ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೇಷ್ಮೆ ಇಲಾಖೆ ಅಧಿಕಾರಿಗಳು ಜಮೀನುಗಳಿಗೆ ಭೇಟಿ ನೀಡುವಂತೆ ಬೆಳೆಗಾರರ ಆಗ್ರಹ

Last Updated 31 ಜುಲೈ 2021, 16:13 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಜಿಲ್ಲೆಯ ಕೆಲವು ಕಡೆಗಳಲ್ಲಿ ಹಿಪ್ಪುನೇರಳೆಗೆ (ರೇಷ್ಮೆ) ಟ್ರಿಪ್ಸ್ ರೋಗ ಕಾಣಿಸಿಕೊಂಡಿದೆ. ಇದರಿಂದ ರೇಷ್ಮೆ ಬೆಳೆಗಾರರು ಹೈರಾಣಾಗುತ್ತಿದ್ದಾರೆ. ರೇಷ್ಮೆ ಇಲಾಖೆ ಅಧಿಕಾರಿಗಳು ತಕ್ಷಣವೇ ಭೇಟಿ ನೀಡಿ ರೋಗಕ್ಕೆ ಪರಿಹಾರ ಸೂಚಿಸಬೇಕು ಎಂದು ಆಗ್ರಹಿಸುತ್ತಿದ್ದಾರೆ.

ಟ್ರಿಪ್ಸ್ ರೋಗ ಹಿಪ್ಪು ನೇರಳೆಗೆ ಬರುವ ಸಾಮಾನ್ಯ ರೋಗ. ಆದರೆ ಈ ಹಿಂದಿನ ವರ್ಷಗಳಲ್ಲಿ ಹಿಪ್ಪುನೇರಳೆ ಗಿಡಗಳ ಬುಡಗಳಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಿತ್ತು. ಆದರೆ ಈಗ ಕುಡಿಗಳಲ್ಲಿ ರೋಗ ಕಾಣಿಸಿಕೊಳ್ಳುತ್ತಿದೆ. ಕುಡಿಗೆ ರೋಗ ತಗುಲಿರುವುದು ಹೆಚ್ಚು ಹಾನಿಗೆ ಕಾರಣವಾಗುತ್ತದೆ ಎನ್ನುತ್ತಾರೆ ರೈತರು. ರೇಷ್ಮೆ ಜಿಲ್ಲೆಯ ಪ್ರಮುಖ ಬೆಳೆ ಸಹ ಆಗಿದೆ.

‘ಟ್ರಿಪ್ಸ್ ರೋಗ ಈ ಮುಂಚೆ ಮಾರ್ಚ್‌ನಿಂದ ಮೇ ಅವಧಿಯಲ್ಲಿ ಕಾಣಿಸಿಕೊಳ್ಳುತ್ತಿತ್ತು. ಬಿಸಿಲಿಗೆ ರೋಗ ಬರುತ್ತಿತ್ತು. ಆದರೆ ಈಗ ಜುಲೈನಲ್ಲಿಯೂ ರೋಗ ಹರಡುತ್ತಿದೆ. ಮಳೆ ಬಂದರೆ ರೋಗ ಹತೋಟಿಗೆ ಬರುತ್ತಿತ್ತು. ಆದರೆ ಪ್ರಸಕ್ತ ವರ್ಷ ಉತ್ತಮ ಮಳೆ ಬಂದರೂ ರೋಗ ನಿಯಂತ್ರಣಕ್ಕೆ ಬರುತ್ತಿಲ್ಲ’ ಎಂದು ತಾಲ್ಲೂಕಿನ ಯಲುವಳ್ಳಿಯ ರೇಷ್ಮೆ ಬೆಳೆಗಾರರಾದ ಮಂಜುನಾಥ್ ತಿಳಿಸಿದರು.

ಮಂಜುನಾಥ್ ಅವರು ಮೂರು ಎಕರೆಯಲ್ಲಿ ಬೆಳೆದಿರುವ ಹಿಪ್ಪುನೇರಳೆಯು ಟ್ರಿಪ್ಸ್ ರೋಗಕ್ಕೆ ತುತ್ತಾಗಿದೆ. ಹಲವು ವರ್ಷಗಳಿಂದ ರೇಷ್ಮೆ ಕೃಷಿಯಲ್ಲಿ ಮಂಜುನಾಥ್ ಅವರ ಕುಟುಂಬ ತೊಡಗಿದೆ. ಯಲುವಳ್ಳಿಯ ಇತರೆ ರೈತರ ಜಮೀನುಗಳಲ್ಲಿಯೂ ರೋಗ ಕಾಣಿಸಿಕೊಂಡಿದೆ.

‘ಕುಡಿಗೆ ರೋಗ ತಗುಲಿದೆ. ಇದರಿಂದ ಬೆಳವಣಿಗೆ ಆಗುವುದಿಲ್ಲ. ರೋಗದಿಂದ ಸೊಪ್ಪು ಅರಳದೆ ಮುದುಡುತ್ತದೆ. ಗಟ್ಟಿ ಆಗುತ್ತದೆ. ರೇಷ್ಮೆ ಹುಳುಗಳು ಇಂತಹ ಸೊಪ್ಪನ್ನು ತಿನ್ನುವುದಿಲ್ಲ. ಕೀಟಗಳು ಎಲೆಗಳಲ್ಲಿನ ರಸವನ್ನು ಹೀರುತ್ತವೆ. ಎಲೆ ಅಗಲ ಬರುವುದಿಲ್ಲ. ಶಿಡ್ಲಘಟ್ಟ, ಕೋಲಾರ ಸೇರಿದಂತೆ ಬಹಳಷ್ಟು ಕಡೆಗಳಲ್ಲಿ ಈ ರೋಗವಿದೆ. ಹೀಗೆ ರೇಷ್ಮೆ ಕೃಷಿಯನ್ನೇ ನಂಬಿಕೊಂಡಿದ್ದವರಿಗೆ ಟ್ರಿಪ್ಸ್ ನಿಂದ ಅಪಾರ ನಷ್ಟವಾಗುತ್ತಿದೆ. ಜೀವನ ಮಾಡಲು ಸಾಧ್ಯವಾಗುವುದಿಲ್ಲ’ ಎಂದು ಮಂಜುನಾಥ್ ಆತಂಕ ವ್ಯಕ್ತಪಡಿಸಿದರು.

‘ರೋಗ ನಿಯಂತ್ರಣಕ್ಕೆ ಔಷಧಿ ಸಿಂಪಡಿಸಿದ್ದೇವೆ. ಆದರೂ ಪ್ರಯೋಜನವಾಗಿಲ್ಲ. ಒಂದು ವಾರದ ಹಿಂದೆ ರೇಷ್ಮೆ ಇಲಾಖೆ ಅಧಿಕಾರಿಗಳಿಗೆ ಕರೆ ಮಾಡಿ ರೋಗದ ಬಗ್ಗೆ ಮಾಹಿತಿ ನೀಡಿದ್ದೇನೆ. ಬರುತ್ತೇವೆ ಎಂದು ಹೇಳಿದವರು ಇಲ್ಲಿಯವರೆಗೂ ನಮ್ಮ ಜಮೀನಿಗೆ ಭೇಟಿ ನೀಡಿಲ್ಲ. ರೈತರಿಗೆ ಸೂಕ್ತ ಸಲಹೆ, ಸೂಚನೆ ನೀಡಬೇಕಾದ ಅಧಿಕಾರಿಗಳೇ ರೈತರ ಜಮೀನುಗಳಿಗೆ ಬಂದು ರೋಗದ ಬಗ್ಗೆ ಪರಿಶೀಲಿಸದಿದ್ದರೆ ಹೇಗೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT