ಶನಿವಾರ, ಏಪ್ರಿಲ್ 4, 2020
19 °C
ಶಿಡ್ಲಘಟ್ಟ ರಸ್ತೆಯಲ್ಲಿರುವ ಹೆದ್ದಾರಿ 7ರ ಮೇಲ್ಸೇತುವೆ ಇಕ್ಕೆಲದಲ್ಲಿ 45 ಗಿಡಗಳು ಅಗ್ನಿಗೆ ಆಹುತಿ, ಅಧಿಕಾರಿಗಳ ಜಾಣ ಕುರುಡು ಪ್ರದರ್ಶನಕ್ಕೆ ಪರಿಸರ ಪ್ರಿಯರ ಆಕ್ರೋಶ

ಸ್ವಚ್ಛತೆ ನೆಪದಲ್ಲಿ ಗಿಡಗಳಿಗೆ ಬೆಂಕಿ ಇಟ್ಟರು!

ಈರಪ್ಪ ಹಳಕಟ್ಟಿ Updated:

ಅಕ್ಷರ ಗಾತ್ರ : | |

Prajavani

ಚಿಕ್ಕಬಳ್ಳಾಪುರ: ನಗರ ಹೊರವಲಯದ ಶಿಡ್ಲಘಟ್ಟ ರಸ್ತೆಯಲ್ಲಿರುವ ಹೆದ್ದಾರಿ 7ರ ಮೇಲ್ಸೇತುವೆ ಇಕ್ಕೆಲ ಸ್ವಚ್ಛತೆ ನೆಪದಲ್ಲಿ 45 ಗಿಡಗಳಿಗೆ ಬೆಂಕಿ ಇಟ್ಟಿರುವುದು ಪರಿಸರ ಪ್ರಿಯರು, ಪ್ರಜ್ಞಾವಂತ ನಾಗರಿಕರಲ್ಲಿ ಆಕ್ರೋಶ ಮೂಡಿಸಿದೆ.

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಸುರಕ್ಷತೆ ದೃಷ್ಟಿಯಿಂದ ಹೆದ್ದಾರಿಯ ಇಕ್ಕೆಲವನ್ನು ಪ್ರತಿ ಬೇಸಿಗೆಯಲ್ಲಿ ಸ್ವಚ್ಛಗೊಳಿಸಲಾಗುತ್ತದೆ. ಅದರಂತೆ ಶಿಡ್ಲಘಟ್ಟ ರಸ್ತೆಯ ಮೇಲ್ಸೇತುವೆಗೆ ಹೊಂದಿಕೊಂಡಿರುವ ಸರ್ವೀಸ್‌ ರಸ್ತೆಯಲ್ಲಿ ಹೆದ್ದಾರಿಯ ಇಳಿಜಾರಿನಲ್ಲಿ ಬೆಳೆದ ಹುಲ್ಲು, ಗಿಡಗಂಟಿಗಳನ್ನು ಸ್ವಚ್ಛತೆ ಗುತ್ತಿಗೆ ಪಡೆದವರು ಸ್ವಚ್ಛಗೊಳಿಸಿದ ಕಸವನ್ನು ಎಲ್ಲೆಂದರಲ್ಲಿ ರಾಶಿ ಹಾಕಿ ಬೆಂಕಿ ಇಡುತ್ತಿದ್ದಾರೆ.

ಇದರಿಂದಾಗಿ, ಸರ್ವೀಸ್‌ ರಸ್ತೆ ಪಕ್ಕದಲ್ಲಿ ನೆಟ್ಟಿರುವ ಗಿಡಗಳು ಪದೇ ಪದೇ ಬೆಂಕಿಗೆ ಆಹುತಿಯಾಗುತ್ತಿವೆ. ಆದರೂ ಸಂಬಂಧಪಟ್ಟವರು ಎಚ್ಚೆತ್ತುಕೊಳ್ಳುತ್ತಿಲ್ಲ ಎಂದು ಗಿಡಗಳನ್ನು ನೆಟ್ಟು ಪೋಷಿಸುತ್ತಿರುವ ನಗರದ ಪರಿಸರ ಪ್ರೇಮಿ, ಆಟೊ ಚಾಲಕ ಸುಭಾನ್‌ ಬೇಸರ ವ್ಯಕ್ತಪಡಿಸಿದರು.

ರಸ್ತೆ ಅಂದವಾಗಿರಲಿ ಎಂಬ ಕಾರಣಕ್ಕೆ ಸುಭಾನ್‌ ಅವರು ತಮ್ಮ ದುಡಿಮೆಯ ಹಣದಲ್ಲಿ ಕಳೆದ ನಾಲ್ಕು ವರ್ಷಗಳ ಹಿಂದೆ ಹೆದ್ದಾರಿಯ ಮೇಲ್ಸೇತುವೆ ಇಕ್ಕೆಲದಲ್ಲಿ ಮತ್ತು ಮಂಚನಬಲೆ ಸರ್ವೀಸ್‌ ರಸ್ತೆಯಲ್ಲಿ ಸುಮಾರು 75 ಹೊಂಗೆ ಸಸಿಗಳನ್ನು ನೆಟ್ಟು ಪೋಷಿಸುತ್ತ ಬಂದಿದ್ದಾರೆ.

ಎತ್ತಿನಗಾಡಿ, ಟ್ಯಾಂಕರ್‌ಗೆ ದುಡ್ಡು ನೀಡಿ ಜತೆಗೆ ಆಟೊದಲ್ಲಿ ನೀರು ತೆಗೆದುಕೊಂಡು ಹೋಗಿ ಗಿಡಗಳಿಗೆ ನೀರುಣಿ ಕಾಳಜಿ ತೋರುತ್ತ ಬಂದಿದ್ದಾರೆ. ಆದರೆ, ಹೆದ್ದಾರಿ ಇಕ್ಕೆಲ ಸ್ವಚ್ಛಗೊಳಿಸುವವರು ಪ್ರತಿ ವರ್ಷ ಅವರ ಕನಸಿಗೆ ಕೊಳ್ಳಿ ಇಡುತ್ತಿದ್ದಾರೆ ಎಂಬ ದುಗುಡ ಅವರದು.

ಪ್ರತಿ ವೇದಿಕೆಯಲ್ಲಿ ‘ಗಿಡಮರ ಬೆಳೆಸಿ, ಪರಿಸರ ಉಳಿಸಿ’ ಎಂಬ ಭಾಷಣ ಬಿಗಿಯುವವರು, ಇದೇ ದಾರಿಯಲ್ಲಿ ನಿತ್ಯ ಜಿಲ್ಲಾಡಳಿತ ಭವನಕ್ಕೆ ಸಾಗುವ ಜಿಲ್ಲಾಡಳಿತದ ಹಿರಿಯ ಅಧಿಕಾರಿಗಳು ಕಣ್ಣೆದುರೆ ಕಮರಿ ಹೋದ ಗಿಡಗಳನ್ನು ಕಂಡರೂ ಕಾಣದಂತೆ ಜಾಣ ಕುರುಡುತನ ಪ್ರದರ್ಶಿಸುತ್ತಿದ್ದಾರೆ. ಯಾರೊಬ್ಬರೂ ಪರಿಸರ ಕಾಳಜಿ ಕುರಿತು ನೈಜವಾಗಿ ಧ್ವನಿ ಎತ್ತುತ್ತಿಲ್ಲ ಎಂಬ ಬೇಸರ ಸುಭಾನ್ ಅವರಲ್ಲಿ ಖೇದ ಉಂಟು ಮಾಡಿದೆ.

‘ಕಳೆದ ವರ್ಷವೂ ಹೆದ್ದಾರಿ ಇಕ್ಕೆಲ ಸ್ವಚ್ಛಗೊಳಿಸುವವರು ಗಿಡಗಳ ಬಳಿಯೇ ಕಸದ ರಾಶಿ ಬೆಂಕಿ ಹಚ್ಚಲು ಮುಂದಾಗಿದ್ದರು. ಬೆಂಕಿ ಹಚ್ಚದಂತೆ ತಿಳಿಸಿ ನಾನೇ ಆ ಕಸದ ರಾಶಿಯನ್ನು ದೂರಕ್ಕೆ ಸಾಗಿಸಿದ್ದೆ. ಈ ಬಾರಿಯೂ ಅದೇ ರೀತಿ ಕಸದ ರಾಶಿ ಹಾಕಿದ್ದರೂ. ಒಣಗಿದ ಬಳಿಕ ದೂರ ಸಾಗಿಸಲು ಯೋಚಿಸಿದ್ದೆ. ಅದಕ್ಕೂ ಮೊದಲೇ ಬೆಂಕಿ ಇಟ್ಟಿದ್ದಾರೆ. ಅದರಿಂದಾಗಿ ಸುಮಾರು ನಾಲ್ಕು ವರ್ಷ ಪ್ರಾಯದ 45 ಹೊಂಗೆ ಗಿಡಗಳು ಸುಟ್ಟು ಕರಕಲಾಗಿವೆ. ಪದೇ ಪದೇ ಈ ರೀತಿ ಗಿಡಗಳ ಬಳಿ ಬೆಂಕಿ ಹಾಕುತ್ತಿರುವುದು ಅವುಗಳ ಬೆಳವಣಿಗೆಗೆ ಮಾರಕವಾಗುತ್ತಿದೆ’ ಎಂದು ಸುಭಾನ್ ಹೇಳಿದರು.

‘ನಮ್ಮದು ಮೊದಲೇ ಬಯಲು ಸೀಮೆ ಜಿಲ್ಲೆ. ಕಾಡು ಪ್ರದೇಶಗಳಿಲ್ಲ. ಶುದ್ಧ ಗಾಳಿಯ ಕೊರತೆಯಿಂದ ಜನರು ಶ್ವಾಸಕೋಶ, ಹೃದಯ ಸಂಬಂಧಿ ಕಾಯಿಲೆಗಳು ಸೇರಿದಂತೆ ಬಗೆಬಗೆ ರೋಗಗಳಿಗೆ ತುತ್ತಾಗಿ ಆಸ್ಪತ್ರೆಗಳು ತುಂಬಿ ತುಳುಕುತ್ತಿವೆ. ಪರಿಸರದ ಅಸಮತೋಲನದಿಂದ ಎಷ್ಟೆಲ್ಲ ಅನಾಹುತವಾಗುತ್ತಿರುವುದು ಕಣ್ಣೆದುರೆ ಕಂಡರೂ ಪರಿಸರದ ಕಾಳಜಿ ತೋರುವವರು ಮಾತ್ರ ಅಪರೂಪವಾಗುತ್ತಿರುವುದು ತೀವ್ರ ನೋವು ಉಂಟು ಮಾಡುತ್ತಿದೆ. ಪರಿಸ್ಥಿತಿ ಹೀಗೆ ಮುಂದುವರಿದರೆ ಮುಂದೊಂದು ದಿನ ನಾವು ಭಾರಿ ಬೆಲೆ ತೆರಬೇಕಾಗುತ್ತದೆ’ ಎಂದು ತಿಳಿಸಿದರು.

ಈ ಕುರಿತು ವಲಯ ಅರಣ್ಯಾಧಿಕಾರಿ ವಿಕ್ರಂ ರೆಡ್ಡಿ ಅವರನ್ನು ವಿಚಾರಿಸಿದರೆ, ‘ಸಸಿಗಳನ್ನು ಹಾಕಿ, ನೀರುಣಿಸಿ ಬೆಳೆಸಿದವರಿಗೆ ಮಾತ್ರ ಪರಿಸರ ಬೆಳೆಸುವವರ ನೋವು, ಪ್ರಕೃತಿಯ ಮೌಲ್ಯದ ಅರಿವಾಗುತ್ತದೆ. ಯಾರೊ ಬೆಳೆಸಿದ್ದಕ್ಕೆ ಬೆಂಕಿ ಇಡುವವರಿಗೆ ಬೆಳೆಸುವವರ ನೋವು ಅರ್ಥವಾಗುವುದಿಲ್ಲ. ಈ ಬಗ್ಗೆ ವಿಚಾರಿಸಿ ಕ್ರಮಕೈಗೊಳ್ಳುತ್ತೇವೆ’ ಎಂದು ಹೇಳಿದರು. ಪ್ರತಿಕ್ರಿಯೆಗಾಗಿ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳನ್ನು ಸಂಪರ್ಕಿಸಲಾಯಿತು ಆದರೆ ಕರೆ ಸ್ವೀಕರಿಸಲಿಲ್ಲ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು