ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಪ್ರೀಂ ತೀರ್ಪು, ಅಸಮಾಧಾನದ ವ್ಯಾಖ್ಯಾನ

Last Updated 13 ನವೆಂಬರ್ 2019, 11:46 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಅನರ್ಹರಾಗಿರುವ 17 ಮಂದಿ ಉಪಚುನಾವಣೆಯಲ್ಲಿ ಸ್ಪರ್ಧಿಸಬಹುದು. ಗೆಲುವು ಸಾಧಿಸಿದರೆ ಮಾತ್ರ ಸಚಿವರಾಗಲು ಅವಕಾಶವಿದೆ ಎಂದು ಸುಪ್ರೀಂ ಕೋರ್ಟ್‌ ಬುಧವಾರ ತೀರ್ಪು ನೀಡಿದೆ.

ಸುಪ್ರೀಂ ಕೋರ್ಟ್‌ನ ಈ ತೀರ್ಪು ಕುರಿತಂತೆ ಸ್ಥಳೀಯ ರಾಜಕೀಯ ವಲಯದಲ್ಲಿ ಸಮಾಧಾನಕ್ಕಿಂತಲೂ ಅಸಮಾಧಾನವೇ ಹೆಚ್ಚು ವ್ಯಕ್ತವಾಗುತ್ತಿದೆ. ಉನ್ನತ ನ್ಯಾಯಾಲಯದ ಈ ತೀರ್ಪನ್ನು ಅನರ್ಹ ಶಾಸಕ ಕೆ.ಸುಧಾಕರ್ ಅವರು ಸ್ವಾಗತಿಸಿದರೆ, ಇನ್ನುಳಿದಂತೆ ಕೆಲ ಶಾಸಕರು, ಮಾಜಿ ಶಾಸಕರು ಉನ್ನತ ನ್ಯಾಯಾಲಯದ ಆದೇಶವನ್ನು ತಮ್ಮದೇ ದಾಟಿಯಲ್ಲಿ ವ್ಯಾಖ್ಯಾನಿಸಿದ್ದಾರೆ.

ಮರು ಪರಿಶೀಲನೆಗೆ ಚಿಂತನೆ

‘ಸುಪ್ರೀಂ ಕೋರ್ಟ್‌ ತೀರ್ಪನ್ನು ನಾನು ಸ್ವಾಗತಿಸುತ್ತೇನೆ. ನಾವು ಚುನಾವಣೆಯಲ್ಲಿ ಸ್ಪರ್ಧಿಸದಂತೆಯೇ ಮಾಡಿ, ನಮ್ಮ ರಾಜಕೀಯ ಬದುಕನ್ನೇ ಮುಗಿಸಬೇಕು ಎಂಬ ದುರುದ್ದೇಶದಿಂದ ಮಾಡಿದ ಹುನ್ನಾರ ವಿಫಲವಾಗಿದೆ. ನ್ಯಾಯಾಲಯ ಸ್ಪೀಕರ್ ಹುದ್ದೆಗೆ ಗೌರವ ಕೊಟ್ಟಿದೆ ವಿನಾ ರಮೇಶ್‌ ಕುಮಾರ್ ಅವರಿಗೆ ಗೌರವ ಕೊಟ್ಟಿಲ್ಲ’ ಎಂದು ಸುಧಾಕರ್ ಅಭಿಪ್ರಾಯಪಟ್ಟರು.

‘ಸುಪ್ರೀಂ ಕೋರ್ಟ್ ಸ್ಪೀಕರ್ ವಿರುದ್ಧ ತೀರ್ಪು ಕೊಟ್ಟಿರುವಾಗ ಅನರ್ಹತೆಯ ವಿಚಾರದಲ್ಲಿ ಕೂಡ ತೀರ್ಪು ಕೊಟ್ಟಿದ್ದರೆ ನಮಗೆ ಸಂಪೂರ್ಣ ನ್ಯಾಯ ಸಿಕ್ಕಂತೆ ಆಗುತ್ತಿತ್ತು. ಆದ್ದರಿಂದ, ನನ್ನ ಒಂದು ಪ್ರಕರಣವನ್ನಾದರೂ ಮರು ಪರಿಶೀಲನೆ ಮಾಡಲು ಅವಕಾಶವಿದೆಯೇ ಎಂದು ಹಿರಿಯ ವಕೀಲರ ಜತೆ ಚರ್ಚೆ ಮಾಡುತ್ತಿದ್ದೇನೆ’ ಎಂದು ತಿಳಿಸಿದರು.

ನಿರೀಕ್ಷಿತ ತೀರ್ಪು

‘ಇದೊಂದು ನಿರೀಕ್ಷಿತ ತೀರ್ಪು. ಏಕೆಂದರೆ ಈ ಹಿಂದೆಯೇ ಕೇಂದ್ರ ಸರ್ಕಾರ ಅನರ್ಹ ಶಾಸಕರ ಸ್ಪರ್ಧೆಗೆ ತನ್ನದೇನೂ ತಕರಾರು ಇಲ್ಲ ಎಂದು ಚುನಾವಣಾ ಆಯೋಗದ ಮೂಲಕ ಸುಪ್ರೀಂ ಕೋರ್ಟ್‌ನಲ್ಲಿ ಹೇಳಿಸಿತ್ತು. ಅನರ್ಹ ಶಾಸಕರೂ ಚುನಾವಣೆಯಲ್ಲಿ ಸ್ಪರ್ಧಿಸಬಹುದು ಎಂದುಚುನಾವಣಾ ಆಯೋಗ ಯಾವಾಗ ಸುಪ್ರೀಂ ಕೋರ್ಟ್‌ನಲ್ಲಿ ತಿಳಿಸಿತೋ ಆಗಲೇ ಮುಂದೆ ಇಂತಹದೊಂದು ತೀರ್ಪು ಬರಬಹುದು ಎನ್ನುವುದು ನಿರೀಕ್ಷಿತವಲ್ಲವೆ? ಅನರ್ಹರಿಗೆ ಸ್ಪರ್ಧಿಸಲು ಅವಕಾಶ ಕೊಟ್ಟಿದೆ, ಮಾಡಲಿ ಬಿಡಿ’ ಎಂದು ಮಾಜಿ ಶಾಸಕ ಕೆ.ಪಿ.ಬಚ್ಚೇಗೌಡ ಹೇಳಿದರು.

ಅನುಮಾನಕ್ಕೆ ಎಡೆ ಮಾಡಿದ ತೀರ್ಪು

‘ನನಗೆ ಈ ತೀರ್ಪು ಸಮಾಧಾನ ತಂದಿಲ್ಲ. ಬ್ಲಾಕ್‌ಮೆಲ್ ಮಾಡುವ ಜನಪ್ರತಿನಿಧಿಗಳಿಗೆ ಸುಪ್ರೀಂ ಕೋರ್ಟ್ ತನ್ನ ತೀರ್ಪಿನ ಮೂಲಕ ನಿರಾಳತೆ ಉಂಟು ಮಾಡಿದೆ. ಭವಿಷ್ಯದ ರಾಜಕಾರಣದ ದೃಷ್ಟಿಯಿಂದ ಇದು ಒಳ್ಳೆಯ ಬೆಳವಣಿಗೆಯಲ್ಲ. ಇದೇ ಅಸ್ತ್ರವನ್ನು ಮುಂದೆ ಎಲ್ಲರೂ ಬಳಕೆ ಮಾಡಿಕೊಳ್ಳುವ ಅವಕಾಶ ಹೆಚ್ಚಾಗಲು ಇದು ದಾರಿ ಮಾಡಿಕೊಡುತ್ತದೆ. ಸರ್ಕಾರಗಳನ್ನು ಸ್ಥಿರವಾಗಿ ಕೆಲಸ ಮಾಡಲು ಬಿಡದೆ, ಅಸ್ಥಿರಗೊಳಿಸುವ ವಾತಾವರಣ ಹೆಚ್ಚಾಗುತ್ತದೆ’ ಎಂದು ಶಾಸಕ ಎನ್.ಎಚ್.ಶಿವಶಂಕರರೆಡ್ಡಿ ಅಭಿಪ್ರಾಯಪಟ್ಟರು.

‘ದೇಶದಲ್ಲಿ ಪಕ್ಷಾಂತರ ನಿಷೇಧ ಕಾಯ್ದೆ ಜಾರಿಯಲ್ಲಿ ಇದೆ. ಶಾಸಕರಾದವರು ಅದರಿಂದ ತಪ್ಪಿಸಿಕೊಳ್ಳುವ ಪ್ರಯತ್ನ ಮಾಡಿದಾಗ, ಅದು ತನ್ನ ಗಮನಕ್ಕೆ ಕೂಡ ಬಂದಾಗ ಅದನ್ನು ನ್ಯಾಯಾಲಯ ಗಂಭೀರವಾಗಿ ಪರಿಗಣಿಸಿ ಆ ಕಾಯ್ದೆಗೆ ಮಾನ್ಯತೆ ಕೊಟ್ಟು, ತನ್ನ ಪಾವಿತ್ರ್ಯತೆ ಉಳಿಸಿಕೊಳ್ಳಬೇಕಿತ್ತು. ಅಂಬೇಡ್ಕರ್ ಅವರು ಭವಿಷ್ಯದಲ್ಲಿ ಈರೀತಿ ಮಾಡುತ್ತಾರೆ ಎಂದು ನಿರೀಕ್ಷೆ ಮಾಡಿರಲಿಲ್ಲ. ನ್ಯಾಯಾಂಗದ ಸ್ವಾಯತ್ತತೆಗೆ ಧಕ್ಕೆಯಾಗಿದೆ ಎಂಬ ಅನುಮಾನಕ್ಕೆ ಈ ತೀರ್ಪು ಎಡೆ ಮಾಡಿದೆ’ ಎಂದು ತಿಳಿಸಿದರು.

ನ್ಯಾಯಾಂಗದ ಮೇಲಿನ ನಂಬಿಕೆ ಕಳೆದಿದೆ

‘ನಾನು ನ್ಯಾಯಾಲಯಗಳ ಮೇಲಿನ ನಂಬಿಕೆಯನ್ನೇ ಕಳೆದುಕೊಂಡಿದ್ದೇನೆ. ಸುಪ್ರೀಂ ಕೋರ್ಟ್ ಸ್ಪೀಕರ್‌ ಅವರಿಗೆ ಅನರ್ಹತೆಯ ಅವಧಿ ನಿರ್ಧರಿಸುವ ಅಧಿಕಾರ ಇಲ್ಲ ಎಂದು ಹೇಳುವುದು, ಸ್ಪೀಕರ್‌ ಅವರಿಗೆ ಅನರ್ಹತೆ ಘೋಷಣೆ ಮಾಡಲೂ ಅಧಿಕಾರ ಇಲ್ಲ ಎಂದು ಹೇಳಿದಂತೆ ತಾನೇ ಅರ್ಥ? ಅನರ್ಹರು ಎಂದು ತೀರ್ಮಾನ ಮಾಡಿದ ಮೇಲೆ ಅದಕ್ಕೆ ಕಾಲಾವಕಾಶ ನಿಗದಿಪಡಿಸಲೇ ಬೇಕು. ಇಲ್ಲವಾದರೆ ಅನರ್ಹತೆ ಪ್ರಶ್ನೆಯೇ ಬರುವುದಿಲ್ಲ’ ಎನ್ನುತ್ತಾರೆ ಮಾಜಿ ಶಾಸಕ ಜಿ.ವಿ.ಶ್ರೀರಾಮರೆಡ್ಡಿ.

‘ಸ್ಪೀಕರ್ ಅವರಿಗೆ ಅನರ್ಹತೆ ಘೋಷಣೆ ಮಾಡಲೂ ಅಧಿಕಾರ ಇಲ್ಲ ಎನ್ನುವುದಾದರೆ ಅವರಿಗೆ ಅನರ್ಹಗೊಳಿಸುವ ಅಧಿಕಾರವೂ ಇಲ್ಲ ಎಂದು ನ್ಯಾಯಾಲಯ ನೇರವಾಗಿ ಹೇಳಬೇಕಲ್ಲ? ಅದು ಸರಿಯೋ, ತಪ್ಪೋ ಬೇರೆ ವಿಚಾರ. ಇದೊಂದು ಸರಳ ತರ್ಕ. ಅನರ್ಹತೆ ಅವಧಿ ಎಷ್ಟು ಮಾಡಬಹುದು ಎಂದಾದರೂ ಕೋರ್ಟ್ ಹೇಳಬಹುದಿತ್ತಲ್ಲ? ಅದನ್ನೇ ಹೇಳದ ಮೇಲೆ 17 ಶಾಸಕರು ಯಾವುದಕ್ಕೆ ಅನರ್ಹರು’ ಎಂದು ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT