ಶನಿವಾರ, ಮೇ 8, 2021
18 °C
ಚಿಕ್ಕಬಳ್ಳಾ‍ಪುರ ಜಿಲ್ಲೆಯಲ್ಲಿ ಐದು ರೈತ ಉತ್ಪಾದಕ ಕಂಪನಿಗಳು ಅಸ್ತಿತ್ವಕ್ಕೆ

ಆದಾಯ ದ್ವಿಗುಣಕ್ಕೆ ರೈತ ಕಂ‍ಪನಿ ಸಹಕಾರಿ

ಎಂ.ರಾಮಕೃಷ್ಣಪ್ಪ Updated:

ಅಕ್ಷರ ಗಾತ್ರ : | |

Prajavani

ಚಿಂತಾಮಣಿ: ರೈತರ ಕೃಷಿ ಉತ್ಪಾದನಾ ವೆಚ್ಚವನ್ನು ಕಡಿಮೆ ಮಾಡುವುದು, ಉತ್ಪಾದನೆ ಮಾಡಿದ ಪದಾರ್ಥಗಳ ಮಾರಾಟ ವ್ಯವಸ್ಥೆ, ಮಧ್ಯವರ್ತಿಗಳ ಹಾವಳಿಯಿಂದ ರಕ್ಷಿಸಿ ರೈತರ ಆದಾಯವನ್ನು ದ್ವಿಗುಣಗೊಳಿಸಲು ಕೃಷಿ ಇಲಾಖೆಯ ಮೇಲ್ವಿಚಾರಣೆಯಲ್ಲಿ ಜಿಲ್ಲೆಯಲ್ಲಿ 5 ರೈತ ಉತ್ಪಾದಕ ಕಂಪನಿಗಳು ರಚನೆಯಾಗಿವೆ.

ರೈತರಿಂದ, ರೈತರಿಗಾಗಿ ರೈತರೇ ಬೆಳೆದು ಮಾರಾಟ ಮಾಡಲು ಅನುಕೂಲವಾಗುವಂತೆ ಸಂಸ್ಕರಣೆ ಮತ್ತು ಮೌಲ್ಯವರ್ಧನೆ ಮಾಡುವುದು ಈ ಕಂಪನಿಗಳ ಉದ್ದೇಶವಾಗಿದೆ. ಸಹಕಾರ ವ್ಯವಸ್ಥೆಯಲ್ಲಿ ಬಾಹ್ಯಶಕ್ತಿಗಳ ಕೈವಾಡದಿಂದ ರೈತರ ಆದಾಯ ಹೆಚ್ಚಿಸಿಕೊಳ್ಳಲು ಅವಕಾಶಗಳಿಲ್ಲ. ಸಹಕಾರ ತತ್ವ ಹಾಗೂ ಕಂಪನಿ ಕಾಯ್ದೆಗಳನ್ನು ಅಳವಡಿಸಿಕೊಂಡು ಕೃಷಿಕರು ಮತ್ತು ಗ್ರಾಹಕಸ್ನೇಹಿಯಾಗಲು ಕಂಪನಿಗಳನ್ನು ಹುಟ್ಟುಹಾಕಲಾಗಿದೆ.

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಕೃಷಿ ಇಲಾಖೆಯ ಮೇಲ್ವಿಚಾರಣೆಯಲ್ಲಿ ಚಿಂತಾಮಣಿ ತಾಲ್ಲೂಕಿನಲ್ಲಿ 2, ಶಿಡ್ಲಘಟ್ಟ ತಾಲ್ಲೂಕಿನಲ್ಲಿ 2 ಹಾಗೂ ಚಿಕ್ಕಬಳ್ಳಾಪುರ ತಾಲ್ಲೂಕಿನಲ್ಲಿ 1 ಸೇರಿದಂತೆ ಒಟ್ಟು 5 ಕಂಪನಿಗಳು ರಚನೆಯಾಗಿವೆ. ತಯಾರಕರು, ರೈತರು ಮತ್ತು ಗ್ರಾಹಕರೊಂದಿಗೆ ನೇರ ಸಂಪರ್ಕ ಬೆಸೆಯುವುದರಿಂದ ಕೃಷಿಯನ್ನು ಲಾಭದಾಯಕ ಕ್ಷೇತ್ರವನ್ನಾಗಿ ರೂಪಿಸುವುದು ಸರ್ಕಾರದ ಉದ್ದೇಶವಾಗಿದೆ.

ಚಿಂತಾಮಣಿ ತಾಲ್ಲೂಕಿನ ಕೋನಪ್ಪಲ್ಲಿ ಗುಚ್ಛ ಗ್ರಾಮದಲ್ಲಿ ಅಂಬಾಜಿದುರ್ಗ ರೈತ ಉತ್ಪಾದಕ ಕಂಪನಿ ಹಾಗೂ ಪೆರಮಾಚನಹಳ್ಳಿಯಲ್ಲಿ ರೈತ ಉತ್ಪಾದಕ ಕಂಪನಿಗಳನ್ನು ಸ್ಥಾಪಿಸಲಾಗಿದೆ. ರೈತರಿಗೆ ಅಗತ್ಯವಾದ ಕೃಷಿ ಪರಿಕರಗಳು, ರಸಗೊಬ್ಬರ, ಬಿತ್ತನೆಬೀಜಗಳನ್ನು ತಯಾರಕ ಕಂಪನಿಗಳೊಂದಿಗೆ ಒಡಂಬಡಿಕೆ ಮಾಡಿಕೊಂಡು ನೇರವಾಗಿ ರೈತರಿಗೆ ತಲುಪಿಸಲಾಗುತ್ತದೆ. ಇದರಿಂದ ಮಧ್ಯವರ್ತಿಗಳ ಹಾವಳಿಗೆ ಕಡಿವಾಣ ಬಿದ್ದು ಲಾಭ ರೈತರಿಗೆ ಸಿಗುತ್ತದೆ.

ರೈತ ಉತ್ಪಾದಕ ಕಂಪನಿಗಳು ಸರ್ಕಾರಿ ಸವಲತ್ತುಗಳನ್ನು ಪಡೆದು ಯಂತ್ರಾಧಾರೆ ಪ್ರಾರಂಭ ಮಾಡಿ ಉಳುಮೆ, ಬಿತ್ತನೆ, ಕಟಾವು, ಒಕ್ಕಣೆ ಸೇರಿದಂತೆ ವಿವಿಧ ಹಂತಗಳಲ್ಲಿ ಕಡಿಮೆ ದರದಲ್ಲಿ ಸೇವೆ ಒದಗಿಸುತ್ತವೆ. ರೈತರು ಬೆಳೆದ ಉತ್ಪನ್ನಗಳನ್ನು ಸಂಸ್ಕರಣೆ ಮತ್ತು ಮೌಲ್ಯವರ್ಧನೆ ಮಾಡಿಕೊಂಡು ತಮ್ಮದೇ ಬ್ರಾಂಡ್ ಹೆಸರು ನೀಡಿ ಮಾರಾಟ ಮಾಡಲು ಸಹಕಾರ ಮತ್ತು ಮಾರ್ಗದರ್ಶನ ನೀಡಲಾಗುತ್ತದೆ.

‘ರೈತ ಉತ್ಪಾದಕ ಕಂಪನಿಗಳಿಂದ ರೈತರಿಗೆ ಅನುಕೂಲವಾಗುತ್ತದೆ. ಮಾವು, ಟೊಮೆಟೊ ಸೇರಿದಂತೆ ಹಣ್ಣು, ತರಕಾರಿಗಳ ಸಂಸ್ಕರಣೆ, ಮೌಲ್ಯವರ್ಧನೆ ಮಾಡಿ, ಪ್ಯಾಕೇಜ್, ಲೇಬಲ್, ಮಾರಾಟದ ಪರವಾನಗಿ ಮಾಡಿಸಿ ನೇರ ಮಾರಾಟ ಮಾಡಲು ಕಂಪನಿ ಮಾರ್ಗದರ್ಶನ ನೀಡುತ್ತದೆ’ ಎನ್ನುತ್ತಾರೆ ಅಂಬಾಜಿದುರ್ಗ ರೈತ ಉತ್ಪಾದಕ ಕಂಪನಿಯ ಕಾರ್ಯ ನಿರ್ವಹಣಾಧಿಕಾರಿ ರಾಧಾಕೃಷ್ಣ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು