ಭಾನುವಾರ, 4 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟಾಕೀಸ್‌ ತುಂಬಿದ ದೂಳು: ಕಾರ್ಮಿಕರ ಗೋಳು

ಇನ್ನೂ ಕಾರ್ಯಾರಂಭವಾಗದ ಸಿನಿಮಾ ಮಂದಿರಗಳು l ಸರ್ಕಾರದ ಆದೇಶದತ್ತ ಚಿತ್ತ
Last Updated 12 ಜುಲೈ 2021, 4:24 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ನಾಯಕ ನಟನ ದೊಡ್ಡ ಕಟೌಟ್‌ಗಳು, ಸಿನಿಮಾ ಆರಂಭಕ್ಕೂ ಮುನ್ನ ಪಟಾಕಿ, ಶಿಳ್ಳೆ, ಜೈಕಾರ... ಇದು ಚಿತ್ರಮಂದಿರಗಳಲ್ಲಿ ಕಂಡು ಬರುತ್ತಿದ್ದ ಚಿತ್ರಣ. ಆದರೆ ಈಗ ಅಬ್ಬರ, ಸಂಭ್ರಮ, ಶಿಳ್ಳೆ, ಕೇಕೆಗಳು ಇಲ್ಲದೆ ಚಿತ್ರಮಂದಿರಗಳು ಭಣಗುಡುತ್ತಿವೆ. ಚಿತ್ರಮಂದಿರಗಳು ದೂಳು ಹಿಡಿದಿರುವುದು ಒಂದು ಕಡೆಯಾದರೆ ಈ ಮಂದಿರಗಳಲ್ಲಿ ದುಡಿದು ಜೀವನ ನಡೆಸುತ್ತಿದ್ದ ನೂರಾರು ಕಾರ್ಮಿಕರ ಬದುಕು ಜಿಲ್ಲೆಯಲ್ಲಿ ಬೀದಿಗೆ ಬಿದ್ದಿದೆ.

ಟಿಕೆಟ್ ವಿತರಕ, ಸ್ವಚ್ಛತಾ ಸಿಬ್ಬಂದಿ, ಕಾವಲುಗಾರರು, ಲೆಕ್ಕ ನಿರ್ವಹಿಸುವ ನೌಕರರು, ಗೇಟ್ ಕೀಪರ್, ಬಾಕ್ಸ್ ರೂಂ ಸಿಬ್ಬಂದಿ, ಆಪರೇಟರ್, ವ್ಯವಸ್ಥಾಪಕ ಹೀಗೆ ಹಲವು ವಿಭಾಗಗಳಲ್ಲಿ ಇಲ್ಲಿ ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದರು. ಆದರೆ, ಈ ಎಲ್ಲರಿಗೂ ಕೆಲಸವಿಲ್ಲ. ಚಿತ್ರಮಂದಿರಗಳಲ್ಲಿ ಕೆಲಸ ಮಾಡುತ್ತಿದ್ದ ನೂರಾರು ಮಂದಿಯ ಬದುಕು ಸಂಕಷ್ಟಕ್ಕೆ ಸಿಲುಕಿದೆ.

ಕೋವಿಡ್ ಮೊದಲ ಅಲೆ ಸಂದರ್ಭದಲ್ಲಿಯೇ ಚಿತ್ರಮಂದಿರಗಳು ಬಾಗಿಲು ಮುಚ್ಚಿದವು. ಕೋವಿಡ್ ಕಡಿಮೆ ಆದಂತೆ ಶೇ 50ರಷ್ಟು ಆಸನಗಳ ಭರ್ತಿ ಮೂಲಕ ಕಾರ್ಯಾರಂಭ ಮಾಡಲು ಸರ್ಕಾರ ಆದೇಶಿಸಿತು. ಈ ನಡುವೆ ಮತ್ತೆ ಎರಡನೇ ಅಲೆ ಕಾಲಿಟ್ಟಿತು. ಮತ್ತೆ ಮಂದಿರಗಳು ಬಾಗಿಲು ಮುಚ್ಚಿದವು.

ಕೋವಿಡ್ ಮೊದಲ ಅಲೆಯ ನಂತರ ಚಿತ್ರಮಂದಿರಗಳು ತೆರೆದರೂ ಪ್ರೇಕ್ಷಕರು ಹೆಚ್ಚಿನ ಸಂಖ್ಯೆಯಲ್ಲಿ ಬರಲಿಲ್ಲ. ಮೊದಲ ಅಲೆಯ ಸಮಯದಲ್ಲಿ ಕಾರ್ಮಿಕರಿಗೆ, ನೌಕರರಿಗೆ ಅಲ್ಪಸ್ವಲ್ಪ ವೇತನ ನೀಡಿದ ಮಾಲೀಕರು ಎರಡನೇ ಅಲೆಯಲ್ಲಿ ಬಹಳಷ್ಟು ಕಡೆಗಳಲ್ಲಿ ವೇತನ ನೀಡಲು ಸಾಧ್ಯವಾಗಿಲ್ಲ.

ನಗರದ ಬಾಲಾಜಿ, ಕೃಷ್ಣ ಚಿತ್ರಮಂದಿರಗಳು ಬಾಗಿಲು ಮುಚ್ಚಿವೆ. ವಾಣಿ ಚಿತ್ರಮಂದಿರ ನವೀಕರಣ ಹಂತದಲ್ಲಿದೆ. ಈಗ ಎಲ್ಲ ಉದ್ದಿಮೆಗಳಿಗೆ, ವಹಿವಾಟಿಗೆ ಅನ್‌ಲಾಕ್ ಆದೇಶವಿದ್ದರೂ ಚಿತ್ರಮಂದಿರಗಳ ಬಾಗಿಲು ಇನ್ನೂ
ತೆರೆದಿಲ್ಲ.

‘ಚಿತ್ರಮಂದಿರಕ್ಕೆ ಈ ಬಾರಿ ಕಂದಾಯ ಕಟ್ಟುವುದಕ್ಕೆ ವಿನಾಯಿತಿ ನೀಡಿದ್ದಾರೆ. ಆದರೆ, ನಾವು ಸರ್ಕಾರ ಆ ವಿನಾಯಿತಿ ನೀಡುವುದರ ಒಳಗೆ ಕಂದಾಯ ಪಾವತಿಸಿದ್ದೆವು. ಮತ್ತೆ ಅದನ್ನು ವಾಪ‍ಸ್ ಪಡೆಯಲು ಸಾಧ್ಯವಾಗಲಿಲ್ಲ’ ಎಂದು ನಗರದ ಬಾಲಾಜಿ ಚಿತ್ರಮಂದಿರದ ನೌಕರ ವೇಣು ತಿಳಿಸಿದರು.

ಚಿತ್ರಮಂದಿರದಲ್ಲಿ 12 ಮಂದಿ ಕೆಲಸಗಾರರು ಇದ್ದಾರೆ. ಕಳೆದ ವರ್ಷದ ಲಾಕ್‌ಡೌನ್‌ನಲ್ಲಿ ಅರ್ಧವೇತನ ನೀಡಿದ್ದರು. ಈ ಬಾರಿ ವೇತನವಿಲ್ಲ. ಶೀಘ್ರದಲ್ಲಿಯೇ ಚಿತ್ರಮಂದಿರಗಳು ಶೇ 50ರಷ್ಟು ಆಸನಗಳ ಭರ್ತಿಯೊಂದಿಗೆ ಕಾರ್ಯಾರಂಭ ಮಾಡಬಹುದು. ಆದರೆ ಶೇ 100ರಷ್ಟು ಆಸನಗಳ ಭರ್ತಿಗೆ ಸರ್ಕಾರ ಆದೇಶ ನೀಡುವವರೆಗೂ ಸಿನಿಮಾಗಳನ್ನು ಬಿಡುಗಡೆ ಮಾಡದಿರಲು ನಿರ್ಮಾಪಕರು ನಿರ್ಧರಿಸಿ ದ್ದಾರೆ. ಆದ್ದರಿಂದ ಬಾಗಿಲು ತೆರೆದರೂ ಉಪಯೋಗವಿಲ್ಲ ಎನ್ನುವರು.

ಡಿ.ಎಂ.ಕುರ್ಕೆ ಪ್ರಶಾಂತ್,
ಎ.ಎಸ್.ಜಗನ್ನಾಥ್, ಜೆ.ವೆಂಕಟರಾಯಪ್ಪ, ಪಿ.ಎಸ್.ರಾಜೇಶ್, ಎಂ.ರಾಮಕೃಷ್ಣಪ್ಪ

**

ನೂರಕ್ಕೂ ಹೆಚ್ಚು ಕಾರ್ಮಿಕರಿಗೆ ಸಂಕಷ್ಟ

ಚಿಂತಾಮಣಿ: ಮೊದಲ ಅಲೆಯಲ್ಲಿ ನಗರದ ಅಂಜಿನಿ, ಎಸ್‌ಎಲ್‌ಎನ್, ಆದರ್ಶ ಚಿತ್ರಮಂದಿರಗಳು ಬಾಗಿಲು ಮುಚ್ಚಿದ್ದವು. ಅವುಗಳನ್ನು ನಂಬಿ ಬದುಕುತ್ತಿದ್ದ ಮಾಲೀಕರು ಹಾಗೂ ನೂರಕ್ಕೂ ಹೆಚ್ಚು ಕಾರ್ಮಿಕರು ಆರ್ಥಿಕ ಸಂಕಷ್ಟದಿಂದ ತತ್ತರಿಸಿದ್ದರು.

ಸೋಂಕು ಕಡಿಮೆಯಾಗಿ ಚಿತ್ರಮಂದಿರಗಳು ಬಾಗಿಲು ತೆರೆದವು. ಪ್ರೇಕ್ಷಕರಿಗೆ ಮನರಂಜನೆ ಒದಗಿಸಿ ಚೇತರಿಸಿಕೊಳ್ಳುವಾಗಲೇ ಎರಡನೇ ಅಲೆಯ ಲಾಕ್‌ಡೌನ್ ಘೋಷಣೆ ಆಯಿತು. ಇದರಿಂದ ಗಾಯದ ಮೇಲೆ ಬರೆ ಎಳೆದಂತಾಗಿದೆ.

ನಗರದಲ್ಲಿರುವ ಚಿತ್ರಮಂದಿರಗಳ ಮಾಲೀಕರು ತಲೆ ಮೇಲೆ ಕೈಹೊತ್ತು ಚಿಂತೆಗೆ ಮುಳುಗಿದ್ದಾರೆ. ಕೆಲಸವಿಲ್ಲದೆ ಯಂತ್ರಗಳು ತುಕ್ಕು ಹಿಡಿಯುತ್ತಿವೆ. ಮಾಲೀಕರು ವಿದ್ಯುತ್ ಬಿಲ್, ಸ್ವಚ್ಛತೆ, ಕಾರ್ಮಿಕರ ವೇತನ ಮೊದಲಾದ ವೆಚ್ಚಗಳಿಗೆ ಹಣ ಹೊಂದಿಸಲಾರದೆ ಪರದಾಡುತ್ತಿದ್ದಾರೆ.

ಹಲವು ವರ್ಷಗಳಿಂದ ಚಿತ್ರಮಂದಿರಗಳಲ್ಲಿ ಕೆಲಸ ಮಾಡಿ ರೂಢಿಯಾಗಿದೆ. ಬೇರೆ ಕೆಲಸ ಗೊತ್ತಿಲ್ಲ. ಬದುಕಿನ ಬಂಡಿ ನಡೆಸಲೇಬೇಕಾಗಿದೆ. ಬೇರೆ ದಾರಿ ಕಾಣದೆ ಕೆಲವರು ತರಕಾರಿ, ಹಣ್ಣು ಮಾರಾಟ, ಕೂಲಿ ಕೆಲಸದತ್ತ ಮುಖಮಾಡಿದ್ದಾರೆ. ಸರ್ಕಾರ ಯಾವುದೇ ಪ್ಯಾಕೇಜ್ ಪ್ರಕಟಿಸಲಿಲ್ಲ. ಮೊದಲ ಅಲೆಯ ಸಂದರ್ಭದಲ್ಲಿ ಕೆಲವರು ಕಿಟ್‌ಗಳನ್ನು ನೀಡಿ ಸಹಾಯ ಮಾಡಿದರು. ಎರಡನೇ ಅಲೆಯ ಸಂಕಷ್ಟ ಕಾಲದಲ್ಲಿ ಅದೂ ಇಲ್ಲ ಎಂದು ನೌಕರರು ಸಂಕಷ್ಟ ಹೇಳಿಕೊಳ್ಳುತ್ತಾರೆ.

ಕಾರ್ಮಿಕರ ಖರ್ಚಿಗೆ ಹಣ

ಬಾಗೇಪಲ್ಲಿ: ‌ಕೊರೊನಾದಿಂದ ಚಿತ್ರಮಂದಿರದ ಪ್ರತಿ ತಿಂಗಳ ವಿದ್ಯುತ್ ಬಿಲ್ ಕಟ್ಟಲು ಆಗುತ್ತಿಲ್ಲ. ಕಾರ್ಮಿಕರಿಗೆ ಸಂಬಳ ನೀಡಲು ಆಗಿಲ್ಲ. ಕಾರ್ಮಿಕರಿಗೆ ಖರ್ಚಿಗೆ ಹಣ ನೀಡುತ್ತಿದ್ದೇನೆಎಂದು ಪಟ್ಟಣದ ರಾಘವೇಂದ್ರ ಚಲನಚಿತ್ರಮಂದಿರದ ಮಾಲೀಕ ಪಿ.ಎಲ್. ಸುರೇಶ್ ಸಮಸ್ಯೆಗಳನ್ನು ಬಿಚ್ಚಿಡುತ್ತಾರೆ.

ಸರ್ಕಾರ ಅನ್‍ಲಾಕ್ ಘೋಷಣೆಯಲ್ಲಿ ಚಿತ್ರಮಂದಿರಗಳು ತೆರೆಯಲು ಅವಕಾಶ ಮಾಡಿಲ್ಲ. ಇದರಿಂದ ಮಾಲೀಕರಿಗೆ ಲಕ್ಷಾಂತರ ಹಣ ನಷ್ಟ ಆಗಿದೆ. ಕೂಲಿ ಕಾರ್ಮಿಕರಿಗೆ ತೀವ್ರ ತೊಂದರೆ ಆಗಿದೆ ಎನ್ನುವರು.

ಬಾಗೇಪಲ್ಲಿಯಲ್ಲಿ ವೆಂಕಟೇಶ್ವರ, ರಾಘವೇಂದ್ರ ಚಿತ್ರಮಂದಿರಗಳಿವೆ. ಪ್ರತಿ ಚಿತ್ರಮಂದಿರದಲ್ಲಿ ಆಪರೇಟರ್, ಟಿಕೆಟ್ ವಿತರಕರು, ವಸೂಲಿಗಾರರು, ಸ್ವಚ್ಛತೆ ಮಾಡುವವರು ಸೇರಿ ತಲಾ 10 ಮಂದಿ ಕೂಲಿ ಕಾರ್ಮಿಕರು ಇದ್ದಾರೆ.

ಕೊರೊನಾ ಸೋಂಕಿನ ಮೊದಲ, ಎರಡನೇ ಅಲೆಯ ಹರಡಿ 2 ವರ್ಷಗಳಿಂದ ಸರ್ಕಾರ ಚಿತ್ರಮಂದಿರಗಳನ್ನು ಮುಚ್ಚಲು ಆದೇಶಿಸಿತು. ಚಿತ್ರಮಂದಿರಗಳ ಮಾಲೀಕರು ಬಾಡಿಗೆ, ವಿದ್ಯುತ್ ಬಿಲ್ ಕಟ್ಟಲು ಆಗುತ್ತಿಲ್ಲ. ಕಾರ್ಮಿಕರು ತಿಂಗಳ ವೇತನ ನೀಡಲು ಸಾಧ್ಯವಾಗಿಲ್ಲ.

ತಾಲ್ಲೂಕು ಕೇಂದ್ರದ ಚಿತ್ರಮಂದಿರಗಳಲ್ಲಿ ಕೆಲಸ ಮಾಡುತ್ತಿರುವ ಕೂಲಿ ಕಾರ್ಮಿಕರ ಸ್ಥಿತಿ ಹೇಳತೀರದಾಗಿದೆ. ಕೋವಿಡ್-19 ಸೋಂಕು ಹರಡುವ ಮೊದಲ ಅಲೆಯಿಂದ ಇದುವರೆಗೂ ‌ಕಾರ್ಮಿಕರಿಗೆ ಸಂಬಳ ಇಲ್ಲ. ಕೆಲ ಕಾರ್ಮಿಕರು ದೂರದ ಪ್ರದೇಶಗಳಿಂದ ಬಂದು ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದಾರೆ. ಸಂಬಳವನ್ನೇ ನಂಬಿ ಕುಟುಂಬಗಳನ್ನು ಪೋಷಿಸುತ್ತಿದ್ದಾರೆ. ಕೆಲವರು ಮಾಸಿಕ ಚೀಟಿಗಳು, ವಿದ್ಯುತ್, ನೀರಿನ ಬಿಲ್‍ ಕಟ್ಟಲು ಆಗುತ್ತಿಲ್ಲ. ಮಕ್ಕಳ ವಿದ್ಯಾಭ್ಯಾಸದ ಬಳಕೆಗೆ ಹಾಗೂ ಚಿಕಿತ್ಸೆಗೆ ಸಹ ಹಣ ಇಲ್ಲದ ಸ್ಥಿತಿ ಇದೆ.

ಕಾಡಲಿದೆ ಪ್ರೇಕ್ಷಕರ ಕೊರತೆ

ಗುಡಿಬಂಡೆ: ಕೋವಿಡ್ ಕಾರಣದಿಂದ ಚಿತ್ರಮಂದಿರಗಳ ಮಾಲೀಕರಿಗೆ ಅಪಾರ ಅರ್ಥಿಕ ನಷ್ಟ ಉಂಟಾಗಿದೆ. ಈ ಹಿಂದೆ ಮೊದಲ ಅಲೆಯ ಪೂರ್ಣಗೊಂಡ ತರುವಾಯ ಕಾರ್ಯಾರಂಭಕ್ಕೆ ಅವಕಾಶ ನೀಡಲಾಗಿತ್ತು. ಆಗ ಚಿತ್ರಮಂದಿರಗಳಲ್ಲಿ ಚಿತ್ರ ಪ್ರದರ್ಶನ ಆದರೂ ಪ್ರೇಕ್ಷಕರ ಕೊರತೆ ಉಂಟಾಗಿತ್ತು. ಈಗ ಆರಂಭವಾದರೂ ಅದೇ ಸ್ಥಿತಿ ಎನ್ನುವರು ಗುಡಿಬಂಡೆ ಆರ್‌ಕೆಎನ್ ಚಿತ್ರ ಮಂದಿರದ ಮಾಲೀಕ ಜಿ.ಎನ್. ದ್ವಾರಕನಾಥ ನಾಯ್ಡು.

ಲಾಕ್‌ಡೌನ್ ಎರಡು ಅವಧಿಯಲ್ಲಿ ಚಿತ್ರಮಂದಿರದಲ್ಲಿ ಕೆಲಸ ಮಾಡುವ 4 ಜನ ನೌಕರರಿಗೆ 10 ತಿಂಗಳಲ್ಲಿ ವೇತನ, ವಿದ್ಯುತ್ ಬಿಲ್ ಎಂದು ಲಕ್ಷಾಂತರ ರೂಪಾಯಿ ಹೊರೆ ಆಗಿದೆ ಎಂದು ಅವರು ಡವಿವರಿಸಿದರು.

ಲಾಕ್‌ಡೌನ್ ಸಮಯದಲ್ಲಿ ಚಿತ್ರ ಮಂದಿರಗಳಲ್ಲಿ ಚಿತ್ರ ಪ್ರರ್ದಶನ ನಡೆಯದಿದ್ದರೂ ಮಾಲೀಕರು ವೇತನ ನೀಡಿದ್ದರು. ಬೇಗ ಚಿತ್ರಮಂದಿರಗಳು ತೆರೆಯಲು ಅವಕಾಶ ಮಾಡಿದರೇ ನಮಗೆ ಅನುಕೂಲವಾಗಲಿದೆ. ಇಲ್ಲವಾದರೆ ಜೀವನ ನಡೆಸಲು ಮತ್ತಷ್ಟು ಸಂಕಷ್ಟವಾಗಲಿದೆ ಎಂದು ಚಿತ್ರಮಂದಿರದ ಆಪರೇಟರ್ ಶಿವ ತಿಳಿಸುತ್ತಾರೆ.

ಸರ್ಕಾರದ ಆದೇಶದತ್ತ ನೋಟ

ಗೌರಿಬಿದನೂರು: ಚಿತ್ರಮಂದಿರಗಳಲ್ಲಿ ಕೆಲಸ ಮಾಡುವ ಕಾರ್ಮಿಕರು‌ ಪರ್ಯಾಯ ವೃತ್ತಿಗೆ ಹೊಂದಾಣಿಕೆ ಆಗದೆ ಸಂಕಷ್ಟದ ಸುಳಿಯಲ್ಲಿ ಇದ್ದಾರೆ.

ನಗರದ ಶಂಕರ್ ಚಿತ್ರಮಂದಿರದಲ್ಲಿ ಕಾರ್ಯ ನಿರ್ವಹಿಸುವ ನಾಗರಾಜ್ ಅವರನ್ನು ಈ ಬಗ್ಗೆ ಕೇಳಿದರೆ, ಚಿತ್ರಮಂದಿರದಲ್ಲಿ ಸಿನಿಮಾ ಪ್ರದರ್ಶನವಾಗುತ್ತಿದ್ದ ವೇಳೆ ಬರುತ್ತಿದ್ದ ಅತ್ಯಲ್ಪ ಸಂಬಳದಲ್ಲಿ‌ ಬದುಕನ್ನು ನಿರ್ವಹಣೆ ಮಾಡುತ್ತಿದ್ದೇವೆ. ಆದರೆ ಕಳೆದ 4 ತಿಂಗಳಿನಿಂದ ಸಿನಿಮಾ ಪ್ರದರ್ಶನವಿಲ್ಲದ ಕಾರಣ ಚಿತ್ರಮಂದಿರದ ಮಾಲೀಕರು ಸಂಬಳ ನೀಡುತ್ತಿಲ್ಲ. ಇದರಿಂದ ಮನೆಯಲ್ಲೆ ಕುಳಿತು ಸರ್ಕಾರದ ಆದೇಶಕ್ಕೆ ಕಾಯುವಂತಾಗಿದೆ ಎಂದು ನೋವು ತೋಡಿಕೊಳ್ಳುವರು.

ಜೀವನ ನಿರ್ವಹಣೆ ಕಷ್ಟವಾಗಿದೆ. ಪರ್ಯಾಯ ವೃತ್ತಿಗಳು ಅನುಭವವಿಲ್ಲದ ಕಾರಣ ಯಾವುದನ್ನೂ ಮಾಡಲು ಸಾಧ್ಯವಾಗುತ್ತಿಲ್ಲ ಎನ್ನುತ್ತಾರೆ. ಅಭಿಲಾಷ್ ಚಿತ್ರಮಂದಿರದಲ್ಲಿ ‌ಕಾರ್ಯ ನಿರ್ವಹಿಸುವ ಕಾರ್ಮಿಕರನ್ನು‌ ಕೇಳಿದರೂ ಇದೇ ರೀತಿಯ ಉತ್ತರಗಳನ್ನು ‌ನೀಡುವರು.

ಗ್ರಾಮಕ್ಕೆ ಮರಳಿದ್ದೇನೆ

ಚಿತ್ರಮಂದಿರಗಳಲ್ಲಿನ ಕೆಲಸಗಳನ್ನು ನಂಬಿ ಕಾರ್ಮಿಕರು ಜೀವನ ಮಾಡುತ್ತಿದ್ದರು. ಕೊರೊನಾದಿಂದ ಚಿತ್ರಮಂದಿರಗಳು ಮುಚ್ಚಲಾಗಿದೆ. ಕುಟುಂಬ ಪೋಷಣೆಗೆ ಗ್ರಾಮದಲ್ಲಿ ಕೃಷಿ ಹಾಗೂ ಎಲೆಕ್ಟ್ರಿಕಲ್ಸ್ ಕೆಲಸ ಮಾಡಿಕೊಂಡಿದ್ದೇನೆ. ಸಂಬಳ ನೀಡದೆ ತೊಂದರೆ ಆಗಿದೆ. ಸರ್ಕಾರ ಕೂಡಲೇ ಚಿತ್ರಮಂದಿರಗಳ ಬಾಗಿಲು ತೆರೆಯಲು ಅವಕಾಶ ನೀಡಬೇಕು.

ಸೂರ್ಯನಾರಾಯಣಚಾರಿ,ವೆಂಕಟೇಶ್ವರ ಚಿತ್ರಮಂದಿರದ ಆಪರೇಟರ್, ಬಾಗೇಪಲ್ಲಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT