ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕಬಳ್ಳಾಪುರ: ಜಿಲ್ಲಾಧಿಕಾರಿ ವರ್ಗಾವಣೆ ಖಂಡಿಸಿ ಬಂದ್‌ಗೆ ಕರೆ, ಸಿಗದ ಜನ ಬೆಂಬಲ

Last Updated 16 ಆಗಸ್ಟ್ 2019, 7:48 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಜಿಲ್ಲಾಧಿಕಾರಿ ಅನಿರುದ್ಧ್ ಶ್ರವಣ್ ಅವರ ವರ್ಗಾವಣೆ ಖಂಡಿಸಿ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಶುಕ್ರವಾರ ಕರೆ ನೀಡಿದ್ದ ಜಿಲ್ಲಾ ಕೇಂದ್ರ ಬಂದ್‌ಗೆ ಜನ ಬೆಂಬಲ ಸಿಗಲಿಲ್ಲ.

ಕರ್ನಾಟಕ ರೈತ ಸಂಘ ಹಾಗೂ ಹಸಿರುಸೇನೆ, ಜಿಲ್ಲಾ ರೇಷ್ಮೆ ಹಿತರಕ್ಷಣಾ ಸಮಿತಿ, ಶಾಶ್ವತ ನೀರಾವರಿ ಹೋರಾಟ ಸಮಿತಿ, ಬಯಲುಸೀಮೆ ರೈತ ಸಂಘ, ಕರ್ನಾಟಕ ರಕ್ಷಣಾ ವೇದಿಕೆ ಮತ್ತು ಯುವಸೇನೆ, ದ್ರಾಕ್ಷಿ ಬೆಳೆಗಾರರ ಸಂಘ, ಭೋಗ ನಂದೀಶ್ವರ ತ್ರಿಚಕ್ರ ವಾಹನ ಚಾಲಕರ ಸಂಘ, ದೇಶಪ್ರೇಮಿ ಯುವಕರ ಸಂಘ ಮತ್ತು ಭಾರತೀಯ ಕಿಸಾನ್ ಸಂಘ ಈ ಬಂದ್‌ಗೆ ಕೈಜೋಡಿಸಿದ್ದವು.

ನಗರದಲ್ಲಿ ಬೆಳಿಗ್ಗೆ ಪಂಜಿನ ಮೆರವಣಿಗೆ ನಡೆಸಿದ ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದರು.

ಈ ವೇಳೆ ಮಾತನಾಡಿದ ರೇಷ್ಮೆ ಹಿತರಕ್ಷಣಾ ವೇದಿಕೆ ಜಿಲ್ಲಾ ಘಟಕದ ಅಧ್ಯಕ್ಷ ಯಲುವಹಳ್ಳಿ ಸೊಣ್ಣೆಗೌಡ, ‘ದಕ್ಷ, ಪ್ರಾಮಾಣಿಕರಾಗಿದ್ದ ಜಿಲ್ಲಾಧಿಕಾರಿ ಅವರ ವರ್ಗಾವಣೆ ಅತ್ಯಂತ ನೋವಿನ ವಿಚಾರ. ಇಂತಹ ಅಧಿಕಾರಿಯನ್ನು ವರ್ಗಾವಣೆ ಮಾಡಿರುವುದು ಖಂಡನೀಯ. ಜನಪ್ರತಿನಿಧಿಗಳು ಕಚ್ಚಾಡಿ ಸಾಯುತ್ತಿರುವಾಗ ನಮ್ಮ ಸೇವೆ ಮಾಡುತ್ತಿರುವ ಪ್ರಾಮಾಣಿಕ ದುಡಿಯುತ್ತಿದ್ದ ಅಧಿಕಾರಿಗಳನ್ನು ವರ್ಗಾವಣೆ ಮಾಡಿರುವುದು ಕಳವಳದ ಸಂಗತಿ’ ಎಂದು ಹೇಳಿದರು.

‘ಅನಿರುದ್ಧ್ ಶ್ರವಣ್ ಅವರು ಜನರ ನೋವಿನ ಸ್ಪಂದಿಸುವ ನಿಟ್ಟಿನಲ್ಲಿ ಕಲ್ಯಾಣಿಗಳ ಪುನಶ್ಚೇತನಗೊಳಿಸುವ ಕೆಲಸ ಮಾಡಿದ್ದರು. ಪ್ರಭಾವಿಗಳ ಒತ್ತುವರಿ ತೆರವುಗೊಳಿಸಿ ಸರ್ಕಾರಿ ಭೂಮಿ ಉಳಿಸಿದ್ದರು. ಕುಡಿಯುವ ನೀರಿನ ಸಮಸ್ಯೆಗೆ ಬಗೆಹರಿಸಲು ಆದ್ಯತೆ ನೀಡಿದ್ದರು. ಅರಣ್ಯೀಕರಣಕ್ಕೆ ಒತ್ತು ನೀಡಿದ್ದರು. ಜನಸಾಮಾನ್ಯರ ನೋವಿಗೆ ತ್ವರಿತವಾಗಿ ಸ್ಪಂದಿಸುತ್ತಿದ್ದರು’ ಎಂದು ತಿಳಿಸಿದರು.

ರೈತ ಸಂಘದ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಭಕ್ತರಹಳ್ಳಿ ಬೈರೇಗೌಡ ಮಾತನಾಡಿ, ‘ಒಂದೆಡೆ ಅತಿವೃಷ್ಟಿಯಿಂದ ರಾಜ್ಯ ನಲುಗುತ್ತಿದ್ದರೆ. ನಮ್ಮಲ್ಲಿ ಅನಾವೃಷ್ಟಿ ತಲೆದೋರಿದೆ. ಈ ಸಂದರ್ಭದಲ್ಲಿ ಪ್ರಾಮಾಣಿಕ ಅಧಿಕಾರಿಗಳನ್ನು ಎತ್ತಂಗಡಿ ಮಾಡಿರುವುದು ಖಂಡನೀಯ. ನೀರಾವರಿ ವಿಚಾರದಲ್ಲಿ ಸರ್ಕಾರಗಳು ಮಲತಾಯಿ ಧೋರಣೆ ತೋರಿಸುತ್ತಿವೆ. ಆದರೆ, ಜಿಲ್ಲಾಧಿಕಾರಿ ಸರ್ಕಾರದ ಹಣ ಬಳಸದೆ ನಾಗರಿಕರ ಶಕ್ತಿ ಬಳಸಿ ನೂರಕ್ಕೆ ಹೆಚ್ಚು ಕಲ್ಯಾಣಿಗಳನ್ನು ಪುನಶ್ಚೇನಗೊಳಿಸಿದ್ದರು’ ಎಂದರು.

‘ದುಷ್ಟ ರಾಜಕಾರಣಿಗಳಿಂದಾಗಿ ನಾವು ಈಗಾಗಲೇ ಬೀದಿಗೆ ಬಂದಿದ್ದೇವೆ. ರಾಜಕಾರಣಿಗಳ ಷಡ್ಯಂತ್ರದಿಂದ ದಕ್ಷ ಅಧಿಕಾರಿಗಳು ವರ್ಗವಾಗುತ್ತಿರುವುದು ಕಳವಳದ ವಿಚಾರ. ಸರ್ಕಾರ ಜಿಲ್ಲಾಧಿಕಾರಿ ಅವರ ಜತೆಗೆ ಜಿಲ್ಲಾ ಪಂಚಾಯಿತಿ ಸಿಇಒ ಅವರ ವರ್ಗಾವಣೆಯನ್ನು ಕೂಡ ರದ್ದುಪಡಿಸಬೇಕು’ ಎಂದು ಆಗ್ರಹಿಸಿದರು.

ಹೋರಾಟಗಾರರಾದ ಆನೂರು ದೇವರಾಜ್, ಗಿಡ್ನಹಳ್ಳಿ ನಾರಾಯಣಸ್ವಾಮಿ, ತಾದೂರು ಮಂಜುನಾಥ್‌, ಲಕ್ಷಣ ರೆಡ್ಡಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT