ಸೋಮವಾರ, ಆಗಸ್ಟ್ 2, 2021
26 °C
ಪಕ್ಷದ ಶಿಸ್ತು ಉಲ್ಲಂಘನೆ ಮಾಡಿದ ಆರೋಪ, ಜಿಲ್ಲಾ ಸಮಿತಿ ಸಭೆಯಲ್ಲಿ ಶಿಸ್ತುಕ್ರಮದ ತೀರ್ಮಾನ

ಸಿಪಿಎಂ ಪಕ್ಷದಿಂದ 15 ಮುಖಂಡರ ಉಚ್ಛಾಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿಕ್ಕಬಳ್ಳಾಪುರ: ಸಿಪಿಎಂ ಪಕ್ಷದ ಶಿಸ್ತು ಉಲ್ಲಂಘನೆ ಮಾಡಿದ ಆರೋಪದ ಮೇಲೆ ಪಕ್ಷದ 15 ಮುಖಂಡರನ್ನು ಗುರುವಾರ ಸಿಪಿಎಂ ಜಿಲ್ಲಾ ಸಮಿತಿ ಉಚ್ಛಾಟನೆ ಮಾಡಿತು.

ನಗರದಲ್ಲಿ ನಡೆದ ಸಿಪಿಎಂ ಜಿಲ್ಲಾ ಸಮಿತಿ ಸಭೆಯಲ್ಲಿ ಉಚ್ಛಾಟನೆ ತೀರ್ಮಾನ ಕೈಗೊಳ್ಳಲಾಯಿತು. ಈ ವೇಳೆ ಮಾತನಾಡಿದ ಜಿಲ್ಲಾ ಸಮಿತಿ ಕಾರ್ಯದರ್ಶಿ ಬಿ.ಜಯರಾಮರೆಡ್ಡಿ, ‘ಸಿಪಿಎಂ ರಾಜ್ಯ ಸಮಿತಿ ಸದಸ್ಯರಾದ ಚನ್ನರಾಯಪ್ಪ ಅವರು ಪಕ್ಷದ ಶಿಸ್ತು ಉಲ್ಲಂಘಿಸಿ ಪತ್ರಿಕಾಗೋಷ್ಠಿ, ಗುಂಪು ಸಭೆಗಳನ್ನು ನಡೆಸುವ ಮೂಲಕ ನಿಯಮ ಬಾಹಿರವಾಗಿ ನಡೆದುಕೊಂಡಿದ್ದಾರೆ’ ಎಂದು ಆರೋಪಿಸಿದರು.

‘ಚನ್ನರಾಯಪ್ಪ ಅವರ ವಿರುದ್ಧ ಪಕ್ಷ ಈ ಹಿಂದೆಯೂ ಶಿಸ್ತುಕ್ರಮ ಜರುಗಿಸಿತ್ತು. ಆದರೂ ಅವರು ಪಕ್ಷದ ಸಿದ್ಧಾಂತ ಮರೆತು ಸಿಪಿಎಂ ಗೌರವಕ್ಕೆ ಧಕ್ಕೆ ತರುವ ರೀತಿಯಲ್ಲಿ ಅಪಪ್ರಚಾರ ಮಾಡುತ್ತಿದ್ದಾರೆ. ಅವರು ಪತ್ರಿಕಾಗೋಷ್ಠಿಯಲ್ಲಿ ಮಾಡಿದ ಆರೋಪಗಳ ಬಗ್ಗೆ ಈ ಹಿಂದೆಯೇ ರಾಜ್ಯ ಸಮಿತಿ ಸಭೆಯಲ್ಲಿ ಚರ್ಚೆಗಳಾಗಿವೆ. ಆದರೂ, ಸಿಪಿಎಂ ಕಾರ್ಯಕರ್ತರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ’ ಎಂದು ಹೇಳಿದರು.

‘ಚನ್ನರಾಯಪ್ಪ ಅವರ ಜತೆಗೆ ಬಾಗೇಪಲ್ಲಿ, ಗುಡಿಬಂಡೆ, ಗೌರಿಬಿದನೂರು ತಾಲ್ಲೂಕಿನ ಕೆಲ ಮುಖಂಡರು ಬಹಿರಂಗ ಸಭೆಗಳಲ್ಲಿ ಭಾಗವಹಿಸುವ ಮೂಲಕ ಪಕ್ಷದ ಸಂವಿಧಾನ ಉಲ್ಲಂಘನೆ ಮಾಡಿದ್ಧಾರೆ. ಆದ್ದರಿಂದ, ಪಕ್ಷದ ಸಂವಿಧಾನದ 19 ವಿಧಿಯ 6ನೇ ಕಾಲಂ ಅಡಿ ಈ ಮುಖಂಡರನ್ನು ಪಕ್ಷದಿಂದ ಪ್ರಾಥಮಿಕ ಸದಸ್ಯತ್ವದಿಂದ ಉಚ್ಛಾಟಿಸಲು ಸಭೆಯಲ್ಲಿ ತೀರ್ಮಾನಿಸಲಾಗಿದೆ’ ಎಂದು ತಿಳಿಸಿದರು.

‘ಚನ್ನರಾಯಪ್ಪ, ಸಿಪಿಎಂ ಜಿಲ್ಲಾ ಸಮಿತಿ ಸದಸ್ಯರಾದ ಆರ್.ಎನ್.ರಾಜು, ಜೈನಾಬಿ, ವೆಂಕಟರಮಣ, ಎಲ್‌.ವೆಂಕಟೇಶ್‌, ಬಾಗೇಪಲ್ಲಿ ತಾಲ್ಲೂಕು ಸಮಿತಿಯ ಸದಸ್ಯರಾದ ಬಯ್ಯಾರೆಡ್ಡಿ, ರಾಮಾಂಜಿನಪ್ಪ, ಚಲಪತಿ, ಆರ್.ಚಂದ್ರಶೇಖರರೆಡ್ಡಿ, ಎಚ್‌.ಎನ್.ಚಂದ್ರಶೇಖರ್‌ ರೆಡ್ಡಿ, ನಾರಾಯಣಸ್ವಾಮಿ ಅವರನ್ನು ಉಚ್ಛಾಟಿಸಲಾಗಿದೆ’ ಎಂದು ಹೇಳಿದರು.

‘ಗುಡಿಬಂಡೆ ತಾಲ್ಲೂಕು ಸಮಿತಿ ಸದಸ್ಯರಾದ ಆದಿನಾರಾಯಣರೆಡ್ಡಿ, ಎಸ್‌.ಎನ್.ಮಂಜುನಾಥ್, ವೆಂಕಟರಾಜು, ಮಧು ಮತ್ತು ಗೌರಿಬಿದನೂರಿನ ಸಾಲಾರ್ ಅವರನ್ನು ಸಿಪಿಎಂ ಪಕ್ಷದಿಂದ ಉಚ್ಛಾಟಿಸಲಾಗಿದೆ. ಮಾಹಿತಿ ಕೊರತೆಯಿಂದ ಪಕ್ಷದ ಕೆಲ ಮುಗ್ಧ ಕಾರ್ಯಕರ್ತರು ಉಚ್ಛಾಟಿತ ಮುಖಂಡರೊಂದಿಗೆ ಭಾಗವಹಿಸಿದ್ದರು. ಅವರಿಗೆ ತಿಳಿ ಹೇಳಲಾಗಿದೆ’ ಎಂದರು.

ಸಭೆಯಲ್ಲಿ ಜಿಲ್ಲಾ ಸಮಿತಿ ಸದಸ್ಯರಾದ ಎಚ್.ವಿ.ಲಕ್ಷ್ಮಿನಾರಾಯಣ, ಎಂ.ಪಿ.ಮುನಿವೆಂಕಟಪ್ಪ, ಮೊಹಮ್ಮದ್ ಅಕ್ರಂ, ಹೇಮಚಂದ್ರ, ಅಶ್ವತ್ಥನಾರಾಯಣ, ರವಿಚಂದ್ರರೆಡ್ಡಿ, ಸಿದ್ಧಗಂಗಪ್ಪ, ಆಂಜನೇಯರೆಡ್ಡಿ, ಶ್ರೀರಾಮ ನಾಯಕ್ ಸಭೆಯಲ್ಲಿ ಹಾಜರಿದ್ದರು.

ಇತ್ತೀಚೆಗಷ್ಟೇ ಬಾಗೇಪಲ್ಲಿ ಎಪಿಎಂಸಿ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆಯಲ್ಲಿ ಪಕ್ಷ ವಿರೋಧಿ ಚಟುವಟಿಕೆ ನಡೆಸಿದ ಆರೋಪದ ಮೇಲೆ ಸಿಪಿಎಂ ಬಾಗೇಪಲ್ಲಿ ತಾಲ್ಲೂಕು ಸಮಿತಿ ಸದಸ್ಯ ಸೋಮಶೇಖರ್‌ ರೆಡ್ಡಿ, ಜಿಲ್ಲಾ ಸಮಿತಿ ಸದಸ್ಯ ವೈ.ಎ.ಅಶ್ವತ್ಥರೆಡ್ಡಿ ಅವರನ್ನು ಉಚ್ಛಾಟಿಸಲಾಗಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.