು ವರ್ಷಗಳಿಂದ ಇದೆ. ರೇಷ್ಮೆ ಸಹ ಬೆಳೆಯುವುದರಿಂದ ಜವಳಿ ಪಾರ್ಕ್ ಬಗ್ಗೆಯೂ ಆಸೆಗಳನ್ನು ಇಲ್ಲಿನ ರೈತರು ಹೊಂದಿದ್ದರು. ಆದರೆ, ಇಂತಹ ಮಹತ್ವದ ಯೋಜನೆಗಳು ಜಿಲ್ಲೆಯ ಪಾಲಿಗೆ ಈ ಬಜೆಟ್‌ನಲ್ಲಿಯೂ ಸಾಕಾರವಾಗಿಲ್ಲ.

ಶಾಶ್ವತ ನೀರಾವರಿ ವಿಚಾರಗಳ ಪ್ರಸ್ತಾಪವೂ ಇಲ್ಲ. ಎತ್ತಿನಹೊಳೆ ಸೇರಿದಂತೆ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸಲಾಗುವುದು ಎನ್ನುವ ಅಂಶ ಬಜೆಟ್‌ನಲ್ಲಿದೆ. ಆದರೆ, ಈ ಕಾಮಗಾರಿಗಳಿಗೆ ‌ಇಂತಿಷ್ಟು ಹಣ ಎಂದು ಮೀಸಲಿಟ್ಟಿಲ್ಲ. ಹೀಗೆ ನೀರಾವರಿ ಯೋಜನೆಗಳ ಬಗ್ಗೆ ಹೊಂದಿದ್ದ ನಿರೀಕ್ಷೆಗಳು
ಹುಸಿಯಾಗಿವೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.