ಮಂಗಳವಾರ, ನವೆಂಬರ್ 19, 2019
23 °C
ಕಾಂಗ್ರೆಸ್ ಮುಖಂಡರ ಸಭೆಯಲ್ಲಿ ಕಾರ್ಯಕರ್ತರಿಗೆ ಎಐಸಿಸಿ ಕಾರ್ಯದರ್ಶಿ, ಕೆಪಿಸಿಸಿ ಉಸ್ತುವಾರಿ ಪಿ.ಸಿ.ವಿಷ್ಣುನಾಥನ್ ಸಲಹೆ

ಕಾಂಗ್ರೆಸ್‌ಗೆ ದ್ರೋಹ ಬಗೆದವರಿಗೆ ಬುದ್ಧಿ ಕಲಿಸಿ

Published:
Updated:
Prajavani

ಚಿಕ್ಕಬಳ್ಳಾಪುರ: ‘ಕಾಂಗ್ರೆಸ್‌ಗೆ ದ್ರೋಹ ಬಗೆದ ಅನರ್ಹ ಶಾಸಕರನ್ನು ಸೋಲಿಸುವುದೇ ಕಾಂಗ್ರೆಸ್ ಕಾರ್ಯಕರ್ತರ ಗುರಿಯಾಗಬೇಕು. ಮಾತೃಪಕ್ಷದಲ್ಲಿ ಎಲ್ಲಾ ಅಧಿಕಾರ ಅನುಭವಿಸಿ ದ್ರೋಹ ಬಗೆದವರಿಗೆ ಉಪ ಚುನಾವಣೆಯಲ್ಲಿ ಬುದ್ಧಿ ಕಲಿಸಬೇಕು’ ಎಂದು ಎಐಸಿಸಿ ಕಾರ್ಯದರ್ಶಿ, ಕೆಪಿಸಿಸಿ ಉಸ್ತುವಾರಿ ಪಿ.ಸಿ.ವಿಷ್ಣುನಾಥನ್ ಹೇಳಿದರು.

ತಾಲ್ಲೂಕಿನ ಹಾರೋಬಂಡೆ ಗ್ರಾಮದಲ್ಲಿರುವ ಶಿರಡಿಸಾಯಿ ಆಶ್ರಮದಲ್ಲಿ ಭಾನುವಾರ ನಡೆದ ಕಾಂಗ್ರೆಸ್ ಮುಖಂಡರ ಸಭೆಯಲ್ಲಿ ಮಾತನಾಡಿದ ಅವರು, ‘ಕಾಂಗ್ರೆಸ್ ಕಾರ್ಯಕರ್ತನಾದ ನನಗೆ ಅನರ್ಹ ಶಾಸಕರ ಹೆಸರು ಬಾಯಲ್ಲಿ ಉಚ್ಚರಿಸಲು ಅಸಹ್ಯ ಹುಟ್ಟಿಸುತ್ತದೆ. ಪಕ್ಷದಿಂದ ಎಲ್ಲವನ್ನೂ ಪಡೆದು ಕೊನೆಗೆ ಕಷ್ಟ ಕಾಲದಲ್ಲಿ ಕೈ ಕೊಟ್ಟು ದ್ರೋಹ ಬಗೆಯುವುದು ಶೋಭೆ ತರುವ ಸಂಗತಿಯಲ್ಲ’ ಎಂದು ತಿಳಿಸಿದರು.

‘ಸಿದ್ದರಾಮಯ್ಯ ಅವರು ಹಠ ಹಿಡಿದು ಇವರನ್ನು (ಡಾ.ಕೆ.ಸುಧಾಕರ್) ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷರನ್ನಾಗಿ ಮಾಡಿದರು. ಅವರ ಅಧಿಕಾರದ ಅವಧಿಯಲ್ಲಿ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರಕ್ಕೆ ಸಾವಿರಾರು ಕೋಟಿ ಅನುದಾನ ನೀಡಿದರು. ಆದರೆ ಕೊನೆಗೆ ಅವರ ಮಾತಿಗೂ ಬೆಲೆ ಕೊಡದೆ ಆಪರೇಷನ್ ಕಮಲಕ್ಕೆ ಬಲಿಯಾದರು. ಈಗ ಬಿಜೆಪಿಯಲ್ಲಿ ಸಮುದ್ರದ ನೀರಿನಿಂದ ದಡಕ್ಕೆ ಹಾಕಿದ ಮೀನಿನಂತೆ ನರಳುವ ಪರಿಸ್ಥಿತಿಗೆ ಬಂದಿದ್ದಾರೆ’ ಎಂದು ಅಭಿಪ್ರಾಯಪಟ್ಟರು.

‘ಒಬ್ಬ ರಾಷ್ಟ್ರೀಯ ಪಕ್ಷದ ಅಧ್ಯಕ್ಷ ಆಪರೇಷನ್ ಕಮಲದಲ್ಲಿ ಭಾಗಿಯಾಗಿ ಈ ದೇಶದ ಜನರ ಮುಂದೆ ಬೆತ್ತಲಾಗಿದ್ದಾರೆ. ಈಗಾಗಲೇ ಮಹಾರಾಷ್ಟ್ರ ಮತ್ತು ಹರಿಯಾಣ ವಿಧಾನಸಭಾ ಚುನಾವಣೆಗಳಲ್ಲಿ ಅವರು ಜನರಿಂದ ತಿರಸ್ಕಾರಕ್ಕೆ ಒಳಗಾಗಿರುವುದು ಜನಾದೇಶದಿಂದ ಸ್ಪಷ್ಟವಾಗಿದೆ’ ಎಂದರು.

‘ಮುಂದಿನ ಒಂದು ವಾರದ ಒಳಗೆ ಪಂಚಾಯಿತಿ ಮತ್ತು ಬೂತ್ ಮಟ್ಟಕ್ಕೆ ಒಬ್ಬರಂತೆ ನಿಷ್ಠಾವಂತ ಮುಖಂಡರ ಪಟ್ಟಿಯನ್ನು ತಯಾರಿಸಿ ಅವರ ಮುಖಾಂತರ ಪಕ್ಷ ಸಂಘಟಿಸಬೇಕು. ಬೂತ್ ಮಟ್ಟದ ಮುಖಂಡರಿಗೆ ಚುನಾವಣೆಯ ಜವಾಬ್ದಾರಿ ನೀಡಿ ಅವರ ನೇತೃತ್ವದಲ್ಲೇ ಚುನಾವಣೆ ಎದುರಿಸಬೇಕು’ ಎಂದು ಮುಖಂಡರಿಗೆ ಸೂಚನೆ ನೀಡಿದರು.

‘ಚುನಾವಣೆಯ ಪ್ರಕ್ರಿಯೆಗಳು ಆರಂಭವಾದ ಬಳಿಕ ಈ ಕ್ಷೇತ್ರದ ಪ್ರಚಾರದಲ್ಲಿ ರಾಷ್ಟ್ರಮಟ್ಟದ ನಾಯಕರು ಕೂಡ ಭಾಗಿಯಾಗಲಿದ್ದಾರೆ. ನಮ್ಮ ಕಾರ್ಯಕರ್ತರು ಈಗಿನಿಂದಲೇ ಮನೆಮನೆಗೆ ಹೋಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಜನ ವಿರೋಧಿ ನೀತಿಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕು’ ಎಂದು ತಿಳಿಸಿದರು.

ಶಾಸಕರಾದ ವಿ.ಮುನಿಯಪ್ಪ, ಎನ್.ಎಚ್.ಶಿವಶಂಕರರೆಡ್ಡಿ, ಮಾಜಿ ಶಾಸಕರಾದ ಎನ್.ಸಂಪಂಗಿ, ಎಸ್‌.ಎಂ.ಮುನಿಯಪ್ಪ, ಅನಸೂಯಮ್ಮ, ಕಾಂಗ್ರೆಸ್ ಅಭ್ಯರ್ಥಿ ನಂದಿ ಆಂಜಿನಪ್ಪ ,ಮುಖಂಡರಾದ ಜಿ.ಎಚ್.ನಾಗರಾಜ್, ಕೆ.ವಿ.ನವೀನ್ ಕಿರಣ್, ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಎನ್.ಕೇಶವರೆಡ್ಡಿ, ಕೆಪಿಸಿಸಿ ಸದಸ್ಯ ಎಸ್.ಪಿ.ಶ್ರೀನಿವಾಸ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಯರಾಂ, ಮುಖಂಡರಾದ ಜಾವೀದ್, ಪ್ರೆಸ್ ಸುರೇಶ್, ಅರುಣ್, ಶಂಕರ್, ಸುಮಿತ್ರಮ್ಮ, ನಾರಾಯಣಮ್ಮ, ಕೋಡೇಸ್ ವೆಂಕಟೇಶ್, ಮರಸನಹಳ್ಳಿ ಪ್ರಕಾಶ್, ಕೃಷ್ಣನ್, ಅಮಾನುಲ್ಲಾ ಸಭೆಯಲ್ಲಿ ಹಾಜರಿದ್ದರು.

ಪ್ರತಿಕ್ರಿಯಿಸಿ (+)