ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿವರಾತ್ರಿ: ಮರಳಿದ ನೆಲ ಸಂಸ್ಕೃತಿ

Last Updated 10 ಮಾರ್ಚ್ 2021, 16:58 IST
ಅಕ್ಷರ ಗಾತ್ರ

ಶಿಡ್ಲಘಟ್ಟ: ಶಿವರಾತ್ರಿ ಹತ್ತಿರವಾದಂತೆ ಹಳ್ಳಿಗಳಲ್ಲಿ ಮಹಿಳೆಯರು ರಾಗಿಯ ಹುರಿಯಿಟ್ಟಿಗಾಗಿ ರಾಗಿಯನ್ನು ಹುರಿಯಬೇಕಾಗುತ್ತದೆ. ಆದರೆ ಕೇವಲ ರಾಗಿಯೊಂದನ್ನಷ್ಟೇ ಅಲ್ಲದೆ ಅವರೆ ಕಾಳು, ಕಡಲೆ ಕಾಯಿ, ಜೋಳ ಕೂಡ ಹುರಿದು ತಮ್ಮ ಅಡುಗೆಮನೆ ಖಜಾನೆಯನ್ನು ತುಂಬಿಸಿಕೊಳ್ಳುತ್ತಾರೆ. ಈ ಕೆಲಸವನ್ನು ಮಹಿಳೆಯರು ಒಗ್ಗೂಡಿ ಮಾಡಿಕೊಳ್ಳುವ ಮೂಲಕ ಸಮಯ ಮತ್ತು ಉರುವಲನ್ನು ಉಳಿತಾಯ ಮಾಡುತ್ತಾರೆ.

ತಾಲ್ಲೂಕಿನ ಅಪ್ಪೇಗೌಡನಹಳ್ಳಿಯಲ್ಲಿ ಮಹಿಳೆಯರಾದ ಭಾರತಮ್ಮ, ರಾಮಕ್ಕ, ಅಮೃತ ಒಗ್ಗೂಡಿ ಅವರೆ ಕಾಳು, ಕಡಲೆ ಕಾಯಿ, ಜೋಳ ಮತ್ತು ರಾಗಿಯನ್ನು ತಾವೇ ನಿರ್ಮಿಸಿದ ಒಲೆಯಲ್ಲಿ ಹುರಿಯುತ್ತಿದ್ದರು.

ಅವರೆಯನ್ನು ಸೌದೆ ಉರಿಯಲ್ಲಿ ಹುರಿದು ನಂತರ ಬೀಸುವ ಕಲ್ಲಿನಲ್ಲಿ ಹಾಕಿ ಬೀಸಿ ಹೊಟ್ಟು ತೆಗೆಯುತ್ತೇವೆ ಎಂದು ಅವರು ತಿಳಿಸಿದರು. ಮೊದಲಾದರೆ ಜೊತೆಗೂಡಿ ಕೆಲಸ ಹಂಚಿಕೊಂಡು, ಓದಲು ಬರೆಯಲು ಬರದಿದ್ದರೂ ನೆನಪಿನ ಕೋಶದಲ್ಲಿರುವ ಹಾಡು ಹಸೆ ಹೇಳಿಕೊಂಡು ಶ್ರಮ ತಿಳಿಯದಂತೆ ಮಹಿಳೆಯರು ಕೆಲಸ ಮಾಡುತ್ತಿದ್ದರು. ಆಗ ಜಾನಪದ ಹಾಡುಗಳು, ಪದಗಳು ಒಬ್ಬರಿಂದೊಬ್ಬರಿಗೆ ಹರಡುತ್ತಿದ್ದುದು ಹೀಗೆಯೇ. ಈಗ ಹಳೆಯ ತಲೆಮಾರಿನವರಲ್ಲಿ ಉಳಿದುಕೊಂಡಿರುವ ಜಾನಪದ ಹಾಡುಗಳು ಹೊರಬರಬೇಕಿದೆಯಷ್ಟೇ. ಇಲ್ಲದಿದ್ದರೂ ಅವೂ ಕಣ್ಮರೆಯಾಗುತ್ತವೆ ಎಂದರು.

ನಾವುಗಳು ಸುಟ್ಟ ಇಟ್ಟಿಗೆ ಮತ್ತು ಚೇರುಮಣ್ಣು ಬಳಸಿ ಒಲೆಯನ್ನು ಮಾಡಿ, ಅದರ ಮೇಲೆ ಕಬ್ಬಿಣದ ಹೆಂಚನ್ನು ಇರಿಸಿ, ಸೌದೆಗೆ ಬೆಂಕಿ ಹಚ್ಚಿ ಹೆಂಚನ್ನು ಕಾಯಿಸಿ ಕಾಳುಗಳನ್ನು ಹುರಿಯುತ್ತಿದ್ದೇವೆ. ಒಂದೊಂದೇ ಮನೆಯವರು ಸರದಿಯಂತೆ ಕಾಳುಗಳನ್ನು ಹುರಿದುಕೊಳ್ಳುತ್ತೇವೆ. ಶಿವರಾತ್ರಿ ಬಂತೆಂದು ರಾಗಿಯನ್ನೂ ಸಹ ಹುರಿಯಿಟ್ಟು ಮಾಡಲು ಹುರಿಯುತ್ತಿದ್ದೇವೆ ಎಂದು ಮಹಿಳೆಯರಾದ ಭಾರತಮ್ಮ, ರಾಮಕ್ಕ, ಅಮೃತ ವಿವರಿಸಿದರು.

ರೈತರು ತಾವು ಬೆಳೆದಿರುವ ಅವರೆಯನ್ನು ಕಾಪಿಡಲು ಬಳಸುವ ಪುರಾತನ ವಿಧಾನವಿದು. ತಮ್ಮ ಜಮೀನಿನಲ್ಲಿ ಬಿದ್ದಿರುವ
ತೆಂಗಿನಗರಿಗಳು ಇತ್ಯಾದಿ ಸೌದೆಯನ್ನೇ ಉರುವಲಾಗಿ ಬಳಸುತ್ತಾರೆ. ಪೊರಕೆಯನ್ನು ಬಳಸಿ ಅವರೆಯನ್ನು ಹುರಿಯುತ್ತಾರೆ. ನಂತರ ಆರಿಸಿ ಬೀಸುವ ಕಲ್ಲಿನಲ್ಲಿ ಹಾಕಿ ಇಬ್ಬಿಬ್ಬರು ಬೀಸುತ್ತಾರೆ. ಅದು ಹುಡಿಯಾದಮೇಲೆ ಹೊಟ್ಟನ್ನು ಮೊರದಲ್ಲಿ
ತೂರುತ್ತಾರೆ.

ಮೊಟಾರ್ ಮೆಷಿನ್‌ಗಳಲ್ಲಿ ಶಬ್ಧವಿರುತ್ತದೆ ಜಾನಪದ ಹಾಡುಗಳಲ್ಲ. ಅದಕ್ಕೆ ವಿದ್ಯುತ್ ಬೇಕು ಆದರೆ ಇಲ್ಲಿ ಒಗ್ಗಟ್ಟಿರಬೇಕು. ಇದೊಂದು ರೀತಿ ಹರ್ಷಿಸುವ ವಿಷಯವಾದರೂ ಇನ್ನೊಂದು ರೀತಿಯಲ್ಲಿ ನೋಡಿದಾಗ ಆಧುನಿಕ ವ್ಯಂಗ್ಯವೂ ಹೌದು!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT