ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಂತಾಮಣಿ ನಗರದಲ್ಲಿ ಅಂಗಡಿಗಳ ಮಾಲೀಕರಿಂದ ಅತಿಕ್ರಮಣ

Last Updated 8 ನವೆಂಬರ್ 2021, 6:51 IST
ಅಕ್ಷರ ಗಾತ್ರ

ಚಿಂತಾಮಣಿ: ರಾಜ್ಯದಲ್ಲಿ ವೇಗವಾಗಿ ಬೆಳೆಯುತ್ತಿರುವ ವಾಣಿಜ್ಯ ನಗರಗಳಲ್ಲಿ ಚಿಂತಾಮಣಿಯೂ ಒಂದು. ಆದರೆ ಬೆಳೆಯುತ್ತಿರುವ ನಗರಕ್ಕೆ ಅಗತ್ಯವಾದ ಮೂಲ ಸೌಲಭ್ಯಗಳಿಲ್ಲ ಎಂಬ ಕೊರಗು ನಾಗರಿಕರನ್ನು ಕಾಡುತ್ತಿದೆ. 10 ವರ್ಷಗಳ ಹಿಂದೆ ಚಿಂತಾಮಣಿ ಜಿಲ್ಲೆಯಲ್ಲಿ ಮಾದರಿ ನಗರ ಎನಿಸಿಕೊಂಡಿತ್ತು. ಪರಿಸರ ಮಾಲಿನ್ಯ ಮಂಡಳಿಯಿಂದ ಅತ್ಯುತ್ತಮ ನಗರಸಭೆ ಎಂಬ ಪ್ರಶಸ್ತಿಗೆ ಪಾತ್ರವಾಗಿತ್ತು. ಪ್ರಸ್ತುತ ಪರಿಸ್ಥಿತಿಯಲ್ಲಿ ಮಾದರಿ ನಗರ ಎನಿಸಿಕೊಳ್ಳಲು ಇರಬೇಕಾದ ಸೌಲಭ್ಯಗಳಿಲ್ಲ.

ನಗರದಲ್ಲಿರುವ ಪಾದಚಾರಿ ರಸ್ತೆಗಳು ನಾಗರಿಕರ ಓಡಾಡುವುದಕ್ಕೊ ಅಥವಾ ಅಂಗಡಿ ಮಾಲೀಕರು, ವ್ಯಾಪಾರಿಗಳು ಅತಿಕ್ರಮಿಸಿಕೊಂಡು ವ್ಯಾಪಾರ ಮಾಡಲಿಕ್ಕೊ ಎಂಬ ಅನುಮಾನ ಸಾರ್ವಜನಿಕರನ್ನು ಕಾಡುತ್ತಿದೆ. ಪಾದಚಾರಿ ಮಾರ್ಗಗಳನ್ನು ವ್ಯಾಪಾರಿಗಳು ಆಕ್ರಮಿಸಿಕೊಂಡಿದ್ದಾರೆ.

ಪಾರ್ಕಿಂಗ್ ವ್ಯವಸ್ಥೆ ಇಲ್ಲದೆ ವಾಹನಗಳು ಸಹ ಪಾದಚಾರಿ ಮಾರ್ಗ ಮತ್ತು ರಸ್ತೆಗಳಲ್ಲಿ ನಿಲ್ಲುತ್ತಿವೆ. ಪಾರ್ಕಿಂಗ್ ವ್ಯವಸ್ಥೆ ಇಲ್ಲದಿರುವುದು, ಪಾದಚಾರಿ ಮಾರ್ಗಗಳ ಅತಿಕ್ರಮಣಕ್ಕೆ ಕಾರಣವಾಗಿದೆ.

ಈ ಹಿಂದಿನ ಪುರಪಿತೃಗಳು ನಗರವನ್ನು ವ್ಯವಸ್ಥಿತವಾಗಿ ರೂಪಿಸಿದ್ದಾರೆ. ನಗರದ ನಾಲ್ಕು ರಸ್ತೆಗಳು ಜೋಡಿ ರಸ್ತೆಗಳಾಗಿವೆ. ಲಕ್ಷಾಂತರ ಹಣ ಖರ್ಚು ಮಾಡಿ ಬೆಂಗಳೂರು ಜೋಡಿ ರಸ್ತೆ, ಚೇಳೂರು ರಸ್ತೆ, ಕೋಲಾರ-ಶ್ರೀನಿವಾಸಪುರ ರಸ್ತೆ, ಶಿಡ್ಲಘಟ್ಟ-ಬಾಗೇಪಲ್ಲಿ ರಸ್ತೆಯನ್ನು ದ್ವಿಪಥ ರಸ್ತೆಗಳನ್ನಾಗಿಸಲಾಗಿದೆ.

ರಸ್ತೆ ವಿಭಜಕಗಳನ್ನು ನಿರ್ಮಿಸಿ ನಡುವೆ ಗಿಡಗಳನ್ನು ಬೆಳೆಸಲಾಗಿದೆ. ಉತ್ತಮ ಗ್ರಾನೈಟ್‌ ಪಾದಚಾರಿ ಮಾರ್ಗಗಳನ್ನು ನಿರ್ಮಿಸಿ ಸುಂದರ ನಗರದ ಕನಸನ್ನು ಕಾಣಲಾಗಿತ್ತು.

ಪ್ರಸ್ತುತ ಎಲ್ಲವೂ ತದ್ವಿರುದ್ಧವಾಗಿದೆ. ಪಾದಚಾರಿ ಮಾರ್ಗಗಳು ವ್ಯಾಪಾರಿಗಳು ಮತ್ತು ಅಂಗಡಿಗಳ ಮಾಲೀಕರಿಂದಲೂ ಅತಿಕ್ರಮಣವಾಗಿದೆ. ಅಂಗಡಿಗಳ ಮಾಲೀಕರು ತಮ್ಮ ಅಂಗಡಿಗಳ ಮುಂದಿನ ಪಾದಚಾರಿ ಮಾರ್ಗವನ್ನು ಅಕ್ರಮಿಸಿಕೊಂಡು ವ್ಯಾಪಾರ ಮಾಡುತ್ತಿದ್ದಾರೆ. ಸರಕುಗಳನ್ನು ಪಾದಚಾರಿ ಮಾರ್ಗದಲ್ಲಿ ಇಟ್ಟು ವ್ಯಾಪಾರ ಮಾಡುತ್ತಿದ್ದಾರೆ. ಇದರಿಂದ ನಾಗರಿಕರ ಓಡಾಟಕ್ಕೆ ಅಡ್ಡಿಯಾಗಿದೆ.

ಯಾರಾದರೂ ಪಾದಚಾರಿಗಳು ಈ ಬಗ್ಗೆ ಪ್ರಶ್ನಿಸಿದರೆ ಅವರ ಮೇಲೆ ವ್ಯಾಪಾರಿಗಳು ಮುಗಿಬೀಳುತ್ತಾರೆ. ಪಾರ್ಕಿಂಗ್ ವ್ಯವಸ್ಥೆ ಇಲ್ಲದೆ ರಸ್ತೆಯಲ್ಲಿ ವಾಹನಗಳನ್ನು ನಿಲ್ಲಿಸುತ್ತಾರೆ. ಪಾದಚಾರಿಗಳು ಜೀವ ಪಣಕ್ಕಿಟ್ಟು ರಸ್ತೆಗಳ ಮೇಲೆ ನಡೆಯಬೇಕಾಗಿದೆ. ಹೀಗೆ ನಡೆಯುವಾಗ ಅಪಘಾತಗಳು ಸಂಭವಿಸಿ ಗಾಯಗೊಂಡಿರುವ ಮತ್ತು ಕೆಲವರು ಪ್ರಾಣ ಕಳೆದುಕೊಂಡಿರುವ ಪ್ರಕರಣಗಳು ನಡೆದಿವೆ.

ಯಾರು ಎಲ್ಲಿ ಬೇಕಾದರೂ ವಸ್ತುಗಳನ್ನು ಇಟ್ಟು ವ್ಯಾಪಾರ ಮಾಡಬಹುದು ಎನ್ನುವ ಪರಿಸ್ಥಿತಿ ನಗರದಲ್ಲಿ ಇದೆ. ಅತ್ಯಂತ ಜನನಿಬಿಡ ಪ್ರದೇಶ ನಗರದ ಜೋಡಿ ರಸ್ತೆ. ಪೊಲೀಸ್ ಠಾಣೆ ಮುಂಭಾಗದ ಪಶುವೈದ್ಯ ಆಸ್ಪತ್ರೆಯಿಂದ ಹಿಡಿದು ಐ.ಡಿ.ಎಸ್.ಎಂ.ಟಿ ವಾಣಿಜ್ಯ ಸಂಕೀರ್ಣದ ವರೆಗೂ ಅಂಗಡಿಗಳ ಮಾಲೀಕರು ರಾಜಾರೋಷವಾಗಿ ಪಾದಚಾರಿ ಮಾರ್ಗವನ್ನು ಅತಿಕ್ರಮಿಸಿದ್ದಾರೆ. ಇದರಿಂದ ಸಂಚಾರ ದಟ್ಟಣೆ ಎದುರಾಗಿದೆ.

ಹೀಗೆ ಪಾದಚಾರಿ ಮಾರ್ಗ ಆಕ್ರಮಿಸಿಕೊಂಡವರು ಬಡ ತಳ್ಳುವ ಗಾಡಿಗಳ ವ್ಯಾಪಾರಿಗಳಲ್ಲ. ಸಂಪೂರ್ಣವಾಗಿ ಅಂಗಡಿ ಮಾಲೀಕರೇ ಪಾದಚಾರಿ ಮಾರ್ಗವನ್ನು ಅತಿಕ್ರಮಿಸಿದ್ದಾರೆ. ಅದೂ ಸಾಲದಂತೆ ರಸ್ತೆಯಲ್ಲೂ ತಮ್ಮದೇ ಗಾಡಿಗಳನ್ನು ಇಟ್ಟು ವಹಿವಾಟು ನಡೆಸುವರು.

ಈ ಬಗ್ಗೆ ಪೊಲೀಸ್, ನಗರಸಭೆಯ ಅಧಿಕಾರಿಗಳು, ತಾಲ್ಲೂಕು ಆಡಳಿತ, ಚುನಾಯಿತ ಪ್ರತಿನಿಧಿಗಳು ಚಕಾರ ಎತ್ತುತ್ತಿಲ್ಲ.
ಅಜಾದ್ ಚೌಕ, ಚೇಳೂರು ರಸ್ತೆ, ಎಂ.ಜಿ ರಸ್ತೆಯಲ್ಲೂ, ರಸ್ತೆ ಬದಿಯ ವ್ಯಾಪಾರಿಗಳು ಪಾದಚಾರಿ ಮಾರ್ಗಗಳಲ್ಲಿ ಸರಕುಗಳನ್ನು ಅಡ್ಡಲಾಗಿ ಇಡುತ್ತಾರೆ. ಬೆಳಿಗ್ಗೆ ಅಂಗಡಿ ತೆಗೆದ ಕೂಡಲೇ ಸರಕುಗಳನ್ನು ಪಾದಚಾರಿ ಮಾರ್ಗದಲ್ಲಿಡುತ್ತಾರೆ. ಕೆಲವರು ವಾಹನಗಳನ್ನು ನಿಲ್ಲಿಸುತ್ತಾರೆ. ಕೆಲವರು ಜಾಹೀರಾತು ಫಲಕಗಳನ್ನು ಅಡ್ಡವಿಡುವರು. ಕೆಲವು ಕಡೆ ಮೊಬೈಲ್ ಕ್ಯಾಂಟೀನ್, ಟೀ ಸ್ಟಾಲ್ ಗಳನ್ನು ಇಟ್ಟುಕೊಂಡು ವ್ಯಾಪಾರ ಮಾಡಲಾಗುತ್ತಿದೆ.

ನಗರದ ಜೋಡಿ ರಸ್ತೆಯಲ್ಲಿ ತರಕಾರಿ ವ್ಯಾಪಾರಿಗಳು, ಗೃಹೋಪಯೋಗಿ ವಸ್ತುಗಳ ಮಾರಾಟ ಮಾಡುವವರು ಕೂಡ ಪಾದಚಾರಿ ಮಾರ್ಗವನ್ನು ಅತಿಕ್ರಮಣ ಮಾಡಿದ್ದಾರೆ. ಅತಿಕ್ರಮಣದಿಂದ ಒಂದೆಡೆ ಸಂಚಾರಕ್ಕೆ ತೊಂದರೆಯಾದರೆ ಮತ್ತೊಂದೆಡೆ ಕಸವನ್ನು ರಸ್ತೆಗಳಿಗೆ ಸುರಿದು ಅಧ್ವಾನ ಮಾಡುತ್ತಾರೆ. ರಸ್ತೆಗಳು ಕಸದಿಂದ ದುರ್ನಾತ ಬೀರುತ್ತಿವೆ.

ಮೊಬೈಲ್ ಕ್ಯಾಂಟೀನ್, ಟಿ ಅಂಗಡಿಗಳವರು ಪ್ಲಾಸ್ಟಿಕ್ ಎಲೆ, ಲೋಟ, ತಟ್ಟೆ, ಪೇಪರ್ ಅಲ್ಲೇ ಬಿಟ್ಟು ತೆರಳುತ್ತಾರೆ. ಇವು ಗಾಳಿಗೆ ರಸ್ತೆಗಳಿಗೆ ಹರಿದಾಡುತ್ತವೆ. ಪಾದಚಾರಿ ಮಾರ್ಗದಲ್ಲಿನ ಅಂಗಡಿಗಳ ಕಸವನ್ನು ರಸ್ತೆಗೆ ಎಸೆಯುತ್ತಾರೆ. ನಗರಸಭೆಯ ಪೌರಕಾರ್ಮಿಕರು ಪ್ರತಿನಿತ್ಯ ಅವರು ಸುರಿದ ಕಸವನ್ನು ತೆಗೆಯಬೇಕಾಗಿದೆ.

ಪಾದಚಾರಿ ಮಾರ್ಗದಲ್ಲಿನ ಅಂಗಡಿಗಳಿಂದ ನಗರದ ಸೌಂದರ್ಯಕ್ಕೂ ಧಕ್ಕೆಯಾಗುತ್ತಿದೆ. ನಗರವಾಸಿಗಳು ಪಾದಚಾರಿ ಮಾರ್ಗಗಳಲ್ಲಿನ ಅಂಗಡಿಗಳನ್ನು ತೆರವುಗೊಳಿಸುವಂತೆ ಹಲವು ಬಾರಿ ದೂರು ಕೊಟ್ಟರೂ ಪ್ರಯೋಜನವಾಗಿಲ್ಲ. ನಗರಸಭೆ ಸಿಬ್ಬಂದಿ ಮತ್ತು ಪೊಲೀಸರು ಕದ್ದುಮುಚ್ಚಿ ಹಣ ಪಡೆದು ಪಾದಚಾರಿ ಮಾರ್ಗದಲ್ಲಿ ವ್ಯಾಪಾರ ಮಾಡಲು ಅವಕಾಶ ನೀಡಿದ್ದಾರೆ ಎಂದು ನಾಗರಿಕರು ಆರೋಪಿಸುತ್ತಾರೆ.

ಕಾನೂನು ಪ್ರಕಾರ ಶೀಘ್ರ ತೆರವು:

ನಗರದಲ್ಲಿ ಪಾದಾಚಾರಿ ಮಾರ್ಗಗಳು ಅತಿಕ್ರಮಣವಾಗಿರುವುದು ಗಮನಕ್ಕೆ ಬಂದಿದೆ. ಕೋವಿಡ್ ಕಾರಣದಿಂದ ಒತ್ತುವರಿ ತೆರವು ಕಾರ್ಯಕ್ಕೆ ಹಿನ್ನಡೆಯಾಗಿದೆ. ಆದಷ್ಟು ಶೀಘ್ರವಾಗಿ ನಗರಸಭೆ ಅಧಿಕಾರಿಗಳು, ಪೊಲೀಸ್ ಅಧಿಕಾರಿಗಳ ಸಭೆಯನ್ನು ಕರೆದು ಚರ್ಚೆ ನಡೆಸಲಾಗುವುದು. ಕಾನೂನು ಪ್ರಕಾರ ಪಾದಚಾರಿ ಮಾರ್ಗಗಳ ಅತಿಕ್ರಮಣವನ್ನು ತೆರವುಗೊಳಿಸಲು ಕ್ರಮಕೈಗೊಳ್ಳಲಾಗುವುದು.

ರೇಖಾ ಉಮೇಶ್, ನಗರಸಭೆಯ ಅಧ್ಯಕ್ಷೆ

ಸುಗಮ ಸಂಚಾರಕ್ಕೆ ಅವಕಾಶ ಅಗತ್ಯ

ಚಿಂತಾಮಣಿ ನಗರದಲ್ಲಿ ಪಾದಚಾರಿ ರಸ್ತೆಗಳು ಅತಿಕ್ರಮಣವಾಗಿವೆ. ಜನರ ಸಂಚಾರಕ್ಕೆ ಅಡಚಣೆಯಾಗಿದೆ. ಅಂಗಡಿ ಮಾಲೀಕರು ಪಾದಚಾರಿ ಮಾರ್ಗಗಳನ್ನು ಬಳಸಿಕೊಂಡರೆ, ವಾಹನಗಳು ಪಾರ್ಕಿಂಗ್‌ಗಾಗಿ ಅರ್ಧ ರಸ್ತೆಯನ್ನು ಅತಿಕ್ರಮಿಸಿಕೊಂಡಿವೆ. ಸಾರ್ವಜನಿಕರು ರಸ್ತೆಯ ಮಧ್ಯೆ ಓಡಾಡುತ್ತಿದ್ದಾರೆ. ಮಹಿಳೆಯರು, ಮಕ್ಕಳು, ವೃದ್ಧರು ಓಡಾಡುವುದು ಕಷ್ಟವಾಗಿದೆ. ನಾಗರಿಕ ಆಡಳಿತ ಎಚ್ಚೆತ್ತು ರಸ್ತೆಬದಿ ವ್ಯಾಪಾರಿಗಳಿಗೆ ಬೇರೆ ಜಾಗವನ್ನು ಒದಗಿಸಿ, ಅತಿಕ್ರಮಣವನ್ನು ತೆರವುಗೊಳಿಸಬೇಕು. ಜನರ ಸುಗಮ ಓಡಾಟಕ್ಕೆ ಅನುವು ಮಾಡಿಕೊಡಬೇಕು.

ಅಗ್ರಹಾರ ಮೋಹನ್, ಚಿಂತಾಮಣಿ

ಸೌಂದರ್ಯಕ್ಕೆ ಧಕ್ಕೆ


ನಗರಸಭೆ ಮತ್ತು ತಾಲ್ಲೂಕು ಕಚೇರಿಯ ಪಕ್ಕದಲ್ಲೇ ಇರುವ ತಾಲ್ಲೂಕು ಕಚೇರಿ ವೃತ್ತದಲ್ಲಿ ಪಾದಚಾರಿ ಮಾರ್ಗದಲ್ಲಿ ಸದಾ ಅಂಗಡಿಗಳು ತಲೆಎತ್ತಿವೆ. ವೃತ್ತದಲ್ಲಿ ಲಕ್ಷಾಂತರ ರೂಪಾಯಿ ಖರ್ಚುಮಾಡಿ ಹಿರಿಯರ ಅನುಕೂಲಕ್ಕಾಗಿ ನಿರ್ಮಾಣ ಮಾಡಿರುವ ಕಟ್ಟೆಯಲ್ಲೂ ಅಂಗಡಿ ತೆರೆದರೂ ಅಧಿಕಾರಿಗಳು, ಜನಪ್ರತಿನಿಧಿಗಳು ಕ್ಯಾರೆ ಎನ್ನದೆ ಜಾಣಕುರುಡುತನ ತೋರುತ್ತಿದ್ದಾರೆ. ನಗರದ ಸೌಂದರ್ಯವೂ ಹಾಳಾಗುತ್ತಿದೆ. ಈ ಬಗ್ಗೆ ನಗರಸಭೆ ಅಧಿಕಾರಿಗಳಿಗೆ ಮನವಿ ನೀಡಿದ್ದರೂ ಕ್ರಮಕೈಗೊಂಡಿಲ್ಲ.

ಎಂ.ಆರ್.ಲೋಕೇಶ್, ನಾಗರಿಕ

ಅವಕಾಶ ದುರುಪಯೋಗ ಸಲ್ಲದು


ನಗರದಲ್ಲಿ ಪಾದಚಾರಿಗಳ ಅತಿಕ್ರಮಣವನ್ನು ತಡೆಗಟ್ಟಲು ಕಾಲ ಕಾಲಕ್ಕೆ ಕ್ರಮಕೈಗೊಳ್ಳಲಾಗುತ್ತಿತ್ತು. ಕೊರೊನಾ ಹಿನ್ನೆಲೆಯಲ್ಲಿ ವ್ಯಾಪಾರವಿಲ್ಲ, ವ್ಯಾಪಾರಿಗಳಿಗೂ ಆರ್ಥಿಕ ಹಿಂಜರಿಕೆ ಇದೆ ಎಂದು ಇತ್ತೀಚೆಗೆ ಆ ಕಡೆ ಗಮನಹರಿಸಿರಲಿಲ್ಲ. ಅಂಗಡಿ ಮಾಲೀಕರು ಅವಕಾಶವನ್ನು ದುರುಪಯೋಗ ಪಡಿಸಿಕೊಂಡಿದ್ದಾರೆ. ಶೀಘ್ರದಲ್ಲೇ ತೆರವುಗೊಳಿಸಲು ಕ್ರಮಕೈಗೊಳ್ಳಲಾಗುವುದು.

ಚೇತನ್ ಎಸ್.ಕೊಳವಿ. ಪೌರಾಯುಕ್ತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT