ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಂತಾಮಣಿ: ಕಳ್ಳರ ಕಾಟ ತಪ್ಪಿಸಲು ಆಗ್ರಹ

Last Updated 5 ಅಕ್ಟೋಬರ್ 2020, 3:47 IST
ಅಕ್ಷರ ಗಾತ್ರ

ಚಿಂತಾಮಣಿ: ಶ್ರೀಗಂಧದ ಕಳ್ಳರು ಹಾಗೂ ಕಳ್ಳರಿಂದ ಮಾಲು ಪಡೆಯುವವರನ್ನು ಡ್ರಗ್ಸ್‌ ಮಾದರಿಯಲ್ಲಿ ತನಿಖೆ ನಡೆಸಿ ಕಠಿಣ ಕ್ರಮ ಕೈಗೊಂಡು ಶ್ರೀಗಂಧ ಬೆಳೆಯುವ ರೈತರಿಗೆ ರಕ್ಷಣೆ ನೀಡಬೇಕು ಎಂದು ಬೆಳೆಗಾರರು ನಗರದ ಡಿವೈಎಸ್ಪಿ ಲಕ್ಷ್ಮಯ್ಯ ಅವರಿಗೆಭಾನುವಾರ ಮನವಿ ಸಲ್ಲಿಸಿದರು.

ಬರಪೀಡಿತ ಜಿಲ್ಲೆಗಳಾದ ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಗಳನ್ನು ಬರಮುಕ್ತ ಮಾಡುವ ಸಲುವಾಗಿ ನೀಲಗಿರಿ ತೋಪುಗಳ ತೆರವು ಕಾರ್ಯಾಚರಣೆಯನ್ನು ಕೈಗೊಳ್ಳಲಾಗಿದೆ. ನೀಲಗಿರಿಗೆ ಪರ್ಯಾಯವಾಗಿ ಶ್ರೀಗಂಧ ಬೆಳೆಯಲು ಸರ್ಕಾರ ಸೂಚಿಸಿದೆ. ಅವಳಿ ಜಿಲ್ಲೆಗಳಲ್ಲಿ ಸುಮಾರು 650 ಹೆಕ್ಟೇರ್ ಪ್ರದೇಶದಲ್ಲಿ ಶ್ರೀಗಂಧ ಬೆಳೆಯಲಾಗಿದೆ. ಆದರೆ ಕಳ್ಳರ ಕಾಟದಿಂದ ಬೆಳೆಗಾರರು ಕಂಗಾಲಾಗಿದ್ದಾರೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.

ಆರ್ಥಿಕ ಸಂಪತ್ತನ್ನು ಹೆಚ್ಚಿಸುವ ಮತ್ತು ರಾಜ್ಯದ ಅಭಿವೃದ್ಧಿಯಲ್ಲಿ ಶ್ರೀಗಂಧ ಪ್ರಮುಖ ಪಾತ್ರ ವಹಿಸುತ್ತದೆ. ಆದರೆ ಸರ್ಕಾರ ಬೆಳೆಗಾರರ ಸಮಸ್ಯೆಗೆ ಸ್ಪಂದಿಸುತ್ತಿಲ್ಲ. ಕೆಲವು ಕಡೆ ಕಳ್ಳರನ್ನು ಹಿಡಿದರೂ ಮಾಲು ಸ್ವೀಕರಿಸುವವರ ವಿರುದ್ಧ ಕಠಿಣ ಕ್ರಮಕೈಗೊಳ್ಳುತ್ತಿಲ್ಲ ಎಂದು ದೂರಿದ್ದಾರೆ.

ಶ್ರೀಗಂಧದ ತೋಟಗಳಿಗೆ ಕಳ್ಳರ ಕಾಟ ವಿಪರೀತವಾಗಿದೆ. ರೈತರು ತಮ್ಮ ಬೆಳೆಯನ್ನು ರಕ್ಷಿಸಿಕೊಳ್ಳಲು ಹಾಗೂ ಆತ್ಮ ರಕ್ಷಣೆಗಾಗಿ ಬಂದೂಕುಗಳನ್ನು ಇಟ್ಟುಕೊಳ್ಳಲು ಪರವಾನಗಿ ನೀಡಬೇಕು. ಶ್ರೀಗಂಧದ ಕಳ್ಳರನ್ನು ಬಂಧಿಸದೆ ಹಾಗೂ ಕಳ್ಳ ಮಾಲನ್ನು ವಶಪಡಿಸಿಕೊಳ್ಳದಿರುವುದರಿಂದ ಬೆಳೆಗಾರರಿಗೆ ಆರ್ಥಿಕ ನಷ್ಟವಾಗುತ್ತಿದೆ ಎಂದು ಒತ್ತಾಯಿಸಿದ್ದಾರೆ.

ಶ್ರೀಗಂಧದ ಬೆಳೆಗಾರರ ಮೇಲೆ ಕೊಲೆ ಪ್ರಕರಣಗಳನ್ನು ದಾಖಲು ಮಾಡಲಾಗುತ್ತಿದೆ. ತನಿಖೆ ನಡೆಸಿ ಆರೋಪ ಸಾಬೀತಾದರೆ ಕ್ರಮಕೈಗೊಳ್ಳುವ ಬದಲಾಗಿ ಬೆಳೆಗಾರರನ್ನು ಬಂಧಿಸಿ ಭಯವನ್ನು ಉಂಟು ಮಾಡುತ್ತಿದ್ದಾರೆ. ಕೆಲವು ರೈತರನ್ನು ವಿನಾಕಾರಣ ಜೈಲಿಗೂ ಕಳುಹಿಸಿದ್ದಾರೆ.ಇಂತಹ ಪ್ರಕರಣಗಳಿಗೆ ಕಡಿವಾಣ ಹಾಕಬೇಕು. ಹಿರಿಯ ಅಧಿಕಾರಿಗಳಿಂದ ತನಿಖೆ ನಡೆಸಿದ ನಂತರ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಲಾಗಿದೆ.

ಡಿವೈಎಸ್ಪಿ ಲಕ್ಷ್ಮಯ್ಯ ಮನವಿ ಸ್ವೀಕರಿಸಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ಬೆಳೆಗಾರರ ಮುಖಂಡರಾದ ಜಿ. ಚಂದ್ರಶೇಖರಗೌಡ, ಎಸ್.ವಿ. ಗಂಗುಲಪ್ಪ, ರಮೇಶ್, ಶ್ರೀನಿವಾಸರೆಡ್ಡಿ, ವೆಂಕಟೇಶಗೌಡ, ಮೋಹನ್ ಕುಮಾರ್, ಮುನಿರೆಡ್ಡಿ, ದೇವರಾಜ್, ವೆಂಕಟೇಶ್, ಚಂದ್ರೇಗೌಡ, ಮಂಜುನಾಥ್, ಕೃಷ್ಣಪ್ಪ, ಬೈರೆಡ್ಡಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT