ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕಬಳ್ಳಾಪುರ: ಬೆಟ್ಟದ ಮೇಲಿನ ಶಿಲುಬೆ ತೆರವು

ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರಿಂದ ದೂರು ದಾಖಲು
Last Updated 23 ಸೆಪ್ಟೆಂಬರ್ 2020, 20:15 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ತಾಲ್ಲೂಕಿನ ಆವಲಗುರ್ಕಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸೂಸೇಪಾಳ್ಯ ಬೆಟ್ಟದ ಮೇಲೆ ನೆಟ್ಟಿದ್ದ ಶಿಲುಬೆಯನ್ನು ಬುಧವಾರ ಪೊಲೀಸ್‌ ಬಿಗಿಭದ್ರತೆಯಲ್ಲಿ ಕಂದಾಯ ಇಲಾಖೆ ಅಧಿಕಾರಿಗಳು ತೆರವುಗೊಳಿಸಿದರು.

‘ಅರಿಕೆರೆ ಗ್ರಾಮದ ಸರ್ವೇ ನಂಬರ್ 10 ರಲ್ಲಿರುವ 173 ಗೋಮಾಳದ ಪೈಕಿ ಕ್ರೈಸ್ತ ಮಿಷನರಿ ಸುಮಾರು 170 ಎಕರೆಯಲ್ಲಿ ಅಕ್ರಮವಾಗಿ ಪ್ರವೇಶ ಮಾಡಿ ಅಲ್ಲಲ್ಲಿ ಶಿಲುಬೆ ನೆಟ್ಟು, ಬೆಟ್ಟದ ಮೇಲೆ ದೊಡ್ಡ ಶಿಬುಲು ನೆಟ್ಟು ಗೋಮಾಳ ಕಬಳಿಕೆ ಹುನ್ನಾರ ನಡೆಸಿದೆ. ಒತ್ತುವರಿ ತೆರವುಗೊಳಿಸಬೇಕು’ ಎಂದು ಒತ್ತಾಯಿಸಿ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತ ರಾಘವೇಂದ್ರ ಜೆಟ್ಟಿ ಅವರು ಜಿಲ್ಲಾಧಿಕಾರಿ, ಉಪವಿಭಾಗಾಧಿಕಾರಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅವರಿಗೆ ಜೂನ್ 2 ರಂದು ದೂರು ನೀಡಿದ್ದರು.

ಜತೆಗೆ, ಈ ಕುರಿತು ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದು ಸಲ್ಲಿಕೆಯಾಗಿತ್ತು. ಅದರ ಬೆನ್ನಲ್ಲೇ ಜಿಲ್ಲಾಡಳಿತ ಗೋಮಾಳದ ಜಾಗದಲ್ಲಿದ್ದ ಶಿಲುಬೆಯನ್ನು ತೆರವುಗೊಳಿಸುವ ಕಾರ್ಯಾಚರಣೆ ನಡೆಸಿದೆ.

ಪೊಲೀಸ್‌ ಬಂದೋಬಸ್ತ್‌ನಲ್ಲಿ ಉಪವಿಭಾಗಾಧಿಕಾರಿ ಎ.ಎನ್.ರಘುನಂದನ್, ತಹಶೀಲ್ದಾರ್ ನಾಗಪ್ರಶಾಂತ್‌ ಅವರ ನೇತೃತ್ವದಲ್ಲಿ ಕಂದಾಯ ಇಲಾಖೆ ಅಧಿಕಾರಿಗಳು ಶಿಲುಬೆ ತೆರವು ಕಾರ್ಯಾಚರಣೆ ನಡೆಸಿದರು. ಈ ವೇಳೆ ಸೊಸೆಪಾಳ್ಯದಲ್ಲಿರುವ ಕ್ರೈಸ್ತ ಸಮುದಾಯದವರು ಶಿಲುಬೆ ತೆರವಿಗೆ ಆಕ್ಷೇಪಿಸುವ ಜತೆಗೆ ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ.ಸುಧಾಕರ್ ಅವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ಸೂಸೋಪಾಳ್ಯ ನಿವಾಸಿ ಜೆ.ಜೋಸೆಫ್, ‘ಬೆಟ್ಟದ ಮೇಲೆ 42 ವರ್ಷಗಳ ಹಿಂದೆ ಶಿಲುಬೆ ನೆಡಲಾಗಿದೆ. ಈವರೆಗೆ ಈ ಭಾಗದಲ್ಲಿ ಕ್ರಿಶ್ಚಿಯನ್‌ರು ಯಾರಿಗೂ ತೊಂದರೆ ಮಾಡಿಲ್ಲ. ಮತಾಂತರ ನಡೆಸಿಲ್ಲ. ಎಲ್ಲ ಧರ್ಮಿಯರೊಂದಿಗೆ ಭ್ರಾತೃತ್ವದಿಂದ ಬಾಳುತ್ತಿದ್ದೇವೆ. ಶುಭ ಶುಕ್ರವಾರ ಹಬ್ಬದಂದು ಮಾತ್ರ ಬೆಟ್ಟದಲ್ಲಿ ವಿಶೇಷ ಪ್ರಾರ್ಥನೆ ನಡೆಸಲಾಗುತ್ತಿತ್ತು. ಉಳಿದಂತೆ ಅಲ್ಲಿ ಯಾವುದೇ ಚಟುವಟಿಕೆಗಳು ನಡೆಯುತ್ತಿರಲಿಲ್ಲ’ ಎಂದು ಹೇಳಿದರು.

‘ಶಿಲುಬೆ ಸ್ಥಳದಲ್ಲಿ ಸುಮಾರು ಎರಡು ಎಕರೆ ಜಾಗ ಮಂಜೂರು ಮಾಡಿಕೊಡುವಂತೆ ಶಾಸಕ ಸುಧಾಕರ್ ಅವರಿಗೆ ಅನೇಕ ವರ್ಷಗಳಿಂದ ಒತ್ತಾಯಿಸುತ್ತ ಬಂದಿ್ದ್ದೇವೆ. ಅವರು ಪ್ರತಿ ಚುನಾವಣೆಯಲ್ಲಿ ಭೂಮಿ ಮಂಜೂರು ಮಾಡಿಸುವ ಆಶ್ವಾಸನೆ ನೀಡಿ ಮತ ಪಡೆದಿದ್ದಾರೆ. ಇತ್ತೀಚೆಗೆ ಸಹ ಶಿಲುಬೆ ತೆರವುಗೊಳಿಸಲು ಬಿಡುವುದಿಲ್ಲ ಎಂದು ಮಾತು ಕೊಟ್ಟಿದ್ದರು. ಅದು ಈಡೇರಲಿಲ್ಲ’ ಎಂದು ತಿಳಿಸಿದರು.

‘ಬಿಜೆಪಿ ಸರ್ಕಾರದ ಒತ್ತಡಕ್ಕೆ ಮಣಿದು ಅಧಿಕಾರಿಗಳು ನಮ್ಮ ಮನವಿಯನ್ನು ಕಿವಿಗೆ ಹಾಕಿಕೊಳ್ಳದೆ ಏಕಾಏಕಿ ಬಂದು ಶಿಲುಬೆ ತೆರವುಗೊಳಿಸಿದ್ದಾರೆ. ಇದರ ಹಿಂದೆ ಸುಧಾಕರ್ ಅವರ ಸೇಡಿನ ರಾಜಕೀಯ ಸಹ ಇದೆ. ಅಧಿಕಾರಿಗಳು ನಮಗೆ ಸಮಯಾವಕಾಶ ನೀಡದೆ ದರ್ಪ ಮೆರೆದು ಶಿಲುಬು ನಾಶಪಡಿಸಿದ್ದಾರೆ’ ಎಂದು ಆರೋಪಿಸಿದರು.

ಉಪವಿಭಾಗಾಧಿಕಾರಿ ಎ.ಎನ್.ರಘುನಂದನ್ ಮಾತನಾಡಿ, ‘ಸೊಸೋಪಾಳ್ಯ ಬೆಟ್ಟದಲ್ಲಿ ಅನಧಿಕೃತವಾಗಿ ಸರ್ಕಾರಿ ಜಾಗದಲ್ಲಿ ಶಿಲುಬೆ ನೆಡಲಾಗಿತ್ತು. ಈ ಬಗ್ಗೆ ದೂರೊಂದು ಸಲ್ಲಿಕೆಯಾಗಿತ್ತು. ಜತೆಗೆ, ಹೈಕೋರ್ಟ್‌ನಲ್ಲಿ ಪಿಐಎಲ್‌ ಸಹ ದಾಖಲಾಗಿದೆ. ಆದ್ದರಿಂದ ಶಿಲುಬೆ ತೆರವುಗೊಳಿಸಲಾಗಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT