ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೌರಿಬಿದನೂರು | ಶಿಕ್ಷಕನ ಪತ್ನಿ ಅನುಮಾನಾಸ್ಪದ ಸಾವು

Published 24 ಮೇ 2023, 4:41 IST
Last Updated 24 ಮೇ 2023, 4:41 IST
ಅಕ್ಷರ ಗಾತ್ರ

ಗೌರಿಬಿದನೂರು: ಗಂಗಾನಗರದ ಶಿಕ್ಷಕ ಕೃಷ್ಣಪ್ಪ ಅವರ ಪತ್ನಿ ಮನೆಯಲ್ಲಿಯೇ ಕೊಳೆತ ಸ್ಥಿತಿಯಲ್ಲಿ ಸೋಮವಾರ ಪತ್ತೆಯಾಗಿದ್ದಾರೆ.

ಮೃತರನ್ನು ಲಕ್ಷ್ಮಿದೇವಮ್ಮ (42) ಎಂದು ಗುರುತಿಸಲಾಗಿದೆ. ಪತಿ ಕೃಷ್ಣಪ್ಪ ಅವರೇ ಹತ್ಯೆ ಮಾಡಿರುವುದಾಗಿ ಮೃತರ ಮಗಳು ದೂರಿನಲ್ಲಿ ತಿಳಿಸಿದ್ದಾರೆ.

ತಾಲ್ಲೂಕಿನ ರಾಮಚಂದ್ರಪುರ ಸರ್ಕಾರಿ ‌ಹಿರಿಯ ಪ್ರಾಥಮಿಕ ‌ಶಾಲೆಯಲ್ಲಿ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದ ಕೃಷ್ಣಪ್ಪ, ಲಕ್ಷ್ಮಿದೇವಮ್ಮ ಅವರನ್ನು ಪ್ರೀತಿಸಿ ವಿವಾಹವಾಗಿದ್ದರು. ಇವರಿಗೆ ಇಬ್ಬರು ಹೆಣ್ಣು ಮಕ್ಕಳಿದ್ದು, ಹಿರಿಯ ಪುತ್ರಿಗೆ ವಿವಾಹವಾಗಿದೆ. ಕಿರಿಯ ಪುತ್ರಿ ಬೆಂಗಳೂರಿನಲ್ಲಿ ಓದುತ್ತಿದ್ದಳು. ಮನೆಯಲ್ಲಿಯೇ ಇದ್ದ ಕೃಷ್ಣಪ್ಪ ಮತ್ತು ಲಕ್ಷ್ಮಿದೇವಮ್ಮ ಅವರ ನಡುವೆ ಆಗಿಂದಾಗ್ಗೆ ಜಗಳ ನಡೆಯುತ್ತಿದ್ದು, ಕಳೆದ ಮೂರು ದಿನಗಳ ಹಿಂದೆಯೂ ಇವರಿಬ್ಬರ ‌ನಡುವೆ ಜಗಳವಾಗಿದೆ. ಅಂದು ಶಿಕ್ಷಕ ಕೃಷ್ಣಪ್ಪ ಮನೆಗೆ ಬೀಗ ಜಡಿದು ಪರಾರಿಯಾಗಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ಮೃತ ಲಕ್ಷ್ಮಿದೇವಮ್ಮ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘದಲ್ಲಿ ಆರ್ಥಿಕ ವ್ಯವಹಾರ ಮಾಡುತ್ತಿದ್ದರು. ಪ್ರತೀ ವಾರದಂತೆ ಸೋಮವಾರ ಸಂಘದ ಸದಸ್ಯರು ಲಕ್ಷ್ಮಿದೇವಮ್ಮ ಅವರ ಬಳಿ ವಾರದ ಚೀಟಿ ಹಣ ಪಡೆಯಲು ಮನೆಯ‌ ಬಳಿ ತೆರಳಿದಾಗ ಮನೆಗೆ ಬೀಗ ಜಡಿದಿರುವುದು ಕಂಡು ಬಂದಿದೆ. ಆದರೆ ಮನೆಯ ಒಳಗಿನಿಂದ ಕೊಳೆತ ದುರ್ವಾಸನೆ ಬರುತ್ತಿರುವುದನ್ನು ಕಂಡ ಅವರು ಕೂಡಲೇ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಸ್ಥಳಕ್ಕೆ ಆಗಮಿಸಿದ ಸಿಪಿಐ ಕೆ.ಪಿ.ಸತ್ಯನಾರಾಯಣ ಮತ್ತು ಸಿಬ್ಬಂದಿ ಮನೆ ಬಾಗಿಲು ಒಡೆದು ಪರಿಶೀಲಿಸಿದಾಗ ಲಕ್ಷ್ಮಿದೇವಮ್ಮ ರಕ್ತದ ಮಡುವಿನಲ್ಲಿ ಬಿದ್ದು ಸಾವನ್ನಪ್ಪಿರುವುದು ಕಂಡು ಬಂದಿದೆ. ಈ ಸಂಬಂಧವಾಗಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಶಿಕ್ಷಕ ಕೃಷ್ಣಪ್ಪನೇ ಪತ್ನಿಯನ್ನು ಬಲವಾದ ಆಯುಧದಿಂದ ಹೊಡೆದು ಹತ್ಯೆ ಮಾಡಿರುವುದಾಗಿ ಪೊಲೀಸರು ಶಂಕಿಸಿದ್ದಾರೆ. ಆರೋಪಿ ಕೃಷ್ಣಪ್ಪ ಪರಾರಿಯಾಗಿದ್ದಾನೆ. ಮೃತರ ಮಕ್ಕಳ ಮತ್ತು ಪೋಷಕರ ಆಕ್ರಂದನ ಮುಗಿಲು ಮುಟ್ಟಿದ್ದು, ನೆರೆಯ ಮನೆಯವರಲ್ಲಿ ಆತಂಕ ‌ಮನೆ ಮಾಡಿದೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ.ಎಲ್.ನಾಗೇಶ್ ಸೇರಿದಂತೆ ಸ್ಥಳೀಯ ಸಿಪಿಐ, ನಗರ ಠಾಣೆಯ ಪಿಎಸೈ ಹಾಗೂ ಸಿಬ್ಬಂದಿ ಭೇಟಿ‌ ನೀಡಿ ಆರೋಪಿ ಕೃಷ್ಣಪ್ಪನಿಗಾಗಿ ಶೋಧ ಕಾರ್ಯ ಆರಂಭಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT