ಶನಿವಾರ, ಏಪ್ರಿಲ್ 1, 2023
32 °C
ಭೂಮಿ, ವಸತಿ ಹಕ್ಕು ವಂಚಿತ ದಲಿತರಿಗೆ ನ್ಯಾಯ ಕಲ್ಪಿಸಲು ಒತ್ತಾಯ

ಚಿಂತಾಮಣಿ: ಗ್ರಾಮಸ್ಥರಿಂದ ತಾಲ್ಲೂಕು ಕಚೇರಿಗೆ ಮುತ್ತಿಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿಂತಾಮಣಿ: ತಾಲ್ಲೂಕಿನ ಗಾಜಲಹಳ್ಳಿಯ ಭೂಮಿ ಮತ್ತು ವಸತಿ ಹಕ್ಕು ವಂಚಿತ ದಲಿತರಿಗೆ ನ್ಯಾಯ ಒದಗಿಸುವಂತೆ ಒತ್ತಾಯಿಸಿ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ದಲಿತ ವಿರೋಧಿ ನೀತಿ ಅನುಸರಿಸುತ್ತಿದ್ದಾರೆ ಎಂದು ಆರೋಪಿಸಿ ಗಾಜಲಹಳ್ಳಿ ಗ್ರಾಮಸ್ಥರು ದಲಿತ ಸಂಘಟನೆಗಳ ಐಕ್ಯತಾ ಚಾಲನಾ ಸಮಿತಿ ನೇತೃತ್ವದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು. 

ಈ ವೇಳೆ ಗ್ರಾಮಸ್ಥರು ತಾಲ್ಲೂಕು ಕಚೇರಿಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದರು. 

‘ಕಸಬಾ ಹೋಬಳಿ ಕುರುಬೂರು ಗ್ರಾ. ಪಂ ವ್ಯಾಪ್ತಿಯ ಗಾಜಲಹಳ್ಳಿಯಲ್ಲಿ ಬಡ ದಲಿತ ಪರಿಶಿಷ್ಟ ಜಾತಿಗೆ ಸೇರಿದ 150ಕ್ಕೂ ಹೆಚ್ಚು ಕುಟುಂಬಗಳು ವಾಸವಾಗಿವೆ. ಗ್ರಾಮಸ್ಥರು ಮೂಲ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ಸಣ್ಣ ಮನೆಯಲ್ಲಿ ಎರಡು ಮೂರು ಕುಟುಂಬಗಳು ಜೀವನ ನಡೆಸುತ್ತಿವೆ. ಈ ಜಾಗವನ್ನು ರಾಜಕೀಯವಾಗಿ ಬಲಾಢ್ಯವಾಗಿರುವ ರಾಚಾಪುರ ಗ್ರಾಮದ ವೀಣಾಕೃಷ್ಣೇಗೌಡ ಎಂಬುವವರು ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿದ್ದು, ಈ ಸಂಬಂಧ 40 ದಿನಗಳಿಂದ ಹೋರಾಡುತ್ತಿದ್ದರೂ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಸ್ಪಂದಿಸುತ್ತಿಲ್ಲ’ ಎಂದು ಪ್ರತಿಭಟನಕಾರರು ಆರೋಪಿಸಿದರು. 

ಗಾಜಲಹಳ್ಳಿಯ ಸರ್ಕಾರಿ ಗೋಮಾಳ ಸರ್ವೆ ಸಂಖ್ಯೆ 21ರಲ್ಲಿ ಪರಿಶಿಷ್ಟ ಜನಾಂಗದ ಮುನಿಭೋವಿ ರಾಮನಗರ ಎಂಬುವರಿಗೆ ಜಿಎಂಎಫ್ ರೂಲ್ಸ್ ಮೇರೆಗೆ ಮಂಜೂರು ಮಾಡಿ ಹಂಗಾಮಿ ಸಾಗುವಳಿ ಪ್ರಮಾಣ ಪತ್ರ ನೀಡಲಾಗಿತ್ತು. ಬಲಾಢ್ಯರು ಮೂಲ ದಾಖಲೆಗಳನ್ನು ನಾಶಪಡಿಸಿ, ನಕಲಿ ದಾಖಲೆ ಸೃಷ್ಟಿಸಿ ಭೂಮಿಯನ್ನು ವಶಪಡಿಸಿಕೊಂಡಿದ್ದಾರೆ. ನಕಲಿ ದಾಖಲೆಗಳ ಮೂಲಕ ಸರ್ಕಾರಿ ಗೋಮಾಳ ಸರ್ವೆ ಸಂಖ್ಯೆ 21 ಅನ್ನು ಬದಲಾಯಿಸಿ 51 ಮಾಡಿದ್ದಾರೆ ಎಂದು
ದೂರಿದರು. 

ಗ್ರಾಮದ ನಿವೇಶನ ರಹಿತ ವಸತಿ ವಂಚಿತ ದಲಿತರಿಗೆ ಕೂಡಲೇ ಹಕ್ಕು ಪತ್ರ ಕೋಡಬೇಕು.  ಸರ್ವೆ ಸಂಖ್ಯೆ 21ರಲ್ಲಿ ಇರುವ 253 ಎಕರೆಯಲ್ಲಿ ಪ್ರತಿ ಕುಟುಂಬಕ್ಕೂ ಭೂಮಿ ಮಂಜೂರು ಮಾಡಿ ಭೂ ವಂಚಿತರಿಗೆ ಸಾಗುವಳಿ ಪ್ರಮಾಣ ಪತ್ರಗಳನ್ನು ನೀಡಬೇಕು. ಸರ್ವೆ ಸಂಖ್ಯೆ 21 ಅನ್ನು ಕಾನೂನುಬಾಹಿರವಾಗಿ ಸರ್ವೆ ಸಂಖ್ಯೆ 51/4, 51/2, 51/3 ಆಗಿ ಮಾರ್ಪಡಿಸಿಕೊಂಡಿರುವುದನ್ನು ರದ್ದುಪಡಿಸಬೇಕು ಎಂದು ಆಗ್ರಹಿಸಿದರು. 

ಗ್ರಾಮಸ್ಥರು ನಗರದಲ್ಲಿ ಪ್ರತಿಭಟನಾ ಜಾಥಾ ನಡೆಸಿದರು.  ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಬಳಿಕ ತಾಲ್ಲೂಕು ಕಚೇರಿಗೆ ಮುತ್ತಿಗೆ ಹಾಕಿದರು. ತಮ್ಮ ಬೇಡಿಕೆಗಳನ್ನು ಕೂಡಲೇ ಈಡೇರಿಸಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಉಪ ತಹಶೀಲ್ದಾರ್ ಅವರಿಗೆ  ಮನವಿ ಪತ್ರ ಸಲ್ಲಿಸಿದರು.

ಸಮಿತಿಯ ಎನ್. ಮುನಿಸ್ವಾಮಿ, ಜಿ.ಎಂ. ಶಿವಪ್ರಸಾದ್, ಕವಾಲಿ ವೆಂಕಟರವಣಪ್ಪ, ಜಿ. ನಾರಾಯಣ ಸ್ವಾಮಿ, ಶ್ರೀರಂಗಪ್ಪ, ರಾಮಯ್ಯ, ಶ್ರೀರಾಮಪ್ಪ, ಜನನಾಗಪ್ಪ, ರಾಮಕೃಷ್ಣ, ಚಲಪತಿ, ಆನಂದ, ಸಂಘರ್ಷ ಹಾಗೂ ಗಾಜಲಹಳ್ಳಿ ಗ್ರಾಮಸ್ಥರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು