ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮರಾಠ ಪ್ರಾಧಿಕಾರ ರಚನೆಗೆ ಆಕ್ಷೇಪ

ಮರಾಠ ಅಭಿವೃದ್ಧಿ ಪ್ರಾಧಿಕಾರ ರಚನೆ ನಿರ್ಧಾರ ಕೈಬಿಡುವಂತೆ ರಾಜ್ಯ ಸರ್ಕಾರಕ್ಕೆ ಆಗ್ರಹ
Last Updated 19 ನವೆಂಬರ್ 2020, 1:38 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಮರಾಠ ಅಭಿವೃದ್ಧಿ ನಿಗಮ ರಚಿಸಿ, ₹50 ಕೋಟಿ ಅನುದಾನ ಘೋಷಣೆ ಮಾಡಿರುವ ನಿರ್ಧಾರಕ್ಕೆ ಜಿಲ್ಲೆಯಲ್ಲೂ ಅಪಸ್ವರ ಕೇಳಿಬರುತ್ತಿದೆ.

‘ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆಯ ದೃಷ್ಟಿಯಿಂದ ಮರಾಠರ ಮತಕ್ಕಾಗಿ ರಾಜ್ಯ ಸರ್ಕಾರ ಪ್ರಾಧಿಕಾರ ರಚಿಸುತ್ತಿದೆ. ಇದು ಕನ್ನಡ ನಾಡು ಮತ್ತು ಕನ್ನಡಿಗರಿಗೆ ಮಾಡಿರುವ ದ್ರೋಹ. ಈ ನಿರ್ಧಾರವನ್ನು ಸರ್ಕಾರ ಕೂಡಲೇ ಕೈಬಿಡಬೇಕು’ ಎಂದು ಸಾಹಿತಿಗಳು, ಕನ್ನಡಪರ ಹೋರಾಟಗಾರು ಒತ್ತಾಯಿಸುತ್ತಿದ್ದಾರೆ.

ಮರಾಠಾ ಅಭಿವೃದ್ಧಿ ಪ್ರಾಧಿಕಾರ ಅಸ್ತಿತ್ವಕ್ಕೆ ಬಂದರೆ, ಕನ್ನಡ ವಿರೋಧಿ ಚಟುವಟಿಕೆ ನಡೆಸುವವರಿಗೆ ಅನುಕೂಲ ಕಲ್ಪಿಸಿದಂತಾಗುತ್ತದೆ. ಯಡಿಯೂರಪ್ಪ ಅವರು ಚುನಾವಣೆಯಲ್ಲಿ ಮತ ಪಡೆಯಲು ನಾಡು, ನುಡಿ ಹಿತ ಬಲಿ ಕೊಡಬಾರದು ಎನ್ನುವುದು ಹಲವರ ಒತ್ತಾಯವಾಗಿದೆ.

ನೆರೆಯ ಮಹಾರಾಷ್ಟ್ರ, ತಮಿಳುನಾಡು, ಕೇರಳ, ಆಂಧ್ರಪ್ರದೇಶಗಳಲ್ಲೂ ಕನ್ನಡಿಗರಿದ್ದು ಅವರ ಮೇಲೆ ನಿರಂತರವಾಗಿ ದೌರ್ಜನ್ಯ ನಡೆಯುತ್ತಿದೆ. ಆದರೆ, ಅಲ್ಲಿನ ಸರ್ಕಾರಗಳು ಕನ್ನಡಿಗರ ರಕ್ಷಣೆ ಮತ್ತು ಅಭಿವೃದ್ಧಿಗೆ ಯಾವುದೇ ಕ್ರಮಗಳನ್ನು ಕೈಗೊಂಡಿಲ್ಲ. ಆದರೆ, ನಮ್ಮ ಮುಖ್ಯಮಂತ್ರಿ ಮರಾಠರನ್ನು ಓಲೈಸಲು ಪ್ರಾಧಿಕಾರ ರಚನೆಗೆ ಮುಂದಾಗಿರುವುದು ಅಕ್ಷಮ್ಯ ಎಂದೂ ಕೆಲವರು ಅಸಮಾಧಾನ ಹೊರಹಾಕುತ್ತಿದ್ದಾರೆ.

‘ಬೆಳಗಾವಿಯನ್ನು ಮಹಾರಾಷ್ಟ್ರಕ್ಕೆ ಸೇರಿಸಬೇಕೆಂದು ಪದೇ ಪದೇ ಕ್ಯಾತೆ ತೆಗೆಯುತ್ತಿರುವ ಮರಾಠಿಗರಿಗೆ ಇನ್ನಷ್ಟು ಬಲ ತುಂಬಲು ರಾಜ್ಯ ಸರ್ಕಾರವೇ ಮುಂದಾಗಿರುವುದು ದುರದೃಷ್ಟಕರ. ಕನ್ನಡಿಗರ ಮೇಲೆ ಪದೇ ಪದೇ ಆಕ್ರಮಣ ಮಾಡುತ್ತಿರುವ ಎಂಇಎಸ್‌ನವರ ಮೇಲೆ ಕ್ರಮ ಕೈಗೊಳ್ಳದ ಸರ್ಕಾರ, ಮರಾಠಿಗರ ಮತಗಳ ಆಸೆಗೆ ಪ್ರಾಧಿಕಾರ ರಚನೆಗೆ ಮುಂದಾಗಿರುವುದು ಖಂಡನೀಯ’ ಎಂದು ಕುಮುದೇಂದು ಮಹರ್ಷಿ ಕನ್ನಡ ಸಂಘದ ಅಧ್ಯಕ್ಷ ಯಲುವಹಳ್ಳಿ ಸೊಣ್ಣೇಗೌಡ ಹೇಳಿದರು.

‘ಉಪ ಚುನಾವಣೆಗಾಗಿ ಮರಾಠಿಗರ ಓಲೈಕೆಗೆ ಪ್ರಾಧಿಕಾರ ಮಾಡಿದರೆ ನಾಳೆ ಬಿಬಿಎಂಪಿ ಚುನಾವಣೆಯಲ್ಲಿ ತಮಿಳರು, ತೆಲುಗರು, ಮಾರವಾಡಿ, ಗುಜರಾತಿಗಳನ್ನು ಓಲೈಸಲು ಆಯಾ ಭಾಷಿಕರ ಪ್ರಾಧಿಕಾರ ಮಾಡಿದರೂ ಅಚ್ಚರಿ ಇಲ್ಲ. ಕನ್ನಡಿಗರ ಸ್ವಾಭಿಮಾನಕ್ಕೆ ಧಕ್ಕೆ ಉಂಟು ಮಾಡುವ ಸರ್ಕಾರದ ಈ ನಿರ್ಧಾರ ಕನ್ನಡ ದ್ರೋಹದ ಕೆಲಸವಾಗಿದೆ’ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಶಿಡ್ಲಘಟ್ಟ ತಾಲ್ಲೂಕು ಘಟಕದ ಅಧ್ಯಕ್ಷ ಎ.ಎಂ. ತ್ಯಾಗರಾಜ್ ತಿಳಿಸಿದರು.

‘ಇದು ಕನ್ನಡಿಗರಿಗೆ ದ್ರೋಹ ಬಗೆಯುವ ಮೂರ್ಖತನದ ನಿರ್ಧಾರ. ಬೆಳಗಾವಿಯಲ್ಲಿ ಸದಾ ಕ್ಯಾತೆ ತೆಗೆಯುವ ಜನರಿಗೆ ಅಭಿವೃದ್ಧಿಯ ಹೆಸರಿನಲ್ಲಿ ₹50 ಕೋಟಿ ನೀಡಿರುವುದು ನೋಡಿದರೆ, ಮತಗಳಿಗಾಗಿ ಸರ್ಕಾರ ಏನನ್ನು ಬೇಕಾದರೂ ಅಡವಿಡಲು ಸಿದ್ಧವಿದೆ ಎಂಬುದು ತಿಳಿಯುತ್ತದೆ. ಸರ್ಕಾರ ಈಗಲಾದರೂ ವಿವೇಚನೆಯಿಂದ ನಡೆದುಕೊಳ್ಳಲಿ. ಇಲ್ಲದಿದ್ದರೆ ತೀವ್ರ ಪ್ರತಿರೋಧ ಎದುರಿಸಬೇಕಾಗುತ್ತದೆ’ ಎನ್ನುತ್ತಾರೆ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಘಟಕದ ಅಧ್ಯಕ್ಷ ಎನ್. ಅಂಬರೀಶ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT