ಬುಧವಾರ, ಜನವರಿ 27, 2021
27 °C
15 ಸಾವಿರ ಚ.ಮೀ. ವಿಸ್ತೀರ್ಣದಲ್ಲಿ ಪ್ರದರ್ಶನ

ವಿಜ್ಞಾನ ಕಾಂಗ್ರೆಸ್‌ಗೆ ಸಜ್ಜಾಗುತ್ತಿದೆ ಜಿಕೆವಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿನ ಆವಿಷ್ಕಾರಗಳು ಹಾಗೂ ಸಂಶೋಧನೆಗಳ ಬಗ್ಗೆ ತಿಳಿಸಿ ಕೊಡಲು 15 ಸಾವಿರ ಚದರ ಮೀಟರ್ ವಿಸ್ತೀರ್ಣದಲ್ಲಿ ನಗರದ ಗಾಂಧಿ ಕೃಷಿ ವಿಜ್ಞಾನ ಕೇಂದ್ರದ (ಜಿಕೆವಿಕೆ) ಆವರಣ ಸಜ್ಜಾಗುತ್ತಿದೆ. 

ಜ. 3ರಿಂದ 7ರ ವರೆಗೆ ನಡೆಯಲಿದೆ. ಭಾರತೀಯ ವಿಜ್ಞಾನ ಕಾಂಗ್ರೆಸ್‌ನ 107ನೇ ಸಮಾವೇಶಕ್ಕೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಲಿದ್ದು, ಐದು ದಿನಗಳ ಸಮ್ಮೇಳನದಲ್ಲಿ ದೇಶದ 150ಕ್ಕೂ ಅಧಿಕ ಸಂಸ್ಥೆಗಳು ಭಾಗವಹಿಸಲಿವೆ. ‘ವಿಜ್ಞಾನ ಮತ್ತು ತಂತ್ರಜ್ಞಾನ: ಗ್ರಾಮೀಣಾಭಿವೃದ್ಧಿ’ ಸಮ್ಮೇಳನದ ಮುಖ್ಯ ವಿಷಯವಾಗಿದ್ದು, ದೇಶ–ವಿದೇಶಗಳಿಂದ ವಿಜ್ಞಾನಿಗಳು, ನೊಬೆಲ್ ಪ್ರಶಸ್ತಿ ಪುರಸ್ಕ್ಖೃತರು, ವಿಷಯ ತಜ್ಞರು, ಉಪನ್ಯಾಸಕರು, ಕಾರ್ಯನೀತಿ ರಚನಾಕಾರರು, ವಿದ್ಯಾರ್ಥಿ ಗಳು, ರೈತರು, ಸಂಘ–ಸಂಸ್ಥೆ ಗಳ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ.

‘ನಗರ ಮತ್ತು ಗ್ರಾಮೀಣ ಪ್ರದೇಶದ ನಡುವೆ ಕಂದಕ ಸೃಷ್ಟಿಯಾಗಿದೆ. ವಿಜ್ಞಾನ ಮತ್ತು ತಂತ್ರಜ್ಞಾನ ಸಹಾಯದಿಂದ ಗ್ರಾಮೀಣ ಪ್ರದೇಶವನ್ನು ಅಭಿವೃದ್ಧಿ ಪಡಿಸಲು ನೆರವಾಗುವುದು ಸಮ್ಮೇಳನದ ಆಶಯವಾಗಿದೆ. ರೈತರಿಗೆ ಕೃಷಿ ಕ್ಷೇತ್ರದಲ್ಲಿನ ಹೊಸ ಆವಿಷ್ಕಾರಗಳ ಮಾಹಿತಿಗಳೂ ಸಮ್ಮೇಳನ ದಲ್ಲಿ ದೊರೆಯಲಿವೆ. 15 ಸಾವಿರ ಪ್ರತಿನಿಧಿಗಳು ಭಾಗವಹಿಸುವ ನಿರೀಕ್ಷೆಯಿದೆ. ವಿಜ್ಞಾನದ 14 ವಿಭಾಗಗಳ ಸಂಶೋಧನೆ ಮತ್ತು ಆವಿಷ್ಕಾರದ ಮೇಲೆ ಬೆಳಕು ಹರಿಸಲಾಗುವುದು’ ಎಂದು ಬೆಂಗಳೂರು ಕೃಷಿ ವಿಶ್ವವಿದ್ಯಾಲಯ ಕುಲಪತಿ ಡಾ.ಎಸ್.ರಾಜೇಂದ್ರ ಪ್ರಸಾದ್‌ ಸೋಮವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

‘ಮಹಿಳಾ ವಿಜ್ಞಾನ ಸಮ್ಮೇಳನ, ಮಕ್ಕಳ ವಿಜ್ಞಾನ ಸಮ್ಮೇಳನ, ವಿಜ್ಞಾನ ಸಂವಾಹಕ ಸಮ್ಮೇಳನ ಹಾಗೂ ರೈತ ವಿಜ್ಞಾನ ಸಮ್ಮೇಳನವನ್ನು ಹಮ್ಮಿಕೊಳ್ಳಲಾಗಿದೆ. ‘ಪ್ರೈಡ್‌ ಆಫ್ ಇಂಡಿಯಾ’ ಎಂಬ ಶೀರ್ಷಿಕೆಯಡಿ ವಿವಿಧ ತಂತ್ರಜ್ಞಾನಗಳು, ನವೋದ್ಯಮಗಳು, ಯಂತ್ರೋಪಕರಣಗಳು ಹಾಗೂ ಮಾದರಿಗಳನ್ನು ಪ್ರದರ್ಶನ ಮಾಡಲಾಗುತ್ತದೆ. ಜ. 4ರಿಂದ ನಡೆಯಲಿರುವ ವಿಜ್ಞಾನ ವಸ್ತು ಪ್ರದರ್ಶನಕ್ಕೆ ಉಚಿತ ಪ್ರವೇಶವಿದೆ ಎಂದು ಮಾಹಿತಿ ನೀಡಿದರು.

‘8 ಸಾವಿರಕ್ಕೂ ಅಧಿಕ ಮಂದಿ ಹೆಸರು ನೋಂದಣಿ ಮಾಡಿ ಕೊಂಡಿದ್ದಾರೆ ಎಂದು ತಿಳಿಸಿದರು.

ಮೊಬೈಲ್‌ ಆ್ಯಪ್ ಅಭಿವೃದ್ಧಿ 
ವಿಜ್ಞಾನ ಸಮ್ಮೇಳನದ ಮಾಹಿತಿ ನೀಡುವ ಮೊಬೈಲ್ ಆ್ಯಪ್ ಅಭಿವೃದ್ಧಿಪಡಿಸಲಾಗಿದೆ. ‘ISC 2020 UASB’ ಹೆಸರಿನ ಮೊಬೈಲ್ ಆ್ಯಪ್ ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಲಭ್ಯವಿದೆ. ಅಧಿವೇಶನದ ಮಾಹಿತಿ, ವಿಷಯ ತಜ್ಞರ ವಿವರ, ವೇದಿಕೆಗಳು ಇರುವ ಸ್ಥಳ, ವಸತಿ ಹಾಗೂ ಸಾರಿಗೆ ವ್ಯವಸ್ಥೆ, ಭೋಜನಾಲಯ ಸೇರಿದಂತೆ ಸಮ್ಮೇಳನಕ್ಕೆ ಸಂಬಂಧಿಸಿದ ಹಲವು ಮಾಹಿತಿಗಳು ಇರಲಿವೆ. ಕರ್ನಾಟಕದ ಪ್ರವಾಸಿ ತಾಣಗಳ ವಿವರ ಹಾಗೂ ವೈಶಿಷ್ಟ್ಯತೆಗಳನ್ನು ನೀಡಲಾಗಿದೆ.

*
ಸಾಂಸ್ಕೃತಿಕ ಸಂಜೆ 
ಸಮ್ಮೇಳನದಲ್ಲಿ ಜ. 4ರಿಂದ 6ರವರೆಗೆ ಪ್ರತಿನಿತ್ಯ ಸಂಜೆ 6.30ರಿಂದ ರಾತ್ರಿ 8 ಗಂಟೆವರೆಗೆ ಸಾಂಸ್ಕೃತಿಕ ಕಾರ್ಯುಕ್ರಮಗಳನ್ನು ಆಯೋಜಿಸಲಾಗಿದೆ. ಜ.4ಕ್ಕೆ ಪ್ರಭಾತ್ ಕಲಾವಿದರ ತಂಡ, ಜ.5ಕ್ಕೆ ವಿಜಯ್ ಪ್ರಕಾಶ್ ಕಲಾತಂಡ ಹಾಗೂ ಜ.6ಕ್ಕೆ ಪ್ರವೀಣ್ ಗೋಡ್ಕಿಂಡಿ ತಂಡ ಕಾರ್ಯಕ್ರಮ ನೀಡಲಿದೆ. 

ವಿಮಾನ ನಿಲ್ದಾಣ, ರೈಲು ನಿಲ್ದಾಣ ಹಾಗೂ ಬಸ್‌ ನಿಲ್ದಾಣಗಳಿಂದ ಸಮ್ಮೇಳನಕ್ಕೆ ಬರುವವರಿಗೆ ವಾಹನ ವ್ಯವಸ್ಥೆ ಮಾಡಲಾಗಿದೆ ಎಂದು ಡಾ.ಎಸ್.ರಾಜೇಂದ್ರ ಪ್ರಸಾದ್‌ ತಿಳಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು