ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟೊಮೆಟೊ ಬೆಲೆ ಪಾತಾಳಕ್ಕೆ ಕುಸಿತ: ಬೆಳೆಗಾರರು ಕಂಗಾಲು

Published 24 ಸೆಪ್ಟೆಂಬರ್ 2023, 14:29 IST
Last Updated 24 ಸೆಪ್ಟೆಂಬರ್ 2023, 14:29 IST
ಅಕ್ಷರ ಗಾತ್ರ

ಚಿಂತಾಮಣಿ: ಜುಲೈ-ಆಗಸ್ಟ್ ತಿಂಗಳಲ್ಲಿ ಬೆಲೆ ಗಗನಕ್ಕೇರಿ ದೇಶದಾದ್ಯಂತ ಸದ್ದು ಮಾಡಿದ್ದು ಟೊಮೆಟೊ ಈಗ ಬೆಲೆ ಕುಸಿತದಿಂದ ತತ್ತರಿಸುತ್ತಿದೆ.

15 ಕೆ.ಜಿ ಬಾಕ್ಸ್ ₹2,500 ವರೆಗೂ ಮಾರಾಟವಾಗಿತ್ತು. ಬೆಲೆ ಏರಿಕೆಯಿಂದ ಗ್ರಾಹಕರು ಕಣ್ಣೀರು ಸುರಿಸಿದ್ದರು. ಈಗ ಟೊಮೆಟೊ ಬೆಲೆ ಪಾತಾಳಕ್ಕೆ ಕುಸಿದಿರುವುದರಿಂದ ಕಣ್ಣೀರು ಸುರಿಸುವ ಸರದಿ ರೈತರದ್ದಾಗಿದೆ.

20 ದಿನಗಳ ಹಿಂದೆ ಟೊಮೆಟೊಗೆ ಬಂಗಾರದ ಬೆಲೆ ಬಂದಿತ್ತು. ತೋಟಗಳಲ್ಲಿ ರೈತರು ಹಗಲು-ರಾತ್ರಿ ಬೆಳೆಗೆ ಕಾವಲು ಕಾಯುತ್ತಿದ್ದರು. ಬೆಳೆ ನಾಶವಾಗಿ ಉತ್ಪಾದನೆ ಕಡಿಮೆ ಆಗಿದ್ದರಿಂದ ರೈತರಿಗೆ ಬಂಪರ್ ಬೆಲೆ ಸಿಕ್ಕಿತ್ತು. ಎಲ್ಲ ರೈತರು ದುಪ್ಪಟ್ಟು ಬೆಳೆ ಬೆಳೆದರು. ಉತ್ಪಾದನೆ ಹೆಚ್ಚಾಗಿ ಮಾರುಕಟ್ಟೆಗೆ ಆವಕ ಅಧಿಕವಾಗಿದೆ. ಬೆಲೆ ಪಾತಾಳಕ್ಕೆ ಕುಸಿದಿದೆ ಎಂದು ಟೊಮೆಟೊ ವ್ಯಾಪಾರಿ ಆನಂದ್ ಹೇಳಿದರು.

ನಗರದ ಎಪಿಎಂಸಿ ಮಾರುಕಟ್ಟೆಯಲ್ಲಿ ಕಳೆದ 20 ದಿನಗಳಿಂದ 15 ಕೆ.ಜಿ ಬಾಕ್ಸ್ ₹50ರಿಂದ ₹100 ರವರೆಗೆ ಮಾರಾಟವಾಗುತ್ತಿದೆ. ಗುಣಮಟ್ಟದ ಹಣ್ಣು ಮಾತ್ರ ₹100, ₹120 ರವರೆಗೆ ಹರಾಜಾಗುತ್ತಿದೆ.

ಹೆಚ್ಚಿನ ಬೆಳೆ, ಉತ್ತಮ ಇಳುವರಿ ಬರುತ್ತಿದ್ದು ಟೊಮೆಟೊ ಮಾರುಕಟ್ಟೆ ದಿನನಿತ್ಯ ತುಂಬಿ ತುಳುಕುತ್ತಿದೆ. ಮಹಾರಾಷ್ಟ್ರದ ನಾಸಿಕ್, ಔರಂಗಾಬಾದ್, ಮಧ್ಯಪ್ರದೇಶ ರಾಜ್ಯಗಳಲ್ಲೂ ಟೊಮೆಟೊ ಹೆಚ್ಚು ಬಂದಿದೆ. ಹೀಗಾಗಿ ಟೊಮೆಟೊ ಬೆಲೆ ಕುಸಿತ ಕಂಡಿದೆ ಎನ್ನುವುದು ವ್ಯಾಪಾರಿಗಳ ಅಭಿಪ್ರಾಯ.

ರೈತರು ತಿಪ್ಪೆ ಗೊಬ್ಬರ, ಕೋಳಿ ಗೊಬ್ಬರ ಹಾಕಿ ಸ್ಪರ್ಧಾತ್ಮಕವಾಗಿ ಬೆಳೆ ಬೆಳೆದಿದ್ದಾರೆ. ತೋಟಗಳಲ್ಲಿ ಹಣ್ಣು ನಳ ನಳಿಸುತ್ತಿದೆ. ಒಂದು ಎಕರೆ ಟೊಮೆಟೊ ಬೆಳೆಯಲು ಸುಮಾರು ₹2 ಲಕ್ಷ ಖರ್ಚು ಬರುತ್ತದೆ ಎನ್ನುತ್ತಾರೆ ರೈತರು.

ತೋಟದಲ್ಲಿ ಟೊಮೆಟೊ ಕೀಳುವ ಕೂಲಿ, ಬಾಕ್ಸ್ ಬಾಡಿಗೆ, ಸಾಗಾಣಿಕೆ, ವಾಹನಗಳಿಂದ ಇಳಿಸುವ ಕೂಲಿ, ಶೇ 10 ಕಮಿಷನ್ ಸೇರಿ ಕನಿಷ್ಠ ಬಾಕ್ಸ್‌ಗೆ ₹75 ಖರ್ಚು ತಗಲುತ್ತದೆ. ₹50 ರಿಂದ ₹75ಕ್ಕೆ ಮಾರಾಟವಾದರೆ ಗಿಡದಿಂದ ಹಣ್ಣು ಕೊಯ್ಲಿನ ಕೂಲಿ ಸಿಗುವುದಿಲ್ಲ. ಹೀಗಾಗಿ ಬಹುತೇಕ ರೈತರು ಹಣ್ಣನ್ನು ಕೀಳುತ್ತಿಲ್ಲ.

ರೈತರು ಎಚ್ಚೆತ್ತುಕೊಳ್ಳಬೇಕು. ಒಂದೇ ಬೆಳೆಗೆ ಮಾರು ಹೋಗುವುದನ್ನು ತ್ಯಜಿಸಬೇಕು. ಬಹುಬೆಳೆ ಪದ್ಧತಿ ಕೈಗೊಳ್ಳಬೇಕು. ರೈತರು ವರ್ಷದಲ್ಲಿ ಬೆಳೆಯಬಹುದಾದ ಬೆಳೆಗಳ ಯೋಜನೆ ರೂಪಿಸಿಕೊಳ್ಳಬೇಕು ಎಂದು ವಿಜ್ಞಾನಿಗಳು ಸಲಹೆ ನೀಡುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT