ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಸ್‌ಐಗೆ ಶ್ರೀರಕ್ಷೆ, ಕಾನ್‌ಸ್ಟೆಬಲ್‌ಗಳಿಗೆ ಶಿಕ್ಷೆ?

ಕರ್ತವ್ಯಲೋಪ ಪ್ರಕರಣ: ಮೂರು ಕಾನ್‌ಸ್ಟೆಬಲ್‌ಗಳ ವರ್ಗಾವಣೆ, ಮೇಲಾಧಿಕಾರಿಗಳ ಕ್ರಮಕ್ಕೆ ಇಲಾಖೆ ಒಳಗೆ ಅಸಮಾಧಾನ
Last Updated 8 ಮೇ 2020, 2:24 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ‘ನೋಡಿದ್ರಾ? ಎಸ್‌ಐ ತನ್ನ ಕಸಿನ್, ಮೇಲಾಗಿ ರಾಜಕೀಯ ಪ್ರಭಾವವಿದೆ ಎಂಬ ಕಾರಣಕ್ಕೆ ಬಚಾವ್‌ ಮಾಡಿದ್ರು. ತಪ್ಪೇ ಮಾಡದ ಬಡಪಾಯಿ ಕಾನ್‌ಸ್ಟೆಬಲ್‌ಗಳ ವಿಚಾರದಲ್ಲಿ ಗುಬ್ಬಿ ಮೇಲೆ ಬ್ರಹ್ಮಾಸ್ತ ಪ್ರಯೋಗದಂತೆ ವರ್ಗಾವಣೆ ಶಿಕ್ಷೆ ನೀಡಿದ್ರು. ಇಷ್ಟೇ ಕಣ್ರೋ ನಮ್ಮ ಪಾಡು‘

–ಇದು ಟೈರ್‌ ಕಳ್ಳರನ್ನು ಬಂಧಿಸಿ, ಆರೋಪಿಗಳ ವಿರುದ್ಧ ಯಾವುದೇ ಕ್ರಮಕೈಗೊಳ್ಳದೆ ಬಿಟ್ಟು ಕಳುಹಿಸಿದ ಪ್ರಕರಣಕ್ಕೆ ಸಂಬಂಧಿಸಿದ್ದಂತೆ ಎಸ್ಪಿ ಅವರು ಮೂರು ಕಾನ್‌ಸ್ಟೆಬಲ್‌ಗಳನ್ನು ಮಾತ್ರ ಅಮಾನತು ಮಾಡಿದ ಬೆನ್ನಲ್ಲೇ ಖಾಕಿ ವಲಯದಲ್ಲೇ ಕೇಳಿಬರುತ್ತಿರುವ ವಿಷಾದದ ಮಾತು.

ಗ್ರಾಮಾಂತರ ಠಾಣೆಯ ಎಸ್‌ಐ ಚೇತನ್‌ಗೌಡ ಮತ್ತು ಕೆಲ ಕಾನ್‌ಸ್ಟೆಬಲ್‌ಗಳು ಟೈರ್‌ ಕಳ್ಳರ ವಿಚಾರದಲ್ಲಿ ಕರ್ತವ್ಯಲೋಪ ಎಸಗಿದ ಬಗ್ಗೆ ’ಪ್ರಜಾವಾಣಿ‘ ಬುಧವಾರ ’ಪ್ರಕರಣ ದಾಖಲಿಸದೆ ಕಳ್ಳರ ಬಿಟ್ಟರು!‘ ಶೀರ್ಷಿಕೆ ಅಡಿ ವಿಶೇಷ ವರದಿ ಪ್ರಕಟಿಸಿತ್ತು.

ವರದಿಯ ಬೆನ್ನಲ್ಲೇ ಎಚ್ಚೆತ್ತುಕೊಂಡ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್‌ ಕುಮಾರ್ ಅವರು ಗ್ರಾಮಾಂತರ ಠಾಣೆಯ ಇಬ್ಬರು ಕಾನ್‌ಸ್ಟೆಬಲ್‌ಗಳು ಮತ್ತು ಈ ಪ್ರಕರಣಕ್ಕೆ ಸಂಬಂಧವೇ ಇಲ್ಲದ ಸರ್ಕಲ್‌ ಇನ್‌ಸ್ಪೆಕ್ಟರ್‌ ಕಚೇರಿಯ ಒಬ್ಬ ಕಾನ್‌ಸ್ಟೆಬಲ್‌ ಸೇರಿದಂತೆ ಮೂರು ಕಾನ್‌ಸ್ಟೆಬಲ್‌ಗಳನ್ನು ವಿವಿಧ ಠಾಣೆಗಳಿಗೆ ವರ್ಗಾವಣೆ ಮಾಡಿ ಆದೇಶ ಹೊರಡಿಸಿದ್ದಾರೆ.

ಗ್ರಾಮಾಂತರ ಠಾಣೆಯ ಕಾನ್‌ಸ್ಟೆಬಲ್‌ ರಮಣಾ ರೆಡ್ಡಿ ಅವರನ್ನು ಬಾಗೇಪಲ್ಲಿ ತಾಲ್ಲೂಕಿನ ಚೇಳೂರು ಠಾಣೆಗೆ, ಟಿ.ಎ.ಹರೀಶ್‌ ಅವರನ್ನು ಅದೇ ತಾಲ್ಲೂಕಿನ ಪಾತಪಾಳ್ಯ ಠಾಣೆಗೆ ಮತ್ತು ಸರ್ಕಲ್‌ ಇನ್‌ಸ್ಪೆಕ್ಟರ್‌ ಕಚೇರಿಯ ಕಾನ್‌ಸ್ಟೆಬಲ್‌ ಅಂಬರೀಶ್‌ ಅವರನ್ನು ಚಿಂತಾಮಣಿ ತಾಲ್ಲೂಕಿನ ಬಟ್ಲಹಳ್ಳಿ ಪೊಲೀಸ್‌ ಠಾಣೆಗೆ ವರ್ಗಾವಣೆ ಮಾಡಲಾಗಿದೆ.

ಎಸ್‌ಐ ಹಂತದ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮ ಜರುಗಿಸುವ ಅಧಿಕಾರ ಎಸ್ಪಿ ಅವರಿಗೆ ಇರುವುದಿಲ್ಲ. ಎಸ್‌ಐ ವಿರುದ್ಧ ಶಿಸ್ತುಕ್ರಮಕ್ಕೆ ಎಸ್ಪಿ ಐಜಿಪಿಗೆ ಶಿಫಾರಸು ಮಾಡಬೇಕು ಎನ್ನುತ್ತಾರೆ ಹಿರಿಯ ಪೊಲೀಸ್‌ ಅಧಿಕಾರಿಗಳು. ಆದರೆ, ಎಸ್ಪಿ ಅವರು ಈ ಪ್ರಕರಣ ಕುರಿತಂತೆ ಈವರೆಗೆ ಕೇಂದ್ರ ವಲಯ ಐಜಿಪಿ ಅವರಿಗೆ ಯಾವುದೇ ವರದಿ ಸಲ್ಲಿಸಿಲ್ಲ ಎಂದು ತಿಳಿದು ಬಂದಿದೆ.

ಠಾಣಾಧಿಕಾರಿಯಾದ ಎಸ್‌ಐ ಚೇತನಗೌಡ ಅವರ ವಿರುದ್ಧ ಯಾವುದೇ ಕ್ರಮ ಜರುಗಿಸದ ಮೇಲಾಧಿಕಾರಿಗಳ ಕ್ರಮ ಇದೀಗ ಕೆಳ ಹಂತದಲ್ಲಿರುವ ಅಧಿಕಾರಿಗಳು, ಕಾನ್‌ಸ್ಟೆಬಲ್‌ಗಳ ಅಸಮಾಧಾನಕ್ಕೆ ಕಾರಣವಾಗಿ, ಚರ್ಚೆಗೆ ಎಡೆ ಮಾಡಿದೆ.

ಈ ಪ್ರಕರಣ ನೋಡಿದರೆ ’ಕೋತಿ ತಾನು ತಿಂದು ಮೇಕೆ ಬಾಯಿಗೆ ಒರೆಸಿದಂತಿದೆ‘ ಎಂದು ಸಾರ್ವಜನಿಕ ವಲಯದಲ್ಲಿ ಕೂಡ ಟೀಕೆಗಳು ವ್ಯಕ್ತವಾಗುತ್ತಿದೆ.

ಸಂಬಂಧವೇ ಇಲ್ಲದ ಕಾನ್‌ಸ್ಟೆಬಲ್‌ಗೆ ಶಿಕ್ಷೆ!

ಕಳ್ಳತನ ಪ್ರಕರಣದಲ್ಲಿ ಸಂಬಂಧವೇ ಇಲ್ಲದಿದ್ದರೂ ಸರ್ಕಲ್‌ ಇನ್‌ಸ್ಪೆಕ್ಟರ್‌ ಕಚೇರಿ ಸಿಬ್ಬಂದಿ, ಕಾನ್‌ಸ್ಟೆಬಲ್‌ ಅಂಬರೀಶ್‌ ಅವರನ್ನು ಚಿಂತಾಮಣಿ ತಾಲ್ಲೂಕಿನ ಬಟ್ಲಹಳ್ಳಿ ಪೊಲೀಸ್‌ ಠಾಣೆಗೆ ವರ್ಗಾವಣೆ ಮಾಡಿರುವುದು ಕೆಲ ಅಧಿಕಾರಿಗಳಿಗೆ ತೀವ್ರ ಬೇಸರ ತಂದಿದೆ.


ಅಂಬರೀಶ್‌ ಗ್ರಾಮಾಂತರ ಠಾಣೆಯಲ್ಲಿ ನಡೆದ ಎಲ್ಲ ವಿದ್ಯಮಾನಗಳನ್ನು ನೋಡಿ, ಕೆಲ ಅಧಿಕಾರಿಗಳಿಗೆ ಮಾಹಿತಿ ನೀಡಿರಬಹುದು. ಅವರನ್ನು ಅಲ್ಲಿಯೇ ಬಿಟ್ಟರೆ ಮತ್ತಷ್ಟು ಅಕ್ರಮಗಳು ಬಯಲಿಗೆ ಬರಬಹುದು ಎಂಬ ಭಯಕ್ಕೆ ಮತ್ತು ಕೆಲ ಹಳೆಯ ದ್ವೇಷಗಳ ಕಾರಣಕ್ಕೆ ಉಪ ವಿಭಾಗವನ್ನೇ ಬದಲಾಯಿಸಿ ಎತ್ತಂಗಡಿ ಮಾಡಿದ್ದಾರೆ ಎನ್ನಲಾಗಿದೆ.

ವರ್ಗಾವಣೆಯಿಂದಾಗಿ ಗೌರಿಬಿದನೂರು ತಾಲ್ಲೂಕಿನ ಡಿ.ಪಾಳ್ಯದ ಅಂಬರೀಶ್‌ ಅವರು ತುಂಬಾ ನೊಂದುಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಗ್ರಾಮದಿಂದ 100 ಕಿ.ಮೀ ದೂರದ ಠಾಣೆಗೆ ವರ್ಗಾವಣೆಯಾಗಿರುವುದರಿಂದ ಮನೆಯಲ್ಲಿ ಕಾಲು ಮುರಿದುಕೊಂಡು ನರಳುತ್ತಿರುವ ತಂದೆಯನ್ನು ಉಪಚರಿಸಲಾದ ನೋವು ಈ ಏಕೈಕ ಪುತ್ರನಿಗೆ ಕಾಡುತ್ತಿದೆ.


‘ಅಂಬರೀಶ್‌ ನನ್ನ ಕಚೇರಿ ಸಿಬ್ಬಂದಿ. ಅವರಿಗೂ ಆ ಪ್ರಕರಣಕ್ಕೂ ಏನು ಸಂಬಂಧವಿದೆಯೋ ಗೊತ್ತಿಲ್ಲ. ಒಂದೊಮ್ಮೆ ಸಂಬಂಧವಿದ್ದರೆ ನನಗೆ ವರದಿ ಬರುತ್ತಿತ್ತು. ಆ ರೀತಿ ಯಾವುದೇ ವರದಿ ಬಂದಿಲ್ಲ‘ ಎನ್ನುತ್ತಾರೆ ಸರ್ಕಲ್ ಇನ್‌ಸ್ಪೆಕ್ಟರ್ ಸುದರ್ಶನ್.

ಐಜಿಪಿ ನಿರ್ಧಾರತ್ತ ಎಲ್ಲರ ಚಿತ್ತ

ಬುಧವಾರ ಜಿಲ್ಲೆಯ ಕೆಲ ಮುಖಂಡರು ಕೇಂದ್ರ ವಲಯ ಐಜಿಪಿ ಕೆ.ವಿ. ಶರತ್‍ಚಂದ್ರ ಅವರನ್ನು ಭೇಟಿ ಮಾಡಿ, ಗ್ರಾಮಾಂತರ ಠಾಣೆಯ ಸಿಬ್ಬಂದಿಯ ಹಲವು ಅಕ್ರಮಗಳ ಬಗ್ಗೆ ದೂರು ನೀಡಿ, ಕ್ರಮಕ್ಕೆ ಆಗ್ರಹಿಸಿದ್ದಾರೆ.

ಗುರುವಾರ ಶರತ್‌ಚಂದ್ರ ಅವರು ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ ಪಿ.ಎಸ್‌.ಸಂಧು ಅವರೊಂದಿಗೆ ಎಸ್ಪಿ ಕಚೇರಿಗೆ ಭೇಟಿ ನೀಡಿ ಸಭೆ ನಡೆಸಿದ್ದಾರೆ. ಅದರ ಬೆನ್ನಲ್ಲೇ ಇದೀಗ ಇಲಾಖೆಯ ಅಧಿಕಾರಿಗಳ ಚಿತ್ತ ಐಜಿಪಿ ನಿರ್ಧಾರತ್ತಲೇ ನೆಟ್ಟಿದೆ.

ಪ್ರಕರಣ ಮುಚ್ಚಿ ಹಾಕಲು ಹರಸಾಹಸ

ದೂರುದಾರ ಮತ್ತು ಆರೋಪಿಗಳ ನಡುವಿನ ರಾಜೀಸಂಧಾನದ ಕಾರಣಕ್ಕೆ ಕಳ್ಳತನದ ಆರೋಪಿಯನ್ನು ಯಾವುದೇ ಪ್ರಕರಣ ದಾಖಲಿಸದೆ ಬಿಟ್ಟಿದ್ದೇವೆ ಎಂದು ಚೇತನ್‌ ಕುಮಾರ್ ’ಪ್ರಜಾವಾಣಿ‘ಗೆ ತಿಳಿಸಿದ್ದರು.

ಜತೆಗೆ, ಯಾವುದೇ ಪ್ರಕರಣ ದಾಖಲಿಸದೆ ಒಂದು ತಿಂಗಳ ಕಾಲ ನಗರ ಪೊಲೀಸ್‌ ಠಾಣೆ ಆವರಣದಲ್ಲಿಯೇ ನಿಲ್ಲಿಸಿಕೊಂಡಿದ್ದ ಕೃತ್ಯಕ್ಕೆ ಬಳಸಿದ ಲಾರಿಯನ್ನು ಪೊಲೀಸರು ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಬಿಟ್ಟು ಕಳುಹಿಸಿರುವುದು ಇಲಾಖೆಯ ಕೆಳಹಂತದಲ್ಲಿ ನಡೆದಿರುವ ಭ್ರಷ್ಟಾಚಾರದ ಆರೋಪಕ್ಕೆ ಪುಷ್ಟಿ ನೀಡಿದೆ.


ಇಷ್ಟಾದರೂ, ’ಈ ಪ್ರಕರಣದಲ್ಲಿ ಯಾರೆಲ್ಲ ತಪ್ಪಿತಸ್ಥರು‘ ಎಂದು ಪ್ರಕರಣದ ತನಿಖೆ ನಡೆಸಿದ ಡಿವೈಎಸ್ಪಿ ರವಿಶಂಕರ್‌ ಅವರನ್ನು ವಿಚಾರಿಸಿದರೆ, ’ಎಸ್ಪಿ ಅವರನ್ನು ಕೇಳಿ‘ ಎನ್ನುತ್ತಾರೆ.

ಎಸ್ಪಿ ಜಿ.ಕೆ.ಮಿಥುನ್ ಕುಮಾರ್ ಅವರನ್ನು ಈ ಬಗ್ಗೆ ಪ್ರಶ್ನಿಸಿದರೆ, ’ಇದು ಇಲಾಖೆಯ ಆಂತರಿಕ ವಿಚಾರ. ನಾವು ಶಿಸ್ತುಕ್ರಮ ಕೈಗೊಂಡಿದ್ದೇವೆ. ಅದನ್ನು ಬಹಿರಂಗಪಡಿಸಲು ಆಗುವುದಿಲ್ಲ‘ ಎಂದರು. ’ಯಾವ ರೀತಿಯ ಕ್ರಮ ಜರುಗಿಸಿದ್ದೀರಿ‘ ಎಂದು ವಿಚಾರಿಸಿದರೆ, ’ಒಂದು ಆರ್‌ಟಿಐ (ಮಾಹಿತಿ ಹಕ್ಕು ಕಾಯ್ದೆ) ಅರ್ಜಿ ಹಾಕಿ‘ ಎಂದು ತಿಳಿಸುತ್ತಾರೆ.


ಪ್ರಭಾವಿ ಸಚಿವರೊಬ್ಬರ ಕೈವಾಡದಿಂದ ಪ್ರಕರಣ ಮುಚ್ಚಿ ಹಾಕಿ, ಎಸ್‌ಐ ತಲೆ ಕಾಯಲು ಮೇಲಾಧಿಕಾರಿಗಳು ಹರಸಾಹಸ ಮಾಡುತ್ತಿದ್ದಾರೆ ಎಂಬ ಗುಲ್ಲು ಇದೀಗ ಇಲಾಖೆ ವಲಯದಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT