ಸೋಮವಾರ, 9 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಚಿಕ್ಕಬಳ್ಳಾಪುರ: 8 ಟಿಎಂಸಿಗೆ ಇಳಿದ ಎತ್ತಿನಹೊಳೆ ಇಳುವರಿ

ಯೋಜನೆಯ ವೆಚ್ಚ ಮೂರು ಪಟ್ಟು ಹೆಚ್ಚಳ; ನೀರು ಮೂರು ಪಟ್ಟು ಇಳಿಕೆ!
Published 5 ಆಗಸ್ಟ್ 2024, 4:19 IST
Last Updated 5 ಆಗಸ್ಟ್ 2024, 4:19 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಬಯಲು ಸೀಮೆಯ ಜಿಲ್ಲೆಗಳ ಜನರು ಕುಡಿಯುವ ನೀರು ಮತ್ತು ಅಂತರ್ಜಲ ಅಭಿವೃದ್ಧಿ ವಿಚಾರವಾಗಿ ಹೆಚ್ಚಿನ ನಿರೀಕ್ಷೆಗಳನ್ನು ಹೊಂದಿರುವ ಎತ್ತಿನಹೊಳೆ ಯೋಜನೆಯ ನೀರಿನ ಇಳುವರಿ ಪ್ರಮಾಣ ಭಾರಿ ಪ್ರಮಾಣದಲ್ಲಿ ಕುಗ್ಗಿದೆ.

ಈ ಕುಗ್ಗುವಿಕೆಯು ಯೋಜನೆಯ ಕಟ್ಟಕಡೆಯ ಜಿಲ್ಲೆಗಳಿಗೆ ಹಂಚಿಕೆಯಾಗಿದ್ದಷ್ಟು ನೀರು ದೊರೆಯುತ್ತದೆಯೇ ಎನ್ನುವ ಬಗ್ಗೆ ಸಂಶಯಗಳನ್ನು ಮೂಡಿಸಿದೆ.  ಯೋಜನೆಯ ವೆಚ್ಚ ಮೂರು ಪಟ್ಟು ಹೆಚ್ಚಳವಾಗಿದ್ದರೆ ಮತ್ತೊಂದು ಕಡೆ ನೀರು ತಿರುಗಿಸುವ ಪ್ರಮಾಣವು ಮೂರು ಪಟ್ಟು ಇಳಿಕೆಯಾಗಿದೆ.

ಕೋಲಾರ ಶಾಸಕ ಕೊತ್ತೂರು ಜಿ. ಮಂಜುನಾಥ್ ಕಳೆದ ತಿಂಗಳು ನಡೆದ ವಿಧಾನಸಭೆ ಅಧಿವೇಶನದಲ್ಲಿ ಎತ್ತಿನಹೊಳೆ ನೀರಾವರಿ ಯೋಜನೆಯ ಬಗ್ಗೆ ಮಾಹಿತಿ ಕೇಳಿದ್ದರು. ಜಲಸಂಪನ್ಮೂಲ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೀರಿನ ಇಳುವರಿ, ವೆಚ್ಚದ ಬಗ್ಗೆ ಸಮಗ್ರ ಮಾಹಿತಿ ನೀಡಿದ್ದಾರೆ. ಈ ಮಾಹಿತಿಯಲ್ಲಿ ಬಳಕೆಗೆ ಲಭ್ಯವಿರುವ ನೀರಿನ ಪ್ರಮಾಣ ಇಳಿಕೆ ಆಗಿದೆ ಎನ್ನುವುದನ್ನು ತಿಳಿಸಿದ್ದಾರೆ. 

172 ಚದುರ ಕಿ.ಮೀ ವ್ಯಾಪ್ತಿಯ ಪಶ್ಚಿಮಘಟ್ಟ ಜಲಾನಯನ ಪ್ರದೇಶದಲ್ಲಿ ಮುಂಗಾರು ಅವಧಿಯಲ್ಲಿ ಅಂದಾಜು 34.26 ಟಿಎಂಸಿ ಅಡಿ ನೀರಿನ ಇಳುವರಿ ದೊರೆಯುತ್ತದೆ. ಈ ಪೈಕಿ 24.01 ಟಿಎಂಸಿ ಅಡಿಯನ್ನು ತಿರುಗಿಸಬಹುದಾದ ನೀರು (Divertible yield) ಎಂದು ಪರಿಗಣಿಸಲಾಗಿದೆ. ಹೀಗೆ ತಿರುಗಿಸಬಹುದಾದ ನೀರೇ ಎತ್ತಿನಹೊಳೆ ಯೋಜನೆಗೆ ಆಧಾರ.

ಯೋಜನೆ ವರದಿ ತಯಾರಿಸುವ ಸಂದರ್ಭದಲ್ಲಿ ಇಳುವರಿಗೆ ಸಂಬಂಧಿಸಿದಂತೆ ಭಾರತೀಯ ವಿಜ್ಞಾನ ಸಂಸ್ಥೆಯ ನಿವೃತ್ತ ವಿಜ್ಞಾನಿ ಪ್ರೊ.ರಾಮಪ್ರಸಾದ್ ಅವರಿಂದ ಪರಿಶೀಲಿಸಲಾಗಿದೆ. ಕೇಂದ್ರೀಯ ಜಲ ಆಯೋಗ, ರಾಷ್ಟ್ರೀಯ ಜಲವಿಜ್ಞಾನ ಸಂಸ್ಥೆ ಮತ್ತು ರಾಜ್ಯ ನೈಸರ್ಗಿಕ ವಿಪತ್ತು ನಿರ್ವಹಣಾ ಕೇಂದ್ರದಿಂದಲೂ ಅಭಿಪ್ರಾಯ ಪಡೆಯಲಾಗಿದೆ.

2018ರ ಜೂನ್‌ನಿಂದ ಟೆಲಿಮೆಟ್ರಿಕ್ ವ್ಯವಸ್ಥೆಯೊಂದಿಗೆ ನಿರಂತರವಾಗಿ ನೀರಿನ ಇಳುವರಿ ದಾಖಲಿಸಿಕೊಳ್ಳಲಾಗಿದೆ. ಟೆಲಿಮೆಟ್ರಿಕ್ ವ್ಯವಸ್ಥೆಯಿಂದ ಪಡೆದ ಅಂಕಿ ಅಂಶಗಳ ಅನ್ವಯ 2018ರ ಮುಂಗಾರು ಅವಧಿಯಿಂದ 2023ರ ಮುಂಗಾರು ಅವಧಿಯವರೆಗೆ ಎತ್ತಿನಹೊಳೆ ಜಲಾನಯನ ಪ್ರದೇಶದಲ್ಲಿನ ಇಳುವರಿ ಪರಿಶೀಲಿಸಲಾಗಿದೆ. ಆಗ ತಿರುಗಿಸಬಹುದಾದ ಹರಿವು ಸುಮಾರು ಶೇ 35ರಿಂದ ಶೇ 91ರವರೆಗೆ ಇರುವುದು ಕಂಡು ಬಂದಿದೆ.

ಈ ಟೆಲಿಮೆಟ್ರಿಕ್ ವ್ಯವಸ್ಥೆಯ ಮಾಹಿತಿಗಳ ಪ್ರಕಾರವೇ ನೀರಿನ ಇಳುವರಿ ಪ್ರಮಾಣ ಭಾರಿ ಮಟ್ಟದಲ್ಲಿ ಇಳಿಕೆ ಆಗಿದೆ. 2018ರಲ್ಲಿ ಜಲಾನಯನ ಪ್ರದೇಶದಲ್ಲಿ ಲಭ್ಯವಿರುವ ನೀರಿನ ಒಟ್ಟು ಇಳುವರಿ 25.89 ಟಿಎಂಸಿ ಅಡಿ ಮತ್ತು ತಿರುಗಿಸಬಹುದಾದ ನೀರಿನ ಪ್ರಮಾಣ 18.93 ಟಿಎಂಸಿ ಅಡಿ ಇತ್ತು. 2023ರಲ್ಲಿ ನೀರಿನ ಒಟ್ಟು ಇಳುವರಿ 8.85 ಟಿಎಂಸಿ ಅಡಿ ಮತ್ತು ತಿರುಗಿಸಬಹುದಾದ ನೀರು 8.41 ಟಿಎಂಸಿ ಅಡಿಗೆ ಇಳಿಕೆ ಆಗಿದೆ.

ಪಶ್ಚಿಮಘಟ್ಟದ ಮೇಲ್ಭಾಗದಲ್ಲಿ ಹರಿಯುವ ಎತ್ತಿನಹೊಳೆ, ಕಾಡುಮನೆಹೊಳೆ, ಕೇರಿಹೊಳೆ ಮತ್ತು ಹೊಂಗದಹಳ್ಳದಿಂದ ಮುಂಗಾರು ಮಳೆ ಅವಧಿಯಲ್ಲಿ 24.01 ಟಿಎಂಸಿ ಅಡಿ ಪ್ರಮಾಣದ ಪ್ರವಾಹದ ನೀರು ಲಭ್ಯವಾಗುತ್ತದೆ. ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ರಾಮಗರ, ತುಮಕೂರು, ಹಾಸನ ಮತ್ತು ಚಿಕ್ಕಮಗಳೂರಿನ ಬರಪೀಡಿತ 29 ತಾಲ್ಲೂಕುಗಳ 38 ಪಟ್ಟಣಗಳು, 6,657 ಗ್ರಾಮಗಳ 75.59 ಲಕ್ಷ ಜನ ಮತ್ತು ಜಾನುವಾರುಗಳಿಗೆ 14.056 ಟಿಎಂಸಿ ಅಡಿ ನೀರನ್ನು ಕುಡಿಯಲು ಒದಗಿಸುವುದು ಯೋಜನೆಯ ಮುಖ್ಯ ಉದ್ದೇಶ.

ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ಹಾಸನ ಮತ್ತು ತುಮಕೂರು ಜಿಲ್ಲೆ ವ್ಯಾಪ್ತಿಯ 527 ಕೆರೆಗಳಿಗೆ 9.953 ಟಿಎಂಸಿ ಅಡಿ ನೀರು ತುಂಬಿಸಿ ಅಂತರ್ಜಲ ಮರುಪೂರಣ ಮಾಡುವುದು ಎತ್ತಿನಹೊಳೆ ಯೋಜನೆಯ ಉದ್ದೇಶ.

ಯೋಜನೆ ಜಾರಿಗೊಂಡ ವೇಳೆ ಪ್ರತಿ ಜಿಲ್ಲೆಯ ಜನರು ಸಹ ನಮ್ಮ ಜಿಲ್ಲೆಗೆ ಇಂತಿಷ್ಟು ಪ್ರಮಾಣದಲ್ಲಿ ನೀರು ದೊರೆಯಲಿದೆ ಎಂದು ಟಿಎಂಸಿ ಅಡಿಗಳ ಲೆಕ್ಕಾಚಾರ ಹಾಕಿದ್ದರು. ಆದರೆ 2023ರ ನೀರಿನ ಇಳುವರಿ ಪ್ರಮಾಣ ಗಮನಿಸಿದರೆ, ಬಯಲು ಸೀಮೆಯ ಜನರ ನೀರಿನ ನಿರೀಕ್ಷೆ ಪೂರ್ಣ ಈಡೇರುತ್ತದೆಯೇ ಇಲ್ಲವೆ ಎನ್ನುವ ಅನುಮಾನ ಮೂಡಿದೆ. 

ಮೂರು ಪಟ್ಟು ವೆಚ್ಚ ಹೆಚ್ಚಳ: 2012ರಲ್ಲಿ ₹ 8,300 ಕೋಟಿ ಯೋಜನೆಯ ಅಂದಾಜು ವೆಚ್ಚವಾಗಿತ್ತು. ಅದು 2014ಕ್ಕೆ ₹ 12,900 ಕೋಟಿ ಮುಟ್ಟಿತು. 2023ರಲ್ಲಿ ₹ 23,251 ಕೋಟಿ ತಲುಪಿದೆ. ಹೀಗೆ ಯೋಜನೆ ವೆಚ್ಚ ದೊಡ್ಡ ಪ್ರಮಾಣದಲ್ಲಿ ಏರಿಕೆ ಆಗಿದ್ದರೆ ನೀರಿನ ಇಳುವರಿ ಕಡಿಮೆ ಆಗಿದೆ.

<div class="paragraphs"><p></p></div>

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT